
ಬೆಂಗಳೂರು (ಜ.28): ಬುದ್ಧಿಮಾಂದ್ಯ ಯುವಕನ ಕಿಡ್ನಿ ಮಾರಾಟ ಹಾಗೂ ನಿಗೂಢ ಸಾವು ಪ್ರಕರಣದ ತನಿಖೆಯಲ್ಲಿ ಕರ್ತವ್ಯಲೋಪ ಎಸಗಿದ ಸಬ್ ಇನ್ಸ್‌ಪೆಕ್ಟರ್ ಹಾಗೂ ಹೆಡ್‌ಕಾನ್‌ಸ್ಟೇಬಲ್ ವಿರುದ್ಧ ಇಲಾಖಾ ವಿಚಾರಣೆಗೆ ಹಾಗೂ ಅವರಿಂದ ದಂಡ ವಸೂಲಿಗೆ ಶಿಫಾರಸು ಮಾಡಿ ರಾಜ್ಯ ಮಾನವ ಹಕ್ಕುಗಳ ಆಯೋಗ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ರಾಜ್ಯ ಮಾನವ ಹಕ್ಕು ಆಯೋಗ 2022ರ ಡಿ.5ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಪ್ರಕರಣ ನಡೆದಾಗ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸದ್ಯ ಬ್ಯಾಡರಹಳ್ಳಿ ಠಾಣೆ ಸಬ್ ಇನ್ಸ್‌ಪೆಕ್ಟರ್ ಆಗಿರುವ ವಿ.ಸಂತೋಷ್ ಹಾಗೂ ಕಲಾಸಿಪಾಳ್ಯ ಠಾಣೆಯಲ್ಲಿ ಹೆಡ್‌ಕಾನ್‌ಸ್ಟೇಬಲ್ ಆಗಿರುವ ಕೆ.ಎಸ್.ಗೋಪಾಲ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್ ಪ್ರಸಾದ್ ಅವರ ಪೀಠ, ಇದೇ ಪ್ರಕರಣದಲ್ಲಿ ಇತರ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ಧದ ಪ್ರಕರಣಕ್ಕೆ ಮತ್ತೊಂದು ನ್ಯಾಯಪೀಠ ಮಧ್ಯಂತರ ತಡೆ ನೀಡಿದೆ. ಆದ್ದರಿಂದ ಈ ಪ್ರಕರಣದಲ್ಲೂ ಮಧ್ಯಂತರ ತಡೆ ನೀಡಲಾಗುತ್ತದೆ ಎಂದು ಹೇಳಿತು. ನಂತರ ರಾಜ್ಯ ಸರ್ಕಾರ, ಮಾನವ ಹಕ್ಕು ಆಯೋಗ, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ದೂರುದಾರ ಶಿವಾನಂದ ಬಿ.ಬಾವೂರು ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಫೆ.27ಕ್ಕೆ ಮುಂದೂಡಿತು.
ಯಾದಗಿರಿ ಮೂಲದ 29 ವರ್ಷದ ಬುದ್ದಿಮಾಂದ್ಯ ಯುವಕ ಶಂಕರಪ್ಪನ ಕಿಡ್ನಿ ಮಾರಾಟ ಸಂಬಂಧ 2020ರಲ್ಲಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ಆರು ತಿಂಗಳ ವಿಳಂಬ, ಸೂಕ್ತ ತನಿಖೆ ನಡೆಸದೆ ಕರ್ತವ್ಯಲೋಪ ಎಸಗಿದ್ದಾರೆ ಎಂದು ಆಯೋಗ ಹೇಳಿತ್ತು. ಜೊತೆಗೆ, ವಿ.ಸಂತೋಷ್, ಕೆ.ಎಸ್.ಗೋಪಾಲ್ ಸೇರಿ ಐವರು ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ನಡೆಸುವಂತೆ ಮತ್ತು ಸಬ್ ಇನ್ಸ್‌ಪೆಕ್ಟರ್ ಅವರಿಂದ 1.50 ಲಕ್ಷ ಮತ್ತು ಹೆಡ್‌ಕಾನ್‌ಸ್ಟೇಬಲ್‌ನಿಂದ ಒಂದು ಲಕ್ಷ ರು. ದಂಡ ವಸೂಲಿ ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಆಯೋಗ ಮಾಡಿದ್ದ ಶಿಫಾರಸ್ಸನ್ನು ಅರ್ಜಿದಾರರು ಪ್ರಶ್ನಿಸಿದ್ದರು.