ಆನಂದ ಸಿಂಗ್‌ಗೆ ಸವಾಲು: ಈ ಬಾರಿಯಾದ್ರೂ ಅಭಿವೃದ್ಧಿಯಾಗುತ್ತಾ ವಿಜಯನಗರ?

By Suvarna NewsFirst Published Dec 18, 2019, 11:18 AM IST
Highlights

ವಿಜಯನಗರ ಕ್ಷೇತ್ರದ ಹೊಸ ಶಾಸಕರಿಗೆ ಹಳೆಯ ಸವಾಲುಗಳು ಚುನಾವಣೆ ವೇಳೆ ನೀಡಿದ ಭರವಸೆ ಈಡೇರಿಸುತ್ತಾರಾ ಆನಂದ್ ಸಿಂಗ್| ಈ ಹಿಂದೆ ಆನಂದ ಸಿಂಗ್ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರೂ ಹಂಪಿ ಪ್ರಗತಿಗೆ ಯಾವ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪ|

ಕೆ.ಎಂ. ಮಂಜುನಾಥ್ 

ಬಳ್ಳಾರಿ(ಡಿ.18): ವಿಜಯನಗರ ಉಪ ಚುನಾವಣೆಯಲ್ಲಿ ಗೆದ್ದ ಸಡಗರದ ಜೊತೆ ಸಚಿವರಾಗುವ ಮತ್ತೊಂದು ಸಂಭ್ರಮದ ಸಿದ್ಧತೆಯಲ್ಲಿರುವ ಆನಂದ ಸಿಂಗ್ ಅವರಿಗೆ ಕ್ಷೇತ್ರದ ಅನೇಕ ಹಳೆಯ ಸಮಸ್ಯೆಗಳೇ ಹೊಸ ಸವಾಲುಗಳಾಗಿ ಪರಿಣಮಿಸಿವೆ. 

ಉಪಚುನಾವಣೆಯಲ್ಲಿ ಎದುರಾದ ತೀವ್ರ ಹಣಾಹಣಿಯಿಂದಾಗಿ ಸೋಲಿನ ಭೀತಿ ಎದುರಿಸಿದ ಆನಂದ ಸಿಂಗ್, ತಾನು ಗೆಲುವು ಸಾಧಿಸಿದಲ್ಲಿ ಕ್ಷೇತ್ರಕ್ಕೆ ಅನುದಾನದ ಹೊಳೆಯೇ ಹರಿದು ಬರಲಿದೆ ಎಂದು ಮತದಾರರಲ್ಲಿ ಹೊಸ ಕನಸು ಬಿತ್ತಿದರು. ಹಂಪಿಯ ಅಭಿವೃದ್ಧಿ, ಹೊಸಪೇಟೆ ನಗರದ ಸಮಗ್ರ ಪ್ರಗತಿ, ನಿರಾಶ್ರಿತರಿಗೆ ಮನೆಗಳನ್ನು ನಿರ್ಮಿ ಸಿಕೊಡುವುದು, ಗ್ರಾಮೀಣ ಭಾಗದಲ್ಲಿ ಏತನೀರಾವರಿ ಯೋಜನೆಗಳ ಜಾರಿಗೊಳಿಸುವ ಭರವಸೆಗಳನ್ನು ನೀಡಿದ್ದಾರೆ.
ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿಯಾಗಿ ಹರಿದು ಹೋಗುವ ನೀರನ್ನು ಸದ್ಭಳಕೆ ಮಾಡಿಕೊಂಡು ಕೆರೆಗಳನ್ನು ತುಂಬಿಸುವ ಹೊಸ ಸಂಕಲ್ಪ ಮಾಡಿರುವುದಾಗಿ ಘೋಷಣೆ ಮಾಡಿದರು. ಆದರೆ, ಈ ಎಲ್ಲವೂ ಎಷ್ಟರ ಮಟ್ಟಿಗೆ ಜಾರಿ ಬರಲಿವೆ ಎಂಬುದನ್ನು ಕ್ಷೇತ್ರದ ಜನರು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. 

ಹಂಪಿ ಅಭಿವೃದ್ಧಿಯಿಂದ ದೂರ:

ಹಂಪಿಯಲ್ಲಿ ಕನಿಷ್ಟ ಮೂಲ ಸೌಕರ್ಯಗಳು ಇಲ್ಲ. ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪ್ರತಿಯೊಂದಕ್ಕೂ ಪರದಾಡುವ ಪರಿಸ್ಥಿತಿ ಇದೆ. ಇದರಿಂದ ದೇಶ-ವಿದೇಶಗಳಿಂದ ಪ್ರತಿ ವರ್ಷ ಬರುವ ಲಕ್ಷಾಂತರ ಪ್ರವಾಸಿಗರಿಗೆ ಅನಾನುಕೂಲ ಎನಿಸಿದೆ. ಇದು ಪ್ರವಾಸೋದ್ಯಮ ಬೆಳವಣಿಗೆಗೆ ಕುತ್ತು ತಂದೊಡ್ಡಿದೆ. ಈ ಹಿಂದೆ ಆನಂದ ಸಿಂಗ್ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದರೂ ಹಂಪಿ ಪ್ರಗತಿಗೆ ಯಾವ ಕ್ರಮ ಕೈಗೊಳ್ಳಲಿಲ್ಲ ಎಂಬ ಆರೋಪಗಳಿದ್ದವು. 
ಈಚೆಗೆ ಜರುಗಿದ ಉಪಚುನಾವಣೆಯಲ್ಲಿ ಹಂಪಿಯ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ಶಾಸಕ ಸಿಂಗ್ ಮತ್ತೊಮ್ಮೆ ಭರವಸೆ ನೀಡಿದ್ದಾರಲ್ಲದೆ. ಹಂಪಿಯತ್ತ ವಿಶ್ವದತ್ತ ತಿರುಗಿ ನೋಡುವಂತೆ ಪ್ರಗತಿ ಮಾಡಿ ತೋರಿಸುತ್ತೇನೆ ಎಂದು ಹೇಳಿದ್ದಾರೆ. 

ವಾರ್ಡ್‌ಗಳ ಅಭಿವೃದ್ಧಿ ಹೇಗೆ?: 

ಹೊಸಪೇಟೆಯನ್ನು ಹೊಲಸುಪೇಟೆ ಎಂದು ಟೀಕಿಸುವವರು ಕಡಿಮೆಯೇನಿಲ್ಲ. ಇದಕ್ಕೆ ಕಾರಣವೂ ಇದೆ. ನಗರ 35 ವಾರ್ಡ್‌ಗಳನ್ನು ಹೊಂದಿದ್ದು ತ್ಯಾಜ್ಯ ಹಾಗೂ ಚರಂಡಿ ನಿರ್ವಹಣೆಯಲ್ಲಿ ಸ್ಥಳೀಯ ನಗರಸಭೆ ವಿಫಲವಾಗಿದೆ ಎಂಬುದನ್ನು ಹೊಸ ಪೇಟೆಗೆ ಭೇಟಿ ನೀಡುವವರಿಗೆ ಕಂಡು ಬರುತ್ತದೆ. ವಾರ್ಡ್‌ಗಳಲ್ಲಿ ರಸ್ತೆಗಳು ಅಭಿವೃದ್ಧಿಯಿಂದ ದೂರ ಉಳಿದಿರು ವುದೇ ಹೆಚ್ಚು. ತುಂಗಭದ್ರಾ ಜಲಾಶಯದಿಂದ ಹೆಚ್ಚುವರಿ ಯಾಗಿ ಹರಿಯುವ ನೀರನ್ನು ಸದ್ಭಳಕೆ ಮಾಡಿಕೊಳ್ಳ ಲಾಗುವುದು. ಈ ನೀರಿನಲ್ಲಿ ತಾಲೂಕಿನ ಕೆರೆಗಳನ್ನು ತುಂಬಿಸಲಾಗುವುದು. ಈ ಮೂಲಕ ನೀರಾವರಿ ಪ್ರದೇಶವನ್ನು ಹೆಚ್ಚಿಸಲಾಗುವುದು ಎಂಬುದು ರೈತಾಪಿಗಳಿಗೆ ಶಾಸಕ ಸಿಂಗ್ ಚುನಾವಣೆ ನೀಡಿದ ಅಭಯ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಇನ್ನು ನಗರ ಹಾಗೂ ಗ್ರಾಮೀಣ ಭಾಗದ ನಿರಾಳಶ್ರಿತರಿಗೆ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿದ್ದಾರೆ. ಇದು ಹೊಸ ಭರವಸೆಯೇನಲ್ಲ. ಈ ಹಿಂದೆ ಚುನಾವಣೆಯ ಪ್ರಚಾರದಲ್ಲೂ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡುವುದಾಗಿ ಹೇಳಿ ಮತಯಾಚನೆ ಮಾಡಿದ್ದರು. ಉಪ ಚುನಾವಣೆಯಲ್ಲೂ ಇದೇ ಭರವಸೆಗಳನ್ನು ನೀಡಿದ್ದಾರೆ.

ಐಎಸ್ಸಾರ್ ಫ್ಯಾಕ್ಟರಿ ಶುರು ಹೇಗೆ? 

ಹೊಸಪೇಟೆ ಹಾಗೂ ಸುತ್ತಮುತ್ತಲಿನ ರೈತರು ಐಎಸ್ಸಾರ್ ಸಕ್ಕರೆ ಕಾರ್ಖಾನೆ ಶುರು ಯಾವಾಗ ಎಂದು ಪ್ರಶ್ನಿಸುತ್ತಿದ್ದಾರೆ. ಈ ಕಾರ್ಖಾನೆಯ ಮೇಲೆ ಸಾವಿರಾರು ಕಬ್ಬು ಬೆಳೆಗಾರರು ಅವಲಂಬಿತರಾಗಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿದ್ದ ನೂರಾರು ಕುಟುಂಬಗಳು ಕೆಲಸವಿಲ್ಲದೆ ಒದ್ದಾಡುವ ಸ್ಥಿತಿಯಲ್ಲಿವೆ. ಈ ಕಾರ್ಖಾನೆ ಶುರುವಾದರೆ ಈ ಭಾಗದ ಜನರು ಒಂದಷ್ಟು ನಿಟ್ಟಿಸಿರು ಬಿಡಲಿದ್ದಾರೆ. ಆದರೆ, ಶಾಸಕ ಆನಂದಸಿಂಗ್ ಚುನಾವಣೆ ಪ್ರಚಾರದಲ್ಲಿ ಎಲ್ಲೂ ಶುಗರ್ ಕಾರ್ಖಾನೆ ಮರು ಆರಂಭಿಸುವ ಕುರಿತು ಮಾತನಾಡಿಲ್ಲ. ಸಚಿವ ಬಿ. ಶ್ರೀರಾಮುಲು ಅವರು ಪ್ರಚಾರದ ವೇಳೆ ಐಎಸ್ಸಾರ್ ಸಕ್ಕರೆ ಕಾರ್ಖಾನೆ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದು ಬಿಟ್ಟರೆ, ಆನಂದಸಿಂಗ್ ಈ ಬಗ್ಗೆ ಚಕಾರ ಎತ್ತಿಲ್ಲ.
 

click me!