ನಗರದಲ್ಲಿ 1.27 ಲಕ್ಷ ಅನಧಿಕೃತ ವ್ಯಾಪಾರಸ್ಥರು !

By Kannadaprabha NewsFirst Published Mar 5, 2020, 9:25 AM IST
Highlights

ಬೆಂಗಳೂರಿನಲ್ಲಿ 1 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಅಕ್ರಮ ವ್ಯಾಪಾರಸ್ಥರು ಇರುವುದು ಪತ್ತೆಯಾಗಿದೆ. ಪರವಾನಿಗೆ ಪಡೆದವರ ಸಂಖ್ಯೆಗಿಂತ ಅನಧಿಕೃತ ವ್ಯಾಪಾರಿಗಳ ಸಂಖ್ಯೆಯೇ ಹೆಚ್ಚಿದೆ. 

ಬೆಂಗಳೂರು [ಮಾ.05]: ನಗರದಲ್ಲಿ ಅಧಿಕೃತವಾಗಿ ಬಿಬಿಎಂಪಿಯಿಂದ ಪರವಾನಗಿ ಪಡೆದು ವ್ಯಾಪಾರ, ವಹಿವಾಟು ನಡೆಸುತ್ತಿರುವ ಉದ್ದಿಮೆಗಳಿಂತ ಅನಧಿಕೃತವಾಗಿ ನಡೆಯುತ್ತಿರುವ ಉದ್ದಿಮೆಗಳ ಸಂಖ್ಯೆ ದುಪ್ಪಟ್ಟಿವೆ ಎಂಬ ಅಂಶ ಪಾಲಿಕೆ ಅಧಿಕಾರಿಗಳೇ ನಡೆಸಿದ ಮರು ಸಮೀಕ್ಷೆಯಿಂದ ತಿಳಿದು ಬಂದಿದೆ.

ಕಳೆದ ಡಿಸೆಂಬರ್‌ನಲ್ಲಿ ನಡೆಸಿದ ಸಮೀಕ್ಷೆಯಲ್ಲಿ ನಗರದ 198 ವಾರ್ಡ್‌ಗಳಲ್ಲಿ ಪರವಾನಗಿ ಪಡೆದು ಅಧಿಕೃತವಾಗಿ 50,383, ಅನಧಿಕೃತವಾಗಿ 59,130 ಉದ್ದಿಮೆಗಳು ನಡೆಯುತ್ತಿವೆ ಎಂದು ಆರೋಗ್ಯ ಅಧಿಕಾರಿಗಳು ವರದಿ ಸಲ್ಲಿಸಿದ್ದರು. ಬೆಸ್ಕಾಂ ವಾಣಿಜ್ಯ ವಿದ್ಯುತ್‌ ಸಂಪರ್ಕಕ್ಕೂ ಬಿಬಿಎಂಪಿ ಸಮೀಕ್ಷೆಯಲ್ಲಿ ಅಂಕಿ ಅಂಶದ ಉದ್ದಿಮೆಗಳಿಗೂ ಸಾಕಷ್ಟುವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ಮರು ಸಮೀಕ್ಷೆ ನಡೆಸುವಂತೆ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಆದೇಶಿಸಿದ್ದರು. ಜತೆಗೆ ಕಟ್ಟುನಿಟ್ಟಾಗಿ ಸಮೀಕ್ಷೆ ನಡೆಸಬೇಕು ಹಾಗೂ ಎಲ್ಲ ವಾರ್ಡ್‌ನ ಆರೋಗ್ಯಅಧಿಕಾರಿಗಳು ನೀಡಿದ ಅಂಕಿ ಅಂಶಗಳನ್ನು ದೃಢೀಕರಿಸಿ ಸಲ್ಲಿಸಬೇಕು. ಲೋಪ ದೋಷ ಕಂಡು ಬಂದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಅದರಂತೆ ಇದೀಗ ಮರು ಸಮೀಕ್ಷೆ ನಡೆಸಿದ್ದು, 1.27 ಲಕ್ಷ ಅನಧಿಕೃತ, 50,124 ಅಧಿಕೃತ ಒಟ್ಟು 1,78,001 ಉದ್ದಿಮೆಗಳಿವೆ ಎಂದು ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿಗಳು ವರದಿ ಸಲ್ಲಿಸಿದ್ದಾರೆ.

ಇನ್ನು ಬೆಸ್ಕಾಂ ಸಂಪರ್ಕ ಪಡೆದ ಅಂಕಿ ಅಂಶಕ್ಕೂ ಬಿಬಿಎಂಪಿಯಲ್ಲಿ ಸಮೀಕ್ಷೆಯಲ್ಲಿ ಬಂದಿರುವ ಅಂಕಿ ಅಂಶದ ವ್ಯತ್ಯಾಸಕ್ಕೆ ಕೆಲವು ಕಾರಣಗಳನ್ನು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಸಲ್ಲಿಸಿದ್ದಾರೆ. ಮುಖ್ಯವಾಗಿ ಬೆಸ್ಕಾಂನಿಂದ ವಾಣಿಜ್ಯ ಉದ್ದೇಶಕ್ಕೆ ಒಟ್ಟು 5.04 ಲಕ್ಷ ವಿದ್ಯುತ್‌ ಸಂಪರ್ಕ ಪಡೆಯಲಾಗಿದೆ. ಅದರಲ್ಲಿ 1.53 ಲಕ್ಷ ಮಂದಿ ಒಂದೇ ಹೆಸರು ಹಾಗೂ ವಿಳಾಸ ನೀಡಿದ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದಾರೆ. ಉಳಿದ 3.46 ಪ್ರತ್ಯೇಕ ವಾಣಿಜ್ಯ ವಿದ್ಯುತ್‌ ಸಂಪರ್ಕ ಪಡೆದುಕೊಳ್ಳಲಾಗಿದೆ. ಕೆಎಂಸಿ ಕಾಯ್ದೆ ವ್ಯಾಪ್ತಿಗೆ 85 ಉದ್ದಿಮೆಗಳು ಸೇರುವುದಿಲ್ಲ. ಹಾಗಾಗಿ, ಉದ್ದಿಮೆಗಳ ಸಂಖ್ಯೆ ಕಡಿಮೆಯಾಗಿವೆ.

ಸ್ವಚ್ಛ ಭಾರತ್ ಯೋಜನೆಗೆ ಕೊಟ್ಟ ಕೋಟಿ ಕೋಟಿ ಹಣ ದುರ್ಬಳಕೆ

ಪರವಾನಗಿಯಿಂದ ಸುಮಾರು 10 ಸಾವಿರ ಸಣ್ಣ ಮತ್ತು ಅತಿ ಸಣ್ಣ ಉದ್ದಿಮೆಗಳಿಗೆ ರಿಯಾಯಿತಿ ನೀಡಲಾಗಿದೆ. ನಗರದಲ್ಲಿರುವ 3,500 ಮಾಂಸ ಮಾರಾಟ ಮಳಿಗೆಗಳು ಪ್ರತ್ಯೇಕವಾಗಿ ಪಾಲಿಕೆಯ ಪಶುಪಾಲನಾ ವಿಭಾಗದಿಂದ ಪರವಾನಗಿ ನೀಡಲಾಗುತ್ತಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಭಿವೃದ್ಧಿ ಪಡಿಸಿರುವ ಪ್ರದೇಶದಲ್ಲಿರುವ ಉದ್ದಿಮೆಗಳಿಗೆ ಪರವಾನಗಿಯಿಂದ ರಿಯಾಯಿತಿ ನೀಡಲಾಗಿದೆ. ಹೀಗಾಗಿ, ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ದಿಮೆಗಳ ಸಂಖ್ಯೆ ಕಡಿಮೆಯಾಗಿದೆ ಎಂದು ಬಿಬಿಎಂಪಿ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯ ಅಧಿಕಾರಿ ಡಾ.ವಿಜಯೇಂದ್ರ ವರದಿಯಲ್ಲಿ ತಿಳಿಸಿದ್ದಾರೆ.

ವಲಯ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ

ವಸತಿ ಪ್ರದೇಶದಲ್ಲಿ ಉದ್ದಿಮೆ ಪರವಾನಗಿ ನೀಡುವುದಕ್ಕೆ ಅವಕಾಶವಿಲ್ಲ. ಆದರೂ, ನಗರದ ಹಲವು ವಸತಿ ಪ್ರದೇಶದಲ್ಲಿ ಹೋಟೆಲ್‌, ಔಷಧಿ ಅಂಗಡಿ, ತರಕಾರಿ ವ್ಯಾಪಾರ ನಡೆಯುತ್ತಿದೆ. ಇದರಿಂದ ಬಿಬಿಎಂಪಿಗೆ ಆದಾಯ ನಷ್ಟಉಂಟಾಗುತ್ತಿದೆ. ಅದನ್ನು ತಡೆಗಟ್ಟುವುದರ ಜತೆಗೆ ಸಾರ್ವಜನಿಕರಿಗೆ ತೊಂದರೆ ಉಂಟಾಗದಂತೆ ಕ್ರಮಕೈಗೊಳ್ಳಬೇಕಾದ ಹಿನ್ನೆಲೆಯಲ್ಲಿ ಅವಶ್ಯವಾದ ಉದ್ದಿಮೆಗಳಿಗೆ ಮಾತ್ರ ವಸತಿ ಪ್ರದೇಶದಲ್ಲಿ ಅವಕಾಶ ನೀಡುವ ಸಂಬಂಧಿಸಿದಂತೆ ‘ವಲಯ ನಿಯಂತ್ರಣ ಕಾಯ್ದೆ’ಗೆ ತಿದ್ದುಪಡಿ ಮಾಡಿರುವ ಬಿಬಿಎಂಪಿ ಅನುಮೋದನೆಗೆ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ.

ವಲಯವಾರು ಉದ್ದಿಮೆಗಳ ಮರು ಸಮೀಕ್ಷೆ ವಿವರ

ವಲಯ ಅಧಿಕೃತ ಅನಧಿಕೃತ ಒಟ್ಟು ಉದ್ದಿಮೆ

ದಕ್ಷಿಣ 11,429 32,933 44,362

ಪೂರ್ವ 7,929 20,931 28,860

ಪಶ್ಚಿಮ 12,972 50,274 63,246

ಯಲಹಂಕ 2,545 3,254 5,799

ಮಹದೇವಪುರ 5,046 3,044 8,090

ಬೊಮ್ಮನಹಳ್ಳಿ 3,683 9,497 13,180

ದಾಸರಹಳ್ಳಿ 1,639 2,301 3,940

ಆರ್‌ಆರ್‌ನಗರ 4,881 5,643 10,524

ಒಟ್ಟು 50,124 1,27,877 1,78,001

ಆರ್‌ಸಿ ಅಭಿಯಾನದ ಹಿನ್ನೆಲೆಯಲ್ಲಿ ಸಮೀಕ್ಷೆ

ನಗರದ ವಸತಿ ಪ್ರದೇಶದಲ್ಲಿರುವ ಅನಧಿಕೃತ ವಾಣಿಜ್ಯಉದ್ದಿಮೆಗಳು ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಉದ್ದಿಮೆಗಳ ವಿರುದ್ಧ ಬಿಬಿಎಂಪಿಗೆ ದೂರು ನೀಡುವ ಆಂದೋಲನವನ್ನು ಕಳೆದ ಸೆಪ್ಟಂಬರ್‌ನಲ್ಲಿ ರಾಜ್ಯಸಭಾ ಸದಸ್ಯರಾಜೀವ್‌ ಚಂದ್ರಶೇಖರ್‌ ಆರಂಭಿಸಿದ್ದರು. ನಂತರ ನ.5ರಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರನ್ನು ಭೇಟಿ ಮಾಡಿದ್ದ ರಾಜೀವ್‌ ಚಂದ್ರಶೇಖರ್‌, ವಸತಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಅನಧಿಕೃತ ಉದ್ದಿಮೆಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಅನಧಿಕೃತ ಉದ್ದಿಮೆಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸಮೀಕ್ಷೆಗೆ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಸೂಚನೆ ನೀಡಿದ್ದರು.

click me!