Madikeri: ಎಚ್ ವಿಶ್ವನಾಥ್ ಗೆ ತಲೆಕೆಟ್ಟಿರಬೇಕು, ಶಾಸಕ ಕೆ ಜಿ ಬೋಪಯ್ಯ ಆಕ್ರೋಶ

By Suvarna NewsFirst Published Dec 18, 2022, 6:48 PM IST
Highlights

ಮಂಗಳೂರು ಬಾಂಬ್ ಸ್ಫೋಟದ ಬಗ್ಗೆ ಡಿಕೆಶಿ ನೀಡಿರುವ ಹೇಳಿಕೆಯನ್ನು  ಸಮರ್ಥಿಸಿಕೊಂಡಿರುವ ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್ ಅವರಿಗೆ ತಲೆಕೆಟ್ಟಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಖಾರವಾಗಿ ತಿರುಗೇಟು ನೀಡಿದ್ದಾರೆ.

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಡಿ.18): ವೋಟರ್ ಐಡಿ ಪ್ರಕರಣವನ್ನು ಮುಚ್ಚಿ ಹಾಕಲು ಮಂಗಳೂರಿನಲ್ಲಿ ಶಾರಿಕ್ ಕುಕ್ಕರ್ ಬಾಂಬ್ ಸ್ಪೋಟಿಸಿದ ಪ್ರಕರಣವನ್ನು ಬಿಜೆಪಿ ಬಳಸಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿರುವುದರನ್ನು ಸಮರ್ಥಿಸಿಕೊಂಡಿರುವ ಬಿಜೆಪಿ ಎಂಎಲ್ಸಿ ಹೆಚ್ ವಿಶ್ವನಾಥ್ ಅವರಿಗೆ ತಲೆಕೆಟ್ಟಿದೆ ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಖಾರವಾಗಿ ತಿರುಗೇಟು ನೀಡಿದ್ದಾರೆ. ಮಡಿಕೇರಿಯ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಮಾಜಿ ಸೈನಿಕರ ಸಂಘದಿಂದ ಭಾನುವಾರ ನಡೆದ ಕ್ರೀಡಾಕೂಟ, ಆರೋಗ್ಯ ತಪಾಸಣೆ ಮತ್ತು ಬೃಹತ್ ಸಮಾವೇಶದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಕೆ.ಜಿ. ಬೋಪಯ್ಯ ಅವರು ಮಾತನಾಡಿದರು. ಯಾವುದೋ ಕಾರಣಕ್ಕೆ ತಲೆಕೆಟ್ಟವರಿಗೆ ಕರುಣೆ ತೋರಿಸಿ ಚಿಕಿತ್ಸೆ ಕೊಡಿಸಿ ಸರಿ ಮಾಡಬಹುದು. ಆದರೆ ತಲೆ ಕೆಡದಿದ್ದರೂ ಪೂರ್ತಿ ತಲೆಕೆಟ್ಟವರಂತೆ ನಡೆದುಕೊಳ್ಳುವವರಿಗೆ ಏನು ಮಾಡಲು ಸಾಧ್ಯವಿಲ್ಲ. ಈ ತಲೆಕೆಟ್ಟವರ ಬಗ್ಗೆ ಏನು ಮಾತನಾಡುವುದು ಎಂದು ಅಸಮಾಧಾನ ವ್ಯಕ್ತಪಡಿಸಿದರು.ಇಂತಹ ತಲೆ ಕೆಟ್ಟವರನ್ನು ನೆಗ್ಲೆಟ್ ಮಾಡುವುದೇ ಒಳ್ಳೆಯದು. ಅಂತಹ ತಲೆಕೆಟ್ಟ ವ್ಯಕ್ತಿತ್ವವನ್ನು ಎಂಎಲ್ಸಿ ವಿಶ್ವನಾಥ್ ಅವರು ಹೊಂದಿದ್ದಾರೆ ಎಂದು ಬೋಪಯ್ಯ ಆಕ್ರೋಶ ವ್ಯಕ್ತಪಡಿಸಿದರು.

ವಿಶ್ವನಾಥ್ ಅವರು ಲೋಕಸಭಾ ಸದಸ್ಯರಾಗಿದ್ದರು, ಅಷ್ಟೇ ಅಲ್ಲ ಸಚಿವರೂ ಆಗಿದ್ದವರು. ಎಲ್ಲವನ್ನು ಬಿಜೆಪಿಯಲ್ಲಿ ಅನುಭವಿಸಿ ಈಗ ಬಿಜೆಪಿ ವಿರುದ್ಧವೇ ಕೆಟ್ಟದ್ದಾಗಿ ಮಾತನಾಡುತ್ತಾರೆ. ಸ್ವಲ್ಪವೂ ಕೃತಜ್ಞತೆ ಇಲ್ಲದ  ಕೃತಘ್ನರಾಗಿದ್ದಾರೆ. ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಯಾವಾಗಲೂ ಒಂದು ಮಾತು ಹೇಳುತ್ತಿರುತ್ತಾರೆ. ಮೆದುಳಿಗೂ ನಾಲಿಗೆಗೂ ಲಿಂಕ್ ತಪ್ಪಿದೆ ಎಂದು ಹೇಳುತ್ತಿರುತ್ತಾರೆ. ಅದೇ ರೀತಿ ವಿಶ್ವನಾಥ್ ಅವರ ನಾಲಿಗೆ ಮತ್ತು ಮೆದುಳಿಗೆ ಲಿಂಕ್ ತಪ್ಪಿದೆ. ಹೀಗಾಗಿಯೇ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ ಎಂದಿದ್ದಾರೆ.

Mangaluru Auto Blast: ಮಂಗಳೂರು ಬ್ಲಾಸ್ಟ್ ಪ್ರಕರಣ: ಬೆಂಗಳೂರಿಗೆ ಉಗ್ರ ಶಾರೀಕ್‌ ಶಿಫ್ಟ್‌

ಎಚ್. ವಿಶ್ವನಾಥ್ ಅವರು ಮತ್ತೆ ಕಾಂಗ್ರೆಸ್ ಹೋಗುವ ಸಾಧ್ಯತೆ ಇದ್ದು, ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕೆ.ಜಿ. ಬೋಪಯ್ಯ ಅವರು ವಿಶ್ವನಾಥ್ ಯಾವ ಪಕ್ಷಕ್ಕೆ ಹೋದರೂ ಇದೇ ರೀತಿ ಮಾತನಾಡುತ್ತಾರೆ. ಅವರದು ಎಲ್ಲೆಡೆಯೂ ಇದೇ ಸಮಸ್ಯೆ, ಇದೇ ರೀತಿ ಮಾತನಾಡುತ್ತಾರೆ. ಅವರು ಬೇರೆ ಪಕ್ಷಕ್ಕೆ ಹೋಗುತ್ತಿರುವ ಬಗ್ಗೆ ಪಕ್ಷದ ರಾಜ್ಯ ನಾಯಕರು ನಿರ್ಧಾರ ಮಾಡಬೇಕು ಎಂದರು.

Grama Vastavya: ಡಿ.ಕೆ.ಶಿವಕುಮಾರ್‌ಗೆ ಅಮಾಯಕ ನೋಬೆಲ್‌ ಪ್ರಶಸ್ತಿ ನೀಡಬೇಕು: ಆರ್. ಅಶೋಕ್‌ ವ್ಯಂಗ್ಯ

ಇನ್ನು ಚುನಾವಣಾ ಆಯೋಗ ಎಂಎಲ್ಎ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬ 28 ಲಕ್ಷ ವೆಚ್ಚ ಮಾಡುವುದಕ್ಕೆ ಅವಕಾಶ ನೀಡಿದೆ. ಆದರೆ ನಮ್ಮ ಪಕ್ಷದ ಮುಖಂಡರಾದ ಶ್ರೀನಿವಾಸ್ ಪ್ರಸಾದ್ ಅವರು ವಿಶ್ವನಾಥ್ ಅವರಿಗೆ ಚುನಾವಣೆ ಎದುರಿಸಲು ಬಿಜೆಪಿ ಪಕ್ಷದಿಂದ 15 ಕೋಟಿ ನೀಡಲಾಗಿತ್ತು. ಅದರಲ್ಲಿ 5 ಕೋಟಿ ವೆಚ್ಚ ಮಾಡಿ ಉಳಿದ 10 ಕೋಟಿಯನ್ನು ಜೇಬಿಗೆ ಇಟ್ಟುಕೊಂಡು ಎಂಬುದಾಗಿ ಹೇಳಿರುವ ಬಗ್ಗೆ ಪ್ರತಿಕ್ರಿಯಿಸಿದ ಕೆ.ಜಿ. ಬೋಪಯ್ಯ, ವಿಶ್ವನಾಥ್ ಅವರು ಹಿರಿಯರಿದ್ದಾರೆ, ಸಾಕಷ್ಟು ಅನುಭವಿ. ಯಾವುದೇ ವಿಷಯ ಬಂದಾಗ ಅವರು ಹೇಗೆ ಬೇಕೋ ಆ ರೀತಿ ಮಾತನಾಡುವುದಿಲ್ಲ. ಅವರು ಮಾತನಾಡುವಾಗ ತೂಕದ, ಘನತೆಯ ಮಾತನಾಡುತಾರೆ. ಅವರು ಯಾವುದೇ ವಿಷಯವನ್ನು ಹಾಗೆ ಸುಮ್ಮನೇ ಮಾತನಾಡುವುದಿಲ್ಲ. ಆದರೆ ಯಾವ ಕಾರಣಕ್ಕೆ ಹೀಗೆ ಮಾತನಾಡಿದ್ದಾರೆ ಎನ್ನುವುದು ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು. ಒಟ್ಟಿನಲ್ಲಿ ಇಷ್ಟು ದಿನ ಬಿಜೆಪಿಯಲ್ಲಿಯೇ ಇದ್ದುಕೊಂಡು ಇದೀಗ ಬಿಜೆಪಿ ವಿರುದ್ಧವೇ ಮಾತನಾಡುತ್ತಿರುವ ಎಚ್ ವಿಶ್ವನಾಥ್ ಅವರಿಗೆ ಬೋಪಯ್ಯ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

click me!