ಶತಕ ದಾಟಿ ಆವರಿಸಿದೆ ಸೋಂಕು : ಬೆಚ್ಚಿ ಬಿದ್ದ ಗ್ರಾಮದಲ್ಲಿ ಶವಸಂಸ್ಕಾರ ಮಾಡುವವರೂ ಇಲ್ಲ

By Kannadaprabha NewsFirst Published Apr 30, 2021, 2:02 PM IST
Highlights

ಒಂದೇ ಗ್ರಾಮದಲ್ಲಿ  ನೂರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದ್ದು, ಗ್ರಾಮವೇ ಬೆಚ್ಚಿ ಬಿದ್ದಿದೆ. ಮೃತರ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಅಧಿಕಾರಿಗಳು ಗ್ರಾಮಕ್ಕೆ ಬರಲು ಹೆದರುತ್ತಿದ್ದಾರೆ. 

 ಟಿ. ನರಸೀಪುರ (ಏ.30):  ತಾಲೂಕಿನ ಕೊಡಗಹಳ್ಳಿಯಲ್ಲಿ 100ಕ್ಕೂ ಹೆಚ್ವು ಮಂದಿಗೆ ಕೊರೋನಾ ಸೋಂಕು ತಗಲಿದ್ದು, ನಾಲ್ಕಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವುದರಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಇದರಿಂದ ಈ ಗ್ರಾಮ ಎಂದರೆ ಅಧಿಕಾರಿಗಳೂ ಸೇರಿದಂತೆ ಗ್ರಾಮಸ್ಥರು ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.

ಗ್ರಾಮದ ಕೆಲವರು ಕಾಶಿ ಯಾತ್ರೆಗೆ ಹೋಗಿ ಬಂದ ನಂತರ ಆರಂಭವಾದ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ದಿನಕ್ಕೆ 40, 30ರ ಸಂಖ್ಯೆಯಲ್ಲಿ ಸೋಂಕು ಹರಡಿ ಇಡೀ ಗ್ರಾಮವನ್ನು ಆವರಿಸಿಕೊಳ್ಳುತ್ತಿದೆ.

ಕಳೆದ 15 ದಿನಗಳಿಂದೀಚೆಗೆ 4 ರಿಂದ 5 ಮಂದಿ ಸೋಂಕಿತರು ಮೃತಪಟ್ಟಿದ್ದು, ಶವ ಸಂಸ್ಕಾರಕ್ಕೆ ಯಾರೊಬ್ಬರೂ ಮುಂದಾಗುತ್ತಿಲ್ಲವಾದ್ದರಿಂದ ಗ್ರಾಮದಲ್ಲಿ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ತಾಲೂಕು ಆಡಳಿತ ಸಹ ಗ್ರಾಮದ ಬಗ್ಗೆ ನಿರ್ಲಕ್ಷ್ಯ ಮನೋಭಾವನೆ ತಳದಿರುವುದರಿಂದ ಕೊರೋನಾದಿಂದ ಸಾವಿಗೀಡಾದವರ ಸಂಸ್ಕಾರ ಮಾಡುವುದೇ ದೊಡ್ಡ ಸಮಸ್ಯೆಯಾಗಿದೆ.

ಕೊರೊನಾ ನಂಜು ವಿರುದ್ಧ ಹೋರಾಟಕ್ಕೆ ನಂಜನಗೂಡು ಸಕಲಸಜ್ಜು ...

ಕೆಲ ದಿನಗಳ ಹಿಂದೆ ಮಹಿಳೆಯೊಬ್ಬರು ಕೊರೋನಾದಿಂದ ಮೃತರಾಗಿ ಅವರ ಶವ ಸಾಗಿಸಲು ತಾಲೂಕು ಆಡಳಿತ ಮುಂದೆ ಬಾರದೇ ಜವಾಬ್ದಾರಿಯಿಂದ ನುಣುಚಿಕೊಂಡಿತ್ತು. ಸ್ವತಃ ಸಂಬಂಧಿಕರೇ ಹೆಣ ಪಡೆಯಲು ಮುಂದೆ ಬಾರದ್ದರಿಂದ ಗ್ರಾಮದ ಮುಖಂಡರೇ ಮೈಸೂರಿನಿಂದ ಆ್ಯಂಬುಲೆನ್ಸ್‌ ಕರೆಸಿ ವಿಜಯನಗರದ ಚಿತಾಗಾರಕ್ಕೆ ಕಳುಹಿಸಿಕೊಟ್ಟಿದ್ದರು. ಮೊನ್ನೆ ಸಹ ಕೆಂಪಮ್ಮ ಎಂಬವರು ಸಾವಿಗೀಡಾಗಿದ್ದು, ಕೊರೊನಾ ಭಯದಿಂದ ಜನತೆ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಅವರ ಕುಟುಂಬ ವರ್ಗ ಸಹ ಶವಸಂಸ್ಕಾರಕ್ಕೆ ಬಂದಿಲ್ಲ. ತಾಲೂಕು ಆಡಳಿತವನ್ನು ಸಂಪರ್ಕಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ ಎಂದು ಆ ಭಾಗದ ಜನ ಪ್ರತಿನಿಧಿಗಳು ದೂರುತ್ತಾರೆ. ಒಟ್ಟಾರೆ ಕೊಡಗಹಳ್ಳಿ ಗ್ರಾಮದಲ್ಲಿ ಕೊರೋನಾ ಶತಕ ದಾಟಿ ಮುನ್ನುಗ್ಗುತ್ತಿರುವುದರಿಂದ ಅಧಿಕಾರಿ ವರ್ಗ, ಪೊಲೀಸ್‌ ಇಲಾಖೆ, ಶಾಸಕರು ಸೇರಿದಂತೆ ಜಿಲ್ಲಾಡಳಿತವೂ ಗ್ರಾಮದ ಕಡೆ ತಿರುಗಿ ನೋಡುತ್ತಿಲ್ಲವಾದ್ದರಿಂದ ಕೊಡಗಹಳ್ಳಿ ಶಾಪಗ್ರಸ್ಥ ಗ್ರಾಮವಾಗಿ ಹೊರಹೊಮ್ಮಿದೆ.

ಆತಂಕಗೊಂಡು ICU ಕಾಯ್ದಿರಿಸಬೇಡಿ : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಮನವಿ

ಪಿಪಿಇ ಕಿಟ್‌ ನೀಡಿದರೆ ನಾವೇ ಶವಸಂಸ್ಕಾರ ಮಾಡುತ್ತೇವೆ

ತಾಲೂಕು ಆಡಳಿತ ಕೊಡಗಹಳ್ಳಿ ಗ್ರಾಮವನ್ನು ಮಲತಾಯಿಯಂತೆ ನೋಡುತ್ತಿದೆ. ಕೊರೋನಾದಿಂದ ಸಾವೀಗೀಡಾದವರ ಶವಸಂಸ್ಕಾರ ಮಾಡಲು ಮುಂದೆ ಬರುತ್ತಿಲ್ಲ. ತಾಲೂಕು ಆಡಳಿತ ಅಂತ್ಯಸಂಸ್ಕಾರಕ್ಕೆ ಬೇಕಾದ ಪಿಪಿಇ ಕಿಟ್‌ ಸೇರಿದಂತೆ ಇತರೆ ಸಾಧನಗಳನು ಕೊಟ್ಟರೆ ನಾವೇ ಶವಸಂಸ್ಕಾರ ಮಾಡುತ್ತೇವೆ, ಆದರೆ ಅದನ್ನೂ ನೀಡುತ್ತಿಲ್ಲ.

ಗ್ರಾಮದಲ್ಲಿ ಹೆಚ್ಚಿನ ಪ್ರಮಾಣದ ಆರ್‌ಟಿಸಿಪಿಆರ್‌ ಪರೀಕ್ಷೆ ಮಾಡುತ್ತಿಲ್ಲ. ಪರೀಕ್ಷೆ ಮಾಡುವ ಕೆಲವರಿಗೆ ಪಾಸಿಟಿವ್‌ ಬಂದಿದೆ. ಇದರಿಂದಾಗಿ ಗ್ರಾಮಕ್ಕೆ ಬರಲು ಯಾರೂ ಸಿದ್ದರಿಲ್ಲ. ಪಾಸಿಟಿವ್‌ ಬಂದವರನ್ನು ಎಲ್ಲಿಗೆ ಕರೆದೊಯ್ಯಬೇಕೆಂಬ ಮಾಹಿತಿ ಹೇಳುವವರಿಲ್ಲ. ಕೊರೋನಾ ಟೆಸ್ಟ್‌ ಮಾಡಿಸಿದ ಅನೇಕರಿಗೆ ಪಾಸಿಟಿವ್‌ ಬರುತ್ತಿದೆ. ಇನ್ನೂ ಹೆಚ್ಚಿನ ಪರೀಕ್ಷೆ ಮಾಡಿಸಬೇಕಾದ ಅನಿವಾರ್ಯತೆ ಇದೆ. ಮಕ್ಕಳು ಮತ್ತು ಹಲವಾರು ಮಂದಿಗೆ ಕೆಮ್ಮು, ಜ್ವರ ಇದೆ. ಆದರೆ ಅವರೆಲ್ಲ ಮನೆಯಿಂದ ಹೊರಬರಲು ಭಯ ಪಡುತ್ತಿದ್ದಾರೆ. ಕೊರೋನಾ ಬಗ್ಗೆ ಜಾಗೃತಿ ಮೂಡಿಸಬೇಕಾದ ತಾಲೂಕು ಆಡಳಿತವೇ ಗ್ರಾಮಕ್ಕೆ ಬರಲು ಹಿಂದೇಟು ಹಾಕುತ್ತಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!