ಶಕ್ತಿ ಯೋಜನೆ: ಕೊಡಗಲ್ಲಿ ದಿನಕ್ಕೆ ಹತ್ತು ಸಾವಿರಕ್ಕೂ ಅಧಿಕ ಮಹಿಳೆಯರಿಗೆ ಲಾಭ..!

By Kannadaprabha News  |  First Published Jun 11, 2023, 8:45 PM IST

ಮೂರು ತಿಂಗಳ ವರೆಗೆ ಗುರುತಿನ ಚೀಟಿ ತೋರಿಸಿ ಶೂನ್ಯ ಟಿಕೆಟ್‌ ಪಡೆದು ನಗರ ಸಾರಿಗೆ, ಸಾಮಾನ್ಯ, ವೇಗದೂತ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.


ವಿಘ್ನೇಶ್‌ ಎಂ. ಭೂತನಕಾಡು

ಮಡಿಕೇರಿ(ಜೂ.11):  ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆಗೆ ಇಂದಿನಿಂದ ರಾಜ್ಯಾದ್ಯಂತ ಏಕಕಾಲದಲ್ಲಿ ಚಾಲನೆ ದೊರಕಿದೆ. ಈ ಯೋಜನೆಯಡಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಪ್ರತಿನಿತ್ಯ ಅಂದಾಜು ಸುಮಾರು 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಇದರ ಲಾಭ ಪಡೆಯಲಿದ್ದಾರೆ.

Latest Videos

undefined

ಕಾಂಗ್ರೆಸ್‌ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಯೋಜನೆಗಳಲ್ಲಿ ಶಕ್ತಿ ಯೋಜನೆಯೂ ಒಂದಾಗಿದೆ. ಭಾನುವಾರ ಮಧ್ಯಾಹ್ನ 1 ಗಂಟೆಯಿಂದ ಮಹಿಳಾ ಪ್ರಯಾಣಿಕರಿಗೆ ಈ ಸೌಲಭ್ಯ ದೊರೆತಿದೆ. ಮೂರು ತಿಂಗಳ ವರೆಗೆ ಗುರುತಿನ ಚೀಟಿ ತೋರಿಸಿ ಶೂನ್ಯ ಟಿಕೆಟ್‌ ಪಡೆದು ನಗರ ಸಾರಿಗೆ, ಸಾಮಾನ್ಯ, ವೇಗದೂತ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಸಲು ಅವಕಾಶ ನೀಡಲಾಗಿದೆ.

ಉಡುಪಿ ಜನತೆಗೆ ಸಿಹಿಸುದ್ದಿ ಕೊಟ್ಟ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್: ನರ್ಮ್‌ ಬಸ್‌ಗಳ ಸಂಚಾರ ಪುನಾರಂಭ

ನಿತ್ಯ 91 ಬಸ್‌ ಸಂಚಾರ: 

ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗದ ಮಡಿಕೇರಿ ಘಟಕದಿಂದ ದಿನಕ್ಕೆ ಸುಮಾರು 91 ಬಸ್‌ಗಳು ಸಂಚರಿಸುತ್ತಿದೆ. ಪ್ರತಿ ದಿನ ಅಂದಾಜು 20 ಸಾವಿರಕ್ಕೂ ಅಧಿಕ ಮಂದಿ ಪ್ರಯಾಣಿಕರು ಕೊಡಗಿನಲ್ಲಿ ಸಂಚಾರ ಮಾಡುತ್ತಾರೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಈ ‘ಶಕ್ತಿ’ ಯೋಜನೆಯಿಂದ ಪ್ರತಿ ದಿನ ಅಂದಾಜು 10 ಸಾವಿರಕ್ಕೂ ಅಧಿಕ ಮಂದಿ ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಲಿದ್ದಾರೆ.

ಹೊರ ಜಿಲ್ಲೆಯ ಡಿಪೋಗಳಿಂದ ಮಡಿಕೇರಿ ಡಿಪೋದಲ್ಲಿ ದಿನಕ್ಕೆ 200ಕ್ಕೂ ಅಧಿಕ ಬಸ್‌ಗಳು, ಕುಶಾಲನಗರ 250, ವಿರಾಜಪೇಟೆ 140, ಸೋಮವಾರಪೇಟೆ 70 ಹಾಗೂ ಹೆಬ್ಬಾಲೆಯಲ್ಲಿ ಸುಮಾರು 70 ಬಸ್‌ಗಳು ಸಂಚರಿಸುತ್ತವೆ. ವರ್ಷಕ್ಕೆ ಸುಮಾರು 40 ಕೋಟಿ ರುಪಾಯಿ ಆದಾಯ ಕೊಡಗಿನಿಂದ ಸಾರಿಗೆ ಇಲಾಖೆಗೆ ದೊರಕುತ್ತದೆ.

ಸೂರ್ಲಬ್ಬಿ, ಕಂಬಿಬಾಣೆ, ಆವಂದೂರು, ಗಾಳಿಬೀಡು ಸೇರಿದಂತೆ ಜಿಲ್ಲೆಯ ಹಲವು ಗ್ರಾಮೀಣ ಭಾಗದಲ್ಲೂ ಕೂಡ ಜನರ ಬೇಡಿಕೆಗೆ ಅನುಗುಣವಾಗಿ ಕೆಎಸ್‌ಆರ್‌ಟಿಸಿ ಮಡಿಕೇರಿ ಡಿಪೋದಿಂದ ಒಂದೊಂದು ಸರ್ಕಾರಿ ಬಸ್‌ಗಳು ಸಂಚರಿಸುತ್ತಿದೆ. ಇದರಿಂದ ಗ್ರಾಮೀಣ ಭಾಗದ ಮಹಿಳೆಯರು ಕೂಡ ಶಕ್ತಿ ಯೋಜನೆಯ ಸದುಪಯೋಗ ಪಡೆಯಲಿದ್ದಾರೆ. ರಸ್ತೆಗಳು ತೀರಾ ಕಿರಿದಾಗಿರುವ ಹಿನ್ನೆಲೆಯಲ್ಲಿ ಸಂಚಾರ ಸಾಧ್ಯವಾಗದ ಕಡೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತಿಲ್ಲ. ಕೆಲವು ಕಡೆಗಳಲ್ಲಿ ಸರ್ಕಾರಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂಬ ಬೇಡಿಕೆಯೂ ಇದೆ.

ಶಕ್ತಿ ಯೋಜನೆಯಿಂದಾಗಿ ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ನಷ್ಟಕ್ಕೊಳಗಾಗುವ ಸಾಧ್ಯತೆ ಇದೆ. ಆದ್ದರಿಂದ ಖಾಸಗಿ ಬಸ್‌ಗಳಿಗೆ ತೆರಿಗೆ ವಿನಾಯಿತಿ ನೀಡಬೇಕೆಂದು ಕೊಡಗು ಖಾಸಗಿ ಬಸ್‌ ಕಾರ್ಮಿಕರ ಸಂಘದ ಸುರೇಶ್‌ ದೇವಯ್ಯ ಆಗ್ರಹಿಸುತ್ತಾರೆ.

180ಕ್ಕೂ ಹೆಚ್ಚು ಖಾಸಗಿ ಬಸ್‌ಗಳು

ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಹೆಚ್ಚಾಗಿ ಸಂಚರಿಸುತ್ತದೆ. ಜಿಲ್ಲೆಯಲ್ಲಿ ಸುಮಾರು 180ಕ್ಕೂ ಅಧಿಕ ಖಾಸಗಿ ಬಸ್‌ಗಳು ಪ್ರಮುಖ ನಗರ ಸೇರಿದಂತೆ ಹಲವು ಗ್ರಾಮೀಣ ಭಾಗದಲ್ಲಿ ಇಂದಿಗೂ ಕೂಡ ಸೇವೆಯನ್ನು ನೀಡುತ್ತಿದೆ. ಇದರಿಂದ ಶಕ್ತಿ ಯೋಜನೆಯಡಿ ಹೆಚ್ಚು ಲಾಭ ಫಲಾನುಭವಿಗಳಿಗೆ ಆಗುವುದಿಲ್ಲ. ಶಕ್ತಿ ಯೋಜನೆಯ ಪ್ರಭಾವದಿಂದಾಗಿ ಸರ್ಕಾರಿ ಬಸ್‌ಗಳು ಇರುವ ಕಡೆಗಳಲ್ಲಿ ಖಾಸಗಿ ಬಸ್‌ಗಳಿಗೆ ಆದಾಯ ಕಡಿಮೆಯಾಗುವ ಸಾಧ್ಯತೆಯಿದೆ. ಕೊರೋನಾ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಾಕಷ್ಟುಖಾಸಗಿ ಬಸ್‌ಗಳು ಸಂಚಾರ ಸ್ಥಗಿತಗೊಳಿಸಿದ್ದವು. ಇದರಿಂದ ಖಾಸಗಿ ಬಸ್‌ಗಳ ಸಂಖ್ಯೆ ಕೆಲವು ಕಡೆ ಇಳಿಮುಖಗೊಂಡಿದೆ.

ಕಾಂಗ್ರೆಸ್‌ ಗ್ಯಾರಂಟಿಗೆ ಚಾಲನೆ ಕೊಟ್ಟ ಬಿಜೆಪಿ ಶಾಸಕ: ಉಚಿತ ಬಸ್‌ ಟಿಕೆಟ್ ವಿತರಣೆ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಡಿಕೇರಿ ಘಟಕದಿಂದ ಪ್ರತಿನಿತ್ಯ 91 ಬಸ್‌ಗಳು ಸಂಚರಿಸುತ್ತವೆ. ದಿನಕ್ಕೆ 11 ಲಕ್ಷ ಆದಾಯ ಸಂಗ್ರಹವಾಗುತ್ತದೆ. ಎಲ್ಲ ಬಸ್‌ಗಳು ಸುಸ್ಥಿತಿಯಲ್ಲಿದೆ. ಪ್ರತಿ ನಿತ್ಯ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಬಸ್‌ನಲ್ಲಿ ಸಂಚರಿಸುತ್ತಾರೆ. ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಮಂದಿ ಇದರ ಲಾಭ ಪಡೆಯಲಿದ್ದಾರೆ ಅಂತ ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕರು ಗೀತಾ ತಿಳಿಸಿದ್ದಾರೆ. 

ಇಂದು ಶಕ್ತಿ ಯೋಜನೆಗೆ ಚಾಲನೆ

ಮಡಿಕೇರಿ: ಶಕ್ತಿ ಯೋಜನೆಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಎಸ್‌. ಭೋಸರಾಜ್‌ ಇಂದು(ಭಾನುವಾರ) ಮಧ್ಯಾಹ್ನ 12.30ಕ್ಕೆ ಚಾಲನೆ ನೀಡಿದ್ದಾರೆ. 

click me!