ಎಸಿ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದಾಗಲೇ ಕೊರೋನಾ ಬಂತು: ಶಾಸಕರ ಅನುಭವದ ಮಾತಿದು..!

By Kannadaprabha NewsFirst Published Aug 26, 2020, 10:27 AM IST
Highlights

ಕೊರೋನಾ ಗೆದ್ದ ಹಾಲಪ್ಪ ಆಚಾರ್‌| ಯಾರಿಗೂ ಕೊರೋನಾ ಬಾರ​ದಿ​ರಲಿ ಎಂದು ಪ್ರಾರ್ಥಿಸುವೆ| ಕೊಪ್ಪಳ ಜಿಲ್ಲೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್‌| ಹಗುರವಾಗಿ ಪರಿಗಣಿಸುವಂತೆ ಇಲ್ಲ| ಮುನ್ನೆಚ್ಚರಿಕೆ ವಹಿಸಬೇಕು| 

ಕೊಪ್ಪಳ(ಆ.26): ಅಬ್ಬಾ! ಅದೊಂದು ರೀತಿಯಲ್ಲಿ ಹಡೆದವ್ವ ಅನುಭವಿಸುವ ಯಾತನೆ. ಕೊರೋನಾ ಬಂದಾಗ ನಾಲ್ಕೈದು ದಿನ ಯಾರನ್ನು ಭೇಟಿಯಾಗದೆ ಆಸ್ಪತ್ರೆಯಲ್ಲಿ ಇರುವುದು ಸುಮ್ಮನೇ ಅಲ್ಲ. ಆದರೂ ಮುನ್ನೆಚ್ಚರಿಕೆಯನ್ನು ವಹಿಸಿ, ಅದು ಬಾರದಂತೆಯೇ ಎಚ್ಚರವಹಿಸುವುದು ಉತ್ತಮ. ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಪ್ಪ ಆಚಾರ್‌ ಅವರು ‘ಕನ್ನಡಪ್ರಭ’ ಎದುರು ತಮ್ಮ ಅನುಭವ ಬಿಚ್ಚಿಟ್ಟ ಪರಿ ಇದು.

‘ನಮ್ಮ ಕಾರು ಚಾಲ​ಕ​ನಿಗೆ ಕೊರೋನಾ ಪಾಸಿ​ಟಿವ್‌ ಬಂದಿತ್ತು. ಆದರೆ ಗೊತ್ತಾ​ಗುವ ಮುನ್ನವೇ ಬೆಂಗ​ಳೂ​ರಿ​ನಿಂದ ಕೊಪ್ಪ​ಳ​ವ​ರೆಗೂ ಎಸಿ ಕಾರಿ​ನಲ್ಲಿ ಬಂದಿ​ದ್ದ​ರಿಂದ ನನಗೂ ಕೊರೋನಾ ಪಾಸಿ​ಟಿವ್‌ ಆಯಿ​ತು. ಕೊರೋನಾ ಪಾಸಿಟಿವ್‌ ದೃಢಪಟ್ಟ ಮೇಲೆ ನಾಲ್ಕಾರು ದಿನ ಮನೆಯಲ್ಲಿಯೇ ವಿಶ್ರಾಂತಿ ಪಡೆದು, ಗುಣಮುಖವಾಗದೆ ಇದ್ದಾಗ ಬೆಂಗಳೂರಿನಲ್ಲಿ ಮಣಿಪಾಲ್‌ ಆಸ್ಪತ್ರೆಯಲ್ಲಿ ಐದು ದಿನಗಳ ಕಾಲ ಚಿಕಿತ್ಸೆ ಪಡೆದು, ಗುಣಮುಖವಾದೆ’ ಎಂದು ಅನುಭವ ಬಿಚ್ಚಿಟ್ಟರು.
ಇದಾದ ಮೇಲೆಯೂ ಒಟ್ಟು 21 ದಿನಗಳ ಕಾಲ ಐಸೋಲೇಶನ್‌ ಮುಗಿಸಿ ಎರಡು ಬಾರಿ ಕೊರೋನಾ ಚೆಕ್‌ ಮಾಡಿಸಿ, ನೆಗೆಟಿವ್‌ ಬಂದ ಮೇಲೆ ಈಗ ಮತ್ತೆ ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ.

ಗಂಗಾವತಿ: ಕೊರೋನಾ ಸೋಂಕಿಗೆ ಬಿಜೆಪಿ ಮುಖಂಡ ಬಲಿ

‘ಯಾರಿಗೂ ಕೊರೋನಾ ಬಾರದಿರಲಿ ಎಂದು ಕೇಳಿಕೊಳ್ಳುತ್ತೇನೆ. ಐದು ದಿನ ಆಸ್ಪತ್ರೆಯಲ್ಲಿ ಇದ್ದಾಗ ಪಕ್ಕದ ರೂಮಿನಲ್ಲಿಯೇ ಸಿದ್ದರಾಮಯ್ಯ ಹಾಗೂ ಮತ್ತೊಂದು ಸಾಲಿನ ಕೊಠಡಿಯಲ್ಲಿ ಯಡಿಯೂರಪ್ಪ ಅವರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಮಧ್ಯೆ ನಾನು ಅಲ್ಲಿಗೆ ದಾಖಲಾಗಿ ಐದು ದಿನಗಳ ಕಾಲ ಚಿಕಿತ್ಸೆ ಪಡೆದೆ. ನಾನು ಅಂಥ ಸಮಸ್ಯೆಯನ್ನು ಎದುರಿಸುತ್ತಿರಲಿಲ್ಲ. ಅಂತಹ ಗಂಭೀರ ಲಕ್ಷಣಗಳು ಇರಲಿಲ್ಲ. ಒಂದಿಷ್ಟುತಲೆನೋವು ಹೊರತಾಗಿ ನಾನು ಆರಾಮವಾಗಿಯೇ ಇದ್ದೆ. ಆದರೂ ನನ್ನನ್ನು ಒತ್ತಾಯ ಮಾಡಿ ಅಲ್ಲಿಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋದರು. ಹೋಗಿದ್ದು ಒಳ್ಳೆಯದೇ ಆಯಿತು. ಎಲ್ಲ ರೀತಿಯಿಂದಲೂ ತಪಾ​ಸ​ಣೆ ಮಾಡಿದರು. ಆದರೂ ನಾನು ಆಸ್ಪ​ತ್ರೆ​ಯ​ಲ್ಲಿ ಐದು ದಿನ ನಿದ್ರೆಯನ್ನೇ ಮಾಡಲಿಲ್ಲ. ಹಗಲು, ರಾತ್ರಿ ಎದ್ದು ಕುಳಿತುಕೊಂಡಿದ್ದೇ ಹೆಚ್ಚು. ಆಸ್ಪತ್ರೆಯಲ್ಲಿದ್ದಾಗ ಮಾತ್ರ ಮೊಬೈಲ್‌ ಕೊಡಲಿಲ್ಲ. ಹೀಗಾಗಿ, ಸಮಯ ಕಳೆಯುವುದು ಸಮಸ್ಯೆಯಾಯಿತು. ಆದರೂ ಪುಸ್ತಕ ಓದುವುದು ಹಾಗೂ ಟಿವಿ ನೋಡುವುದು ಮಾಡುತ್ತಿದ್ದೆ. ಹೀಗಾಗಿ, ಏನು ಸಮಸ್ಯೆಯಾಗಲಿಲ್ಲ. ಇದಾದ ಮೇಲೆ ಆಸ್ಪತ್ರೆಯ ಚಿಕಿತ್ಸೆಯನ್ನು ಪೂರ್ಣಗೊಳಿಸಿ, ಕೆಲದಿನಗಳ ಕಾಲ ಬೆಂಗಳೂರಿನಲ್ಲಿಯೇ ವಿಶ್ರಾಂತಿಯನ್ನು ಪಡೆದೆ. ಈ ಸಮಯದಲ್ಲಿ ಮತ್ತೆ ಕ್ಷೇತ್ರದ ಜನರೊಂದಿಗೆ ಮಾತನಾಡುವುದು, ಅವರ ಕೆಲಸ ಮಾಡುವುದರಲ್ಲಿಯೇ ಕಾಲ ಹೋಗಿದ್ದು ಗೊತ್ತಾಗಲೇ ಇಲ್ಲ.

ಅದನ್ನು ಹಗುರವಾಗಿ ಪರಿಗಣಿಸುವಂತೆ ಇಲ್ಲ. ಮುನ್ನೆಚ್ಚರಿಕೆಯನ್ನು ವಹಿಸಬೇಕು. ಮದ್ಯವ್ಯಸನಿಗಳು ಸೇರಿದಂತೆ ನಾನಾ ಚಟ ಇರುವವರು ಹೆಚ್ಚು ಸಮಸ್ಯೆ ಎದುರಿಸುತ್ತಾರೆ. ಆದ್ದರಿಂದ ಎಲ್ಲರೂ ತಪ್ಪದೇ ಮಾಸ್ಕ್‌ ಧರಿಸಬೇಕು ಮತ್ತು ಅಗತ್ಯವಿದ್ದರೆ ಮಾತ್ರ ಆಚೆ ಬರಬೇಕು. ಉಳಿದಂತೆ ಆರೋಗ್ಯ ಇಲಾಖೆ ನೀಡುವ ಸಲಹೆಗಳನ್ನು ತಪ್ಪದೇ ಪಾಲಿಸಬೇಕು ಎಂದು ಸಲಹೆ ನೀಡಿದರು.
 

click me!