ಮೊಳಕಾಲ್ಮುರು ತಾಲೂಕು ವೈದ್ಯಾಧಿಕಾರಿ ಕಚೇರಿ ಸೀಲ್‌ಡೌನ್‌

By Kannadaprabha NewsFirst Published Jul 29, 2020, 4:39 PM IST
Highlights

ವೈದ್ಯಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 40 ವರ್ಷದ ಸಿಬ್ಬಂದಿ ಮತ್ತು ಸಾರ್ವಜನಿಕ ಆಸ್ಪತ್ರೆಯ ತಜ್ಞ ವೈದ್ಯರೊಬ್ಬರಿಗೆ ಮಂಗಳವಾರ ಸೋಂಕು ದೃಡಪಟ್ಟಿದೆ.ಹೀಗಾಗಿ ಕಚೇರಿಯನ್ನು ಸೀಲ್‌ಡೌನ್ ಮಾಡಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಮೊಳಕಾಲ್ಮುರು(ಜು.29): ತಾಲೂಕಿನಲ್ಲಿ ಕಳೆದೊಂದು ವಾರದಿಂದ ಕೊರೋನಾ ವೈರಸ್‌ ರಭಸವಾಗಿ ವ್ಯಾಪಿಸುತ್ತಿದ್ದು, ಇದೀಗ ಸೋಂಕಿನಿಂದಾಗಿ ಕೊರೋನಾ ನಿಯಂತ್ರಿಸುವ ತಾಲೂಕು ವೈದ್ಯಾಧಿಕಾರಿ ಕಚೇರಿಯೇ ಸೀಲ್‌ಡೌನ್‌ ಆಗಿದೆ.

ತಾಲೂಕು ವೈದ್ಯಾಧಿಕಾರಿ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ 40 ವರ್ಷದ ಸಿಬ್ಬಂದಿ ಮತ್ತು ಸಾರ್ವಜನಿಕ ಆಸ್ಪತ್ರೆಯ ತಜ್ಞ ವೈದ್ಯರೊಬ್ಬರಿಗೆ ಮಂಗಳವಾರ ಸೋಂಕು ದೃಡಪಟ್ಟಿದೆ. ಜತೆಗೆ ರಾಂಪುರ ಪೋಲೀಸ್‌ ಠಾಣೆಯ ಇಬ್ಬರು ಸಿಬ್ಬಂದಿಗೆ ಸೋಂಕು ದೃಡಪಟ್ಟಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಕೊರೋನಾ ಕಾಟ: 'ಖಾಸಗಿ ಬಸ್‌ಗಳ ಸಮಸ್ಯೆ ಕೇಳೋರಿಲ್ಲ, ಹೊಟ್ಟೆ ತುಂಬಿಸಿಕೊಳ್ಳಲು ಬೇರೆ ಉದ್ಯೋಗ'

ಮುಂಜಾಗ್ರತೆಯಾಗಿ ಟಿಎಚ್‌ಒ ಕಚೇರಿಯನ್ನು ಸೀಲ್‌ಡೌನ್‌ ಮಾಡಲಾಗಿದೆ. ಅಲ್ಲಿನ ನೌಕರರಿಗೂ ಪ್ರವೇಶ ನಿರ್ಬಂಧಿಸಿದೆ. ಜತೆಗೆ ಸೋಂಕಿತ ವಾಸವಾಗಿದ್ದ ರಾಯದುರ್ಗ ರಸ್ತೆಯ ಬಡವಣೆಯೊಂದರ ಏರಿಯಾವನ್ನು ಕಂಟೈನ್‌ಮೆಂಟ್‌ ಝೋನ್‌ ಮಾಡಿ ಸ್ಯಾನಿಟೈಸರ್‌ ಸಿಂಪಡಿಸಲಾಗಿದೆ. ಸಾಯಿ ಬಾಬಾ ದೇವಸ್ಥಾನದ ಏರಿಯಾ ಸುತ್ತಲೂ ಕೆಂಪು ರಿಬ್ಬನ್‌ ಕಟ್ಟಿಕಂಟೈನ್‌ಮೆಂಟ್‌ ಜೋನ್‌ ಮಾಡಿದೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಹೊರರೋಗಿಗಳ ತಪಾಸಣೆ ಸ್ಥಗಿತಗೊಳಿಸಿ ಆಸ್ಪತ್ರೆಯನ್ನು ಸ್ಯಾನಿಟೈಸೇಷನ್‌ ಮಾಡಿ ಶುಚಿಗೊಳಿಸಲಾಗಿದೆ.

ರಾಂಪುರ ಠಾಣೆಗೆ ಕೊರೋನಾ ಕಂಟಕ:

ವಾರದ ಹಿಂದೆ ರಾಂಪುರ ಪೋಲೀಸ್‌ ಠಾಣೆಯ ಪೇದೆಯೊಬ್ಬರಿಗೆ ಸೋಂಕು ದೃಢಪಟ್ಟನಂತರ ಠಾಣೆಯನ್ನು ಸೀಲ್‌ಡೌನ್‌ಮಾಡಿ ಠಾಣೆಯನ್ನು ಗ್ರಾಮದಲ್ಲಿದ್ದ ಸಮುದಾಯ ಭವನಕ್ಕೆ ಸ್ಥಳಾಂತರಿಸಿ ಮೊಳಕಾಲ್ಮುರು ಠಾಣೆಯ ಸಿಬ್ಬಂದಿ ನಿಯೋಜಿಸಲಾಗಿತ್ತು. ಈಗ ತಾತ್ಕಾಲಿಕ ಪೋಲೀಸ್‌ ಠಾಣೆಯಲ್ಲಿದ್ದ 43 ಮತ್ತು 46 ವರ್ಷದ ಪೋಲೀಸ್‌ ಸಿಬ್ಬಂದಿಗೂ ಸೊಂಕು ದೃಢಪಟ್ಟಿದೆ. ಪರಿಣಾಮ ತಾತ್ಕಾಲಿಕ ಠಾಣೆಯನ್ನೂ ಸೀಲ್‌ಡೌನ್‌ ಮಾಡಿ ಸ್ಯಾನಿಟೈಸರ್‌ ಸಿಂಪಡಿಸಲಾಗಿದೆ.

click me!