* ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಯಡಿಯೂರಪ್ಪ
* ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದುಕೊಂಡು ಹೋಗುತ್ತಿರುವ ಬಿಎಸ್‌ವೈ
* ಕೊಪ್ಪಳ ಜಿಲ್ಲಾ ಮಟ್ಟಿಗೆ ದಢೇಸ್ಗೂರು ಬಿಎಸ್‌ವೈ ಅವರ ಮಾನಸ ಪುತ್ರ ಸಹ ಹೌದು
ಕಾರಟಗಿ(ಜೂ.07): ಮುಂದಿನ 2023ರವರೆಗೂ ಬಿ.ಎಸ್. ಯಡಿಯೂರಪ್ಪ ಅವರೇ ಈ ರಾಜ್ಯದ ಮುಖ್ಯಮಂತ್ರಿಯಾಗಿರುತ್ತಾರೆ ಎಂದು ಕನಕಗಿರಿ ಕ್ಷೇತ್ರ ಶಾಸಕ ಬಸವರಾಜ ದಢೇಸ್ಗೂರು ಹೇಳಿದ್ದಾರೆ.
ಪಟ್ಟಣದಲ್ಲಿ ಕೋವಿಡ್-19 ಲಸಿಕೆ ಹಾಕಿಸಿಕೊಳ್ಳುವ ಕುರಿತು ನಡೆದ ಜನಜಾಗೃತಿ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಬದಲಾದ ರಾಜಕೀಯ ಕ್ಷಿಪ್ರದಲ್ಲಿ ಒಂದು ವೇಳೆ ಈ ಅವಧಿಯ ಮುನ್ನವೇ ನಮ್ಮ ಬಿಎಸ್‌ವೈ ಅವರನ್ನು ಕೆಳಗಿಳಿಸಲು ಸೂಚಿಸಿದರೆ, ನಾವೆಲ್ಲರೂ ಹೈಕಮಾಂಡ್ ಭೇಟಿಯಾಗಿ ಅವರನ್ನೇ ಮುಂದುವರಿಸಲು ಒತ್ತಡ ಹಾಕುತ್ತೇವೆ ಎಂದರು.
ಕೊಪ್ಪಳ: ಗವಿಮಠ ಶ್ರೀಗಳ ಪದವಿ ಕ್ಲಾಸ್‌ಮೇಟ್ಸ್‌ಗಳಿಂದ ಕೋವಿಡ್ ಆಸ್ಪತ್ರೆಗೆ ದೇಣಿಗೆ
ಇಂಥ ದುರಿತ ಕಾಲದಲ್ಲಿಯೂ ಯಡಿಯೂರಪ್ಪ ಅವರು ಪಕ್ಷ ಸಂಘಟನೆಯ ಜೊತೆ ರಾಜ್ಯದ ಜನತ ಕಷ್ಟ ಸುಖಕ್ಕೆ ಸ್ಪಂದಿಸುತ್ತಿದ್ದಾರೆ. ಜೊತೆಗೆ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಅವರೊಂದಿಗೆ ನಾವೆಲ್ಲರೂ ಇದ್ದೇವೆ. ರಾಜ್ಯದ ಬಹುತೇಕ ಬಿಜೆಪಿ ಶಾಸಕರಿಗೆ ಮುಂದಿನ 2023ರವರೆಗೂ ಅವರೇ ನಮ್ಮ ಸಿಎಂ ಆಗಿರಬೇಕೆನ್ನುವ ಬೇಡಿಕೆ ಇಚ್ಛೆ ಇದೆ. ಹೈಕಮಾಂಡ್ ಸಹ ಅವರನ್ನೇ ಮುಂದುವರೆಸುತ್ತದೆ ಎನ್ನುವ ವಿಶ್ವಾಸ ಇದೆ. ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಎಲ್ಲರನ್ನೂ ಒಗ್ಗಟ್ಟಿನಿಂದ ಕರೆದುಕೊಂಡು ಹೋಗುತ್ತಿದ್ದಾರೆ. ಮುಂದಿನ ಚುನಾವಣೆಗೂ ಅವರನ್ನೇ ಮುಂದುವರೆಸಬೇಕೆಂದು ದಢೇಸ್ಗೂರು ಒತ್ತಾಯಿಸಿದರು. ಕನಕಗಿರಿ ಕ್ಷೇತ್ರದ ಶಾಸಕ ಬಸವರಾಜ ದಢೇಸ್ಗೂರು ಸಿಎಂ ಬಿಎಸ್‌ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದು, ಕೊಪ್ಪಳ ಜಿಲ್ಲಾ ಮಟ್ಟಿಗೆ ಇವರು ಬಿಎಸ್‌ವೈ ಅವರ ಮಾನಸ ಪುತ್ರ ಸಹ ಹೌದು.