ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಕೆಂಡಾಮಂಡಲವಾಗಿದ್ದು ಅಧಿಕಾರಿಗಳ ವಿರುದ್ಧ ಫುಲ್ ಗರಂ ಆಗಿದ್ದಾರೆ. ಮಾತಿಗೆ ತಪ್ಪಿದ ಅಧಿಕಾರಗಳನ್ನು ತರಾಟೆfಎ ತೆಗೆದುಕೊಂಡಿದ್ದಾರೆ.
ಸಾಗರ (ಮಾ.02): ತಾಲೂಕಿನ ಕಟ್ಟಿನಕಾರು ಮಾರ್ಗಕ್ಕೆ ಸೋಮವಾರದಿಂದ ಸರ್ಕಾರಿ ಬಸ್ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದರೂ, ಅದನ್ನು ಕಾರ್ಯಗತಗೊಳಿಸದ ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಮೇಲೆ ಶಾಸಕ ಎಚ್.ಹಾಲಪ್ಪ ಕೆಂಡಾಮಂಡಲವಾದ ಘಟನೆ ಸೋಮವಾರ ನಡೆಯಿತು.
ಶಾಲೆ- ಕಾಲೇಜುಗಳು ಪ್ರಾರಂಭಗೊಂಡ ಹಿನ್ನೆಲೆ ವಿದ್ಯಾರ್ಥಿಗಳು ಭಾರಂಗಿ ಹೋಬಳಿಯ ಕಟ್ಟಿನಕಾರು ಭಾಗಕ್ಕೆ ಸರ್ಕಾರಿ ಬಸ್ ಸೌಲಭ್ಯ ಒದಗಿಸುವಂತೆ ಶಾಸಕರಿಗೆ ಮನವಿ ಮಾಡಿದ್ದರು. ವಿದ್ಯಾರ್ಥಿಗಳ ಮನವಿ ಪುರಸ್ಕರಿಸಿದ ಶಾಸಕರು ಈಚೆಗೆ ಕೆಎಸ್‌ಆರ್‌ಟಿಸಿ ಮತ್ತು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಭೆ ಕರೆದು ಅವರ ಅಭಿಪ್ರಾಯದಂತೆ ಮಾ.1 ರಿಂದ ಕಟ್ಟಿನಕಾರು ಭಾಗಕ್ಕೆ ಬಸ್ ಸೌಲಭ್ಯ ಕಲ್ಪಿಸಲಾಗುತ್ತದೆ ಎಂದು ಸಭೆಗೆ ಮಾಹಿತಿ ನೀಡಿದ್ದರು.
ಸೋಮವಾರ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರಕ್ಕೆ ಚಾಲನೆ ನೀಡಲು ಬಂದಿದ್ದ ಶಾಸಕರು ಕೆಎಸ್‌ಆರ್‌ಟಿಸಿ ಡಿಪೋ ಮ್ಯಾನೇಜರ್ ಬಳಿ ಕಟ್ಟಿನಕಾರು ಮಾರ್ಗಕ್ಕೆ ಬಸ್ ಸಂಚಾರ ಪ್ರಾರಂಭವಾಗಿದೆಯಾ ಎಂದು ಪ್ರಶ್ನಿಸಿದರು. ಆಗ ಮಾರ್ಗ ಸಮೀಕ್ಷೆ ನಡೆಯುತ್ತಿದ್ದು ಮಾ. 10ರ ನಂತರ ಬಸ್ ಸಂಚಾರ ಪ್ರಾರಂಭಿಸಲಾಗುತ್ತದೆ ಎಂದು ತಿಳಿಸಿದರು. ಇದರಿಂದ ಆಕ್ರೋಶಗೊಂಡ ಹಾಲಪ್ಪ ಅವರು ಸ್ಥಳದಲ್ಲಿಯೆ ಕೆಎಸ್‌ಆರ್‌ಟಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು, ಅನಂತರ ಕೆಎಸ್‌ಆರ್‌ಟಿಸಿ ಡಿಪೋಗೆ ತೆರಳಿದರು.
ಕೆಎಸ್ಸಾರ್ಟಿಸಿ ಚಾಲಕರಿಗೆ ಇಲ್ಲಿಗೆ ಭರ್ಜರಿ ಗುಡ್ ನ್ಯೂಸ್
ಅಲ್ಲಿ ಸಾರಿಗೆ ಸಚಿವ ಲಕ್ಷ್ಮಣ್ ಸವದಿ, ಕೆಎಸ್‌ಆರ್‌ಟಿಸಿ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಮಾತು ತಪ್ಪಿ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿರುವ ಡಿಪೋ ಮ್ಯಾನೇಜರ್ ರಾಜಪ್ಪ ಅವರನ್ನು ಇಲ್ಲಿಂದ ವರ್ಗಾವಣೆ ಮಾಡಬೇಕು ಮತ್ತು ತಕ್ಷಣದಿಂದಲೇ ಕಟ್ಟಿನಕಾರು ಮಾರ್ಗಕ್ಕೆ ಬಸ್ ಸೌಲಭ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಧರಣಿ ನಡೆಸುವ ಎಚ್ಚರಿಕೆ ನೀಡಿದರು.
ಹಿರಿಯ ಅಧಿಕಾರಿಗಳ ಸೂಚನೆಯಂತೆ ಡಿಪೋ ಮ್ಯಾನೇಜರ್ ರಾಜಪ್ಪ ಅವರು ತಕ್ಷಣ ಸಾಗರ-ಕಟ್ಟಿನಕಾರು ಮಾರ್ಗಕ್ಕೆ ಬಸ್ ಸಂಚಾರವನ್ನು ಪ್ರಾರಂಭಿಸುವ ಮೂಲಕ ಶಾಸಕರನ್ನು ಸಮಾಧಾನಪಡಿಸುವ ಕೆಲಸ ಮಾಡಿದರು. ಆದರೂ ಶಾಸಕರು ಸಮಾಧಾನಗೊಂಡಂತೆ ಕಾಣಲಿಲ್ಲ.
ಸರ್ಕಾರಕ್ಕೆ ಕೆಟ್ಟಹೆಸರು ತರುವ ಪ್ರಯತ್ನ:
ಪತ್ರಕರ್ತರ ಜೊತೆ ಮಾತನಾಡಿದ ಶಾಸಕರು, ಮಾಚ್‌ರ್ 1ರಿಂದ ಕಟ್ಟಿನಕಾರು ಮಾರ್ಗಕ್ಕೆ ಸರ್ಕಾರಿ ಬಸ್ ಸಂಚಾರ ಪ್ರಾರಂಭವಾಗುತ್ತದೆ ಎಂದು ಎಲ್ಲ ಕಡೆ ಪ್ರಚಾರ ಮಾಡಲಾಗಿದೆ. ಆದರೆ, ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಈಗ ಸಬೂಬು ಹೇಳುತ್ತಿದ್ದಾರೆ. ಅಲ್ಲಿ ಮಕ್ಕಳು ಬಸ್ ಬಂದಿಲ್ಲ ಎಂದು ಫೋನ್ ಮಾಡುತ್ತಿದ್ದಾರೆ. ಈ ಅಧಿಕಾರಿಗಳು ಕೆಲವರು ಸರ್ಕಾರಕ್ಕೆ ಮತ್ತು ನನಗೆ ಕೆಟ್ಟಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಸಹಿಸಿಕೊಂಡು ಇರಲು ಸಾಧ್ಯವಿಲ್ಲ. ನಾವು ಸ್ಥಳಕ್ಕೆ ಬಂದ ಮೇಲೆ ಬಸ್ ಸಂಚಾರ ಪ್ರಾರಂಭ ಮಾಡಿದ್ದಾರೆ. ಈ ಕೆಲಸವನ್ನು ಮೊದಲೇ ಏಕೆ ಮಾಡಲಿಲ್ಲ ಎಂದು ಆಕ್ರೋಶದಿಂದ ಹೇಳಿದರು.