ಶಿವಮೊಗ್ಗದಲ್ಲಿ ಕಳೆದು ಹೋದ ಮೊಬೈಲ್ ದುಬೈನಲ್ಲಿ ಪತ್ತೆಯಾಗಿದ್ದು ಇದು ಅಚ್ಚರಿಯಾದ್ರೂ ಕೂಡ ನಿಜ. ಈ ಬಗ್ಗೆ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.
ಶಿವಮೊಗ್ಗ [ಡಿ.14]: ಇಲ್ಲಿ ಕಳ್ಳತನವಾದ ಮೊಬೈಲ್‌ಗಳು ದುಬೈನಲ್ಲಿ ಪತ್ತೆಯಾದರೆ? ಇಂತಹ ಘಟನೆ ನಡೆದಿದ್ದು, ಆರಂಭದಲ್ಲಿ ಪೊಲೀಸರು ಕೂಡ ಶಾಕ್‌ಗೆ ಒಳಗಾಗಿದ್ದರು.
ಕಳುವಾದ ಕೆಲವು ಫೋನ್‌ಗಳು ದುಬೈನಲ್ಲಿ ಸಿಕ್ಕರೆ, ಉಳಿದ ಕೆಲವು ಬೇರೆ ಬೇರೆ ರಾಜ್ಯದಲ್ಲಿ ಉಪಯೋಗಿಸುತ್ತಿರುವುದು ಕಂಡು ಬಂದಿದೆ. ಈ ಜಾಡನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ ಕೂಡ.
ಈ ಎಲ್ಲ ಫೋನ್‌ಗಳು ಕೆಎಸ್‌ಆರ್‌ಪಿ ಪೊಲೀಸರಿಗೇ ಸೇರಿದ್ದು ಎಂಬುದು ಇನ್ನೊಂದು ವಿಶೇಷ.
ಇದೆಲ್ಲ ನಡೆದಿದ್ದು ಹಲವು ತಿಂಗಳ ಹಿಂದೆ. ಶಿವಮೊಗ್ಗದಲ್ಲಿ ಗಣೇಶೋತ್ಸವ ನಡೆಯುತ್ತಿದ್ದ ವೇಳೆಯಲ್ಲಿ ಭದ್ರತೆಗಾಗಿ 120 ಮಂದಿ ಕೆಎಸ್‌ಆರ್‌ಪಿ ಸಿಬ್ಬಂದಿ ಆಗಮಿಸಿದ್ದಾಗ. ಇವರೆಲ್ಲರೂ ಕಲ್ಯಾಣ ಮಂದಿರವೊಂದರಲ್ಲಿ ಉಳಿದುಕೊಂಡಿದ್ದರು. ಬೆಳಗಾಗುವಷ್ಟರಲ್ಲಿ ಇವರಿಗೆ ಸೇರಿದ 23 ಮೊಬೈಲ್‌ಗಳು ಕಳ್ಳತನವಾಗಿದ್ದವು. ಇಡೀ ಪೊಲೀಸರ ತಂಡದ ನಡುವೆ ನುಗ್ಗಿದ ಕಳ್ಳರು 23 ಫೋನ್‌ಗಳು ಎಗರಿಸಿದ್ದು ಪೊಲೀಸರಿಗೆ ಅವಮಾನ ಕೂಡ ಆದಂತಾಗಿತ್ತು.
ಅದೇನೇ ಇದ್ದರೂ ಎಂದಿನಂತೆ ಕೆಎಸ್‌ಆರ್‌ಪಿ ಪೊಲೀಸರು ತಮ್ಮ ಮೊಬೈಲ್ ಕಳ್ಳತನವಾದ ಕುರಿತು ದೊಡ್ಡಪೇಟೆ ಪೊಲೀಸರಿಗೆ ದೂರು ಸಲ್ಲಿಸಿದ್ದರು. ಎಸ್‌ಪಿಯವರ ಗಮನಕ್ಕೂ ಇದು ಹೋಯಿತು. ಇದಕ್ಕಾಗಿ ವಿಶೇಷ ತಂಡ ರಚಿಸಿದರು. ಈ ತಂಡ ತಕ್ಷಣ ಕಾರ್ಯಾಚರಣೆಗೆ ಇಳಿಯಿತು. ಆದರೆ ಯಾವ ಸುಳಿವೂ ಸಿಗಲಿಲ್ಲ. ಎಲ್ಲ 23 ಫೋನ್‌ಗಳು ಇಡೀ ತಿಂಗಳು ಸ್ವಿಚ್ ಆಫ್ ಆಗಿಬಿಟ್ಟಿತ್ತು.
ತೀವ್ರ ತಲೆ ಕೆಡಿಸಿಕೊಂಡಿದ್ದ ಪೊಲೀಸರು ಈ ವಿಷಯವನ್ನು ಮರೆತಿರಲಿಲ್ಲ. ಕಳೆದ ವಾರ ಇದ್ದಕ್ಕಿದ್ದಂತೆ ಇದರಲ್ಲಿ ಕೆಲವು ಫೋನ್‌ಗಳು ಆ್ಯಕ್ಟಿವ್ ಆಗಿದ್ದು ಗೊತ್ತಾಯಿತು. ಪರಿಶೀಲಿಸಿದಾಗ ವಿವಿಧ ರಾಜ್ಯಗಳಲ್ಲಿ ಇವು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಆದರೆ ವಿಶೇಷವೆಂದರೆ 3 ಮೊಬೈಲ್ ಫೋನ್‌ಗಳು ದುಬೈನಲ್ಲಿ ಆ್ಯಕ್ಟಿವ್ ಆಗಿದ್ದವು.
ಬಸ್ ಸ್ಟಾಪ್ ನಿಂದ ಮನೆಗೆ ಡ್ರಾಪ್ : ಮಹಿಳೆಯರಿಗೆ ಪೊಲೀಸರಿಂದ ಹೊಸ ಸೇವೆ !...
ಇದರ ನಡುವೆ ಪೊಲೀಸರು ಮೊಬೈಲ್ ಕಳ್ಳರ ತಂಡವೊಂದನ್ನು ಬಂಧಿಸಿದ್ದರು. ಆಗ ಶಿವಮೊಗ್ಗದ ಮೊಬೈಲ್ ಫೋನ್‌ಗಳು ದುಬೈಗೆ ಹೋಗಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿತು.
ಮೊಬೈಲ್ ಕಳ್ಳರ ತಂಡವು ತಿಂಗಳು ಕಾಲ ಮೊಬೈಲ್ ಸ್ವಿಚ್‌ಆಫ್ ಮಾಡಿ ಸುಮ್ಮನಿತ್ತು. ಬಳಿಕ ಇವುಗಳನ್ನು ಹೊರ ರಾಜ್ಯದಲ್ಲಿ ಮಾರಿದರೆ ಪೊಲೀಸರಿಗೆ ಸುಳಿವೇ ಸಿಗುವುದಿಲ್ಲ ಎಂದುಕೊಂಡು ಗೋವಾಗೆ ಹೋಗಿ ಅಲ್ಲಿ ಮಾರಾಟ ಮಾಡಿತ್ತು. ಕಳ್ಳರು ಪ್ರವಾಸಿ ತಂಡವೊಂದಕ್ಕೆ ತಾವು ಪ್ರವಾಸ ಬಂದಿದ್ದು, ಎಲ್ಲ ವಸ್ತುಗಳೂ ಕಳ್ಳತನವಾಗಿದೆ. ಈಗ ಮೊಬೈಲ್ ಬಿಟ್ಟರೆ ಏನೂ ಇಲ್ಲ. ವಾಪಸ್ ಹೋಗಲು ಹಣ ಬೇಕಾಗಿದ್ದು, ಆ ಕಾರಣಕ್ಕೆ ಕಡಿಮೆ ಬೆಲೆಗೆ ಈ ಮೊಬೈಲ್ ಮಾರುತ್ತಿರುವುದಾಗಿ ತಿಳಿಸಿದರು. ಇದನ್ನು ನಂಬಿದ ಆ ಪ್ರವಾಸಿ ತಂಡ ಮೊಬೈಲ್‌ಗಳನ್ನು ಖರೀದಿಸಿತ್ತು. ಇದರಲ್ಲಿ ಮೂರು ಮಂದಿ ದುಬೈನಿಂದ ಬಂದಿದ್ದು, ಅಲ್ಲಿಗೆ ಮರಳಿದ ಬಳಿಕ ಇದನ್ನು ಆ್ಯಕ್ಟೀವ್ ಮಾಡಿದ್ದಾರೆ.
ಸಾಮೂಹಿಕ ವಿವಾಹದಲ್ಲಿ ಶಾಸಕ ಆಯನೂರು ಮಂಜುನಾಥ್ ಪುತ್ರಿ ವಿವಾಹ...
ಘಟನೆ ಬೆಳಕಿಗೆ ಬರುತ್ತಿದ್ದಂತೆ ಮೊಬೈಲ್ ಖರೀದಿಸಿದವರು ಶಾಕ್. ತಾವು ಖರೀದಿಸಿದ ಮೊಬೈಲ್ ಕಳ್ಳತನವಾದ ಮೊಬೈಲ್ ಎಂದು ತಿಳಿದಾಗ ಪೆಚ್ಚು ಮೊರೆ ಹಾಕಿಕೊಂಡು, ತಾವು ಖರೀದಿಸಿದ ಕಳ್ಳತನದ ಮೊಬೈಲ್‌ಗಳನ್ನು ಕೋರಿಯರ್ ಮೂಲಕ ವಾಪಸ್ಸು ಕಳುಹಿಸಿಕೊಡಲು ಒಪ್ಪಿ ಪೊಲೀಸರಿಗೆ ತಿಳಿಸಿದ್ದಾರೆ.