ವರದಿ : ಅಂಶಿ ಪ್ರಸನ್ನಕುಮಾರ್
ಮೈಸೂರು (ಜು.28): ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಪದವೀಧರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಮುಂದಿನ ವರ್ಷ ಜೂನ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಜೆಡಿಎಸ್‌ನ ಇಬ್ಬರು ಹಾಲಿ ಎಂ.ಎಲ್ಸಿಗಳ ನಡುವೆ ಪೈಪೋಟಿ ಶುರುವಾಗಿದೆ.
undefined
ಹಾಲಿ ಈ ಕ್ಷೇತ್ರವನ್ನು ಎರಡನೇ ಬಾರಿ ಪ್ರತಿನಿಧಿಸುತ್ತಿರುವ ಕೆ.ಟಿ. ಶ್ರೀಕಂಠೇಗೌಡರು ಮುಂದಿನ ಚುನಾವಣೆಗೆ ತಾವು ನಿಲ್ಲುವುದಿಲ್ಲ. ಹೀಗಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ. ರಾಮು ಅವರಿಗೆ ಟಿಕೆಟ್ ನೀಡಬೇಕು ಎಂದು ಒತ್ತಡ ಹಾಕುತ್ತಿದ್ದಾರೆ.
'ಸ್ಪಷ್ಟ ಬರದಿದ್ದರೂ ಬರದಿದ್ರೂ 2023ಕ್ಕೆ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ'
ಇದೇ ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಸತತ ನಾಲ್ಕನೇ ಬಾರಿ ಪ್ರತಿನಿಧಿಸುತ್ತಿರುವ ಮಾಜಿ ಉಪ ಸಭಾಪತಿಯೂ ಆದ ಮರಿತಿಬ್ಬೇಗೌಡರು ಮೈವಿವಿ ಸೆನೆಟ್ ಮಾಜಿ ಸದಸ್ಯ, ಪದವಿಪೂರ್ವ ಶಿಕ್ಷಣ ಇಲಾಖೆಯ ನಿವೃತ್ತ ಪ್ರಾಂಶುಪಾಲ ಜಯರಾಮ್ ಕೀಲಾರ ಅವರ ಪರ ನಿಂತಿದ್ದಾರೆ. ಜಯರಾಂ 1992 ರಲ್ಲಿ ಪದವೀಧರ ಕ್ಷೇತ್ರದಿಂದ ಎಚ್.ಡಿ. ದೇವೇಗೌಡ ನೇತೃತ್ವದ ಸಮಾಜವಾದಿ ಜನತಾಪಕ್ಷದ ಅಭ್ಯರ್ಥಿಯಾಗಿ ಸೋತಿದ್ದರು.
ಮರಿತಿಬ್ಬೇಗೌಡರು ಮೈಸೂರಿನಲ್ಲಿ ಬೆಂಬಲಿಗರ ಸಭೆ ನಡೆಸಿ, ಜಯರಾಮ್ ಅವರಿಗೆ ಟಿಕೆಟ್ ನೀಡುವಂತೆ ವರಿಷ್ಠರಿಗೆ ಮನವಿ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ಶ್ರೀಕಂಠೇಗೌಡರು ಮಂಡ್ಯದಲ್ಲಿ ಬೆಂಬಲಿಗರ ಸಭೆ ನಡೆಸಿ, ರಾಮು ಅವರೇ ಅಭ್ಯರ್ಥಿ ಎಂದು ಹೇಳಿಕೆ ನೀಡಿದ್ದಾರೆ.
ಈ ಇಬ್ಬರಲ್ಲಿ ರಾಷ್ಟ್ರೀಯ ಅಧ್ಯಕ್ಷರೂ ಆದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಯಾರಿಗೆ ಟಿಕೆಟ್ ಪ್ರಕಟಿಸುತ್ತಾರೆ ಇಲ್ಲವೇ ಮೂರನೇಯವರಿಗೆ ನೀಡುತ್ತಾರೆಯೇ ಕಾದು ನೋಡಬೇಕು.
ಕಾಂಗ್ರೆಸ್‌ನಲ್ಲಿ ಪೂರ್ವಭಾವಿ ಸಭೆ
ಕಾಂಗ್ರೆಸ್ ಪಕ್ಷವು ಮಾಜಿ ಮುಖ್ಯಮಂತ್ರಿ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ನಾಲ್ಕು ಜಿಲ್ಲೆಗಳ ವ್ಯಾಪ್ತಿಯ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರ ಹಾಗೂ ಮುಖಂಡರ ಸಭೆ ನಡೆಸಿದೆ. ಮಂಡ್ಯದ ಮಾಜಿ ಸಂಸದ ಜಿ. ಮಾದೇಗೌಡರ ಪುತ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಮಧು ಜಿ. ಮಾದೇಗೌಡ‚, ಬನ್ನೂರು ಮಾಜಿ ಶಾಸಕ ಎಸ್. ಕೃಷ್ಣಪ್ಪ ಅವರ ಪುತ್ರ ಡಾ.ರವಿ ಕೃಷ್ಣಪ್ಪ ಅವರು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ. ಇಬ್ಬರ ಪೈಕಿ ಒಬ್ಬರಿಗೆ ಅದರಲ್ಲೂ ಮಧು ಮಾದೇಗೌಡರಿಗೆ ಟಿಕೆಟ್ ಖಚಿತ ಎಂದು ಹೇಳಲಾಗುತ್ತಿದೆ.
ಜೆಪಿಯಲ್ಲಿ ಹಲವರ ಪೈಪೋಟಿ
ದ.ಪದವೀಧರ ಕ್ಷೇತ್ರದಿಂದ ಗೋ. ಮಧುಸೂದನ್ ಅವರು ಒಂದು ಉಪ ಚುನಾವಣೆ ಸೇರಿದಂತೆ ಮೂರು ಬಾರಿ ಆಯ್ಕೆಯಾದವರು. ಕಳೆದ ಬಾರಿ ಅವರಿಗೆ ಟಿಕೆಟ್ ನಿರಾಕರಿಸಿ, ಮೈಲ್ಯಾಕ್ ಮಾಜಿ ಅಧ್ಯಕ್ಷ ಮೈ.ವಿ. ರವಿಶಂಕರ್ ಅವರಿಗೆ ನೀಡಲಾಗಿತ್ತು. ಅವರು ಸೋತರು. ಈ ಬಾರಿ ಕೂಡ ಗೋ. ಮಧುಸೂದನ್, ಮೈ.ವಿ. ರವಿಶಂಕರ್ ಜೊತೆಗೆ ಮೈವಿವಿ ಸಿಂಡಿಕೇಟ್ ಸದಸ್ಯ ಡಾ.ಇ.ಸಿ. ನಿಂಗರಾಜ್‌ಗೌಡ, ಮಾಜಿ ಡಿಸಿಎಂ ಡಾ.ಸಿ.ಎಸ್.. ಅಶ್ವತ್ಥನಾರಾಯಣ್ ಅವರ ಸಂಬಂಧಿ ಡಾ. ರವಿಶಂಕರ್, ಅರಸೀಕೆರೆಯ ಎನ್.ಎಸ್. ವಿನಯ್ ಸೇರಿದಂತೆ ಹಲವಾರು ಆಕಾಂಕ್ಷಿಗಳಾಗಿದ್ದಾರೆ.
ರೈತ ಸಂಘದಿಂದ ಪ್ರಸನ್ನಎನ್.ಗೌಡ
ರೈತ ಸಂಘದಿಂದ ರಾಜ್ಯ ಒಕ್ಕಲಿಗರ ಸಂಘದ ಮಾಜಿ ನಿರ್ದೇಶಕ ಪ್ರಸನ್ನ ಎನ್. ಗೌಡ ಅವರಿಗೆ ಟಿಕೆಟ್ ಎಂದು ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಈಗಾಗಲೇ ಪ್ರಕಟಿಸಿದ್ದಾರೆ. ಇವರಲ್ಲದೇ ಇನ್ನೂ ಕೆಲವರು ಪಕ್ಷೇತರರಾಗಿಯೂ ಕಣಕ್ಕಿಳಿಯುವ ಸಾಧ್ಯತೆ ಇದೆ.
ಕೊರೋನಾ ಮೂರನೇ ಅಲೆ ನೋಡಿಕೊಂಡು ಅಧಿಸೂಚನೆ ಹೊರಬೀಳುತ್ತಿದ್ದಂತೆಯೇ ಮೂರು ಪಕ್ಷಗಳಲ್ಲೂ ಆಕಾಂಕ್ಷಿಗಳ ಚಟುವಟಿಕೆಗಳು ಮತ್ತಷ್ಟುಗರಿಗೆದರುವ ಸಂಭವವಿದೆ.