ಬಿಎಂಟಿಸಿಯಿಂದ ಮತ್ತಷ್ಟು ಎಲೆಕ್ಟ್ರಿಕ್‌ ಬಸ್‌ ಸಂಚಾರ

By Kannadaprabha NewsFirst Published Oct 31, 2020, 10:41 AM IST
Highlights

ಬಸ್‌ ನೀಡಲು ಮುಂದೆ ಬಂದ ಎರಡು ಕಂಪನಿಗಳು| 300 ಎಲೆಕ್ಟ್ರಿಕ್‌ ಬಸ್‌ ಪಡೆಯುವ ಸಂಬಂಧ ಟೆಂಡರ್‌ ಕರೆದ ಬಿಎಂಟಿಸಿ| ಅ.22ರಿಂದ ಒಲೆಕ್ಟ್ರಾ ಗ್ರೀನ್‌ ಟೆಕ್‌ ಕಂಪನಿಯ 12 ಮೀಟರ್‌ ಉದ್ದದ ಎಲೆಕ್ಟ್ರಿಕ್‌ ಬಸ್‌ ಪ್ರಾಯೋಗಿಕ ಸಂಚಾರ ಆರಂಭ| 

ಬೆಂಗಳೂರು(ಅ.31): ಗುತ್ತಿಗೆ ಮಾದರಿಯಲ್ಲಿ ಎಲೆಕ್ಟ್ರಿಕ್‌ ಬಸ್‌ ಪಡೆಯುವ ಸಂಬಂಧ ಬಿಎಂಟಿಸಿ ಇದೀಗ ಮತ್ತೆರೆಡು ಕಂಪನಿಗಳ ಎಲೆಕ್ಟ್ರಿಕ್‌ ಬಸ್‌ಗಳನ್ನು ಶೀಘ್ರದಲ್ಲೇ ಪ್ರಾಯೋಗಿಕ ಸಂಚಾರಕ್ಕೆ ನಗರದ ರಸ್ತೆಗಿಳಿಸಲು ಸಿದ್ಧತೆಯಲ್ಲಿ ತೊಡಗಿದೆ.

ಕೇಂದ್ರ ಸರ್ಕಾರದ ಫೇಮ್‌ 2ನೇ ಹಂತದ ಅನುದಾನ ಹಾಗೂ ರಾಜ್ಯ ಸರ್ಕಾರದ ಅನುದಾನ ಬಳಸಿಕೊಂಡು ಗುತ್ತಿಗೆ ಮಾದರಿಯಡಿ 300 ಎಲೆಕ್ಟ್ರಿಕ್‌ ಬಸ್‌ ಪಡೆಯುವ ಸಂಬಂಧ ಈಗಾಗಲೇ ಬಿಎಂಟಿಸಿ ಟೆಂಡರ್‌ ಕರೆದಿದೆ. ಈ ಟೆಂಡರ್‌ನಲ್ಲಿ ಪಾಲ್ಗೊಂಡಿದ್ದ ತೆಲಂಗಾಣ ಮೂಲದ ಒಲೆಕ್ಟ್ರಾ ಗ್ರೀನ್‌ ಟೆಕ್‌ ಕಂಪನಿಯು ನಿಗಮಕ್ಕೆ ನೀಡಿರುವ ಒಂದು ಬಸ್‌ ಕಳೆದೊಂದು ವಾರದಿಂದ ನಗರದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಿದೆ.

ಒಮ್ಮೆ ಚಾರ್ಜ್ ಮಾಡಿದ್ರೆ 250 KM ಸಂಚಾರ :BMTC ಎಲೆಕ್ಟ್ರಿಕಲ್ ಬಸ್ ಪ್ರಯೋಗಾರ್ಥ ಸಂಚಾರ

ಇದೀಗ ಜೆಬಿಎಂ ಮತ್ತು ವೀರ ಕಂಪನಿಗಳು ಪ್ರಾಯೋಗಿಕ ಸಂಚಾರಕ್ಕೆ ಬಿಎಂಟಿಸಿಗೆ ಎಲೆಕ್ಟ್ರಿಕ್‌ ಬಸ್‌ ನೀಡಲು ಮುಂದೆ ಬಂದಿವೆ. ಎಲ್ಲವೂ ಅಂದು ಕೊಂಡಂತೆ ನಡೆದರೆ ಮುಂದಿನ ಒಂದು ವಾರ ಅಥವಾ ಹತ್ತು ದಿನಗಳಲ್ಲಿ ಈ ಬಸ್‌ಗಳು ಪ್ರಾಯೋಗಿಕ ಸಂಚಾರ ಆರಂಭವಾಗಲಿದೆ. ಪ್ರಾಯೋಗಿಕ ಸಂಚಾರದ ವೇಳೆ ಬಸ್‌ಗಳ ವೇಗ, ತಾಂತ್ರಿಕತೆ, ಸೌಲಭ್ಯಗಳು ಇತ್ಯಾದಿ ಅಂಶಗಳನ್ನು ಪರೀಕ್ಷಿಸಲಾಗುತ್ತದೆ.

ಅ.22ರಿಂದ ಒಲೆಕ್ಟ್ರಾ ಗ್ರೀನ್‌ ಟೆಕ್‌ ಕಂಪನಿಯ 12 ಮೀಟರ್‌ ಉದ್ದದ ಎಲೆಕ್ಟ್ರಿಕ್‌ ಬಸ್‌ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಆಯ್ದ ಮಾರ್ಗಗಳಲ್ಲಿ ಮರಳು ಚೀಲಗಳನ್ನು ಹಾಕಿಕೊಂಡು ಕಾರ್ಯಾಚರಣೆ ಮಾಡಲಾಗುತ್ತಿದೆ. ಹದಿನೈದು ದಿನದ ಬಳಿಕ ಪ್ರಯಾಣಿಕರನ್ನು ಕೂರಿಸಿಕೊಂಡು ಪ್ರಾಯೋಗಿಕ ಸಂಚಾರ ಮುಂದುವರಿಸಲು ನಿಗಮವು ಯೋಜಿಸಿದೆ. ಈ ಸಂಬಂಧ ಸಾರಿಗೆ ಇಲಾಖೆ ಅನುಮತಿ ಪಡೆಯಲು ಮುಂದಾಗಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
 

click me!