ಬೆಂಗಳೂರು ಏರ್ಪೋರ್ಟ್ ಪಾರ್ಕಿಂಗ್‌ನಲ್ಲಿ ಬದಲಾವಣೆ

By Kannadaprabha NewsFirst Published Mar 5, 2020, 9:11 AM IST
Highlights

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಲಾಗುತ್ತಿದೆ. ಇಲ್ಲಿದೆ ಇದರ ಮಾಹಿತಿ 

ಬೆಂಗಳೂರು [ಮಾ.05]:  ಬೆಂಗಳೂರು ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌(ಬಿಐಎಎಲ್‌) ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎರಡನೇ ಟರ್ಮಿನಲ್‌ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಮಾ.9 ರಿಂದ ವಿಮಾನ ನಿಲ್ದಾಣದ ವಾಹನ ನಿಲುಗಡೆ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆ ಮಾಡಲಾಗಿದೆ.

ಕಾಮಗಾರಿ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದ ಪ್ರಯಾಣಿಕರ ವಾಹನ ನಿಲುಗಡೆ ಸ್ಥಳಗಳಾದ ಪಾರ್ಕಿಂಗ್‌ 1 ದ್ವಿಚಕ್ರ ವಾಹನ, ಪಾರ್ಕಿಂಗ್‌ 2 ಬಜೆಟ್‌, ಪಾರ್ಕಿಂಗ್‌ 3 ಪ್ರೀಮಿಯಂ ಮುಚ್ಚಲಾಗುವುದು. ಖಾಸಗಿ ಪಾರ್ಕಿಂಗ್‌ಗೆ ಪಾರ್ಕಿಂಗ್‌ 4ರಲ್ಲಿ ಅವಕಾಶ ಕಲ್ಪಿಸಲಾಗಿದೆ. ಪಾರ್ಕಿಂಗ್‌ 6ರ ಸ್ಥಳ ಮಾ.20ರಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ. ಈ ಬದಲಾವಣೆಗಳಿಂದ ಎದುರಾಗುವ ಅನಾನುಕೂಲವನ್ನು ತ್ಪಪಿಸಲು ಪ್ರಯಾಣಿರು ಸ್ವಯಂ ಚಾಲನೆಯ ಕಾರುಗಳ ಬಳಕೆ ಕಡಿಮೆ ಮಾಡಬಹುದು. ಏಕೆಂದರೆ, ಪಾರ್ಕಿಂಗ್‌ ಸ್ಥಳದಿಂದ ಟರ್ಮಿನಲ್‌ ಸ್ಥಳಕ್ಕೆ ನಡೆಯುವ ಸಮಯ ಹೆಚ್ಚಾಗಲಿದೆ.

ದೊಡ್ಡ ಹಕ್ಕಿಯೊಳಗೆ ಸಣ್ಣ ಹಕ್ಕಿ! ವಿಮಾನದೊಳಗೆ ಪಾರಿವಾಳ ನುಗ್ಗಿ ಅವಾಂತರ!...

ಸ್ವಯಂ ಚಾಲನೆಯ ವಾಹನಗಳಲ್ಲಿ ಬರುವ ಪ್ರಯಾಣಿಕರು ಪಾರ್ಕಿಂಗ್‌ 4 ಮತ್ತು 6ರಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ. ಪಾರ್ಕಿಂಗ್‌ 4ರಿಂದ ಟರ್ಮಿನಲ್‌ಗೆ ನಡೆದು ಬರುವ ಸಮಯ ಕಡಿಮೆಯಿದೆ. ಪಾರ್ಕಿಂಗ್‌ 6ರಲ್ಲಿ ವಾಹನ ನಿಲುಗಡೆ ಮಾಡುವ ಪ್ರಯಾಣಿಕರು ವಿಮಾನ ನಿಲ್ದಾಣದ ಉಚಿತ ಶಟಲ್‌ ಸೇವೆ ಬಳಸಬಹುದು. ಪ್ರತಿ 10 ನಿಮಿಷಕ್ಕೊಂದು ಶಟಲ್‌ ವಾಹನಗಳು ಟರ್ಮಿನಲ್‌ ಹಾಗೂ ಪಾರ್ಕಿಂಗ್‌ 6ರ ನಡುವೆ ಸಂಚರಿಸುತ್ತವೆ.

ಈ ಪಾರ್ಕಿಂಗ್‌ ಬದಲಾವಣೆಗಳು ಓಲಾ ಬೋರ್ಡಿಂಗ್‌ ಝೋನ್‌ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಮಾ.17ರಿಂದ ಊಬರ್‌ ಬೋರ್ಡಿಂಗ್‌ ಪ್ರದೇಶ ಪಕಕ್ಕೆ ವರ್ಗವಾಗಲಿದೆ. ಈ ಬದಲಾವಣೆಗಳಿಂದ ಆ್ಯಪ್‌ ಆಧಾರಿತ ಟ್ಯಾಕ್ಸಿಗಳ ಸೇವೆಗೆ ಯಾವುದೇ ತೊಂದರೆಯಾಗುವುದಿಲ್ಲ. ಅಂತೆಯೆ ಏರ್‌ಪೋರ್ಟ್‌ ಟ್ಯಾಕ್ಸಿಗಳು ಎಂದಿನಂತೆ ಪ್ರಸ್ತುತ ಸ್ಥಳದಿಂದ ಸೇವೆ ಮುಂದುವರಿಸಲಿವೆ. ಬಿಎಂಟಿಸಿ ವಾಯುವಜ್ರ ಹಾಗೂ ಕೆಎಸ್‌ಆರ್‌ಟಿಸಿಯ ಫ್ಲೈ ಬಸ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಬಿಐಎಎಲ್‌ ತಿಳಿಸಿದೆ.

click me!