
ಬೆಂಗಳೂರು(ಫೆ.03): ನಿರ್ದಿಷ್ಟ ಖಾತೆ ಬೇಕೆಂದು ಪಟ್ಟು ಹಿಡಿದಿಲ್ಲ, ಆದರೆ ಆಯ್ಕೆಗೆ ಅವಕಾಶ ಸಿಕ್ಕಲ್ಲಿ ಕ್ಷೇತ್ರದ ಜನರ ಆಸೆಯಂತೆ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಆದ್ಯತೆ ನೀಡುವುದಾಗಿ ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ವೀರಶೈವ ಲಿಂಗಾಯತ ಯುವಕರ ಸೇವಾ ಟ್ರಸ್ಟ್ ಕೆಂಗೇರಿ ಉಪನಗರದಲ್ಲಿ ಏರ್ಪಡಿಸಿದ್ದ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಯಶವಂತಪುರ ಕ್ಷೇತ್ರದ ಜನ, ಬೆಂಗಳೂರು ಅಭಿವೃದ್ಧಿ ಖಾತೆ ಪಡೆಯಿರಿ ಎಂದು ಒತ್ತಾಯಿಸಿದ್ದಾರೆ. ಆದರೆ ನಾನು ಇದೇ ಖಾತೆ ಬೇಕು ಎಂದು ಪಟ್ಟು ಹಿಡಿದಿಲ್ಲ. ಸಂಪುಟ ವಿಸ್ತರಣೆ ಕುರಿತಂತೆ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆದಾಗಲೂ ಖಾತೆಗಳ ಬಗ್ಗೆ ಚರ್ಚಿಸಿಲ್ಲ. ಆದರೆ ಆಯ್ಕೆ ಅವಕಾಶ ಸಿಕ್ಕರೆ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಮೊದಲ ಆದ್ಯತೆ ನೀಡಲಿದ್ದೇನೆ ಎಂದು ತಿಳಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮುಖ್ಯಮಂತ್ರಿಗಳು ಸಂಪುಟ ವಿಸ್ತರಣೆಯಲ್ಲಿ 13 ಜನರಿಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಆದರೆ ರಾಣಿಬೆನ್ನೂರು ಶಾಸಕ ಆರ್. ಶಂಕರ್ ಹೆಸರು ಸಂಪುಟ ವಿಸ್ತರಣೆ ಪಟ್ಟಿಯಲ್ಲಿ ಇಲ್ಲ, ಆದರೆ ಅವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ. ಮುಂಬರುವ ದಿನಗಳಲ್ಲಿ ಶಂಕರ್ರನ್ನು ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಆಯ್ಕೆ ಮಾಡಿ ಮಂತ್ರಿ ಮಾಡುವುದಾಗಿ ಯಡಿಯೂರಪ್ಪ ತಿಳಿಸಿದ್ದಾರೆ. ಈಗಾಗಲೇ ಮುಖ್ಯಮಂತ್ರಿಗಳು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾರೆ. ಶಂಕರ್ ವಿಚಾರದಲ್ಲಿಯೂ ನುಡಿದಂತೆ ನಡೆದುಕೊಳ್ಳುತ್ತಾರೆ. ಆದ್ದರಿಂದ ಶಂಕರ್ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.