ಬೆಂಗಳೂರು ಪೊಲೀಸರ ಭರ್ಜರಿ ಬೇಟೆ ಥೈಲ್ಯಾಂಡ್‌ನಿಂದ ತರಿಸಿದ 4 ಕೋಟಿ ರೂ ಮೌಲ್ಯದ ಡ್ರಗ್ಸ್ ವಶ, 10 ಮಂದಿ ಆರೋಪಿಗಳ ಬಂಧನ

Published : Jan 28, 2026, 03:00 PM IST
Bengaluru Drug Bust

ಸಾರಾಂಶ

ಬೆಂಗಳೂರಿನ ಅಮೃತಹಳ್ಳಿ ಪೊಲೀಸರು 4 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡು, 10 ಮಂದಿ ಆರೋಪಿಗಳನ್ನು ಬಂಧಿಸುವ ಮೂಲಕ ಬೃಹತ್ ಡ್ರಗ್ಸ್ ಜಾಲವನ್ನು ಭೇದಿಸಿದ್ದಾರೆ. ಆರೋಪಿಗಳು ಥೈಲ್ಯಾಂಡ್‌ನಿಂದ ಡಾರ್ಕ್ ವೆಬ್ ಮೂಲಕ ಡ್ರಗ್ಸ್ ತರಿಸಿ ಮಾರಾಟ ಮಾಡುತ್ತಿದ್ದರು.

ಬೆಂಗಳೂರು: ನಗರದಲ್ಲಿ ಹೆಚ್ಚುತ್ತಿರುವ ಮಾದಕ ವಸ್ತು ಜಾಲಕ್ಕೆ ಅಮೃತಹಳ್ಳಿ ಪೊಲೀಸರು ಭಾರೀ ಹೊಡೆತ ನೀಡಿದ್ದು, ಸುಮಾರು 4 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ನ್ನು ವಶಪಡಿಸಿಕೊಂಡು 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕಾರ್ಯಾಚರಣೆ ನಗರದ ಮಾದಕ ವಸ್ತು ನಿಯಂತ್ರಣದಲ್ಲಿ ಮಹತ್ವದ ಸಾಧನೆಯಾಗಿ ಪರಿಗಣಿಸಲಾಗಿದೆ.

ಬಂಧಿತ ಆರೋಪಿಗಳನ್ನು ಕುಶಾಲ್, ಸಾಗರ್, ಶಶಾಂಕ್, ವಿಲ್ಸನ್, ಆಶೀರ್ ಅಲಿ, ಸಜ್ಜದ್, ರಿಯಾಜ್, ಶಿಯಾಬ್, ನಿಸಾರ್ ಮತ್ತು ಅಭಿನವ್ ಎಂದು ಗುರುತಿಸಲಾಗಿದೆ. ಇವರಲ್ಲಿ ಇಬ್ಬರು ಕರ್ನಾಟಕ ಮೂಲದವರಾಗಿದ್ದು, ಉಳಿದವರು ಕೇರಳ ಮೂಲದವರು ಎಂದು ಪೊಲೀಸರು ತಿಳಿಸಿದ್ದಾರೆ.

ಥೈಲ್ಯಾಂಡ್‌ನಿಂದ ವಿಮಾನದಲ್ಲಿ ಡ್ರಗ್ಸ್ ಸಾಗಣೆ

ಪ್ರಾಥಮಿಕ ತನಿಖೆಯಲ್ಲಿ, ಆರೋಪಿಗಳು ಥೈಲ್ಯಾಂಡ್‌ನಿಂದ ವಿಮಾನ ಮೂಲಕ ಡ್ರಗ್ಸ್‌ನ್ನು ಭಾರತಕ್ಕೆ ಕಳ್ಳಸಾಗಣೆ ಮಾಡುತ್ತಿದ್ದರು ಎಂಬುದು ಬಹಿರಂಗವಾಗಿದೆ. ಡ್ರಗ್ಸ್ ಬೆಂಗಳೂರಿಗೆ ತಲುಪುತ್ತಿದ್ದಂತೆ, ನಗರದ ವಿವಿಧ ಪ್ರದೇಶಗಳಿಗೆ ತಕ್ಷಣವೇ ವಿತರಣೆ ಮಾಡಲಾಗುತ್ತಿತ್ತು.

ಡಾರ್ಕ್ ವೆಬ್ ಮೂಲಕ ಡ್ರಗ್ಸ್ ಖರೀದಿ

ಆರೋಪಿಗಳು ಡಾರ್ಕ್ ವೆಬ್‌ನಲ್ಲಿನ “Team Kalki” ಎಂಬ ವೆಬ್‌ಸೈಟ್ ಮೂಲಕ ಡ್ರಗ್ಸ್ ಬುಕ್ ಮಾಡಿಕೊಳ್ಳುತ್ತಿದ್ದರು ಎಂಬುದು ತನಿಖೆಯಲ್ಲಿ ಪತ್ತೆಯಾಗಿದೆ. ಥೈಲ್ಯಾಂಡ್‌ನಿಂದ ಕೇರಳ ಮೂಲದ ವ್ಯಕ್ತಿಯೊಬ್ಬ ವಿಮಾನ ಮೂಲಕ ಡ್ರಗ್ಸ್ ಕಳುಹಿಸುತ್ತಿದ್ದ ಎನ್ನಲಾಗಿದೆ.

ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು ಹಾಗೂ ಪಾರ್ಟಿಗಳಿಗೆ ಮಾರಾಟ

ಈ ಡ್ರಗ್ ಪೆಡ್ಲಿಂಗ್ ಜಾಲವು ವಿದ್ಯಾರ್ಥಿಗಳು, ಐಟಿ-ಬಿಟಿ ಉದ್ಯೋಗಿಗಳು ಹಾಗೂ ಹೈ-ಪ್ರೊಫೈಲ್ ಪಾರ್ಟಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿತ್ತು.

ಯಲಹಂಕ, ಹೆಬ್ಬಾಳ, ಕೋರಮಂಗಲ, ಬೆಳ್ಳಂದೂರು ಸೇರಿದಂತೆ ಬೆಂಗಳೂರು ನಗರವನ್ನು ವಿವಿಧ ಏರಿಯಾಗಳಾಗಿ ಹಂಚಿಕೊಂಡು, ಪ್ರತಿಯೊಬ್ಬ ಆರೋಪಿಗೂ ಒಂದೊಂದು ಪ್ರದೇಶವನ್ನು ನಿಗದಿಪಡಿಸಲಾಗಿತ್ತು.

ಏರಿಯಾ ವಿಚಾರಕ್ಕೆ ಗಲಾಟೆ – ಹಲ್ಲೆಗೂ ಇಳಿದ ಪೆಡ್ಲರ್‌ಗಳು

ಒಂದೇ ಗ್ಯಾಂಗ್‌ಗೆ ಸೇರಿದವರಾದರೂ, ಏರಿಯಾ ವಿಚಾರದಲ್ಲಿ ಪೆಡ್ಲರ್‌ಗಳ ನಡುವೆ ತೀವ್ರ ಗಲಾಟೆಗಳು ನಡೆಯುತ್ತಿದ್ದವು. “ನನ್ನ ಏರಿಯಾಗೆ ನೀನು ಬರಬಾರದು, ನಿನ್ನ ಏರಿಯಾಗೆ ನಾನು ಬರಲ್ಲ” ಎಂಬ ಒಪ್ಪಂದವಿದ್ದರೂ, ಅದನ್ನು ಮೀರಿ ಬೇರೆ ಪ್ರದೇಶದಲ್ಲಿ ಡ್ರಗ್ಸ್ ಮಾರಾಟ ಮಾಡಿದ ಪೆಡ್ಲರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆಗಳೂ ನಡೆದಿವೆ. ಕೆಲ ಸಂದರ್ಭಗಳಲ್ಲಿ ಕೊಲೆ ಮಾಡುವ ಮಟ್ಟಕ್ಕೂ ಗಲಾಟೆ ತಲುಪಿತ್ತು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಡ್ರಗ್ ಜಾಲದ ಸಂಪೂರ್ಣ ಚಿತ್ರಣ ಪತ್ತೆ

ತನಿಖೆ ವೇಳೆ, ಈ ಡ್ರಗ್ ಪೆಡ್ಲಿಂಗ್ ಗ್ಯಾಂಗ್‌ನ ಸಂಪೂರ್ಣ ಜಾಲ ಹಾಗೂ ಕಾರ್ಯವಿಧಾನವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆದರೆ, ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಮುಖ್ಯ ಆರೋಪಿ ಸದ್ಯ ನಾಪತ್ತೆಯಾಗಿದ್ದು, ಆತನಿಗಾಗಿ ವಿಶೇಷ ತಂಡಗಳು ಶೋಧ ಕಾರ್ಯ ಮುಂದುವರಿಸಿವೆ.

ವಶಪಡಿಸಿಕೊಂಡ ವಸ್ತುಗಳು

ಬಂಧಿತ ಆರೋಪಿಗಳಿಂದ ಪೊಲೀಸರು ಕೆಳಕಂಡ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 3 ಕೆಜಿ ಹೈಡ್ರೋ ಗಾಂಜಾ, 10 ಕೆಜಿ ಗಾಂಜಾ, 500 ಎಲ್‌ಎಸ್‌ಡಿ ಸ್ಟ್ರಿಪ್ಸ್, ಕೃತ್ಯಕ್ಕೆ ಬಳಸಿದ್ದ 2 ಕಾರುಗಳು, 10 ಮೊಬೈಲ್ ಫೋನ್‌ಗಳು ಒಟ್ಟಾರೆ, ಅಮೃತಹಳ್ಳಿ ಪೊಲೀಸರ ಈ ಕಾರ್ಯಾಚರಣೆ ನಗರದಲ್ಲಿನ ಡ್ರಗ್ ಮಾಫಿಯಾಗೆ ದೊಡ್ಡ ಹೊಡೆತ ನೀಡಿದ್ದು, ತನಿಖೆ ಇನ್ನೂ ಮುಂದುವರಿದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಉಡುಪಿ ದೋಣಿ ದುರಂತಕ್ಕೆ ಬಲಿಯಾದ ಯುವತಿ ದಿಶಾ: ಗೆಳತಿಯ ಸಾವಿಗೆ ಕಣ್ಣೀರಿಟ್ಟ ಯೂಟ್ಯೂಬರ್ ಮಧು ಗೌಡ, ನಿಶಾ!
ಬಿಎಂಟಿಸಿ ಬಸ್ ಜಾಹೀರಾತು ಹರಿದುಹಾಕಿದ ಕನ್ನಡಪರ ಹೋರಾಟಗಾರರು; ಗುಟ್ಕಾ ಪ್ರದರ್ಶನಕ್ಕೆ ಆಕ್ರೋಶ!