ಹೊರರಾಜ್ಯಗಳಿಂದ ದ.ಕ. ಜಿಲ್ಲೆಗೆ ಆಗಮಿಸಲು 6,092 ಅರ್ಜಿ ಸಲ್ಲಿಕೆ

By Kannadaprabha NewsFirst Published May 13, 2020, 9:26 AM IST
Highlights

ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ತವರಿಗೆ ಆಗಮಿಸಲು ಸೇವಾ ಸಿಂಧುವಿನಲ್ಲಿ 6,092 ಅರ್ಜಿಗಳು ಸಲ್ಲಿಕೆಯಾಗಿವೆ. ಒಂದು ಅರ್ಜಿಯಲ್ಲಿ ಕನಿಷ್ಠ 3ರಿಂದ 5 ಮಂದಿಯಂತೆ 25,000 ಜನರಿರಬಹುದು. ಇವರಿಗೆ ಸರ್ಕಾರದ ವತಿಯಿಂದ ಸಾಂಸ್ಥಿಕವಾಗಿ ಕ್ವಾರಂಟೈನ್‌ಗೊಳಪಡಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್‌ ಮಾಹಿತಿ ನೀಡಿದ್ದಾರೆ.

ಮಂಗಳೂರು(ಮೇ 13): ಹೊರ ರಾಜ್ಯಗಳಿಂದ ಬರಲಿಚ್ಚಿಸಿರುವ ದ.ಕ. ಜಿಲ್ಲೆಯ ಮಂದಿಗೆ ಆಯಾ ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ಶಾಸಕರ ನೇತೃತ್ವದಲ್ಲಿ ಆಯಾ ತಾಲೂಕುಗಳಲ್ಲಿ ಕ್ವಾರಂಟೈನ್‌ಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಮೇ 13ರಿಂದ ಸಿದ್ಧತಾ ಸಭೆ ನಡೆಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಅವರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸಂಸದರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಈ ಸೂಚನೆ ನೀಡಿದರು.

ಐಟಿ ನೌಕರರಿಗೆ ಯಾವಾಗಿಂದ ವರ್ಕ್ ಫ್ರಂ ಆಫೀಸ್ ಆರಂಭ?

ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ತವರಿಗೆ ಆಗಮಿಸಲು ಸೇವಾ ಸಿಂಧುವಿನಲ್ಲಿ 6,092 ಅರ್ಜಿಗಳು ಸಲ್ಲಿಕೆಯಾಗಿವೆ. ಒಂದು ಅರ್ಜಿಯಲ್ಲಿ ಕನಿಷ್ಠ 3ರಿಂದ 5 ಮಂದಿಯಂತೆ 25,000 ಜನರಿರಬಹುದು. ಇವರಿಗೆ ಸರ್ಕಾರದ ವತಿಯಿಂದ ಸಾಂಸ್ಥಿಕವಾಗಿ ಕ್ವಾರಂಟೈನ್‌ಗೊಳಪಡಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಜಿಲ್ಲಾಧಿಕಾರಿ ಸಿಂಧು ರೂಪೇಶ್‌ ಮಾಹಿತಿ ನೀಡಿದರು.

ಈ ಸಂದರ್ಭ ತಾಲೂಕುವಾರು ಲಭ್ಯವಿರುವ ಹೊಟೇಲ್‌, ಸಂಸ್ಥೆಗಳ ಮಾಹಿತಿಯನ್ನು ತಹಶೀಲ್ದಾರರಿಂದ ಕೋರಲಾಯಿತು. ಸಲ್ಲಿಕೆಯಾದ ಅರ್ಜಿಗಳಿಗೆ ಪೂರಕವಾಗಿ ಕ್ವಾರಂಟೈನ್‌ಗೊಳಪಡಿಸಲು ಸಾಕಷ್ಟುಮುಂಜಾಗೃತಾ ಕ್ರಮಗಳು ಹಾಗೂ ಸೌಲಭ್ಯಗಳ ಅಗತ್ಯವಿರುವುದರಿಂದ ಶಾಸಕರು ಹಾಗೂ ಅಧಿಕಾರಿಗಳ ನಡುವೆ ಸುದೀರ್ಘ ಚರ್ಚೆ ನಡೆಯಿತು.

ಎರಡನೇ ದಿನಕ್ಕೆ ದಿಢೀರ್ ಕುಸಿದ ಅಡಕೆ ಧಾರಣೆ

ಹೊರ ರಾಜ್ಯಗಳಿಂದ ಬರುವವರು ತಮ್ಮ ಮನೆ ಅಥವಾ ಸಂಬಂಧಿಕರ ಮನೆಗಳಲ್ಲಿ ಪ್ರತ್ಯೇಕವಾಗಿ ಕ್ವಾರಂಟೈನ್‌ಗೆ ಒಳಪಡಲು ಇಚ್ಚಿಸಿದರೆ, ಸೂಕ್ತ ಕ್ರಮಗಳೊಂದಿಗೆ ಅವರಿಗೆ ಅವಕಾಶ ಕಲ್ಪಿಸಬೇಕು. ಮಾತ್ರವಲ್ಲದೆ ಜಿಲ್ಲಾಡಳಿತ ಖಾಲಿ ಮನೆ, ಫ್ಲ್ಯಾಟ್‌ಗಳಿರುವವರು ನಮ್ಮವರ ಕ್ವಾರಂಟೈನ್‌ಗಾಗಿ ಒದಗಿಸುವಂತೆ ಜಿಲ್ಲಾಡಳಿತ ಮನವಿ ಮಾಡಬಹುದು ಎಂದು ಶಾಸಕ ಖಾದರ್‌ ಸಲಹೆ ನೀಡಿದರು.

ಹೊರ ರಾಜ್ಯಗಳಿಂದ ಸಾಕಷ್ಟುಸಂಖ್ಯೆಯಲ್ಲಿ ಗರ್ಭಿಣಿಯರೂ ಆಗಮಿಸಲಿರುವುದರಿಂದ ಅವರಿಗೆ ಹೋಂ ಕ್ವಾರಂಟೈನ್‌ಗೆ ಆದ್ಯತೆ ನೀಡಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಅಭಿಪ್ರಾಯಿಸಿದರು.

ಶಾಸಕ ವೇದವ್ಯಾಸ ಕಾಮತ್‌, ಜಿಲ್ಲೆಯ ಖಾಸಗಿ ವೈದ್ಯಕೀಯ, ಶಿಕ್ಷಣ ಸಂಸ್ಥೆಗಳ ಹಾಸ್ಟೆಲ್‌ಗಳನ್ನು ಕೂಡಾ ಬಳಸಿಕೊಳ್ಳಲು ಕ್ರಮ ಅಗತ್ಯವಿದೆ ಎಂದರು. ಉಳಿದ ಶಾಸಕರು ಇದಕ್ಕೆ ದನಿಗೂಡಿಸಿದರು.

ಉತ್ತಮ ಧಾರಣೆಯೊಂದಿಗೆ ಅಡಿಕೆ ವ್ಯವಹಾರ ಆರಂಭ

ಈ ಸಂದರ್ಭ ಪೊಲೀಸ್‌ ಆಯುಕ್ತ ಡಾ. ಪಿ.ಎಸ್‌. ಹರ್ಷ ಪ್ರತಿಕ್ರಿಯಿಸಿ, ಕ್ವಾರಂಟೈನ್‌ಗೆ ಒಳಪಡಿಸುವಾಗ ಪ್ರತಿಯೊಬ್ಬರಿಗೂ ಪ್ರತ್ಯೇಕ ಶೌಚಾಲಯದ ವ್ಯವಸ್ಥೆಯೊಂದಿಗೆ ಸೌಲಭ್ಯ ಕಲ್ಪಿಸುವುದು ಅತ್ಯಗತ್ಯಎಂದು ಹೇಳಿದರು.

ಈ ಬಗ್ಗೆ ಸುದೀರ್ಘ ಚರ್ಚೆಯ ಬಳಿಕ ಆಯಾ ತಾಲೂಕುಗಳಲ್ಲಿ ಲಭ್ಯವಿರುವ ವ್ಯವಸ್ಥೆಗಳ ಬಗ್ಗೆ ಸ್ಥಳೀಯ ತಹಶೀಲ್ದಾರ್‌, ಆರೋಗ್ಯ ಅಧಿಕಾರಿಗಳು ಶಾಸಕರ ನೇತೃತ್ವದಲ್ಲಿ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿದ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಡಳಿತದಿಂದ ಮಾಡಲಾಗುವ ಸಾಂಸ್ಥಿಕ ಕ್ವಾರಂಟೈನ್‌ ಉಚಿತವಾಗಿರುತ್ತದೆ. ಉಳಿದಂತೆ ಸ್ಥಳೀಯ ನಿಗದಿತ ಹೊಟೇಲ್‌ಗಳಲ್ಲಿ ಉಳಿದುಕೊಳ್ಳಲು ಬಯಸುವವರಿಗೆ ಈಗಾಗಲೇ ವಿದೇಶಗಳಿಂದ ಆಗಮಿಸುವವರಿಗೆ ಮಾಡಿರುವಂತೆ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಸಂಸದ ನಳಿನ್‌ ಕುಮಾರ್‌ ಕಟೀಲ್‌, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೇ ಪ್ರಸಾದ್‌, ಶಾಸಕರಾದ ಡಾ. ಭರತ್‌ ಶೆಟ್ಟಿ, ಉಮಾನಾಥ ಕೋಟ್ಯಾನ್‌, ರಾಜೇಶ್‌ ನಾಯ್‌್ಕ, ವಿಧಾನ ಪರಿಷತ್‌ ಸದಸ್ಯ ಹರೀಶ್‌ ಕುಮಾರ್‌ ಇದ್ದರು.

ತುರ್ತು ಅಗತ್ಯಕ್ಕೆ ಮಾತ್ರ ಹೊರರಾಜ್ಯಗಳಿಂದ ಅವಕಾಶ

ಸದ್ಯ ದ.ಕ. ಜಿಲ್ಲೆಗೆ ಆಗಮಿಸಲು ಸೇವಾಸಿಂಧುವಿನಲ್ಲಿ ಹೊರ ರಾಜ್ಯಗಳಿಂದ 6,000ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದೆ. ಆದರೆ, ಕೇಂದ್ರ ಸರ್ಕಾರದ ಆದೇಶದ ಪ್ರಕಾರ ಪ್ರಸ್ತುತ ಆ ಅರ್ಜಿಗಳಲ್ಲಿ ಗರ್ಭಿಣಿಯರು, ಇತರ ರೋಗದಿಂದ ಅಸ್ವಸ್ಥರಾಗಿರುವವರು, ಪ್ರವಾಸಕ್ಕೆ ತೆರಳಿರುವವರು, ವಿದ್ಯಾರ್ಥಿಗಳು, ಹೊರ ದೇಶಗಳಿಂದ ಬಂದು ಇತರ ರಾಜ್ಯಗಳಲ್ಲಿ ಬಾಕಿಯಾದವರು ಸೇರಿದಂತೆ ತುರ್ತು ಅಗತ್ಯಗಳ ಅರ್ಜಿಯನ್ನು ಮಾತ್ರ ಪರಿಗಣಿಸಲಾಗುತ್ತದೆ. ಮಾತ್ರವಲ್ಲದೆ, ಹೊರ ರಾಜ್ಯಗಳಿಂದ ಆಗಮಿಸುವವರು 14 ದಿನಗಳ ಸಾಂಸ್ಥಿಕ ಕ್ವಾರಂಟೈನ್‌ಗೆ ಒಪ್ಪಿಕೊಂಡೇ ಅರ್ಜಿ ಸಲ್ಲಿಸಿರುತ್ತಾರೆ ಎಂದು ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತ ಮದನ್‌ ಮೋಹನ್‌ ವಿವರ ನೀಡಿದರು.

ಸೋಂಕಿನ ಲಕ್ಷಣ ಕಂಡು ಬಂದರೆ ವೆನ್ಲಾಕ್‌ಗೆ

ಹೊರ ರಾಜ್ಯಗಳಿಂದ ಅಥವಾ ಹೊರ ದೇಶಗಳಿಂದ ಆಗಮಿಸುವವರಲ್ಲಿ ಮೇಲ್ನೋಟಕ್ಕೆ ಕೊರೋನ ಸೋಂಕಿನ ಗುಣ ಲಕ್ಷಣಗಳು ಕಂಡು ಬಂದರೂ ಅವರನ್ನು ನೇರವಾಗಿ ಕೋವಿಡ್‌ ಆಸ್ಪತ್ರೆಯಾಗಿರುವ ವೆನ್ಲಾಕ್‌ ಕೋವಿಡ್‌ ಆಸ್ಪತ್ರೆಗೆ ನೇರವಾಗಿ ದಾಖಲಿಸಲಾಗುತ್ತದೆ. ಹಾಗಾಗಿ ಯಾವುದೇ ಶಿಕ್ಷಣ ಸಂಸ್ಥೆ, ಹೊಟೇಲ್‌ಗಳಲ್ಲಿ ಕ್ವಾರಂಟೈನ್‌ಗೊಳಪಡಿಸುವ ಕುರಿತಂತೆ ಸಾರ್ವಜನಿಕರಿಗೆ ಯಾವುದೇ ರೀತಿಯ ಗೊಂದಲದ ಅಗತ್ಯವಿಲ್ಲ. ಜಿಲ್ಲಾಡಳಿತ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದು, ಹೊರ ರಾಜ್ಯ, ದೇಶಗಳಿಂದ ಆಗಮಿಸುವವರಿಗೆ ವ್ಯವಸ್ಥೆ ಮಾಡಲಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

click me!