* ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದಲ್ಲಿ ನಡೆದ ಘಟನೆ
* ನದಿ ದಾಟಲು ದುಸ್ಸಾಹಸಕ್ಕೆ ಹೋದ ವ್ಯಕ್ತಿ
* ನದಿ ದಡದತ್ತ ಯಾರು ಹೋಗದಂತೆ ಪೊಲೀಸ್ ಸಿಬ್ಬಂದಿ ನಿಯೋಜನೆ
ತಾಳಿಕೋಟೆ(ಸೆ.23): ತುಂಬಿ ಹರಿಯುತ್ತಿರುವ ಡೋಣಿ ನದಿ ದಾಟಲು ಮುಂದಾದ ವ್ಯಕ್ತಿ ನದಿ ನೀರಿನಲ್ಲಿ ಕೊಚ್ಚಿಕೊಂಡು ಹೋದ ಘಟನೆ ವಿಜಯಪುರ(Vijayapura) ಜಿಲ್ಲೆಯ ತಾಳಿಕೋಟೆ ಪಟ್ಟಣಕ್ಕೆ ಹೊಂದಿಕೊಂಡು ಹರಿಯುತ್ತಿರುವ ಡೋಣಿ ನದಿಯಲ್ಲಿ ಬುಧವಾರ ನಡೆದಿದೆ.
ನೀರಿನಲ್ಲಿ ಕೊಚ್ಚಿಕೊಂಡ ಹೋದ ವ್ಯಕ್ತಿ ಇಬ್ರಾಹಿಂ ಬೇಪಾರಿ(55) ಎಂದು ತಿಳಿದು ಬಂದಿದೆ. ಕಳೆದ ಎರಡು ದಿನಗಳಿಂದ ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಸುರಿದ ಅಪಾರ ಮಳೆಯಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಕಳಮಟ್ಟದ ಸೇತುವೆಯು ಸಂಪೂರ್ಣ ಜಲಾವೃತಗೊಂಡಿದೆ. ಈ ನದಿಯನ್ನು ದಾಟಲು ದುಸ್ಸಾಹಸಕ್ಕೆ ಹೋದ ಇಬ್ರಾಹಿಂ ಬೇಪಾರಿ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ. ನೀರಿನಲ್ಲಿ ಹರಿದುಕೊಂಡು ಹೋಗುತ್ತಿರುವ ದೃಶ್ಯವನ್ನು ನದಿ ದಡದಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು ಸದ್ಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಜಯಪುರ: ಭೀಮಾ, ಡೋಣಿ ನದಿಯಲ್ಲಿ ತಗ್ಗಿದ ಪ್ರವಾಹ
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಡೋಣಿ ನದಿಯು(Doni River) ಮೈದುಂಬಿ ಹರಿಯುತ್ತಿದ್ದು ನದಿಯ ದಾಟಲು ಅನೇಕ ಜನರು ದುಸ್ಸಾಹಸಕ್ಕೆ ಕೈಹಾಕುತ್ತಾ ಸಾಗಿದ್ದು ಇಂಬ್ರಾಹಿಂ ಬೇಪಾರಿ ನೀರಿನಲ್ಲಿ ಕೊಚ್ಚಿ ಹೋಗ ಮುಂಚೆ ಇಬ್ಬರು ಯುವಕರು ಬೈಕ್‌ನೊಂದಿಗೆ ನದಿ ದಾಟಲು ಹೋದಾಗ ನೀರಿನ ರಭಸಕ್ಕೆ ಬೈಕ್ ಸಮೇತವಾಗಿ ನದಿಯಲ್ಲಿ ಬಿದ್ದ ಘಟನೆ ನಡೆದಿದೆ. ಸೇತುವೆಯ ತಡೆಗೋಡೆ ಇಬ್ಬರು ಕೈಹಿಡಿದುಕೊಂಡು ನಿಂತಿದ್ದರಿಂದ ನದಿಯ ದಡದಲ್ಲಿದ್ದ ಜನರು ಬೈಕ್ ಸಮೇತವಾಗಿ ಅವರನ್ನು ರಕ್ಷಿಸಿದ್ದಾರೆ.
ನೀರಿನಲ್ಲಿ ಕೊಚ್ಚಿಹೋದ ವ್ಯಕ್ತಿ ಇಬ್ರಾಹಿಂ ಬೇಪಾರಿ ಪತ್ತೆ ಕಾರ್ಯದಲ್ಲಿ ಪೊಲೀಸ್ ಅಧಿಕಾರಿ ವಿನೋದ ದೊಡಮನಿ ನೇತೃತ್ವದ ಸಿಬ್ಬಂದಿ ಹಾಗೂ ಅಗ್ನಿ ಶಾಮಕ ದಳದ ಅಧಿಕಾರಿ ಜೆ.ಬಿ.ಶೇವಳಂಕರ ನೇತೃತ್ವದ ಸಿಬ್ಬಂದಿ ಕಾರ್ಯಪ್ರವೃತ್ತರಾಗಿದ್ದಾರೆ. ಸದ್ಯ ನದಿ ದಡದತ್ತ ಯಾರು ಹೋಗದಂತೆ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.