20 ಡಾಂಬರೀಕರಣ ಮಾಡದ ಹಿನ್ನೆಲೆಯಲ್ಲಿ ಗ್ರಾಮಸ್ಥರ ಪ್ರತಿಭಟನೆ
ರಸ್ತೆ ಗುಂಡಿ ಮುಚ್ಚುವುದು ಬೇಡ, ಇಡೀ ರಸ್ತೆಗೆ ಡಾಂಬರೀಕರಣ ಮಾಡಿ
ಗ್ರಾಮ ಪಂಚಾಯಿತಿಗೆ ಲಕ್ಷಾಂತರ ರೂ. ಆದಾಯ ತಂದುಕೊಡುವ ಹೋಂಸ್ಟೇಗಳಿರುವ ಗ್ರಾಮ
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಫೆ.08): ಅದು ವಿಧಾನಸಭಾ ಮಾಜಿ ಅಧ್ಯಕ್ಷರ ಊರಿಗೆ ಸಂಪರ್ಕ ಕಲ್ಪಿಸುವ ರಸ್ತೆ. ಆದರೆ ಆ ರಸ್ತೆಯೇ 20 ವರ್ಷಗಳಿಂದ ಡಾಂಬರು ಕಂಡಿಲ್ಲ. ರಸ್ತೆ ಎಷ್ಟೇ ಕಿತ್ತು ಹೋದರೂ ಗುಂಡಿಮುಚ್ಚಿ ತೇಪೆ ಹಾಕುವ ಕೆಲಸ ಮಾಡಲಾಗುತ್ತಿದೆಯೇ ವಿನಃ ಹೊಸದಾಗಿ ರಸ್ತೆಯನ್ನಂತು ಮಾಡಿಲ್ಲ.
ಕಳೆದ 20 ವರ್ಷಗಳ ಹಿಂದೆ ಮಾಡಿದ್ದ ರಸ್ತೆಗೆ ಇಂದಿಗೂ ಡಾಂಬಾರು ಕಾಣದೆ ಕೇವಲ ತೇಪೆ ಹಾಕುತ್ತಿದ್ದು, ವಾಹನಗಳು ಓಡಾಡದಂತ ಸ್ಥಿತಿ ನಿರ್ಮಾಣವಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸಿ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದ ಘಟನೆ ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಗಾಳಿಬೀಡಿನಲ್ಲಿ ನಡೆದಿದೆ. ರಸ್ತೆ ಗುಂಡಿ ಬಿದ್ದು ಹಾಳಾಗಿದ್ದರೂ ಇದೀಗ ಮತ್ತೆ ರಸ್ತೆ ಡಾಂಬರೀಕರಣ ಮಾಡುವ ಬದಲು ತೇಪೆ ಹಾಕಲು ಮುಂದಾಗಿರುವ ಕಾಮಗಾರಿ ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
undefined
Kodagu: ಕಾಡು ದಾಟಿ ರಸ್ತೆಗೆ ಬರುವುದನ್ನು ಪತ್ತೆಹಚ್ಚಲು ರೆಡಿಯಾಯ್ತು ಆನೆ ಕ್ರಾಸಿಂಗ್ ಸಿಗ್ನಲ್
ಗುಂಡಿಮಯ ಕಿರಿದಾದ ರಸ್ತೆ: ಮಡಿಕೇರಿಯಿಂದ ಕೇವಲ 5 ಕಿಲೋ ಮೀಟರ್ ದೂರದಲ್ಲಿರುವ ಗಾಳಿಬೀಡು ಗ್ರಾಮಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದೆ. ರಸ್ತೆಯಲ್ಲಿ ಗುಂಡಿಗಳೇ ಇದ್ದು, ವಾಹನ ಚಲಾಯಿಸುವುದು ತೀವ್ರ ಕಷ್ಟಕರವಾಗಿದೆ. ಗುಂಡಿಮಯವಾಗಿರುವ ಮತ್ತು ಕಿರಿದಾದ ರಸ್ತೆಯಲ್ಲಿ ಸಂಚಾರವೇ ದುಸ್ತರವಾಗಿದೆ. ಒಂದೆಡೆ ರಸ್ತೆ ಗುಂಡಿಮಯವಾಗಿದ್ದರೆ ಮತ್ತೊಂದೆಡೆ ಒಂದು ವಾಹನ ಹೋಗುತ್ತಿದ್ದರೆ ಮತ್ತೊಂದು ವಾಹನ ಬಂತೆಂದರೆ ಸೈಡ್ ಕೊಡಲು ಸಾಧ್ಯವಾಗದೆ ಪರದಾಡಬೇಕು. ಹೀಗಾಗಿ ರಸ್ತೆ ಅಗಲೀಕರಣ ಮಾಡಿ ಹೊಸದಾಗಿ ಡಾಂಬಾರು ಹಾಕುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಆದರೆ, ಸರ್ಕಾರ ಅದ್ಯಾವುದನ್ನೂ ಮಾಡದೆ ಕೇವಲ ರಸ್ತೆಗೆ ತೇಪೆ ಹಚ್ಚುವ ಕಾರ್ಯ ಮಾಡುತ್ತಿದೆ. ಇದನ್ನ ತಡೆದ ಗ್ರಾಮಸ್ಥರು ಹೊಸ ರಸ್ತೆ ನಿರ್ಮಿಸಿಕೊಡಬೇಕು ಅಂತ ಆಗ್ರಹಿಸಿ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ನಡೆಸಿದ್ದಾರೆ.
ಶಾಸಕ ಕೆ.ಜಿ. ಬೋಪಯ್ಯ ಅವರ ಗ್ರಾಮ: ಈ ಗ್ರಾಮದಲ್ಲಿ ಹೋಂಸ್ಟೇ ರೆಸಾರ್ಟ್ಗಳು ಹೆಚ್ಚು ಇದ್ದು, ಪಂಚಾಯ್ತಿಗೆ ಅಧಿಕ ಆದಾಯ ಬರುತ್ತಿದೆ. ಅಲ್ಲದೆ ವಿರಾಜಪೇಟೆ ಶಾಸಕ ಕೆ ಜಿ ಬೋಪಯ್ಯ ಅವರ ಮನೆಗೆ ಕೂಡ ಇದೇ ರಸ್ತೆಯಲ್ಲಿ ಹೋಗಬೇಕು. ಜೊತೆಗೆ ನವೋದಯ ಶಾಲೆ ಹಾಗೂ ಪ್ರಸಿದ್ಧ ಪ್ರವಾಸಿ ತಾಣ ಮಾಂದಲ್ಪಟ್ಟಿಗೆ ಕೂಡ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಹೀಗಿದ್ದರೂ ಕಳೆದ 20 ವರ್ಷಗಳಿಂದ ರಸ್ತೆಗೆ ತೇಪೆ ಹಚ್ಚಲಾಗುತ್ತಿದೆ. ತೇಪೆ ಹಚ್ಚುವ ಬದಲು ರಸ್ತೆ ಅಗಲೀಕರಣ ಮಾಡಿ ಸಂಪೂರ್ಣ ಡಾಂಬರೀಕರಣ ಮಾಡಬೇಕು ಅಂತ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಇಲ್ಲವಾದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸುವುದಾಗಿಯೂ ಗಾಳಿಬೀಡು ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.
ಕೊಡಗು ಜಿಲ್ಲಾ ಮಟ್ಟದ ವ್ಯಾಪಾರ ಮೇಳದಲ್ಲಿ ಮಹಿಳೆಯರ ಝಲಕ್
ಐದು ನಿಮಿಷದ ದಾರಿಗೆ 30 ನಿಮಿಷ ಪ್ರಯಾಣ: ಈ ಕುರಿತು ಮಾತನಾಡಿದ ಗ್ರಾಮಸ್ಥರಾದ ಮಂಜುಳ ಅವರು ನಿತ್ಯ ನಾವು ಇದೇ ರಸ್ತೆಯಲ್ಲಿ ಓಡಾಡಬೇಕಾಗಿದ್ದು, 10 ನಿಮಿಷದ ಪ್ರಯಾಣ ಮಾಡಬೇಕಾಗಿರುವ ರಸ್ತೆಯಲ್ಲಿ 30 ನಿಮಿಷ ಪ್ರಯಾಣಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ವಾಹನಗಳು ಕೂಡ ಹಾಳಾಗುತ್ತಿವೆ. ಇದನ್ನು ಯಾರಿಗೆ ಹೇಳಿದರು ಅರ್ಥವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಮಸ್ಥರಾದ ಮೋಹನ್ ಎಂಬುವರು ಮಾತನಾಡಿ ಗಾಳಿಬೀಡು, ಒಣಚಲು, ಮಾಂದಲ್ ಪಟ್ಟಿ ಸೇರಿದಂತೆ ಹತ್ತಾರು ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ಲೋಕೋಪಯೋಗಿ ಇಲಾಖೆ ರಸ್ತೆ ಇದಾಗಿದ್ದು ನಿತ್ಯ ನೂರಾರು ಜನರು ಈ ರಸ್ತೆಯನ್ನು ಅವಲಂಬಿಸಿದ್ದಾರೆ.
ಆಸ್ಪತ್ರೆಗೆ ಹೋಗುವುದೇ ದೊಡ್ಡ ಸವಾಲು: ಯಾರಿಗಾದರೂ ಆರೋಗ್ಯ ಹದಗೆಟ್ಟಿತ್ತೆಂದರೆ ಆಸ್ಪತ್ರೆಗೆ ಕರೆದೊಯ್ಯುವುದಕ್ಕೂ ಕಷ್ಟಪಡಬೇಕಾಗಿದೆ. ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯಲ್ಲಿ ಹತ್ತಾರು ಹೋಂಸ್ಟೇ, ರೆಸಾರ್ಟ್ ಗಳಿದ್ದು ಸರ್ಕಾರಕ್ಕೆ ಸಾಕಷ್ಟು ಆದಾಯ ತಂದುಕೊಡುತ್ತಿವೆ. ಆದರೂ ರಸ್ತೆ ಡಾಂಬರೀಕರಣ ಮಾಡುವುದಕ್ಕೆ ಬದಲಾಗಿ 20 ವರ್ಷಗಳಿಂದಲೂ ಕೇವಲ ಗುಂಡಿಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಈಗಲೂ ಗುಂಡಿ ಮುಚ್ಚಲು ಸಿದ್ಧ ಮಾಡಲಾಗುತ್ತಿದೆ. ರಸ್ತೆ ಅಗಲೀಕರಣದ ಜೊತೆಗೆ ಮರುಡಾಂಬರೀಕರಣ ಮಾಡದಿದ್ದರೆ ಈ ಬಾರಿಯ ಮತದಾನವನ್ನೇ ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.