ಕೋವಿಡ್‌ ನಿಯಂತ್ರಣಕ್ಕೆ ಕ್ಷೇತ್ರದಲ್ಲೇ ಶಾಸಕರ ಠಿಕಾಣಿ : ಅಂತ್ಯಕ್ರಿಯೆಗೂ ಸಹಕಾರ

By Kannadaprabha NewsFirst Published Apr 30, 2021, 3:32 PM IST
Highlights

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟರಾಜು ಪಣತೊಟ್ಟಿದ್ದಾರೆ. ಎರಡನೇ ಅಲೆ ತೀವ್ರಗೊಂಡ ಸಮಯದಿಂದಲೂ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಜನರಿಗೆ ನೆರವಾಗುತ್ತಿದ್ದಾರೆ. 

ವರದಿ :  ಮಂಡ್ಯ ಮಂಜುನಾಥ

 ಮಂಡ್ಯ (ಏ.30):  ಪಾಂಡವಪುರ ತಾಲೂಕಿನಲ್ಲಿ ಕೊರೋನಾ ನಿಯಂತ್ರಿಸುವುದಕ್ಕೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟರಾಜು ಪಣತೊಟ್ಟಿದ್ದಾರೆ. ಎರಡನೇ ಅಲೆ ತೀವ್ರಗೊಂಡ ಸಮಯದಿಂದಲೂ ಕ್ಷೇತ್ರದಲ್ಲೇ ಠಿಕಾಣಿ ಹೂಡಿರುವ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಾ, ಗ್ರಾಮಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಸಾವನ್ನಪ್ಪಿದವರ ಕುಟುಂಬದವರ ನೆರವಿಗೆ ನಿಂತು ಅಂತ್ಯಕ್ರಿಯೆಗೆ ಸಕಲ ವ್ಯವಸ್ಥೆ ಮಾಡಿಕೊಡುವಲ್ಲಿ ನಿರತರಾಗಿದ್ದಾರೆ.

ಗುರುವಾರ ಒಂದೇ ದಿನ ಪಾಂಡವಪುರ ತಾಲೂಕಿನಲ್ಲಿ 6 ಜನರು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. ಬನ್ನಂಗಾಡಿ, ಕ್ಯಾತನಹಳ್ಳಿ, ಹರವು, ಹಿರೇಮರಳಿ, ಬಳೇ ಅತ್ತಿಗುಪ್ಪೆ, ಮಾರ್ಮಹಳ್ಳಿ ಗ್ರಾಮಗಳಲ್ಲಿ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ. ಈ ಎಲ್ಲಾ ಗ್ರಾಮಗಳಿಗೂ ತೆರಳಿದ ಶಾಸಕ ಸಿ.ಎಸ್‌.ಪುಟ್ಟರಾಜು ಅವರು ಅಂತ್ಯಕ್ರಿಯೆಗೆ ಮಾಡಲಾದ ವ್ಯವಸ್ಥೆಯನ್ನು ವೀಕ್ಷಿಸಿದರು. ಮೃತರ ಕುಟುಂಬದವರಿಗೆ ಧೈರ್ಯ ತುಂಬಿ ನೆರವಿನ ಸಹಾಯಾಸ್ತ ನೀಡಿದರು.

ಶತಕ ದಾಟಿ ಆವರಿಸಿದೆ ಸೋಂಕು : ಬೆಚ್ಚಿ ಬಿದ್ದ ಗ್ರಾಮದಲ್ಲಿ ಶವಸಂಸ್ಕಾರ ಮಾಡುವವರೂ ಇಲ್ಲ ...

ಗ್ರಾಮಗಳಲ್ಲಿ ಸಂಚಾರ, ಜಾಗೃತಿ:  ಗ್ರಾಮದಲ್ಲಿ ಸಂಚರಿಸಿದ ಶಾಸಕರು ಜನರಲ್ಲಿ ಕೊರೋನಾ ಸೋಂಕಿನ ಬಗ್ಗೆ ಜಾಗೃತಿ ಮೂಡಿಸಿದರು. ಯಾರೂ ಅನವಶ್ಯಕವಾಗಿ ಬೀದಿಗಳಲ್ಲಿ ಓಡಾಡಬಾರದು. ಎಲ್ಲರೂ ಕೊರೋನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಸೋಂಕಿನಿಂದ ಪಾರಾಗಬೇಕು. ಹೊರಗಿನಿಂದ ಬಂದವರನ್ನು ಕೋವಿಡ್‌ ಪರೀಕ್ಷೆ ಮಾಡಿಸುವುದು ಹಾಗೂ ಸಣ್ಣಪುಟ್ಟಜ್ವರ, ನೆಗಡಿ, ಕೆಮ್ಮು ಕಂಡುಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ತೆರಳಿ ಆರೋಗ್ಯ ಪರೀಕ್ಷೆ ಮಾಡಿಸಿಕೊಂಡು ಕೋವಿಡ್‌ ಇದೆಯೋ, ಇಲ್ಲವೋ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಜನರಿಗೆ ಕಿವಿಮಾತು ಹೇಳಿದರು.

ಗ್ರಾಮದ ಜನರು ಕಡ್ಡಾಯವಾಗಿ ಮಾಸ್ಕ್‌ ಧರಿಸಿ ಓಡಾಡಬೇಕು. ಆಗಾಗ ಸೋಪಿನಿಂದ ಕೈ ತೊಳೆದುಕೊಂಡು ಶುಚಿತ್ವ ಕಾಪಾಡಿಕೊಳ್ಳಬೇಕು. ಕುಡಿಯುವುದಕ್ಕೆ ಬಿಸಿನೀರನ್ನೇ ಉಪಯೋಗಿಸುವಂತೆ ಸಲಹೆ ನೀಡಿದರು.

ಅಧಿಕಾರಿಗಳಿಂದ ನಿರಂತರ ಮಾಹಿತಿ:

ತಾಲೂಕಿನ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕ ಸಿ.ಎಸ್‌.ಪುಟ್ಟರಾಜು ಅವರು, ತಾಲೂಕಿನಲ್ಲಿ ನಿತ್ಯ ವರದಿಯಾಗುತ್ತಿರುವ ಸೋಂಕಿನ ಸಂಖ್ಯೆ, ಮೃತರ ಮಾಹಿತಿ, ಸೋಂಕು ಹೆಚ್ಚಳಕ್ಕೆ ಕಾರಣಗಳೇನು, ನಿತ್ಯ ಎಷ್ಟುಜನರಿಗೆ ಕೋವಿಡ್‌ ಪರೀಕ್ಷೆ ಮಾಡಲಾಗುತ್ತಿದೆ, ಪರೀಕ್ಷಾ ವರದಿ ಯಾವಾಗ ತಿಳಿಸಲಾಗುತ್ತಿದೆ ಎಂಬ ಮಾಹಿತಿ ಸಂಗ್ರಹಿಸಿ, ತಾಲೂಕಿನಲ್ಲಿ ಕೊರೋನಾಗೆ ಕಡಿವಾಣ ಹಾಕುವುದಕ್ಕೆ ಟೊಂಕ ಕಟ್ಟಿನಿಂತಿದ್ದಾರೆ.

ಆಸ್ಪತ್ರೆ ಹೊರಗಿನ ಮರಕ್ಕೆ ನೇಣು ಹಾಕಿಕೊಂಡು ಸೋಂಕಿತ ಆತ್ಮಹತ್ಯೆ ...

ತಾಲೂಕಿನ ಹಲವು ಗ್ರಾಮಗಳಿಗೆ ಬೆಂಗಳೂರು, ಮುಂಬೈ ಮಹಾನಗರಗಳಿಂದ ಜನರು ಬಂದಿದ್ದು, ಅವರೆಲ್ಲರನ್ನೂ ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದಾರೆ. ಗ್ರಾಮಗಳಲ್ಲಿ ಹೋಂ ಕ್ವಾರಂಟೈನ್‌ ಆಗಿದ್ದವರನ್ನು ಕೋವಿಡ್‌ ಕೇರ್‌ ಸೆಂಟರ್‌ಗಳಿಗೆ ಶಿಫ್ಟ್‌ ಮಾಡಿಸಿದ್ದಾರೆ.

ದಿಗ್ಬಂಧನ:  ತಾಲೂಕಿನ ಕೋಡೆಕೊಪ್ಪಲು, ಕೋಡಿಹಳ್ಳಿ, ವಳಗೆರೆ ದೇವರಹಳ್ಳಿಯಲ್ಲಿಯೂ ಸೋಂಕಿತರ ಸಂಖ್ಯೆ ಹೆಚ್ಚಿದ್ದು, ಆ ಗ್ರಾಮಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಮುಂದಿನ 14 ದಿನಗಳ ಕಾಲ ಗ್ರಾಮದಿಂದ ಯಾರೂ ಹೊರಹೋಗದಂತೆ ಹಾಗೂ ಹೊರಗಿನಿಂದ ಯಾರೂ ಬರದಂತೆ ಎಲ್ಲಾ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಗ್ರಾಮದ ಪ್ರತಿಯೊಬ್ಬರನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಈ

ಗ್ರಾಮಗಳಲ್ಲಿ ಸೋಂಕಿನ ಸ್ಥಿತಿ-ಗತಿಗಳ ಬಗ್ಗೆ ಅಧಿಕಾರಿ ವರ್ಗದವರಿಂದ ಮಾಹಿತಿ ಪಡೆದಿರುವ ಶಾಸಕ ಪುಟ್ಟರಾಜು, ಸೋಂಕು ನಿಯಂತ್ರಣಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ತಾಲೂಕು ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಗ್ರಾಮದಲ್ಲಿ ಸೋಂಕು ನಿವಾರಕ ದ್ರಾವಣವನ್ನು ಸಿಂಪಡಣೆ ಮಾಡಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!