Flood Effect on Crops : ಚಿಕ್ಕಬಳ್ಳಾಪುರದಲ್ಲಿ ಮಳೆಗೆ ನೆಲಕಚ್ಚಿದ್ದು 72,440 ಹೆಕ್ಟೇರ್‌ ಬೆಳೆ

By Kannadaprabha News  |  First Published Dec 20, 2021, 11:59 AM IST
  •  ಜಿಲ್ಲೆಯಲ್ಲಿ ಮಳೆಗೆ ನೆಲಕಚ್ಚಿದ್ದು 72,440 ಹೆಕ್ಟೇರ್‌ ಬೆಳೆ
  •  ಒಟ್ಟಾರೆ ಶೇ.80 ರಷ್ಟುಬೆಳೆ ಮಣ್ಣು ಪಾಲು
  • ಇಲ್ಲಿವರೆಗೂ 65,021 ರೈತರಿಗೆ 30.40 ಕೋಟಿ ಪರಿಹಾರ

 ಚಿಕ್ಕಬಳ್ಳಾಪುರ (ಡಿ.20):   ಜಿಲ್ಲೆಯಲ್ಲಿ ಕಳೆದ ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ಬಿದ್ದ ಭಾರೀ ಮಳೆಗೆ ಬಿತ್ತನೆಗೊಂಡಿದ್ದ ಶೇ.80 ರಷ್ಟು ಕೃಷಿ (Agriculture) ಬೆಳೆಗಳು ಮಣ್ಣು ಪಾಲಾಗಿದ್ದು ಕೃಷಿ, ತೊಟಗಾರಿಕೆ ಹಾಗೂ ರೇಷ್ಮೆ ಕೃಷಿ ಸೇರಿದಂತೆ ಒಟ್ಟಾರೆ ಜಿಲ್ಲೆಯಲ್ಲಿ ಬರೋಬ್ಬರಿ 72,440 ಹೆಕ್ಟೇರ್‌ ಬಳೆ ಮಳೆಗೆ ನಾಶವಾಗಿರುವುದು ಇಲಾಖೆಗಳ ಜಂಟಿ ಸಮೀಕ್ಷೆಯಲ್ಲಿ ಬಯಲಾಗಿದೆ.  ಹೌದು, ಜಿಲ್ಲೆಗೆ ಶನಿವಾರ ಪ್ರವಾಸ ಕೈಗೊಂಡಿದ್ದ ಕೇಂದ್ರ ವಿಪತ್ತು ಅಧ್ಯಯನ ತಂಡಕ್ಕೆ ಈ ಕುರಿತು ಕೃಷಿ, ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆ ವ್ಯಾಪ್ತಿಯಲ್ಲಿ ಮಳೆಯಿಂದ (Rain) ಆಗಿರುವ ಬೆಳೆ ನಷ್ಠದ ವಿವರವನ್ನು ಜಿಲ್ಲಾಡಳಿತ ಸಲ್ಲಿಸಿದ್ದು ತೋಟಗಾರಿಕೆ, ರೇಷ್ಮೆಯಿಂದ ಮಳೆ (Rain) ಅಶ್ರಿತ ಕೃಷಿ ಬೆಳೆಗಳು ಹೆಚ್ಚು ಮಳೆಯಿಂದ ಹಾನಿಯಾಗಿ ರೈತರು (Farmers) ಸಂಕಷ್ಟಕ್ಕೀಡಾಗಿರುವುದು ಕಂಡು ಬಂದಿದೆ.

ಕೃಷಿ ಬೆಳೆ 61,648 ಹೆಕ್ಟೇರ್‌:  ಅತಿವೃಷ್ಟಿಯಿಂದಾಗಿ 2021-22ನೇ ಸಾಲಿನಲ್ಲಿ ರಾಗಿ, ಜೋಳ, ಶೇಂಗಾ, ತೊಗರಿ, ಭತ್ತ ಮತ್ತು ಇತರೆ ಕೃಷಿ (Agruculture) ಬೆಳೆಗಳು ಸೇರಿದಂತೆ ಒಟ್ಟು 61,648 ಹೆಕ್ಟರ್‌ ಪ್ರದೇಶದ ಕೃಷಿ ಬೆಳೆಯು ಹಾನಿಯಾಗಿದ್ದು, ಈ ಪೈಕಿ ಚಿಕ್ಕಬಳ್ಳಾಪುರ (Chikkaballapura) ತಾಲ್ಲೂಕಿನಲ್ಲಿ 9298, ಚಿಂತಾಮಣಿ ತಾಲ್ಲೂಕಿನಲ್ಲಿ 10785, ಬಾಗೇಪಲ್ಲಿ ತಾಲ್ಲೂಕಿನಲ್ಲಿ 13300, ಗೌರಿಬಿದನೂರು ತಾಲ್ಲೂಕಿನಲ್ಲಿ 13230, ಗುಡಿಬಂಡೆ ತಾಲ್ಲೂಕಿನಲ್ಲಿ 6409 ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ 8626 ಹೆಕ್ಟರ್‌ ಪ್ರದೇಶದ ಕೃಷಿ ಬೆಳೆಯೂ ಹಾನಿಯಾಗಿದೆ.

Tap to resize

Latest Videos

ಅದೇ ರೀತಿ ತೋಟಗಾರಿಕೆ ಬೆಳೆಗಳಾದ ಟೊಮಟೋ (Tomato), ಆಲುಗಡ್ಡೆ, ಈರುಳ್ಳಿ, ಕ್ಯಾರೆಚ್‌, ಕೋಸ್, ಗುಲಾಬಿ, ದ್ರಾಕ್ಷಿ, ಪಪ್ಪಾಯ ಮತ್ತು ಇತರೆ ಬೆಳೆಗಳು ಸೇರಿದಂತೆ ಜಿಲ್ಲಾದ್ಯಂತ ಒಟ್ಟು 10,683 ರೈತರ 7,292.32 ಹೆಕ್ಟರ್‌ ಪ್ರದೇಶದ ತೋಟಗಾರಿಕೆ ಬೆಳೆಗಳು ಹಾನಿಯಾಗಿವೆ. ಇನ್ನೂ ಜಿಲ್ಲೆಯಲ್ಲಿ ಒಟ್ಟು 21,443.05 ಹೆಕ್ಟರ್‌ ಪ್ರದೇಶದಲ್ಲಿ ರೇಷ್ಮೆ ಬಿತ್ತನೆಯಾಗಿದ್ದು, ಈ ಪೈಕಿ 199 ರೇಷ್ಮೆ ಕೃಷಿ ಬೆಳೆಗಾರರ 109.08 ಹೆಕ್ಟರ್‌ ಪ್ರದೇಶದ ರೇಷ್ಮೆ ಬೆಳೆಯು ಮಳೆಗೆ ಹಾನಿಯಾಗಿದೆ.

1,953 ಮನೆಗೆ ಹಾನಿ:  ಈ ಮೊದಲು ಮಳೆಯಿಂದ (Rain) 1000 ಮನೆಗೆ ಹಾನಿಯೆಂದು ಅಂದಾಜಿಸಲಾಗಿತ್ತು. ಆದರೆ ಅಂತಿಮ ವರದಿ ಕೈ ಸೇರಿದ ಬಳಿಕ ಬರೋಬ್ಬರಿ 1953 ಮನೆಗಳು ಅತಿವೃಷ್ಠಿಯಿಂದ ಹಾನಿಯಾಗಿದ್ದು, ಈ ಪೈಕಿ ಬಾಗೇಪಲ್ಲಿ ತಾಲ್ಲೂಕಿನಲ್ಲಿ 151, ಚಿಕ್ಕಬಳ್ಳಾಪುರ (Chikkaballapura ) ತಾಲ್ಲೂಕಿನಲ್ಲಿ 312, ಚಿಂತಾಮಣಿ ತಾಲ್ಲೂಕಿನಲ್ಲಿ 573, ಗೌರಿಬಿದನೂರು ತಾಲ್ಲೂಕಿನಲ್ಲಿ 434, ಗುಡಿಬಂಡೆ ತಾಲ್ಲೂಕಿನಲ್ಲಿ 97 ಮತ್ತು ಶಿಡ್ಲಘಟ್ಟತಾಲ್ಲೂಕಿನಲ್ಲಿ 386 ಮನೆಗಳು ಹಾನಿಯಾಗಿವೆ.

ರೈತರ ಖಾತೆಗೆ ಪರಿಹಾರ ಜಮೆ :   ಅಕ್ಟೋಬರ್‌ ಮತ್ತು ನವೆಂಬರ್‌ ಮಾಹೆಯಲ್ಲಿ ಜಿಲ್ಲಾದ್ಯಂತ ಸುರಿದ ಭಾರೀ ಪ್ರಮಾಣದ ಮಳೆಯಿಂದಾಗಿ ಜಿಲ್ಲೆಯಲ್ಲಿ ಹಾನಿಗೊಳಗಾದ ರೈತರ (Farmers) ಬೆಳೆಗಳ ವಿವರವನ್ನು ಈವರೆಗೆ ಒಟ್ಟು 13 ಹಂತಗಳಲ್ಲಿ ನಮೂದಿಸಲಾಗಿದ್ದು, ಒಟ್ಟು 65,021 ರೈತ ಫಲಾನುಭವಿಗಳಿಗೆ 30,40,18,748.5 ರುಪಾಯಿಗಳನ್ನು ನೇರ ನಗದು ವರ್ಗಾವಣೆ (ಡಿಬಿಟಿ) ಮೂಲಕ ಅವರ ಬ್ಯಾಂಕ್‌ (Bank) ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಆರ್‌.ಲತಾ ತಿಳಿಸಿದ್ದಾರೆ.

click me!