ಸಿಡಿಲು ಬಡಿದು ಮೃತಪಟ್ಟ ಬಾಲಕಿ ಕುಟುಂಬಕ್ಕೆ ಚೆಕ್ ನೀಡಿದ್ದನ್ನು ಟೀಕಿಸಿದ್ದ ವ್ಯಕ್ತಿ| ತಮ್ಮನ್ನು ಫೇಸ್‌ಬುಕ್‌ನಲ್ಲಿ ನಿಂದಿಸಿದವರನ್ನು ಕರೆಯಿಸಿ ಸನ್ಮಾನ ಮಾಡಿದ ಶಾಸಕ ಹಾಲಪ್ಪ ಆಚಾರ್| ಕೊಪ್ಪಳ ಜಿಲ್ಲೆಯ ಯಲಬುರ್ಗಾ ಕ್ಷೇತ್ರದ ಬಿಜೆಪಿ ಶಾಸಕ ಹಾಲಪ್ಪ ಆಚಾರ್|
ಕುಕನೂರು(ಅ.27): ಬೈದವರೆನ್ನ ಬಂಧುಗಳೆಂದೆ, ನಿಂದಿಸಿದವರನ್ನು ತಂದೆ ತಾಯಿಗಳೆಂದೆ, ಜರೀದವರನ್ನ ಜನ್ಮಬಂಧುಗಳೆಂದೆ ಎನ್ನುವುದು ಬಸವಣ್ಣ ಅವರ ವಚನ. ಇದಕ್ಕನುಗುಣವಾಗಿ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ತಮ್ಮನ್ನು ಫೇಸ್‌ಬುಕ್‌ನಲ್ಲಿ ನಿಂದಿಸಿದವರನ್ನು ಕರೆಯಿಸಿ ಸನ್ಮಾನ ಮಾಡಿದ ಅಪರೂಪದ ಘಟನೆ ಮಸಬಹಂಚಿನಾಳ ಗ್ರಾಮದಲ್ಲಿ ಸೋಮವಾರ ನಡೆದಿದೆ
ಇದು ಈಗ ಭಾರಿ ಚರ್ಚೆಗೆ ಕಾರಣವಾಗಿದ್ದು, ಶಾಸಕರ ನಡೆಗೆ ವ್ಯಾಪಕ ಪ್ರಸಂಶೆ ವ್ಯಕ್ತವಾಗಿದೆ. ಸ್ವತಃ ತಮಗೆ ಏಕ ವಚನದಲ್ಲಿ ಬೈಯ್ದು, ಅಪಲೋಡ್ ಮಾಡಿದವರ ವಿರುದ್ಧ ಅವರ ಅಭಿಮಾನಿಗಳು ದೂರು ದಾಖಲಿಸಲು ಮುಂದಾದರೆ ಶಾಸಕರು ಅವರನ್ನೇ ಸನ್ಮಾನ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟಬಾಲಕಿಯ ಕುಟುಂಬಕ್ಕೆ 5 ಲಕ್ಷ ಚೆಕ್ ಅನ್ನು ಶಾಸಕ ಹಾಲಪ್ಪ ಆಚಾರ್ ವಿತರಣೆ ಮಾಡಿದ್ದರು. ತಹಸೀಲ್ದಾರ್ ಸಮ್ಮುಖದಲ್ಲಿ ಅವರ ಮನೆಗೆ ಭೇಟಿ ನೀಡಿ, ಸರ್ಕಾರದಿಂದ ಕೊಡಮಾಡುವ ಪರಿಹಾರಧನವನ್ನು ವಿತರಣೆ ಮಾಡಿ, ಸಾಂತ್ವನ ಹೇಳಿ ಬಂದಿದ್ದರು. ಇದರ ಫೋಟೋವನ್ನು ಹಾಲಪ್ಪ ಆಚಾರ್ ಅವರ ಅಭಿಮಾನಿಗಳು ಫೇಸ್‌ಬುಕ್, ವ್ಯಾಟ್ಸ್‌ಆ್ಯಪ್ ಸೇರಿದಂತೆ ಮೊದಲಾದ ಸೋಶಿಯಲ್ ಮೀಡಿಯಾದಲ್ಲಿ ಹೆಮ್ಮೆಯಿಂದ ಶೇರ್ ಮಾಡಿದ್ದರು. ಸಂಕಷ್ಟದಲ್ಲಿರುವ ಕುಟುಂಬಕ್ಕೆ ತಕ್ಷಣ ಸ್ಪಂದನೆ ಮಾಡಿದ ಬಗ್ಗೆ ಮೆಚ್ಚುಗೆಯನ್ನು ಅನೇಕರು ವ್ಯಕ್ತಪಡಿಸಿದರು.
ಹೊಸ MSIL ಮಳಿಗೆ ತೆರೆಯಲು ಮುಂದಾದ ಸರ್ಕಾರ: ಮದ್ಯದಂಗಡಿಯೇ ಬೇಡವೆಂದ ಏಕೈಕ ಬಿಜೆಪಿ ಶಾಸಕ
ಇದಕ್ಕೆ ಬಳೂಟಗಿ ಗ್ರಾಮದ ಹನುಮಂತಪ್ಪ ಮೇಟಿ ಅವರು ಶಾಸಕರು ಚೆಕ್ ಕೊಟ್ಟಿದ್ದನ್ನೇ ಫೇಸ್‌ಬುಕ್‌ನಲ್ಲಿ ಕಿಂಡಲ್ ಮಾಡಿದ್ದರು. ಯಾರೇನು ಅವರಪ್ಪನ ಮನಿ ದುಡ್ಡು ಕೊಟ್ಟಿದ್ದಾನೇನು? ಶಾಸಕರ ನಿಧಿಯಲ್ಲಿ ಕೊಟ್ಟಿರಬಹುದು. ಸ್ವಂತ 10 ಲಕ್ಷ ಕೊಡಾಕ ಹೇಳಿ ಎಂದು ಚುಚ್ಚು ಮಾತಿನಿಂದ ತಿವಿದಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಯಿತು. ಪರವಿರೋಧದ ಚರ್ಚೆ ಬಹಳ ಜೋರಾಗಿಯೇ ನಡೆಯಿತು ಮತ್ತು ಈ ಭರದಲ್ಲಿ ಶಾಸಕರಿಗೂ ಏಕವಚನ ಪ್ರಯೋಗವೂ ಆಯಿತು.
ಇದರಿಂದ ರೊಚ್ಚಿಗೆದ್ದ ಅವರ ಅಭಿಮಾನಿಗಳು ಆತನ ವಿರುದ್ಧ ದೂರು ನೀಡಲು ಮುಂದಾಗಿದ್ದರು. ಶಾಸಕರನ್ನು ಈ ರೀತಿಯಾಗಿ ಏಕವಚನದಲ್ಲಿ ನಿಂದಿಸುವುದು ಎಷ್ಟುಸರಿ ಎಂದು ಪ್ರಶ್ನೆ ಮಾಡಿ, ಮಾನಹಾನಿ ಕೇಸ್ ಹಾಕಲು ಮುಂದಾಗಿದ್ದರು. ಆದರೆ, ಈ ವಿಷಯ ತಿಳಿದ ಶಾಸಕರು ಸೋಮವಾರ ಅವರನ್ನು ಹಾಗೂ ಆ ಸಮಾಜದ ಮುಖಂಡರನ್ನು ತಮ್ಮ ಮನೆಯ ಕಚೇರಿಗೆ ಕರೆಯಿಸಿ, ಸನ್ಮಾನಿಸಿದರು.
ಶಾಲು ಹಾಕಿ ಸನ್ಮಾನ ಮಾಡಿ, ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಇಂಥವರು ಇರುವುದರಿಂದ ಅವರ ಊರಿನಲ್ಲಿ ಇರುವ ಸಮಸ್ಯೆಗಳು ಗೊತ್ತಾಗುತ್ತವೆ. ವ್ಯಕ್ತಿಗತ ಟೀಕೆ ಮಾಡುವ ಬದಲು ನಾವು ಮಾಡದೆ ಇರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಥವಾ ತಮ್ಮೂರಿನಲ್ಲಿ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನಕ್ಕೆ ತಂದಾಗಲೇ ಗೊತ್ತಾಗುತ್ತದೆ. ಈ ದಿಸೆಯಲ್ಲಿ ಅವರು ಕಾರ್ಯಪ್ರವೃತ್ತರಾಗಲಿ ಎಂದು ಹೇಳಿ, ಶುಭ ಹಾರೈಸಿ ಸ್ವತಃ ಶಾಸಕ ಹಾಲಪ್ಪ ಆಚಾರ್ ಅವರೇ ಸತ್ಕಾರ ಮಾಡಿದ್ದು ಅಚ್ಚರಿಗೆ ಕಾರವಾಯಿತು.
ಈ ಸಂದರ್ಭದಲ್ಲಿ ಶರಣಪ್ಪ ಬಣ್ಣದಭಾವಿ, ಜಗದೀಶ ಸೂಡಿ, ಬಸವರಾಜ ಪೂಜಾರ್, ಮಾರುತಿ ಗಾವರಾಳ, ಅನೀಲ್ ಆಚಾರ್, ಅರ್ಜುನ್‌ರಾವ್ ಜಗತಾಪ, ಅಮರೇಶ ಹುಬ್ಬಳ್ಳಿ, ಹಾಗೂ ಕಾರ್ಯಕರ್ತರು ಇದ್ದರು.