ವಾರಾಹಿ ಎಡದಂಡೆ ಕಾಮಗಾರಿ ವ್ಯಾಪ್ತಿಯ ಸಮಸ್ಯೆಗಳನ್ನು ತಕ್ಷಣ ಬಗೆಹರಿಸಿ: ಉಡುಪಿ ಡಿಸಿ ಕೂರ್ಮಾರಾವ್

By Suvarna NewsFirst Published Dec 18, 2022, 6:30 PM IST
Highlights

ಹಾರ್ದಳ್ಳಿ-ಮಂಡಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಹಾದು ಹೋಗಿರುವ ವಾರಾಹಿ ಎಡದಂಡೆ ಕಾಮಗಾರಿಯಿಂದ ಸ್ಥಳೀಯರಿಗೆ ಸಂಪರ್ಕ ರಸ್ತೆ ಸಮಸ್ಯೆ ಸೇರಿದಂತೆ ಮತ್ತಿತರ ಸಮಸ್ಯೆಗಳ ಬಗ್ಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು.

ವರದಿ: ಶಶಿಧರ್ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣನ್ಯೂಸ್

ಉಡುಪಿ (ಡಿ.18): ಹಾರ್ದಳ್ಳಿ-ಮಂಡಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಹಾದು ಹೋಗಿರುವ ವಾರಾಹಿ ಎಡದಂಡೆ ಕಾಮಗಾರಿಯಿಂದ ಸ್ಥಳೀಯರಿಗೆ ಸಂಪರ್ಕ ರಸ್ತೆ ಸಮಸ್ಯೆ ಸೇರಿದಂತೆ ಮತ್ತಿತರ ಸಮಸ್ಯೆಗಳ ಬಗ್ಗೆ ತಕ್ಷಣವೇ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸೂಚನೆ ನೀಡಿದರು. ಬಿದ್ಕಲ್‌ಕಟ್ಟೆಯ ಕೆ.ಪಿ.ಎಸ್. ಶಾಲೆಯಲ್ಲಿ ನಡೆದ ಹಾರ್ದಳ್ಳಿ-ಮಂಡಳ್ಳಿ ಗ್ರಾಮ ವ್ಯಾಪ್ತಿಯ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ವಾರಾಹಿ ಎಡದಂಡೆ ಕಾಮಗಾರಿಯ ಕಾರಣ ಗ್ರಾಮದಲ್ಲಿ ಹಲವೆಡೆ ಸಂಪರ್ಕ ರಸ್ತೆಗಳ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ವಾರಾಹಿ ಇಂಜಿನಿಯರ್‌ಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.

ಸಭೆಯಲ್ಲಿ ಉಪಸ್ಥಿತರಿದ್ದ ವಾರಾಹಿಯ ಕಿರಿಯ ಇಂಜಿನಿಯರ್ ಬಳಿ ಈ ಬಗ್ಗೆ ವಿವರ ಕೇಳಿದ ಜಿಲ್ಲಾಧಿಕಾರಿಗಳು, ತಾವು ಇಡೀ ದಿನ ಇದೇ ಗ್ರಾಮದಲ್ಲಿ ವಾಸ್ಯವ್ಯ ಇರಲಿದ್ದು, ಸ್ಥಳಕ್ಕೆ ವಾರಾಹಿಯ ಹಿರಿಯ ಇಂಜಿನಿಯರ್ ಸಂಬಂದಪಟ್ಟ ದಾಖಲೆಗಳೊಂದಿಗೆ ಕೂಡಲೇ ಹಾಜರಾಗುವಂತೆ ಹಾಗೂ ಈ ಸಮಸ್ಯೆಗಳ ಬಗ್ಗೆ ತಕ್ಷಣದಲ್ಲಿಯೇ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. 

ವಾರಾಹಿ ಎಡದಂಡೆ ಕಾಮಗಾರಿಗೆ ಭೂಮಿ ನೀಡಿರುವ ಸಾರ್ವಜನಿಕರ ಕಂದಾಯ ದಾಖಲೆಗಳಲ್ಲಿನ ಸಮಸ್ಯೆಗಳ ಬಗ್ಗೆ ಮನವಿ ಆಲಿಸಿದ ಜಿಲ್ಲಾಧಿಕಾರಿಗಳು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕುಂದಾಪುರ ಉಪ ವಿಭಾಗಾಧಿಕಾರಿಗಳು ಹಾಗೂ ತಹಸೀಲ್ದಾರ್‌ಗೆ ಸೂಚಿಸಿದರು.
ಕಂದಾಯ ದಾಖಲೆಗಳ ಯಾವುದೇ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಸಂಬಂದಪಟ್ಟ ದಾಖಲೆಗಳೊಂದಿಗೆ ಸೋಮವಾರ ತಮ್ಮ ಕಚೇರಿಗೆ ಬಂದು ಸರಿಪಡಿಸಿಕೊಳ್ಳುವಂತೆ ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ತಿಳಿಸಿದರು.    

ಸಾರ್ವಜನಿಕರ ಅನುಕೂಲಕ್ಕಾಗಿ ಗ್ರಾಮಗಳಲ್ಲಿ ಗ್ರಾಮ ಒನ್ ಸೆಂಟರ್‌ಗಳನ್ನು ತೆರೆಯಲಾಗಿದ್ದು, ಇದರಿಂದಾಗಿ ತಾಲೂಕು ಮತ್ತು ಜಿಲ್ಲಾ ಕಚೇರಿಯಲ್ಲಿ ದೊರೆಯುವ ವಿವಿಧ ಇಲಾಖೆಗಳ ಹಲವು ದಾಖಲೆ ಹಾಗೂ ಸೌಲಭ್ಯಗಳನ್ನು ಸಾರ್ವಜನಿಕರು ಗ್ರಾಮದಲ್ಲಿಯೇ ಪಡೆಯಬಹುದಾಗಿದೆ. ಆಯುಷ್ಮಾನ್ ಕಾರ್ಡ್ ಯೋಜನೆಯ ಮೂಲಕ ಆರೋಗ್ಯ ಸಮಸ್ಯೆಗಳಿಗೆ ಬಿಪಿಎಲ್ ಕಾರ್ಡ್ಗೆ 5 ಲಕ್ಷ ಮತ್ತು ಎಪಿಲ್ ಗೆ 1.5 ಲಕ್ಷ ರೂ ವರೆಗೆ ನೊಂದಾಯಿತ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಲು ಸಾಧ್ಯವಿದ್ದು, ಸಾರ್ವಜನಿಕರು ಇವುಗಳ ಪ್ರಯೋಜನ ಪಡೆಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಸಾರ್ವಜನಿಕರಿಗೆ ವಿವಿಧ ಇಲಾಖೆಯ ಸವಲತ್ತುಗಳನ್ನು ವಿತರಿಸಿದರು.

ಗ್ರಾಮದಲ್ಲಿನ ಬೀದಿದೀಪ, ರಸ್ತೆ ನಿರ್ಮಾಣ ಮತ್ತು ದುರಸ್ಥಿ, ಅಪಾಯಕಾರಿ ವಿದ್ಯುತ್ ತಂತಿ ಬದಲಾವಣೆ, 94ಸಿ ಸಮಸ್ಯೆ ಸೇರಿದಂತೆ 20 ಕ್ಕೂ ಅಧಿಕ ಅರ್ಜಿಗಳ ವಿಚಾರಣೆ ಮತ್ತು ವಿಲೇವಾರಿ ನಡೆಯಿತು. ಕಾರ್ಯಕ್ರಮದಲ್ಲಿ ಇಲಾಖಾ ಮಾಹಿತಿಗಳ ಬಗ್ಗೆ ತಿಳಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆಂಪೇಗೌಡ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯಲ್ಲಿ 1.45 ಲಕ್ಷ ರೈತರು ನೊಂದಣಿ ಮಾಡಿದ್ದು, 1.12 ಲಕ್ಷ ರೈತರು ಮಾತ್ರ ಕೆವೈಸಿ ಪೂರ್ಣಗೊಳಿಸಿದ್ದು, ಯೋಜನೆಯ ಮುಂದಿನ ಕಂತಿನ ಹಣ ಪಡೆಯಲು ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಬಾಕಿ ಉಳಿದ ರೈತರು ಕೂಡಲೇ ಕೆವೈಸಿ ಮಾಡಿಸಬೇಕು. ಇಲ್ಲವಾದಲ್ಲಿ ಖಾತೆಗೆ ಹಣ ಜಮೆ ಆಗುವುದಿಲ್ಲ ಎಂದರು.  ರೈತರು ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸೌಲಭ್ಯ ಪಡೆಯಲು ಫ್ರೂಟ್ಸ್ ತಂತ್ರಾಂಶದಲ್ಲಿ ನೊಂದಣಿ ಮಾಡಿಸಿದಲ್ಲಿ ಸುಲಭವಾಗಿ ಸೌಲಭ್ಯ ಪಡೆಯಬಹುದಾಗಿದ್ದು, ಜಿಲ್ಲೆಯ 2.9 ಲಕ್ಷ ರೈತರಲ್ಲಿ ಇದುವರೆಗೆ 1.65 ಲಕ್ಷ ಮಂದಿ ನೊಂದಣಿ ಮಾಡಿಸಿದ್ದಾರೆ ಎಂದರು.

ವಿದ್ಯಾರ್ಥಿಗಳ ಪ್ರವಾಸ- ಶಬರಿಮಲೆ ಯಾತ್ರೆ , ಉಡುಪಿ ಜಿಲ್ಲೆಯಾದ್ಯಂತ ಪ್ರವಾಸಿಗರ ದಂಡು

1-15 ವರ್ಷದ ಮಕ್ಕಳಿಗೆ ಮೆದುಳು ಜ್ವರ ಲಸಿಕೆಯನ್ನು ಕೊಡಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ, ತೆಂಗಿನ ಮರ ಹತ್ತುವ ಕಾರ್ಮಿಕರಿಗೆ ತೋಟಗಾರಿಕೆ ಇಲಾಖೆ ವತಿಯಿಂದ ವಿಮೆ ಸೌಲಭ್ಯ, ಹನಿ ನೀರಾವರಿ ಅಳವಡಿಕೆಗೆ ಸಬ್ಸಿಡಿ ಸೌಲಭ್ಯವಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಜಾನುವಾರುಗಳಿಗೆ ಚರ್ಮ ಗಂಟು ಖಾಯಿಲೆಗೆ ಲಸಿಕೆ ನೀಡಲು ಬಂದಾಗ ಅಗತ್ಯ ಸಹಕಾರ ನೀಡುವಂತೆ ಪಶುಪಾಲನೆ ಇಲಾಖೆ ಉಪ ನಿರ್ದೇಶಕ ಡಾ.ಶಂಕರ್ ಶೆಟ್ಟಿ ತಿಳಿಸಿದರು.

LOVE JIHAD: ಲವ್ ಜಿಹಾದ್ ತಡೆಗೆ ವಿಶೇಷ ಪೊಲೀಸ್ ದಳ ಸ್ಥಾಪನೆ ಆಂದೋಲನ

ಕಾರ್ಯಕ್ರಮದಲ್ಲಿ 18 ಮಂದಿಗೆ 94 ಸಿ ಹಕ್ಕುಪತ್ರ ಹಾಗೂ 26 ಜನರಿಗೆ ಪಿಂಚಣಿ ಪತ್ರಗಳನ್ನು ವಿತರಿಸಲಾಯಿತು. ಹಾರ್ದಳ್ಳಿ-ಮಂಡಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಶೆಟ್ಟಿ, ಉಪಾಧ್ಯಕ್ಷೆ ರೇಖಾ ಮೊಗವೀರ, ಭೂ ದಾಖಲೆಗಳ ಉಪನಿರ್ದೇಶಕ ರವೀಂದ್ರ, ಕಾರ್ಮಿಕ ಅಧಿಕಾರಿ ಕುಮಾರ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಮೊಹಮದ್ ಇಸಾಕ್, ಕುಂದಾಪುರ ತಹಸೀಲ್ದಾರ್ ಕಿರಣ್ ಗೌರಯ್ಯ ಹಾಗೂ ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

click me!