ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ನಿವೃತ್ತ ಕುದುರೆಗಳು ಎಂಬ ಯೋಗೇಶ್ವರ್ ಹೇಳಿಕೆಗೆ ಬಿಜೆಪಿ ಬೆಂಬಲ| ಯೋಗೇಶ್ವರ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರಿಗೆ ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು ಎಂದು ಎಚ್ಚರಿಕೆ ನೀಡಿದ ಬಿಜೆಪಿ ನಾಯಕರು|
ಚನ್ನಪಟ್ಟಣ(ಜು.29): ಯೋಗೇಶ್ವರ್ ಸತ್ತಕುದುರೆಯಲ್ಲ ಸರ್ವಕಾಲಕ್ಕೂ ಸಲ್ಲುವ ರನ್ನಿಂಗ್ ಹಾರ್ಸ್ ಹಾಗೂ ರಾಜ್ಯ ರಾಜಕಾರಣದಲ್ಲಿ ವಿನ್ನಿಂಗ್ ಹಾರ್ಸ್. ಈ ಸಂಗತಿ ಜೆಡಿಎಸ್ ಮತ್ತು ಕಾಂಗ್ರೆಸ್ ಮುಖಂಡರು ತಿಳಿದು ಕೊಳ್ಳಬೇಕು ಎಂದು ತಾಲೂಕು ಬಿಜೆಪಿ ಟಾಂಗ್ ನೀಡಿದೆ.
ನಗರದ ಐದನೇ ಅಡ್ಡರಸ್ತೆಯಲ್ಲಿರುವ ತಾಲೂಕು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಬಿಜೆಪಿ ಮುಖಂಡರು, ಕುಮಾರಸ್ವಾಮಿ ಮತ್ತು ಡಿ.ಕೆ.ಶಿವಕುಮಾರ್ ನಿವೃತ್ತ ಕುದುರೆಗಳು ಎಂಬ ಯೋಗೇಶ್ವರ್ ಅವರ ಹೇಳಿಕೆಯನ್ನು ಪಕ್ಷ ಬೆಂಬಲಿಸುತ್ತದೆ. ಹಾಗೆಯೇ ಯೋಗೇಶ್ವರ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರಿಗೆ ತಮ್ಮ ಘನತೆಗೆ ತಕ್ಕಂತೆ ಮಾತನಾಡಬೇಕು ಎಂದು ಎಚ್ಚರಿಸುತ್ತದೆ ಎಂದು ತಿಳಿಸಿದರು.
undefined
'ಸಿ.ಪಿ. ಯೋಗೇಶ್ವರ್ ಬಾಯಿಚಪಲಕ್ಕೆ ಮಾತನಾಡಬಾರದು'
ಮಲ್ಲಿಕಾರ್ಜುನ ಖರ್ಗೆ ಏನು?:
ಯೋಗೇಶ್ವರ್ ಅವರು ಮೇಲ್ಮನೆಗೆ ಆಯ್ಕೆಯಾಗಿರುವುದನ್ನು ಗಂಜಿ ಕೇಂದ್ರ ಎಂದು ಕಾಂಗ್ರೆಸ್ ವ್ಯಾಖ್ಯಾಸನಿಸಿದರೆ, ಲೋಕಸಭಾ ಚುನಾವಣೆಯಲ್ಲಿ ಸೋತು ಇದೀಗ ರಾಜ್ಯ ಸಭೆಗೆ ಆಯ್ಕೆಯಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರ ಬಗ್ಗೆ ಏನೆಂದು ವ್ಯಾಖ್ಯಾನಿಸುತ್ತಾರೆ. ಈ ಹಿಂದಿನ ಚುನಾವಣೆಗಳಲ್ಲಿ ದೇವೇಗೌಡರು, ಕುಮಾರಸ್ವಾಮಿ ಸೇರಿದಂತೆ ಸಾಕಷ್ಟುಪ್ರಮುಖರು ಸೋತಿದ್ದಾರೆ. ಇದನ್ನು ಏನೆಂದು ವ್ಯಾಖ್ಯಾನಿಸುತ್ತೀರಿ ಎಂದು ಪ್ರಶ್ನಿಸಿದರು.
ಡಿಕೆಶಿಯನ್ನು ಬಲಿ ಕೊಡುತ್ತೀರಾ?
ಕಾಂಗ್ರೆಸ್ ನಾಯಕರು ಡಿ.ಕೆ.ಶಿವಕುಮಾರ್ ಅಶ್ವಮೇಧದ ಕುದುರೆ ಎಂದು ಹೇಳಿದ್ದಾರೆ. ಯಾಗಕ್ಕೆ ಕಟ್ಟಿದ ಕುದುರೆಯನ್ನು ಕೊನೆಯಲ್ಲಿ ಯಜ್ಞಕ್ಕೆ ಬಲಿಕೊಡುತ್ತಾರೆ. ಹಾಗಾದರೆ ಕಾಂಗ್ರೆಸ್ ಡಿಕೆಶಿಯನ್ನು ಬಲಿಕೊಡಲು ಬಳಸಿಕೊಳ್ಳುತ್ತಿದೆಯೇ. ಕಾಂಗ್ರೆಸ್ ನಾಯಕರು ಬಾಯಿಗೆ ಬಂದಂತೆ ಮಾತನಾಡುವ ಮೊದಲು ತಮ್ಮ ನೈತಿಕತೆಯನ್ನು ಪ್ರಶ್ನಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಅಭಿವೃದ್ಧಿಗಾಗಿ ಪಕ್ಷಾಂತರ:
ಯೋಗೇಶ್ವರ್ ಯಾವುದೇ ಸ್ವಾರ್ಥಕ್ಕಾಗಿ ಪಕ್ಷಾಂತರ ಮಾಡಲಿಲ್ಲ. ಅವರು ಪಕ್ಷಾಂತರ ಮಾಡಿದ ಪರಿಣಾಮ ಇಂದು ತಾಲೂಕು ನೀರಾವರಿ ಯೋಜನೆಗೆ ಒಳಪಟ್ಟು ಹಸಿರಿನಿಂದ ನಳನಳಿಸುತ್ತಿದೆ.
ಅವರು ಅಧಿಕಾರ ಇಲ್ಲದ ಕಾರಣ ಜನರ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ದೂರ ಇದ್ದರು. ಇದನ್ನು ಅಜ್ಞಾತವಾಸ ಎಂದು ಹೇಳಿದ್ದಾರೆಯೇ ಹೊರತು ನಾನು ಕಾಡಿಗೆ ಹೋದೆ ಎಂದು ಹೇಳಿರಲಿಲ್ಲ ಎಂದರು.
ಸಾಧ್ಯವಿದ್ದರೆ ಕ್ರಮ ಕೈಗೊಳ್ಳಿ:
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ತಾಪಂ ಅಧ್ಯಕ್ಷ ಹರೂರು ರಾಜಣ್ಣ, ನಾನು ಕಾಂಗ್ರೆಸ್ ಚಿಹ್ನೆಯಿಂದ ಗೆದ್ದು ಅಧ್ಯಕ್ಷನಾಗಿರ ಬಹುದು. ಆದರೆ ನಮ್ಮ ಗೆಲುವಿನಲ್ಲಿ ಯೋಗೇಶ್ವರ್ ಅವರ ಪಾಲು ಸಾಕಷ್ಟಿದೆ. ಅವರು ಬಿಜೆಪಿಗೆ ಬಂದಾಗಿನಿಂದ ನಾನು ಅವರೊಂದಿಗೆ ಇದ್ದೇನೆ. ನನ್ನನ್ನು ರಾಜೀನಾಮೆ ನೀಡಿ ಎನ್ನುವ ಕಾಂಗ್ರೆಸ್‌ಗೇ ಶಕ್ತಿ ಇದ್ದರೆ ನನ್ನ ವಿರುದ್ಧ ಪಕ್ಷಾಂತರ ನಿಷೇದ ಕಾಯಿದೆಯಡಿ ಕ್ರಮ ಜರುಗಿಸಲಿ ಎಂದು ಸವಾಲು ಹಾಕಿದರು.
ಸುದ್ದಿಗೋಷ್ಟಿಯಲ್ಲಿ ಜಿಲ್ಲಾ ಬಿಜೆಪಿ ಕಾನೂನು ಮತ್ತು ಸಂಸದೀಯ ಪ್ರಕೋಷ್ಟದ ಸಂಚಾಲಕ ಎಂ.ಕೆ.ನಿಂಗಪ್ಪ, ತಾಲೂಕು ಬಿಜೆಪಿ ಅಧ್ಯಕ್ಷ ಕೆ.ಟಿ.ಜಯರಾಮು, ನಗರ ಬಿಜೆಪಿ ಅಧ್ಯಕ್ಷ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಎಲೇಕೇರಿ ರವೀಶ್, ಮುಖಂಡರಾದ ರಾಂಪುರ ಮಲುವೇಗೌಡ, ಆನಂದಸ್ವಾಮಿ, ಕುಳ್ಳಪ್ಪ, ಕೋಟೆ ಚಂದ್ರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.