MLC Election : ಅವಕಾಶ ತಪ್ಪಿಸಿಕೊಂಡ ಸಂದೇಶ್ : ಎಲ್ಲಾ ಪಕ್ಷ ಸುತ್ತಿ ಬಂದ ಮುಖಂಡಗೆ ಅದೃಷ್ಟ

By Kannadaprabha NewsFirst Published Nov 22, 2021, 1:59 PM IST
Highlights
  • ಮೈಸೂರು, ಚಾಮರಾಜನಗರ ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ಬಿಜೆಪಿಯಿಂದ ಆರ್‌.ರಘು ಕೌಟಿಲ್ಯ ಅವರ ಹೆಸರು ಅಧಿಕೃತವಾಗಿ ಪ್ರಕಟ
  • ಕಾಂಗ್ರೆಸ್‌ನಿಂದ ದಲಿತರಲ್ಲಿ ಎಡಗೈ ಸಮೂದಾಯಕ್ಕೆ ಸೇರಿದ ಡಾ.ಡಿ.ತಿಮ್ಮಯ್ಯ ಅವರಿಗೆ ಟಿಕೆಟ್‌ ಖಚಿತ 
  • ಜೆಡಿಎಸ್‌ನಿಂದ ತಾಪಂ ಮಾಜಿ ಅಧ್ಯಕ್ಷ ಸಿ.ಎನ್‌.ಮಂಜೇಗೌಡ ಅವರಿಗೆ ಟಿಕೆಟ್‌ ಘೋಷಣೆಯಾಗುವ ಸಾಧ್ಯತೆ 

 ಮೈಸೂರು(ನ.22):  ಮೈಸೂರು (Mysuru), ಚಾಮರಾಜನಗರ (Chamarajanagar) ಸ್ಥಳೀಯ ಸಂಸ್ಥೆಗಳ ದ್ವಿಸದಸ್ಯ ಕ್ಷೇತ್ರದಿಂದ ಬಿಜೆಪಿಯಿಂದ (BJP) ಆರ್‌.ರಘು ಕೌಟಿಲ್ಯ ಅವರ ಹೆಸರು ಅಧಿಕೃತವಾಗಿ ಪ್ರಕಟವಾಗಿದೆ. ಕಾಂಗ್ರೆಸ್‌ನಿಂದ (Congress) ದಲಿತರಲ್ಲಿ ಎಡಗೈ ಸಮೂದಾಯಕ್ಕೆ ಸೇರಿದ ಡಾ.ಡಿ.ತಿಮ್ಮಯ್ಯ ಅವರಿಗೆ ಟಿಕೆಟ್‌ ಖಚಿತ ಎನ್ನಲಾಗಿದೆ. ಜೆಡಿಎಸ್‌ನಿಂದ (JDS) ತಾಪಂ ಮಾಜಿ ಅಧ್ಯಕ್ಷ ಸಿ.ಎನ್‌.ಮಂಜೇಗೌಡ ಅವರಿಗೆ ಟಿಕೆಟ್‌ ಘೋಷಣೆಯಾಗುವ ಸಾಧ್ಯತೆ ಇದೆ.

ರಘು ಅವರ ಪರವಾಗಿ ಬಿಜೆಪಿ ರಾಜ್ಯ ನಾಯಕರು ಶನಿವಾರ ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಜನ ಸ್ವರಾಜ್ಯ ಯಾತ್ರೆ (Jan swaraj yatra) ನಡೆಸಿ, ಪ್ರಚಾರ ಆರಂಭಿಸಿದ್ದಾರೆ. ಕಳೆದ ಬಾರಿ ಸ್ಪರ್ಧಿಸಿ ಸೋತಿದ್ದ ರಘು ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ (BS Yediyurappa) ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಅವರ ಪರಮಾಪ್ತರು. ಸೂಕ್ಷ್ಮಾತಿ ಸೂಕ್ಷ್ಮ ಹಿಂದುಳಿದ ಜಾತಿಗೆ ಸೇರಿದ ಅವರು ಕಾಯಕ ಸಮಾಜಗಳ ಒಕ್ಕೂಟ ರಚಿಸಿಕೊಂಡು ಕೆ.ಆರ್‌.ಪೇಟೆ (KR Pete) ಸೇರಿದಂತೆ ವಿವಿಧೆಡೆ ನಡೆದ ಉಪ ಚುನಾವಣೆಯಲ್ಲಿ (By Election) ಪಕ್ಷದ ಗೆಲುವಿಗೆ ಶ್ರಮಿಸಿದರು. ಹೀಗಾಗಿಯೇ ಅವರನ್ನು ಯಡಿಯೂರಪ್ಪ ಅವರು ಡಿ.ದೇವರಾಜ ಅರಸು (D Deveraja Arasu) ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಇದೀಗ ಟಿಕೆಟ್‌ ಕೂಡ ನೀಡಿದ್ದಾರೆ.

ಯಾರು ಈ ಡಾ.ಡಿ.ತಿಮ್ಮಯ್ಯ?

ಮೈಸೂರು ಜಿಲ್ಲೆ ಹುಣಸೂರು ಪಟ್ಟಣದ ಸದಾಶಿವನ ಕೊಪ್ಪಲಿನ ದಲಿತರಲ್ಲಿ ಎಡಗೈ ಸಮೂದಾಯದ ದಾಸಪ್ಪ- ಕಾಳಮ್ಮ ಅವರ ಪುತ್ರರಾಗಿ ಜನಿಸಿದ ತಿಮ್ಮಯ್ಯ ಅವರು ಎಸ್‌ಎಸ್‌ಎಲ್‌ಸಿಯಲ್ಲಿ (SSLC) ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿ ದಾಖಲೆ ನಿರ್ಮಿಸಿದವರು. ನಂತರ ಮೈಸೂರಿಗೆ ಬಂದು ಯುವರಾಜ ಕಾಲೇಜಿನಲ್ಲಿ ಪಿಯುಸಿ, ಮೈಸೂರು ಮೆಡಿಕಲ್‌ ಕಾಲೇಜಿನಲ್ಲಿ ಅರವತ್ತರ ದಶಕದಲ್ಲಿಯೇ ಎಂಬಿಬಿಎಸ್‌ (MBBS) ಓದಿ ಹುಣಸೂರಿನವರೇ ಆದ ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸರ ಕೃಪೆಯಿಂದ ನೇರ ನೇಮಕಾತಿ ಮೂಲಕ ಸರ್ಕಾರಿ ಸೇವೆಗೆ ಸೇರಿದವರು. ಪ್ರಾಥಮಿಕ ಆರೋಗ್ಯ ಕೇಂದ್ರದ (PHC) ವೈದ್ಯಾಧಿಕಾರಿಯಾಗಿ ವೃತ್ತಿಗೆ ಸೇರಿದವರು.

ಡಾ.ಡಿ.ತಿಮ್ಮಯ್ಯ ಮೈಸೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ  ಸತತ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದವರು. ಮೈಸೂರು ಮಹಾನಗರ ಪಾಲಿಕೆಗೆ ಆರೋಗ್ಯಾಧಿಕಾರಿಯಾಗಿ ಕೆಲಸ ಮಾಡಿದವರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ನಿರ್ದೇಶನಾಲಯದ ಯೋಜನಾ ನಿರ್ದೇಶಕರಾಗಿ (RCH) ನಿವೃತ್ತರಾದರು.

ಮಂಜೇಗೌಡರಿಗೆ ಖುಲಾಯಿಸಿರುವ ಅದೃಷ್ಟ

ಮೈಸೂರು ತಾಪಂ ಮಾಜಿ ಅಧ್ಯಕ್ಷರಾದ ಮಂಜೇಗೌಡರು ಜೆಡಿಎಸ್‌, ಕಾಂಗ್ರೆಸ್‌, ಬಿಜೆಪಿ- ಎಲ್ಲ ಪಕ್ಷಗಳನ್ನು ಬಳಸಿ ಬಂದಿದ್ದಾರೆ.  ಮಂಜೇಗೌಡ 2008ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಬಿಜೆಪಿ (BJP)ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎರಡನೇ ಸ್ಥಾನ ಪಡೆದಿದ್ದರು. ನಂತರ ಕೇಂದ್ರ ಪರಿಹಾರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. 2013ರಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಲು ಬಯಸಿದ್ದರು. ಆದರೆ, ಜಿ.ಟಿ. ದೇವೇಗೌಡರು (GT Devegowda) ಹುಣಸೂರಿನಿಂದ ಚಾಮುಂಡೇಶ್ವರಿಗೆ ವಲಸೆ ಬಂದಿದ್ದರಿಂದ ಕಾಂಗ್ರೆಸ್‌ ಸೇರಿದರು. ಅವರ ಪುತ್ರ ಭರತ್‌ ಶ್ರೀರಾಂಪುರ ಜಿಪಂ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಜೆಡಿಎಸ್‌ನ ಎಸ್‌. ಮಾದೇಗೌಡರ ಎದುರು ಸೋತಿದ್ದರು. ಮಂಜೇಗೌಡರು ಹಾಲಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಕಾಂಗ್ರೆಸ್‌ ಟಿಕೆಟ್‌ ಸಿಗುವುದಿಲ್ಲ ಎಂದು ಗೊತ್ತಾಗುತ್ತಿದ್ದಂತೆಯೇ ಮತ್ತೆ ಜೆಡಿಎಸ್‌ ಕಡೆ ನಡೆದಿದ್ದಾರೆ.

ಸಂದೇಶ್‌, ಧರ್ಮಸೇನ ನಿಲುವೇನು?

 ಹಾಲಿ ಸದಸ್ಯರಾಗಿರುವ ಕಾಂಗ್ರೆಸ್‌ನ ಆರ್‌.ಧರ್ಮಸೇನ ಅವರಿಗೆ ಬಹುತೇಕ ಟಿಕೆಟ್‌ ಕೈ ತಪ್ಪಿದಂತಿದೆ. ಮಾಜಿ ಸಚಿವ ಎನ್‌.ರಾಚಯ್ಯ ಅವರ ಪುತ್ರರಾದ ಧರ್ಮಸೇನ ಸತತ 12 ವರ್ಷಗಳ ಕಾಲ ಮೈಸೂರು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷರಾಗಿ ಕೆಲಸ ಮಾಡಿದವರು. 2013ರ ಉಪ ಚುನಾವಣೆ, 2016ರ ಸಾರ್ವತ್ರಿಕ ಚುನಾವಣೆಯಲ್ಲಿ (Election) ಕಾಂಗ್ರೆಸ್‌ ಟಿಕೆಟ್‌ ಮೇಲೆ ಮೇಲ್ಮನೆಗೆ ಆಯ್ಕೆಯಾಗಿದ್ದರು. ಈ ಬಾರಿಯೂ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಈವರೆಗೆ ನಡೆದಿರುವ ಎಲ್ಲ ಚುನಾವಣೆಗಳಲ್ಲೂ ಒಂದೇ ಕುಟುಂಬದವರಿಗೆ (ಟಿ.ಎನ್‌.ನರಸಿಂಹಮೂರ್ತಿ, ಸಿ.ರಮೇಶ್‌, ಎನ್‌.ಮಂಜುನಾಥ್‌, ಆರ್‌.ಧರ್ಮಸೇನ) ಅವಕಾಶ ಮಾಡಿಕೊಡಲಾಗಿದೆ. ಆದ್ದರಿಂದ ಈ ಬಾರಿ ಬದಲಿಸಿ ಎಂಬ ಒತ್ತಡ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ವರಿಷ್ಠರು ಡಾ.ಡಿ. ತಿಮ್ಮಯ್ಯ ಅವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ದಲಿತರಲ್ಲಿ ಬಲಗೈನವರಿಗೆ ನಂಜನಗೂಡು, ಕೊಳ್ಳೇಗಾಲ ಹಾಗೂ ಟಿ.ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ (Assembly Constituency) ಅವಕಾಶ ಮಾಡಿಕೊಡುವುದರಿಂದ ಎಡಗೈನವರಿಗೆ ಮೇಲ್ಮನೆ ಟಿಕೆಟ್‌ ನೀಡುತ್ತಾ ಕಾಂಗ್ರೆಸ್‌ ಸಾಮಾಜಿಕ ನ್ಯಾಯ ಕಾಪಾಡಿಕೊಂಡು ಬಂದಿದೆ. ಈ ಬಾರಿಯೂ ಈ ಸಂಪ್ರದಾಯ ಮುಂದುವರಿಸಲು ನಿರ್ಧರಿಸಿದೆ. ಆದರೆ, ಧರ್ಮಸೇನ ಬದಲು ಅದೇ ಜನಾಂಗದ ಡಾ.ತಿಮ್ಮಯ್ಯ ಅವರಿಗೆ ಅವಕಾಶ ನೀಡುತ್ತಿದೆ.

ಸಂದೇಶ್‌ ನಾಗರಾಜ್‌ (sandesh nagaraj) ಅವರು ಬಿಜೆಪಿ ಟಿಕೆಟ್‌ ಸಿಗುತ್ತದೆ ಎಂಬ ಭರವಸೆ ಮೇರೆಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ಅವರನ್ನು ಟೀಕೆ ಮಾಡದಿದ್ದರೆ ಮತ್ತೊಮ್ಮೆ ಟಿಕೆಟ್‌ ಸಿಗುವ ಸಾಧ್ಯತೆ ಇತ್ತು. ಆದರೆ, ಆತುರದಿಂದ ಟೀಕೆ ಮಾಡಿದ್ದಕ್ಕೆ ಬೆಲೆ ತೆರಬೇಕಾಗಿದೆ. ಅತ್ತ ಬಿಜೆಪಿ ಟಿಕೆಟೂ ಇಲ್ಲ, ಇತ್ತ ಜೆಡಿಎಸ್‌ ಟಿಕೆಟೂ ಇಲ್ಲ ಎಂಬ ಪರಿಸ್ಥಿತಿ. ಬಿಜೆಪಿ ಟಿಕೆಟ್‌ ಕೈತಪ್ಪಿದ ನಂತರ ಸಂದೇಶ್‌ ನಾಗರಾಜ್‌ ಅವರ ಪುತ್ರ ಮಾಜಿ ಸಚಿವ ಸಾ.ರಾ. ಮಹೇಶ್‌ ಅವರನ್ನು ಸಂಪರ್ಕಿಸಿ, ಮರು ಯತ್ನ ನಡೆಸಿದರು. ಆದರೆ, ಕುಮಾರಸ್ವಾಮಿ ಅವರು ಒಪ್ಪಿಲ್ಲ ಎಂದು ತಿಳಿದಿದೆ. ಹೀಗಾಗಿ ಸಂದೇಶ್‌ ನಾಗರಾಜ್‌ ಪಕ್ಷೇತರರಾಗಿ ಕಣದಲ್ಲಿ ಇರುತ್ತಾರಾ ಅಥವಾ ಕಣದಿಂದ ಹಿಂದೆ ಸರಿಯುವರೇ? ಎಂಬುದನ್ನು ಮಂಗಳವಾರದ ವೇಳೆಗೆ ಸ್ಪಷ್ಟವಾಗಲಿದೆ.

click me!