ಮಲೆನಾಡಿನಲ್ಲಿ ಮುಂಗಾರು ಬಿರುಸುಗೊಂಡಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗಿವೆ. ತುಂಗಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಗಾಜನೂರಿನ ತುಂಗಾ ಜಲಾಶಯ ಬರ್ತಿ ಆಗುವತ್ತ ಹೆಜ್ಜೆಯಿಟ್ಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.15): ಜಿಲ್ಲೆಯಾದ್ಯಂತ ಮುಂಗಾರು ಮಳೆ ಬಿರುಸುಗೊಳ್ಳತೊಡಗಿದ್ದು, ರೈತರು ಬಿತ್ತನೆಗೆ ಸಿದ್ಧತೆ ನಡೆಸುತ್ತಿದ್ದಾರೆ.
ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ತಾಲೂಕುಗಳಲ್ಲಿ ಕಳೆದ ಮೂರು ದಿನಗಳಿಂದ ಮುಂಗಾರು ಅಬ್ಬರ ಜೋರಾಗಿದೆ. ಶಿವಮೊಗ್ಗ, ಸೊರಬ, ಭದ್ರಾವತಿ ಹಾಗೂ ಶಿಕಾರಿಪುರ ತಾಲೂಕಿನಲ್ಲೂ ಸಾಧಾರಣ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ಶಿವಮೊಗ್ಗ ನಗರದಲ್ಲಿ 5.6 ಮಿಮೀ., ಭದ್ರಾವತಿ 7.2 ಮಿಮೀ., ಶಿಕಾರಿಪುರ 8.4 ಮಿಮೀ., ಸೊರಬ 14.3 ಮಿಮೀ., ಸಾಗರ 18 ಮಿಮೀ., ತೀರ್ಥಹಳ್ಳಿ 32.2 ಮಿಮೀ, ಹೊಸನಗರ 47.2 ಮಿಮೀ. ಮಳೆಯಾಗಿದೆ.
ಕೃಷಿ ಚಟುವಟಿಕೆ:
ಮುಂಗಾರು ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಚುರುಕಾಗಿದೆ. ಜಿಲ್ಲೆಯಲ್ಲಿ 2 ಲಕ್ಷದ 60 ಸಾವಿರ ಹೆಕ್ಟೇರ್ ಕೃಷಿ ಭೂಮಿಯನ್ನು ಹೊಂದಿದ್ದು, 1.12 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಅಡಕೆ ಬೆಳೆಯಲಾಗಿದೆ. ಉಳಿದ 1.48 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ವಿವಿಧ ಬೆಳೆ ಬೆಳೆಯಲಾಗುತ್ತಿದೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 92 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಭತ್ತ, 53 ಸಾವಿರ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ, 1000 ಹೆಕ್ಟೇರ್‌ನಲ್ಲಿ ಕಬ್ಬು, 365 ಹೆಕ್ಟೇರ್ ಭೂಮಿಯಲ್ಲಿ ಹತ್ತಿ ಬೆಳೆಯುವ ಗುರಿ ಹೊಂದಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 5 ಸಾವಿರ ಹೆಕ್ಟೇರ್ ಕೃಷಿ ಭೂಮಿ ಈ ಬಾರಿ ಕಡಿಮೆಯಾಗಿದೆ. ಕಳೆದ ವರ್ಷದಲ್ಲಿ 1 ಲಕ್ಷದ 53 ಸಾವಿರ ಹೆಕ್ಚೇರ್ ಭೂಪ್ರದೇಶದಲ್ಲಿ ವಿವಿಧ ಬೆಳೆ ಬೆಳೆಯಲಾಗಿತ್ತು.
ಬಿಎಸ್‌ವೈಗೆ ನಡ್ಡಾ ಭೇಷ್: ಕೊರೋನಾ ನಿರ್ವಹಣೆಯಲ್ಲಿ ಕರ್ನಾಟಕ ಅತ್ಯುತ್ತಮ!
ತುಂಗಾ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಗಾಜನೂರಿನ ತುಂಗಾ ಜಲಾಶಯ ಬರ್ತಿ ಆಗುವತ್ತ ಹೆಜ್ಜೆಯಿಟ್ಟಿದೆ. ಜಲಾಶಯದಲ್ಲಿ 587.54 ಮೀ ನೀರಿನ ಸಂಗ್ರಹವಾಗಿದೆ. (588 ಮೀ. ಗರಿಷ್ಠ), 1596 ಕ್ಯೂಸೆಕ್ ಒಳ ಹರಿವು ಇದ್ದು, 1214 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಯಾವುದೇ ಕ್ಷಣದಲ್ಲಿ ತುಂಗಾ ಜಲಾಶಯ ಭರ್ತಿಯಾಗುವ ಸಾಧ್ಯತೆ ಇದೆ.
ಲಿಂಗನಮಕ್ಕಿ ಜಲಾಶಯದಲ್ಲಿ 1759.65 ಅಡಿ ನೀರಿನ ಸಂಗ್ರಹವಿದ್ದು, 4475 ಕ್ಯೂಸೆಕ್ ಒಳಹರಿವು, 5572 ಕ್ಯೂಸೆಕ್ ಹೊರಹರಿವು ಇದೆ. ಭದ್ರಾ ಜಲಾಶಯಕ್ಕೆ ಕೂಡ 3097 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಜಲಾಶಯದ ಮಟ್ಟ133.6 ಅಡಿಗೆ ತಲುಪಿದೆ. 157 ಕ್ಯೂಸೆಕ್ ನೀರು ಹೊರಹೋಗುತ್ತಿದೆ.