ಮುಂಗಾರು ಮಳೆ ಎಫೆಕ್ಟ್: ಮಾದೇಶ್ವರ ವನ್ಯಧಾಮ ಸಫಾರಿಗೆ ಉತ್ತಮ ಪ್ರತಿಕ್ರಿಯೆ!

By Kannadaprabha NewsFirst Published Jun 3, 2024, 5:55 PM IST
Highlights

ಮುಂಗಾರು ಮಳೆಯಿಂದಾಗಿ ಮಲೆಮಹದೇಶ್ವರ ವನ್ಯಧಾಮ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಅರಣ್ಯ ಪ್ರದೇಶಲ್ಲಿ ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದು, ಸಫಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಜಿ ದೇವರಾಜ ನಾಯ್ಡು ಹನೂರು

ಹನೂರು (ಜೂ.03): ಮುಂಗಾರು ಮಳೆಯಿಂದಾಗಿ ಮಲೆಮಹದೇಶ್ವರ ವನ್ಯಧಾಮ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದು, ಅರಣ್ಯ ಪ್ರದೇಶಲ್ಲಿ ಪ್ರಾಣಿಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದು, ಸಫಾರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಜೀವಿ ಅಭಯಾರಣ್ಯದ ಪಿಜಿ ಪಾಳ್ಯ ಸಫಾರಿಗೆ 2023ರ ಡಿಸೆಂಬರ್‌ನಲ್ಲಿ ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದ್ದರು. 

Latest Videos

ಸಫಾರಿಗೆ ತೆರಳುವ ವಯಸ್ಕರಿಗೆ 400, ಮಕ್ಕಳಿಗೆ 200 ರು. ಅರಣ್ಯ ಇಲಾಖೆ ನಿಗದಿ ಮಾಡಿದೆ. ಸಫಾರಿ ವಾಹನದಲ್ಲಿ ಸಿಬ್ಬಂದಿ ವರ್ಗದವರು ಅಭಯ ಅರಣ್ಯದ 18 ರಿಂದ 25 ಕಿಮೀ ಅರಣ್ಯ ಪ್ರದೇಶವನ್ನು ಸಫಾರಿ ಮಾಡಿಸಲಿದ್ದು, ಪ್ರವಾಸಿಗರಿಗೆ ಅರಣ್ಯ ಪ್ರದೇಶದ ವಿಹಂಗಮ ನೋಟ ಮತ್ತು ಪ್ರಾಣಿ ಪಕ್ಷಿಗಳ ಕಣ್ತುಂಬಿಕೊಳ್ಳುವ ವ್ಯವಸ್ಥೆ ಮಾಡಿರುವುದು ಪ್ರಾಣಿ ಪ್ರಿಯರಿಗೆ ಸಫಾರಿ ಪ್ರಿಯರಿಗೆ ಆಕರ್ಷಣೆ ಕೇಂದ್ರ ಬಿಂದುವಾಗುತ್ತಿದೆ.

ಲಿಂಗಾಯತ, ಒಕ್ಕಲಿಗರ ತಾಳಕ್ಕೆ ತಕ್ಕಂತೆ ಸಿಎಂ ಸಿದ್ದರಾಮಯ್ಯ ಕುಣಿಯುತ್ತಿದ್ದಾರೆ: ನಟ ಚೇತನ್

ಪ್ರಕೃತಿ ಸೊಬಗಿನ ಚಿತ್ತಾರ: ಮಲೆ ಮಹದೇಶ್ವರ ವನ್ಯಜೀವಿ ಅಭಯಾರಣ್ಯ ಕೊಳ್ಳೇಗಾಲ ಮತ್ತು ಹನೂರು ತಾಲೂಕಿನಲ್ಲಿ 949 ಚ.ಕಿ.ಮೀ. ಅರಣ್ಯ ಪ್ರದೇಶದಲ್ಲಿ ವ್ಯಾಪಿಸಿದ್ದು, ಮಳೆ ಇಲ್ಲದೆ ಬರಿದಾಗಿದ್ದ ಅರಣ್ಯ ಪ್ರದೇಶ ಹಲವಾರು ದಿನಗಳಿಂದ ಬೀಳುತ್ತಿರುವ ಮಳೆಯಿಂದಾಗಿ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಲು ಪ್ರವಾಸಿಗರನ್ನು ಹೆಚ್ಚು ಆಕರ್ಷಿಸುತ್ತಿದೆ.

ತುಂಬಿದ ಕೆರೆಕಟ್ಟೆಗಳು: ಅಭಯಾರಣ್ಯದ ಸಫಾರಿ ವೇಳೆ ಪ್ರವಾಸಿಗರಿಗೆ ರಸ್ತೆಯುದ್ದಕ್ಕೂ ಉಡುತೊರೆ ಹಳ್ಳ ಹಾಗೂ ಕೆರೆಕಟ್ಟೆಗಳಲ್ಲಿ ನೀರು ತುಂಬಿರುವುದು ಪ್ರಾಣಿ ಪಕ್ಷಿಗಳಿಗೆ ಅನುಕೂಲದಾಯಕವಾಗಿದ್ದು ಒಟ್ಟಾರೆ ಸಫಾರಿ ವೇಳೆ ಹಲವಾರು ಕಡೆ ಅರಣ್ಯ ಇಲಾಖೆ, ವನ್ಯಮೃಗಗಳ ಉಳಿವಿಗಾಗಿ ಹತ್ತಾರು ಕಡೆ ಕೆರೆಕಟ್ಟುಗಳನ್ನು ಕಾಲುವೆ ತೊರೆಗಳನ್ನು ನಿರ್ಮಾಣ ಮಾಡುವ ಮೂಲಕ ಹಚ್ಚ ಹಸಿರಿನ ಗಿಡಮರಗಳ ನಡುವೆ ಸಿಗುವ ಕೆರೆಕಟ್ಟೆಗಳ ಬಳಿ ಪ್ರಾಣಿ ಪಕ್ಷಿಗಳು ಪ್ರವಾಸಿ ಸಫಾರಿಗೆ ಉತ್ತಮ ವಾತಾವರಣ ನಿರ್ಮಾಣವಾಗಿದೆ.

ಆಕರ್ಷಣೆಯ ವನ್ಯಮೃಗ ಪಕ್ಷಿ ಪ್ರಾಣಿಗಳು: ಸಫಾರಿಗೆ ತೆರಳುವ ಪ್ರಾಣಿ ಪ್ರಿಯರಿಗೆ ಅರಣ್ಯ ಪ್ರದೇಶದಲ್ಲಿ ನೂರಾರು ಜಿಂಕೆಗಳು ಹಾಗೂ ಚುಕ್ಕಿ ಜಿಂಕೆ ಸೇರಿದಂತೆ ಆನೆ, ಹುಲಿ, ಚಿರತೆ, ಕರಡಿ ಸಾಂಬರ್ ಮತ್ತು ನರಿ, ನವಿಲು ಸೇರಿದಂತೆ ಇನ್ನಿತರ ಪ್ರಾಣಿ ಪಕ್ಷಿಗಳ ದರ್ಶನವಾಗುತ್ತಿದೆ.

ಸಫಾರಿ ಕೇಂದ್ರ ಎಷ್ಟು ದೂರ: ಪಿಜಿ ಪಾಳ್ಯ ಸಫಾರಿ ಕೇಂದ್ರ ಹನೂರು ಪಟ್ಟಣದಿಂದ 12 , ಕೊಳ್ಳೇಗಾಲದಿಂದ 25 ರಿಂದ 30 ಕಿಮೀ ಅಂತರದಲ್ಲಿದ್ದು, ಸದಾ ಜಂಜಾಟದಿಂದ ಇರುವ ಜನತೆಗೆ ಹಚ್ಚ ಹಸುರಿನ ಅರಣ್ಯ ಪ್ರದೇಶ ಹಾಗೂ ವನಮೃಗಗಳ ದರ್ಶನ ಪಡೆಯಲು ಅನುಕೂಲವಾಗಿದೆ.

ನಾವು ಮೊದಲು ಅರಣ್ಯ ಪ್ರದೇಶವನ್ನು ನೋಡಲು ಬಂಡಿಪುರ ನಾಗರಹೊಳೆ ಕಡೆ ನೂರಾರು ಕಿಮೀ ದೂರ ಹೋಗಬೇಕಿತ್ತು. ಆದರೆ ನಮ್ಮ ಸಮೀಪದಲ್ಲಿಯೇ ಇರುವ ದಟ್ಟಾರಣ್ಯ ವನಮೃಗಗಳ ದರ್ಶನ ಸಫಾರಿಗೆ ಅನುಕೂಲದಾಯಕವಾಗಿದೆ. ಅರಣ್ಯ ಪ್ರದೇಶದಲ್ಲಿ ಹುಲಿ, ಆನೆ ನೂರಾರು ಜಿಂಕೆಗಳ ದರ್ಶನ ಸಹ ಪ್ರವಾಸಿಗರಿಗೆ ಸಿಗಲಿದೆ ಅರಣ್ಯ ಇಲಾಖೆಯಿಂದ ಉತ್ತಮ ಸೌಲಭ್ಯ ನಾಗರಿಕರಿಗೆ ಸಿಕ್ಕಿದೆ.
-ಪ್ರಭು, ಹನೂರು

ಪ್ರಸ್ತುತ ಕಾಣುತ್ತಿರುವುದು ಅಡ್ಜಸ್ಟ್‌ಮೆಂಟ್ ಪಾಲಿಟಿಕ್ಸ್: ಮಾಜಿ ಸಿಎಂ ಸದಾನಂದ ಗೌಡ

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು, ಕೊಳ್ಳೇಗಾಲ ಸುತ್ತಮುತ್ತಲಿನ ಮಾದೇಶ್ವರ ಬೆಟ್ಟಕ್ಕೆ ಹೋಗಿ ಬರುವ ಭಕ್ತಾದಿಗಳಿಗೂ ಸಹ ಸಫಾರಿ ಕೇಂದ್ರ ಸನಿಹದಲ್ಲಿದ್ದು, ಹಚ್ಚ ಹಸಿರಿನಿಂದ ಕೂಡಿರುವ ವನ, ಕಾಡುಪ್ರಾಣಿಗಳ ದರ್ಶನ ಸಫಾರಿ ಪ್ರಿಯರಿಗೆ ಸಿಗಲಿದೆ. ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಮೂಲಕ ಸದ್ಭಳಕೆ ಮಾಡಿಕೊಳ್ಳಬೇಕು. 2 ವಾಹನಗಳಿದ್ದು, ಸಿಬ್ಬಂದಿ ಜತೆಯಲ್ಲಿ ಅರಣ್ಯ ಪ್ರದೇಶದಲ್ಲಿ ಭದ್ರತೆಯೊಂದಿಗೆ ಪ್ರವಾಸಿಗರಿಗೆ ವನ್ಯಮೃಗಗಳ ದರ್ಶನ ಪಡೆಯಲು ಸೂಕ್ತ ವ್ಯವಸ್ಥೆ ಸೌಲಭ್ಯ ಸಹ ಕಲ್ಪಿಸಲಾಗಿದೆ.
-ಸಂತೋಷ್ ಕುಮಾರ್, ಡಿಸಿಎಫ್

click me!