ಕಾಂಗ್ರೆಸ್ ಒಂದೂ ಕ್ಷೇತ್ರದಲ್ಲೂ ಗೆಲ್ಲೋದಿಲ್ಲ| ಮತ್ತೆ ಮೈತ್ರಿ ಸರಕಾರ ರಚನೆ ಸಾಧ್ಯವೇ ಇಲ್ಲ| ಈ ಉಪಚುನಾವಣಾ ರಣರಂಗದಲ್ಲಿ ಸಿದ್ದು ಒಬ್ಬಂಟಿಯಾಗಿದ್ದಾರೆ ಎಂದ ರೇಣುಕಾಚಾರ್ಯ| ನಾವು ಎದೆ ತಟ್ಟಿ ಹಿಂದೂ ಅಂತಾ ಹೇಳಿಕೊಳ್ತೇವೆ| ಆದರೆ ಜಾತಿ ರಾಜಕಾರಣ ಮಾಡುತ್ತಿರೋದು ಯಾರು? ಟಿಪ್ಪು ಜಯಂತಿ ಮಾಡಿದವರು ಯಾರು? ನೀವು ಜಾತಿವಾದಿಗಳು, ನಾವಲ್ಲ ಎಂದು ಡಿಕೆಶಿಗೆ ತಿರುಗೇಟು ನೀಡಿದ ರೇಣುಕಾಚಾರ್ಯ|
ಹಾವೇರಿ(ಡಿ.02): ಉಪಚುನಾವಣೆಗೆ ಕೇವಲ ಮೂರು ದಿನ ಬಾಕಿಯಿದೆ. ನಾವು ಎಲ್ಲ 15 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಇನ್ನು ಕಾಂಗ್ರೆಸ್ ಒಡೆದ ಮನೆಯಾಗಿದೆ, ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಹಾಗಿದೆ. ಜೆಡಿಎಸ್‌ನವರು ಒಮ್ಮೆ ಸರಕಾರ ಮುಂದುವರೆಯುತ್ತೆ ಅಂತ ಹೇಳುತ್ತಾರೆ. ಒಮ್ಮೆ ಸರಕಾರವನ್ನ ಯಾಕೆ ಕೆಡವಬೇಕು ಅಂದ ಹೇಳಿಕೆ ನೀಡುತ್ತಾರೆ. ಅವರಲ್ಲೇ ಗೊಂದಲವಿದೆ ಎಂದು ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರು ಹೇಳಿದ್ದಾರೆ.
ಸೋಮವಾರ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ನಲ್ಲಂತೂ ನಾಯಕತ್ವವೇ ಇಲ್ಲ. ಸಿದ್ದರಾಮಯ್ಯ ಅವರಿಗೆ ಸಿಎಂ ಆಗೋ ಆಸೆ ಚಿಗುರಿದೆ. ಹಿರಿಯ ಕೈ ನಾಯಕರೆಲ್ಲ ಸೋತಿದ್ದಾರೆ. ಮಾಜಿ ಸಚಿವ ಡಿ ಕೆ ಶಿವಕುಮಾರ್ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ತಿಳಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನ ಕಾಂಗ್ರೆಸ್ ನಿಂದ ಹೊರಗಿಡಲು ಮೂಲ ಕಾಂಗ್ರೆಸ್ಸಿಗರೇ ನಿರ್ಧರಿಸಿದ್ದಾರೆ.ಸಿದ್ದು ಗೆ ಕಾಂಗ್ರೆಸ್ ನ ರಕ್ತವಿಲ್ಲ. ಬೇರೆಯವರು ದುಡ್ಡಿಗೋಸ್ಕರ ಹೋದರು ಅಂತಾರೆ. ಆದರೆ ತಾವು ಕಾಂಗ್ರೆಸ್ ಗೆ ಹೋಗಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಒಂದೂ ಕ್ಷೇತ್ರದಲ್ಲೂ ಗೆಲ್ಲೋದಿಲ್ಲ. ಮತ್ತೆ ಮೈತ್ರಿ ಸರಕಾರ ರಚನೆ ಸಾಧ್ಯವೇ ಇಲ್ಲ. ಈ ಉಪಚುನಾವಣಾ ರಣರಂಗದಲ್ಲಿ ಸಿದ್ದು ಒಬ್ಬಂಟಿಯಾಗಿದ್ದಾರೆ ಎಂದ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ಅರುಣ್ ಟಿಕೆಟ್ ಕೊಟ್ಟಿದ್ದು ಯಾಕೆ ಅಂತ ಹೇಳಿಕೆ ನೀಡಿದ್ದ ಮಾಜಿ ಸಚಿವ ಡಿ ಕೆ ಶಿವಕುಮಾರ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅದು ಪಕ್ಷದ ಆಂತರಿಕ ವಿಚಾರವಾಗಿದೆ. ಯುವಕನಿಗೆ ಟಿಕೆಟ್ ನೀಡಬೇಕೆನ್ನೋದು ಪಕ್ಷದ ನಿರ್ಧಾರವಾಗಿದೆ. ನಿಮ್ಮ ಮೇಲೆ ಒಂದೂ ಕೇಸು ಇಲ್ಲವೇ? ಎಂದು ಡಿಕೆಶಿಗೆ ರೇಣುಕಾಚಾರ್ಯ ಪ್ರಶ್ನೆ ಮಾಡಿದ್ದಾರೆ.
ಡಿಕೆಶಿ ಮೇಲೂ 50 ಕೇಸುಗಳಿವೆ. ಅವರೀಗ ಹಲ್ಲು ಕಿತ್ತಿದ ಹಾವಿನಂತಾಗಿದ್ದಾರೆ. ಅವರೂ ಕೂಡ ಏಕಾಂಗಿಯಾಗಿದ್ದಾರೆ. ಡಿಕೆಶಿ ಓರ್ವ ಮಹತ್ವಾಕಾಂಕ್ಷಿ ರಾಜಕಾರಣಿಯಾಗಿದ್ದಾರೆ. ವೈಯಕ್ತಿಕವಾಗಿ ಅವರ ಬಗ್ಗೆ ಗೌರವವಿದೆ. ಇದೀಗ ಡಿಕೆಶಿ ಜೆಡಿಎಸ್ ಸಹಾಯ ಪಡೆಯಲು ನಿರ್ಧರಿಸಿದ್ದಾರೆ. ಆ ಮೂಲಕ ಸಿಎಂ ಆಗಲು ಯತ್ನಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಡಿ ಕೆ ಶಿವಕುಮಾರ್ ಅವರು ಹಿಂದೂ ಧರ್ಮದ ಹೆಸರಲ್ಲಿ ಬಿಜೆಪಿ ಮತಯಾಚನೆ ಮಾಡುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ನಾವು ಎದೆ ತಟ್ಟಿ ಹಿಂದೂ ಅಂತಾ ಹೇಳಿಕೊಳ್ತೇವೆ. ಆದರೆ ಜಾತಿ ರಾಜಕಾರಣ ಮಾಡುತ್ತಿರೋದು ಯಾರು? ಟಿಪ್ಪು ಜಯಂತಿ ಮಾಡಿದವರು ಯಾರು? ನೀವು ಜಾತಿವಾದಿಗಳು, ನಾವಲ್ಲ ಎಂದು ಡಿಕೆಶಿಗೆ ತಿರುಗೇಟು ನೀಡಿದ್ದಾರೆ.
ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.