1936 ಸೋಂಕಿತರ ಪೈಕಿ 400 ಜನ ಸೋಂಕಿತರು ಹೊರಜಿಲ್ಲೆಯವರೇ| ಉಳಿದ ಜಿಲ್ಲೆಗಳಲ್ಲೇಕೆ ಸೌಲಭ್ಯ ಕಲ್ಪಿಸಲು ಸಾಧ್ಯವಾಗುತ್ತಿಲ್ಲವೇ?| 1800 ಬೆಡ್‌ಗಳಿರುವ ಕಿಮ್ಸ್‌ಆಸ್ಪತ್ರೆ| 1500 ಬೆಡ್‌ಕೋವಿಡ್‌ಗಾಗಿ ಸದ್ಯ ಮೀಸಲು| ಇನ್ನುಳಿದ 300 ಬೆಡ್‌ಗಳು ಮಾತ್ರ ಬೇರೆ ಬೇರೆ ಕಾಯಿಲೆಗಳ ಪೇಶೆಂಟ್‌ಗಳಿಗಾಗಿ ಮೀಸಲು|
ಶಿವಾನಂದ ಗೊಂಬಿ
ಹುಬ್ಬಳ್ಳಿ(ಮೇ.07): ಉತ್ತರ ಕರ್ನಾಟಕದ ಸಂಜೀವಿನಿ ಎಂಬ ಹೆಸರಿಗೆ ತಕ್ಕಂತೆ ಇಲ್ಲಿನ ಕಿಮ್ಸ್‌ನಲ್ಲಿ ಬರೀ ಧಾರವಾಡ ಜಿಲ್ಲೆಯವರಷ್ಟೇ ಅಲ್ಲ. ಹೊರ ಜಿಲ್ಲೆಯ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕಿಮ್ಸ್‌ವೈದ್ಯರು, ದಾದಿಯರು ಹಗಲಿರಳು ಶ್ರಮಿಸುತ್ತಿದ್ದಾರೆ.
ಕಿಮ್ಸ್‌ಗೆ ಮೊದಲಿನಿಂದಲೂ ಉತ್ತರ ಕರ್ನಾಟಕದ ಕಾಮದೇನು, ಸಂಜೀವಿನಿ ಎಂದೆ ಹೆಸರು ಪಡೆದಿರುವ ವೈದ್ಯಕೀಯ ಕಾಲೇಜಿದು. ಒಟ್ಟು 1800 ಬೆಡ್‌ಗಳಿರುವ ದೊಡ್ಡದಾದ ಆಸ್ಪತ್ರೆಯಿದು. ಅದರಲ್ಲಿ 1500 ಬೆಡ್‌ಗಳನ್ನು ಕೋವಿಡ್‌ಗಾಗಿ ಸದ್ಯ ಮೀಸಲಿಡಲಾಗಿದೆ. ಇನ್ನುಳಿದ 300 ಬೆಡ್‌ಗಳು ಮಾತ್ರ ಬೇರೆ ಬೇರೆ ಕಾಯಿಲೆಗಳ ಪೇಶೆಂಟ್‌ಗಾಗಿ ಮೀಸಲಿಡಲಾಗಿದೆ. ಇನ್ನು ಜಿಲ್ಲೆಯಲ್ಲಿ ಕಿಮ್ಸ್, ಜಿಲ್ಲಾಸ್ಪತ್ರೆ ಸೇರಿದಂತೆ ವಿವಿಧೆಡೆ ಕೋವಿಡ್‌ಗಾಗಿ 2971 ಬೆಡ್‌ಗಳಿವೆ. ಅದರಲ್ಲಿ ಆಕ್ಸಿಜನ್‌ಹೊಂದಿರುವ ಬೆಡ್‌ಗಳ ಸಂಖ್ಯೆ 1891, ಐಸಿಯು 360 ಬೆಡ್‌ಗಳಿದ್ದರೆ, ವೆಂಟಿಲೇಟರ್‌ಹೊಂದಿದ ಬೆಡ್‌ಗಳ ಸಂಖ್ಯೆ 180ಗಳಿವೆ. ಸದ್ಯ 1926 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ 1035 ಬೆಡ್‌ಗಳು ಖಾಲಿಯಿವೆ. ಇದರಲ್ಲಿ ಆಕ್ಸಿಜನ್‌ಹೊಂದಿದ 210 ಬೆಡ್‌ಗಳು ಖಾಲಿಯಿದ್ದರೆ, ಐಸಿಯು ಬರೀ ನಾಲ್ಕು ಬೆಡ್‌ಮಾತ್ರ ಖಾಲಿಯಿವೆ. ಇನ್ನು ವೆಂಟಿಲೇಟರ್180ರಲ್ಲಿ ಇನ್ನು 2-3 ಬೆಡ್‌ಗಳನ್ನು ಮಾತ್ರ ಬಳಸಿಕೊಳ್ಳಬಹುದು.
ಧಾರವಾಡ ಜಿಲ್ಲೆಗೆ 4 ಆಕ್ಸಿಜನ್ ಉತ್ಪಾದನಾ ಘಟಕ ಮಂಜೂರು
ಹೊರ ಜಿಲ್ಲೆಯವರೆಷ್ಟು?:
ಕಿಮ್ಸ್‌ಸೇರಿದಂತೆ ವಿವಿಧೆಡೆ ಆಸ್ಪತ್ರೆಗಳಲ್ಲಿ ಸದ್ಯ 1926 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 1538 ಜನ ಧಾರವಾಡ ಜಿಲ್ಲೆಯ ಸೋಂಕಿತರಾದರೆ, 398 ಜನ ಹೊರಜಿಲ್ಲೆಗಳಾದ ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ, ಸವದತ್ತಿ ಸೇರಿದಂತೆ ವಿವಿಧ ಜಿಲ್ಲೆಗಳ ಸೋಂಕಿತರೇ ಇದ್ದಾರೆ. ಹೀಗೆ ಹೊರಜಿಲ್ಲೆಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಕಿಮ್ಸ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಿಮ್ಸ್‌ನಲ್ಲಿ ಅಲ್ಲಿನ ವೈದ್ಯರು, ದಾದಿಯರು ಸೇರಿದಂತೆ ಎಲ್ಲ ಬಗೆಯ ಸಿಬ್ಬಂದಿ ಹಗಲಿರಳು ಶ್ರಮಿಸುತ್ತಿದ್ದಾರೆ. ಕಿಮ್ಸ್‌ನ ಬಹುತೇಕ ವೈದ್ಯರು, ಸಿಬ್ಬಂದಿಗಳೆಲ್ಲ ಇದೀಗ ಎಲ್ಲರೂ ಕೋವಿಡ್‌ವಿಭಾಗದಲ್ಲೇ ಕೆಲಸ ನಿರ್ವಹಿಸುತ್ತಿದ್ದಾರೆ.
ಹಾಗೆ ನೋಡಿದರೆ ಕಿಮ್ಸ್‌ನಲ್ಲಿ ಹೊರ ಜಿಲ್ಲೆಯವರಿಗೆ ಚಿಕಿತ್ಸೆ ಕೊಡಬಾರದೆಂಬುದೇನೂ ಅಲ್ಲ. ಆದರೆ, ಬೇರೆ ಬೇರೆ ಜಿಲ್ಲೆಗಳಲ್ಲೂ ಕೋವಿಡ್‌ಆಸ್ಪತ್ರೆಗಳು ಇದ್ದರೂ ಕಿಮ್ಸ್‌ನ್ನೇ ಏಕೆ ಸೋಂಕಿತರು ನೆಚ್ಚಿಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಉದ್ಭವಿಸುತ್ತಿದೆ. ಹಿಂದೆ ಅಂದರೆ ಒಂದು 4-5 ವರ್ಷಗಳ ಹಿಂದೆಯಾದರೆ ಬೇರೆ ಬೇರೆ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಿರಲಿಲ್ಲ. ವೈದ್ಯಕೀಯ ಸೌಲಭ್ಯಗಳು ಅಷ್ಟಕಷ್ಟೇ ಎಂಬಂತೆ ಇತ್ತು. ಆದರೆ, ಇದೀಗ ಪರಿಸ್ಥಿತಿ ಹಾಗಿಲ್ಲ. ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜುಗಳು ಇವೆ. ಕೋವಿಡ್‌ಆಸ್ಪತ್ರೆಗಳು ಇವೆ. ಆದರೂ ಕಿಮ್ಸ್‌ನ್ನೇ ನೆಚ್ಚಿಕೊಳ್ಳುತ್ತಿದ್ದಾರೆ. ಹೊರಜಿಲ್ಲೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿತರು ಬಂದರೆ ಮುಂದೆ ನಮ್ಮ ಜಿಲ್ಲೆಯವರಿಗೆ ಬೆಡ್‌ಗಳ ಕೊರತೆ ಎದುರಾದರೆ ಏನು ಮಾಡಬೇಕು ಎಂಬ ಪ್ರಶ್ನೆ ಇಲ್ಲಿನ ಸಾರ್ವಜನಿಕ ವಲಯದ್ದು. ಆದಷ್ಟುಬೇರೆ ಜಿಲ್ಲೆಯ ಸೋಂಕಿತರು ಆಯಾ ಜಿಲ್ಲೆಗಳಲ್ಲಿ ಚಿಕಿತ್ಸೆ ದೊರೆಯುವಂತೆ ಆದರೆ ಉತ್ತಮ ಎಂಬ ಅಭಿಪ್ರಾಯ ಸಾರ್ವಜನಿಕರದ್ದು. ಒಟ್ಟಿನಲ್ಲಿ ಹೊರಗಿನ ಜಿಲ್ಲೆಯ ಸೋಂಕಿತರು ಹುಬ್ಬಳ್ಳಿ ಕಿಮ್ಸ್‌ನಲ್ಲೇ ಶೇ. 30ಕ್ಕೂ ಹೆಚ್ಚು ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವುದಂತೂ ಸತ್ಯ.
1926 ಜನ ಸೋಂಕಿತರು ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅದರಲ್ಲಿ ಹೊರಜಿಲ್ಲೆಯವರು 398 ಜನರಿದ್ದಾರೆ. ಧಾರವಾಡ ಜಿಲ್ಲೆಯವರು 1538 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉಪವಿಭಾಗಾಧಿಕಾರಿ ಡಾ. ಗೋಪಾಲಕೃಷ್ಣ ತಿಳಿಸಿದ್ದಾರೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona