Good News For Passengers: ಡಿ.11ರಿಂದ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಮತ್ತಷ್ಟು ರೈಲು ಸಂಚಾರ!

By Kannadaprabha News  |  First Published Dec 8, 2023, 8:26 PM IST

ಬೆಂಗಳೂರಿನಿಂದ ದೇವನಹಳ್ಳಿಗೆ ಬಂದು ಮತ್ತೆ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ಮೂರು ರೈಲುಗಳನ್ನು ನೈರುತ್ಯ ರೈಲ್ವೆ ಇಲಾಖೆ ಚಿಕ್ಕಬಳ್ಳಾಪುರದವರೆಗೂ ವಿಸ್ತರಿಸಿರುವ ಆದೇಶಕ್ಕೆ ದಿನಗಣನೆ ಆರಂಭವಾಗಿದ್ದು, ಕೆಎಸ್ಆರ್ ಬೆಂಗಳೂರಿಂದ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ತೆರಳುವ ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. 


ಚಿಕ್ಕಬಳ್ಳಾಪುರ (ಡಿ.08): ಬೆಂಗಳೂರಿನಿಂದ ದೇವನಹಳ್ಳಿಗೆ ಬಂದು ಮತ್ತೆ ಬೆಂಗಳೂರಿಗೆ ವಾಪಸ್ ಆಗುತ್ತಿದ್ದ ಮೂರು ರೈಲುಗಳನ್ನು ನೈರುತ್ಯ ರೈಲ್ವೆ ಇಲಾಖೆ ಚಿಕ್ಕಬಳ್ಳಾಪುರದವರೆಗೂ ವಿಸ್ತರಿಸಿರುವ ಆದೇಶಕ್ಕೆ ದಿನಗಣನೆ ಆರಂಭವಾಗಿದ್ದು, ಕೆಎಸ್ಆರ್ ಬೆಂಗಳೂರಿಂದ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರಕ್ಕೆ ತೆರಳುವ ಪ್ರಯಾಣಿಕರಿಗೆ ಸ್ವಲ್ಪ ಮಟ್ಟಿಗೆ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. ಅಲ್ಲದೆ ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ಪ್ರವಾಸ ಹೋಗುವ ಆಸಕ್ತರಿಗೂ ರೈಲ್ವೆ ಇಲಾಖೆ ಸಿಹಿ ಸುದ್ದಿ ಕೊಟ್ಟಿದೆ. ಇನ್ನು ಮುಂದೆ ನಂದಿ ಬೆಟ್ಟಕ್ಕೆ ತೆರಳಲು ರೈಲಿನಲ್ಲಿ ಸಹ ಪ್ರಯಾಣ ಮಾಡಬಹುದಾಗಿದೆ.

ಅದರಂತೆ ನೈಋತ್ಯ ರೈಲ್ವೆ ಡಿ.11 ರಿಂದ ದೇವನಹಳ್ಳಿಯಿಂದ ವಿಮಾನ ನಿಲ್ದಾಣದ ಮಾರ್ಗದಲ್ಲಿ ಕಾರ್ಯನಿರ್ವಹಿಸುವ ಮೆಮು (ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲುಗಳನ್ನು ಚಿಕ್ಕಬಳ್ಳಾಪುರದವರೆಗೆ ವಿಸ್ತರಿಸಲು ನೈರುತ್ಯ ರೈಲ್ವೆ ಮಂಡಳಿ ನಿರ್ಧರಿಸಿದೆ. 06531/06532 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ-ಕಂಟೋನ್ಮೆಂಟ್, 06535/06583 ಬೆಂಗಳೂರು ಕಂಟೋನ್ಮೆಂಟ್-ಚಿಕ್ಕಬಳ್ಳಾಪುರ, ಮತ್ತು 06593/06594 ಯಶವಂತಪುರ-ಚಿಕ್ಕಬಳ್ಳಾಪುರ-ಯಶವಂತಪುರ ರೈಲುಗಳು ಇನ್ನು ಮುಂದೆ ನಂದಿಬೆಟ್ಟದವರೆಗೂ ಚಲಿಸಲಿವೆ. ಪ್ರಸ್ತುತ, 06387/06388 ಕೆಎಸ್‌ಆರ್ ಬೆಂಗಳೂರು-ಕೋಲಾರ-ಕಂಟೋನ್ಮೆಂಟ್ ಡೀಸೆಲ್ ಮಲ್ಟಿಪಲ್ ಯುನಿಟ್ (ಡೆಮು) ಮತ್ತು 16549/16550 ಕೆಎಸ್‌ಆರ್ ಬೆಂಗಳೂರು - ಕೋಲಾರ- ಕೆಎಸ್‌ಆರ್ ಬೆಂಗಳೂರು ಡೆಮು ರೈಲುಗಳು ನಂದಿ ನಿಲ್ದಾಣದಲ್ಲಿ ನಿಲುಗಡೆ ಮಾಡುತ್ತವೆ.

Tap to resize

Latest Videos

ಇದೇ ಕಾರಣಕ್ಕೆ 10 ವರ್ಷದಲ್ಲಿ 8ಕ್ಕೂ ಹೆಚ್ಚು ಕಾಡಾನೆಗಳ ಸಾವು!

ಯಾವ ಸಮಯಕ್ಕೆ ಯಾವ ರೈಲು: 06531 ಸಂಖ್ಯೆಯ ರೈಲು ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣವನ್ನು ಬೆಳಿಗ್ಗೆ 5.10ಕ್ಕೆ ಬಿಟ್ಟು ಬೆಳಿಗ್ಗೆ 6.55ಕ್ಕೆ ಚಿಕ್ಕಬಳ್ಳಾಪುರಕ್ಕೆ ಬರಲಿದೆ. ಇದೇ ರೈಲು (ಸಂಖ್ಯೆ–06535) ಬೆಳಿಗ್ಗೆ 8.20ಕ್ಕೆ ಚಿಕ್ಕಬಳ್ಳಾಪುರ ಬಿಟ್ಟು 10.40ಕ್ಕೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ತಲುಪಲಿದೆ. 06536 ಸಂಖ್ಯೆಯ ರೈಲು ಮಧ್ಯಾಹ್ನ 12.30ಕ್ಕೆ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಬಿಟ್ಟು ಮಧ್ಯಾಹ್ನ 1.40ಕ್ಕೆ ಚಿಕ್ಕಬಳ್ಳಾಪುರ ತಲುಪಲಿದೆ. 06537 ಸಂಖ್ಯೆಯ ರೈಲು ಚಿಕ್ಕಬಳ್ಳಾಪುರ ರೈಲ್ವೆ ನಿಲ್ದಾಣವನ್ನು ಮಧ್ಯಾಹ್ನ 2ಕ್ಕೆ ಬಿಡಲಿದ್ದು 3.15ಕ್ಕೆ ಬೆಂಗಳೂರಿನ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ತಲುಪಲಿದೆ. 06538 ಸಂಖ್ಯೆಯ ರೈಲು ಸಂಜೆ 4ಕ್ಕೆ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ ಬಿಟ್ಟು ಚಿಕ್ಕಬಳ್ಳಾಪುರಕ್ಕೆ ಸಂಜೆ 6ಕ್ಕೆ ಬರಲಿದೆ.

06535 ಸಂಖ್ಯೆಯ ರೈಲು ಸಂಜೆ 6.30ಕ್ಕೆ ಚಿಕ್ಕಬಳ್ಳಾಪುರ ಬಿಟ್ಟು 9ಕ್ಕೆ ಬೆಂಗಳೂರು ಸೇರಲಿದೆ. 06593 ಸಂಖ್ಯೆಯ ರೈಲು ಬೆಳಿಗ್ಗೆ 10.10ಕ್ಕೆ ಯಶವಂತಪುರ ರೈಲ್ವೆ ನಿಲ್ದಾಣ ಬಿಡಲಿದೆ. ಚಿಕ್ಕಬಳ್ಳಾಪುರಕ್ಕೆ ಬೆಳಿಗ್ಗೆ 11.40ಕ್ಕೆ ತಲುಪಲಿದೆ. 06594 ಸಂಖ್ಯೆಯ ರೈಲು ಮಧ್ಯಾಹ್ನ 1ಕ್ಕೆ ಚಿಕ್ಕಬಳ್ಳಾಪುರ ಬಿಟ್ಟು ಮಧ್ಯಾಹ್ನ 2.50ಕ್ಕೆ ಯಶವಂತಪುರ ತಲುಪಲಿದೆ.

ಪ್ರವಾಸಿಗರ ಬೇಡಿಕೆ: ನಂದಿ ನಿಲ್ದಾಣದಿಂದ ನಂದಿ ಬೆಟ್ಟದ ತಪ್ಪಲಿನಲ್ಲಿರುವ ಭೋಗನಂದೀಶ್ವರ ದೇವಸ್ಥಾನಕ್ಕೆ ಸುಮಾರು 1.4 ಕಿಮೀ ದೂರವಿದೆ. ನಂದಿ ಬೆಟ್ಟದ ತುದಿ ತಲುಪಲು, ಹೆಚ್ಚುವರಿ 15-18 ಕಿಮೀ ಕ್ರಮಿಸಬೇಕಾಗುತ್ತದೆ. ನಂದಿ ರೈಲು ನಿಲ್ದಾಣದಿಂದ ಈ ಸ್ಥಳಗಳಿಗೆ ಬಹು-ಮಾದರಿ ಸಾರ್ವಜನಿಕ ಅಥವಾ ಸಾಮಾನ್ಯ ಸಾರಿಗೆ ಕಡಿಮೆಯಿದ್ದು, ಪ್ರವಾಸಿಗರಿಗೆ ಅಷ್ಟಾಗಿ ಅನುಕೂಲವಾಗದಿದ್ದರೂ ನಂದಿ ಬೆಟ್ಟದಲ್ಲಿ ಸೂರ್ಯೋದಯ ನೋಡಲು ಹೋಗುವವರು ಬೆಳಗ್ಗೆ 6.37ಕ್ಕೆ ಅಲ್ಲಿರುತ್ತಾರೆ. ಇಂತಹ ಪ್ರವಾಸಿಗರಿಗೆ ಮೆಮು ರೈಲುಗಳ ಸಂಚಾರದಿಂದ ಉಪಯೋಗವಿಲ್ಲ. 

ಇನ್ನು ಚಿಕ್ಕಬಳ್ಳಾಪುರದ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆಗೆ ವಿದ್ಯಾರ್ಥಿಗಳು, ರೈತರು ಮತ್ತು ಭೇಟಿ ನೀಡುವವರಿಗೆ ಚಿಕ್ಕಬಳ್ಳಾಪುರಕ್ಕೆ ಸೇವೆಗಳನ್ನು ವಿಸ್ತರಿಸಿರುವುದರಿಂದ ಹೆಚ್ಚು ಪ್ರಯೋಜನವಾಗಲಿದೆ ಎಂದು ಹೇಳಲಾಗಿದೆ. ಈ ರೈಲುಗಳಿಗೆ ಬೆಟ್ಟಹಲಸೂರು, ದೊಡ್ಡಜಾಲ, ಚನ್ನಸಂದ್ರದಂತಹ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ. ಈ ರೈಲುಗಳು ಬೆಟ್ಟಹಲಸೂರು ಸೇರಿದಂತೆ ಮಧ್ಯಂತರ ನಿಲ್ದಾಣಗಳಲ್ಲಿ ನಿಲ್ಲಬೇಕು, ಆದರೆ ನೈಋತ್ಯ ರೈಲ್ವೆ ಈ ನಿಲ್ದಾಣಗಳಲ್ಲಿ ನಿಲುಗಡೆ ನೀಡುತ್ತಿಲ್ಲ.

ವಿಕಸಿತ ಭಾರತ ಸಂಕಲ್ಪ ಯಾತ್ರೆ ಕೇಂದ್ರ ಸರ್ಕಾರದ ‘ಗ್ಯಾರಂಟಿ’: ರಾಜೀವ್ ಚಂದ್ರಶೇಖರ್

ಈ ಬಗ್ಗೆ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕಿ (ಬೆಂಗಳೂರು ವಿಭಾಗ) ಕುಸುಮಾ ಹರಿಪ್ರಸಾದ್ ಮಾಹಿತಿ ನೀಡಿ, ‘ನೈಋತ್ಯ ರೈಲ್ವೆ, ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (ಇಂಟಾಚ್) ಜೊತೆಗೆ ಈಗಾಗಲೇ ಈ ಮಾರ್ಗದಲ್ಲಿ ಮೂರು ಪಾರಂಪರಿಕ ಕೇಂದ್ರಗಳನ್ನು ಪುನಃಸ್ಥಾಪಿಸಲಾಗಿದೆ, ದೊಡ್ಡಜಾಲ, ದೇವನಹಳ್ಳಿ ಮತ್ತು ಆವತಿಹಳ್ಳಿ, ಮತ್ತು ನಂದಿ ನಿಲುಗಡೆಯ ಮರುಸ್ಥಾಪನೆ ಕಾರ್ಯವು ಎರಡು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅದು ಪೂರ್ಣಗೊಂಡ ನಂತರ, ನಾವು ಬೇಗನೆ ರೈಲು ಓಡಿಸುತ್ತೇವೆ, ಆದ್ದರಿಂದ ಪ್ರವಾಸಿಗರು ನಂದಿ ಬೆಟ್ಟದಲ್ಲಿ ಸೂರ್ಯೋದಯವನ್ನು ವೀಕ್ಷಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

click me!