ವಿದ್ಯಾರ್ಥಿಗಳು, ಸಿಬ್ಬಂದಿ, ತಪಾಸಕರ ಮೊಬೈಲ್ ಇವರ ಸುಪರ್ಧಿಯಲ್ಲಿ|ಕೊಪ್ಪಳದ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಸ್ವಾಧೀನಾಧಿಕಾರಿ ನೇಮಕ| ಒಟ್ಟು 22183 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಎಲ್ಲರನ್ನು ತಪಾಸಣೆ ಮಾಡಿಯೆ ಒಳ ಬಿಡಲಾಗುವುದು|
ಮಯೂರ ಹೆಗಡೆ
ಕೊಪ್ಪಳ(ಜೂ.20): ವಿದ್ಯಾರ್ಥಿಗಳೇ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಮೊಬೈಲ್ ತೆಗೆದುಕೊಂಡು ಹೋಗುತ್ತಿರಾ? ಈ ಬಾರಿ ನಿಮ್ಮ ಮೊಬೈಲ್‌ಅನ್ನು ಪತ್ತೆ ಹಚ್ಚಿ ಇಟ್ಟುಕೊಳ್ಳಲು ‘ಮೊಬೈಲ್ ಸ್ವಾಧೀನಾಧಿಕಾರಿ’ ಎಂಬ ಪ್ರತ್ಯೇಕ ಅಧಿಕಾರಿಯನ್ನೇ ನಿಯೋಜಿಸಲಾಗುತ್ತೆ. ಇವರು ನಿಮ್ಮ ಮೊಬೈಲ್ ಪತ್ತೆ ಮಾಡಿ ತಮ್ಮ ಬಳಿ ಇಟ್ಟುಕೊಂಡು ಪರೀಕ್ಷೆ ಬಳಿಕವೆ ನಿಮಗೆ ವಾಪಸ್ ಕೊಡಲಿದ್ದಾರೆ.
ಹೌದು. ಪರೀಕ್ಷೆ ಅಕ್ರಮ ತಡೆಗಟ್ಟಲು ಈ ಬಾರಿ ಶಿಕ್ಷಣ ಇಲಾಖೆ ಮೊಬೈಲ್ ಸ್ವಾಧೀನಾಧಿಕಾರಿ ಎಂಬ ಹುದ್ದೆಯನ್ನೇ ಸೃಜಿಸಿದೆ. ಕೊರೋನಾ ಹಿನ್ನೆಲೆಯಲ್ಲಿ ಪರೀಕ್ಷೆಗೆ ಆಗಮಿಸುವ ಎಲ್ಲ ವಿದ್ಯಾರ್ಥಿಗಳಿಗೆ ಸ್ಯಾನಿಟೈಸರ್ ಮಾಸ್ಕ್ ನೀಡುವಂತೆ ಈ ಅಧಿಕಾರಿಯು ಪ್ರತಿಯೋರ್ವ ವಿದ್ಯಾರ್ಥಿ ಮೊಬೈಲ್ ತಂದಿದ್ದಾನೊ ಇಲ್ಲವೊ ಎಂಬುದನ್ನು ಪರಿಶೀಲಿಸುತ್ತಾರೆ. ಪರೀಕ್ಷೆಯ ಮೊದಲ ದಿನ ಮೊಬೈಲ್ ಕಂಡುಬಂದರೆ ಅದನ್ನು ತರದಂತೆ ಎಚ್ಚರಿಕೆ ನೀಡಿ ತಮ್ಮ ಬಳಿ ಸುರಕ್ಷಿತವಾಗಿ ಇಟ್ಟುಕೊಳ್ಳುತ್ತಾರೆ. ಪರೀಕ್ಷೆ ಬಳಿಕವೆ ಮೊಬೈಲನ್ನು ಮರಳಿ ನೀಡಲಿದ್ದಾರೆ.
ಕಳಪೆ ಬೀಜದವರ ಕಥೆ ಮುಗಿಸುತ್ತೇವೆ: ಕೃಷಿ ಸಚಿವ ಬಿ.ಸಿ. ಪಾಟೀಲ್
ಹಿಂದೆ ಮೊಬೈಲ್ ತಂದರೆ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರಿಗೆ ನೀಡಬೇಕಿತ್ತು. ಎರಡು ವರ್ಷದಿಂದಲೂ ಇದೆ ನಿಯಮ ಜಾರಿಯಲ್ಲಿತ್ತು. ಆದರೆ, ಈ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗದ ಕಾರಣ ಇದಕ್ಕಾಗಿ ಪ್ರತ್ಯೇಕ ಹುದ್ದೆಯನ್ನು ನಿಯೋಜಿಸಲಾಗಿದೆ. ಸಿಆರ್‌ಪಿ, ಬಿಆರ್‌ಪಿ, ತಾಲೂಕು ಶಿಕ್ಷಣ ಸಂಯೋಜಕರು, ಸಮಗ್ರ ಶಿಕ್ಷಣ ಸಂಪನ್ಮೂಲ ತರಬೇತುದಾರರು ಹಾಗೂ ಮುಖ್ಯ ಶಿಕ್ಷಕರನ್ನು ಮೊಬೈಲ್ ಸ್ವಾಧೀನಾಧಿಕಾರಿಯಾಗಿ ನೇಮಕವಾಗಲಿದ್ದಾರೆ.
ಅಧಿಕಾರಿಗಳ ಮೊಬೈಲ್ ಕೂಡ:
ಈ ಅಧಿಕಾರಿಗಳು ಕೇವಲ ವಿದ್ಯಾರ್ಥಿಗಳ ಮೊಬೈಲ್ ಅನ್ನು ಮಾತ್ರ ವಶಕ್ಕೆ ತೆಗೆದುಕೊಳ್ಳಲ್ಲ. ಪರೀಕ್ಷೆ ವೇಳೆ ತಪಾಸಣೆಗೆ ಆಗಮಿಸುವ ವಿಚಕ್ಷಣಾ ದಳದ ಅಧಿಕಾರಿಗಳ ಮೊಬೈಲ್ ಅನ್ನೂ ಪಡೆದುಕೊಳ್ಳುವರು. ಅದರಂತೆ ಕೇಂದ್ರದ ಮುಖ್ಯಾಧಿಕಾರಿ ಹೊರತುಪಡಿಸಿ ಇತರೆ ಸಿಬ್ಬಂದಿ ಕೂಡ ಮೊಬೈಲ್ ನೀಡಬೇಕು. ತಪಾಸಣೆ ಬಳಿಕ ವಾಪಸ್ ನೀಡಲಿದ್ದಾರೆ. ಕಚೇರಿ ಕಾರ್ಯ ಸೇರಿ ಪ್ರಮುಖ ಮಾಹಿತಿ ಹಂಚಿಕೊಳ್ಳಲು ಮುಖ್ಯಾಧಿಕಾರಿ ತಮ್ಮ ಬಳಿ ಮೊಬೈಲ್ ಇಟ್ಟುಕೊಳ್ಳಲು ತಿಳಿಸಲಾಗಿದೆ.
80 ಕೇಂದ್ರ
ಕೊಪ್ಪಳ ಜಿಲ್ಲೆಯಲ್ಲಿ 63 ಪರೀಕ್ಷಾ ಕೇಂದ್ರಗಳಿದ್ದವು. ಈ ಬಾರಿ ಹೆಚ್ಚುವರಿ 17 ಕೇಂದ್ರ ಸೇರಿದಂತೆ ಒಟ್ಟು 80 ಕೇಂದ್ರಗಳು ಇರಲಿವೆ. ಈ ಎಲ್ಲ ಕೇಂದ್ರದಲ್ಲಿ ಮೊಬೈಲ್ ಸ್ವಾಧೀನಾಧಿಕಾರಿಯನ್ನು ಈಗಾಗಲೇ ನೇಮಕ ಮಾಡಲಾಗಿದೆ. ಒಟ್ಟು 22183 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಎಲ್ಲರನ್ನು ತಪಾಸಣೆ ಮಾಡಿಯೆ ಒಳಬಿಡಲಾಗುವುದು ಎಂದು ಡಿಡಿಪಿಐ ದೊಡ್ಡಬಸಪ್ಪ ನೀರಲೂಟಿ ಮಾಹಿತಿ ನೀಡಿದರು.
ಕೊಪ್ಪಳದ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಸ್ವಾಧೀನಾಧಿಕಾರಿ ನೇಮಿಸಲಾಗಿದೆ. ಪರೀಕ್ಷಾ ಅಕ್ರಮ ತಡೆಗಟ್ಟಲು ಇವರು ನೆರವಾಗುವರು. ಮೊಬೈಲ್ ತರದಂತೆ ಎಚ್ಚರಿಕೆ ನೀಡಲಿದ್ದಾರೆ. ಪರೀಕ್ಷೆ ಬಳಿಕ ವಾಪಸ್ ನೀಡಲಾಗುವುದು ಎಂದು ಡಿಡಿಪಿಐ ಕೊಪ್ಪಳ ದೊಡ್ಡಬಸಪ್ಪ ನೀರಲೂಟಿ ಅವರು ತಿಳಿಸಿದ್ದಾರೆ.