ಈ ಬಾರಿ ಪ್ರೇಕ್ಷಕರ ಕೊರತೆಯಾಗುವ ಸಾಧ್ಯತೆ | ಮೂರು ದಿನದ ಉತ್ಸವ ಎರಡೇ ದಿನಕ್ಕೆ ಸೀಮಿತ|ಜನವರಿಯಲ್ಲಿ ಉತ್ಸವ ನಡೆಸುವುದು ಅತ್ಯಂತ ಅವೈಜ್ಞಾನಿಕ| ಉಪ ಚುನಾವಣೆಯಿಂದಾಗಿ 2019ರ ಉತ್ಸವ ಮುಂದೂಡಿ ಜನವರಿ 10 ಮತ್ತು 11 ಕ್ಕೆ ಮುಹೂರ್ತ ನಿಗದಿ|
ಕೆ.ಎಂ. ಮಂಜುನಾಥ್
ಬಳ್ಳಾರಿ(ಡಿ.18): ಹಂಪಿ ಉತ್ಸವ ಜನವರಿ 10 ಮತ್ತು 11 ರಂದು ನಡೆಯಲಿದ್ದು, ಇದಕ್ಕೆ ಜಿಲ್ಲಾಡಳಿತ ಸಜ್ಜಾಗುತ್ತಿದೆ. ಉತ್ಸಮಕ್ಕೆ ಸರ್ಕಾರ ಕೋಟ್ಯಂತರ ಹಣ ವ್ಯಯಿಸುತ್ತಿದೆ. ಆದರೆ, ಕೊರೆವ ಚಳಿಯಲ್ಲಿ ನಡೆಯುವ ಉತ್ಸವಕ್ಕೆ ಪ್ರೇಕ್ಷಕರು ನಿರೀಕ್ಷೆಯಷ್ಟು ಆಗಮಿಸುತ್ತಾರಾ ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಚಳಿ ಏರಿಕೆಯಾಗುವ ಹೊತ್ತಿನಲ್ಲಿ ಉತ್ಸವ ಮಾಡಲು ಮುಂದಾಗಿರುವ ಸರ್ಕಾರದ ಧೋರಣೆಯ ಬಗ್ಗೆ ಸಾರ್ವಜನಿಕರ ಟೀಕೆಗಳು ಶುರುವಾಗಿದ್ದು, ಸಾರ್ವಜನಿಕರ ಕೋಟ್ಯಂತರ ದುಡ್ಡನ್ನು ಉತ್ಸವಕ್ಕೆ ಬಳಸುತ್ತಾರೆ. ಆದರೆ, ಯಾವ ಸಮಯದಲ್ಲಿ ಉತ್ಸವ ಮಾಡಬೇಕು ಎಂಬ ಕನಿಷ್ಠ ತಿಳಿವಳಿಕೆ ಸರ್ಕಾರಕ್ಕಿಲ್ಲ ಎಂಬುದು ಜನರ ಆರೋಪ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈಗಾಗಲೇ ಜಿಲ್ಲೆಯಲ್ಲಿ ಚಳಿ ಶುರುವಾಗಿದ್ದು ಜನವರಿಯಲ್ಲಿ ಮತ್ತಷ್ಟು ಕೊರೆವ ಚಳಿ ಇರಲಿದೆ. ಈ ಹೊತ್ತಿನಲ್ಲಿ ಉತ್ಸವ ನಡೆದರೆ ಯುವಕರು ಮಾತ್ರ ಭಾಗವಹಿಸಬಹುದೇ ವಿನಃ ಮಹಿಳೆಯರು, ಮಕ್ಕಳು ಹಾಗೂ ವೃದ್ಧರು ಉತ್ಸವದಿಂದ ದೂರ ಉಳಿಯುವ ಸಾಧ್ಯತೆಯೇ ಹೆಚ್ಚು. ಉತ್ಸವ ಹಿನ್ನೆಲೆಯಲ್ಲಿ ಬೆಳಗ್ಗೆ ನಡೆಯುವ ವಿವಿಧ ಸ್ಪರ್ಧೆಗಳನ್ನು ವೀಕ್ಷಿಸಬಹುದೇ ವಿನಾ, ರಾತ್ರಿ ವೇಳೆಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನರು ಪಾಲ್ಗೊಳ್ಳುವುದು ಹೇಗೆ ಎಂದು ಉತ್ಸವ ಪ್ರಿಯರು ಪ್ರಶ್ನಿಸುತ್ತಾರೆ.
ದಿನಾಂಕ ಬದಲಿಸಿದ್ದೇ ತಪ್ಪು:
ಹಂಪಿ ಉತ್ಸವದಲ್ಲಿ ಎಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳುವಂತಾಗಬೇಕು. ಹಂಪಿ ಉತ್ಸವ ವಿಶ್ವಖ್ಯಾತಿಯಾಗಬೇಕು. ಇದರಿಂದ ವಿಶ್ವದ ನಾನಾ ಭಾಗಗಳಿಂದ ಪ್ರವಾಸಿಗರು ಆಗಮಿಸುವಂತಾ ಗಬೇಕು ಎಂಬ ಆಶಯದಿಂದ ಹಂಪಿ ಉತ್ಸವದ ರೂವಾರಿ ದಿ. ಎಂ.ಪಿ. ಪ್ರಕಾಶ್ ಪ್ರತಿವರ್ಷ ನವೆಂಬರ್ 3-4-5 ರಂದು ಹಂಪಿ ಉತ್ಸವ ನಡೆಸಿಕೊಂಡು ಬಂದಿದ್ದರು. ನವೆಂಬರ್ ತಿಂಗಳು ಎಲ್ಲ ವಯೋಮಾನದವರಿಗೂ ಹಾಗೂ ವಿದೇಶಗಳಿಂದ ಬರುವವರಿಗೂ ಹೆಚ್ಚು ಅನುಕೂಲ ವಾಗುತ್ತಿತ್ತು. ಇದರಿಂದ ಉತ್ಸವಕ್ಕೆ ಲಕ್ಷಾಂತರ ಜನರು ಜಮಾಯಿಸುತ್ತಿದ್ದರು. ಉತ್ಸವವೂ ಯಶಸ್ವಿಯಾಗುತ್ತಿತ್ತು. ಬಳಿಕ ಜಿಲ್ಲೆಯಲ್ಲಿ ಅಧಿಕಾರದ ಗದ್ದುಗೆ ಹಿಡಿದ ರೆಡ್ಡಿ ಸಹೋದರರು ದಿನಾಂಕ ಬದಲಾಯಿಸಿದರು. ನಂತರ ಇದು ನಿಗದಿತ ಸಮಯ ತಪ್ಪಿ ಹೋಗಿ ಉತ್ಸವದ ನಿರ್ದಿಷ್ಟ ದಿನಾಂಕ ಇಲ್ಲವಾಯಿತು.
ನಾನಾ ನೆಪ:
ಇನ್ನು ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಅಭಾವದಿಂದ ಹಂಪಿ ಉತ್ಸವ ಅನೇಕ ಬಾರಿ ರದ್ದಾಗಿದೆ. ಇದಕ್ಕೆ ನಾನಾ ನೆಪಗಳನ್ನು ಹೇಳಿದ ಸರ್ಕಾರಗಳು ಅತಿವೃಷ್ಟಿ, ಅನಾವೃಷ್ಟಿ ಹೆಸರಿನಲ್ಲಿ ಉತ್ಸವಕ್ಕೆ ಆಸ್ಥೆ ತೋರಲಿಲ್ಲ. ದಸರಾ ಉತ್ಸವಕ್ಕೆ ಇಲ್ಲದೆ ಅತಿವೃಷ್ಟಿ- ಅನಾವೃಷ್ಟಿಗಳು ಹಂಪಿ ಉತ್ಸವಕ್ಕೆ ಏಕೆ ಎಂಬ ಪ್ರಶ್ನೆಗಳಿಗೆ ಸರ್ಕಾರ ನಿರ್ದಿಷ್ಟ ಉತ್ತರ ನೀಡಿಲ್ಲ.
ಲೋಕಸಭಾ ಉಪ ಚುನಾವಣೆಯಿಂದಾಗಿ ಮುಂದೂಡಿದ್ದ 2018 ರ ಉತ್ಸವ ಈ 2019ರ ಮಾರ್ಚ್ ನಲ್ಲಿ ಜರುಗಿತು. ಈಚೆಗೆ ಜರುಗಿದ ವಿಜಯನಗರ ಉಪ ಚುನಾವಣೆಯಿಂದಾಗಿ 2019ರ ಉತ್ಸವ ಮುಂದೂಡಿ ಜನವರಿ 10 ಮತ್ತು 11 ಕ್ಕೆ ಮುಹೂರ್ತ ನಿಗದಿಯಾಗಿದೆ.
ಕೊರೆವ ಚಳಿಗೆ ಮುದುಡುವ ಬಳ್ಳಾರಿಗರು:
ಬಳ್ಳಾರಿಗರು ಬಿಸಿಲು ಪ್ರಿಯರು. ಒಂದಷ್ಟು ಚಳಿಗೆ ಮುದುಡಿಕೊಳ್ಳುತ್ತಾರೆ. ಇನ್ನು ಕೊರೆವ ಚಳಿಯನ್ನು ತಡೆಯಲು ಸಾಧ್ಯವೇ? ಜನವರಿಯಲ್ಲಿ ಮೈ ಕಿತ್ತು ಬರುವಂತೆ ಚಳಿ ಇರುತ್ತದೆ. ಇಂತಹ ವೇಳೆಯಲ್ಲಿ ಉತ್ಸವ ನಡೆಸಲು ಮುಂದಾಗಿರುವುದು ಅವೈಜ್ಞಾನಿಕ. ನಾನು ಬಹುತೇಕ ಉತ್ಸವಗಳಿಗೆ ಹಾಜರಾಗಿ ಕಣ್ತುಂಬಿಕೊಂಡಿದ್ದೇನೆ. ಈ ಬಾರಿ ಚಳಿ ಎಂಬ ಕಾರಣಕ್ಕೆ ಹೋಗದಿರಲು ನಿರ್ಧರಿಸಿದ್ದೇನೆ. ಈ ವರ್ಷ ಹೇಗೋ ದಿನಾಂಕ ನಿಗದಿಯಾಗಿದೆ. ಆದರೆ, ಮುಂದಿನ ವರ್ಷದಿಂದಾರೂ ನವೆಂಬರ್ ತಿಂಗಳಲ್ಲಿ ಉತ್ಸವ ನಡೆಸುವಂತಾಗಲಿ ಎನ್ನುತ್ತಾರೆ ನಗರದ ನಿವೃತ್ತ ಶಿಕ್ಷಕ ನಾಗೇಶ್ವರರಾವ್.
ಬಳ್ಳಾರಿ: ವಿಶ್ವವಿಖ್ಯಾತ ಹಂಪಿ ಉತ್ಸವದ ಭಿತ್ತಿಚಿತ್ರಗಳ ಬಿಡುಗಡೆ
ಮೂರು ದಿನದ ಉತ್ಸವ ಎರಡು ದಿನಕ್ಕೆ ನಿಗದಿಪಡಿಸಲಾಗಿದೆ. ಜನವರಿಯಲ್ಲಿ ಉತ್ಸವ ನಡೆಸುವುದು ಅತ್ಯಂತ ಅವೈಜ್ಞಾನಿಕವಾಗಿದೆ. ಎರಡು ದಿನದ ಉತ್ಸವದಿಂದ ಜಿಲ್ಲೆಯ ಕಲಾವಿದರು ನ್ಯಾಯ ಕೊಡಿಸಲು ಸಾಧ್ಯವೇ ಎಂದು ಬಳ್ಳಾರಿಯ ವಿದ್ಯಾನಗರದ ಖಾಸಗಿ ಸಂಸ್ಥೆ ನೌಕರ ರವಿಕುಮಾರ್ ಅವರು ತಿಳಿಸಿದ್ದಾರೆ.
ಶಾಸಕ-ಸಚಿವರಿಗಿಲ್ಲ ಇಚ್ಛಾಶಕ್ತಿ
ಹಂಪಿ ಉತ್ಸವ ಪ್ರತಿವರ್ಷ ನಡೆಯುತ್ತದೆ ಎಂಬುದು ಖಚಿತವಿಲ್ಲ. ಹೀಗಾಗಿ, ಅತ್ತೂ ಕರೆದು ಉತ್ಸವ ನಡೆಸಬೇಕಾದ ಅನಿವಾ ರ್ಯತೆ ಸೃಷ್ಟಿಯಾಗಿದೆ. ಜಿಲ್ಲೆಯ ಸಚಿವರಾದವರು ಹಾಗೂ ಶಾಸಕರಾದವರು ಸರ್ಕಾರದ ಮೇಲೆ ಒತ್ತಡ ತಂದು ನಿರ್ದಿಷ್ಟ ಸಮಯಕ್ಕೆ ಉತ್ಸವ ನಡೆಸುವಂತಾಗಬೇಕು. ಆದರೆ, ಹಂಪಿ ಉತ್ಸವ ಬಳ್ಳಾರಿ ಜಿಲ್ಲೆಯಲ್ಲಿ ನಡೆಯುತ್ತದೆ ಎಂದು ಕೆಲವು ಶಾಸಕರಿಗೆ ತಿಳಿದಿದೆಯೋ ಇಲ್ಲವೋ ಎಂಬ ಅನುಮಾನ ನಮಗೂ ಇದೆ ಎನ್ನುತ್ತಾರೆ ಹಂಪಿ ಉತ್ಸವ ಪ್ರಿಯರು.
ಜಿಲ್ಲಾ ಸಚಿವರಾದವರು ಉತ್ಸವದ ಜವಾಬ್ದಾರಿ ತೆಗೆದುಕೊಳ್ಳಬೇಕು. ಆದರೆ, ಈ ವರೆಗೆ ಸಚಿವರು ನಿರ್ದಿಷ್ಟ ಸಮಯಕ್ಕೆ ಉತ್ಸವ ನಡೆಯಬೇಕು ಎಂದು ಕೂಗು ಎತ್ತಿದ್ದೇ ಅಪರೂಪ. ಜಿಲ್ಲೆಯ ದುರ್ದೈವ ಎಂಬಂತೆ ಹೊರ ಜಿಲ್ಲೆಗಳ ವರು ಜಿಲ್ಲಾ ಉಸ್ತುವಾರಿ ಮಂತ್ರಿಗಳಾದಾಗ ಈ ಜಿಲ್ಲೆಯ ಬೇಕು, ಬೇಡಗಳು ಮೂಲೆ ಗುಂಪಾಗುತ್ತವೆ. ಇದು ಉತ್ಸವದ ಮೇಲೆ ಕರಿಛಾಯೆ ಬಿದ್ದಿದೆ ಎಂಬ ಸಾರ್ವಜನಿಕರ ಅಭಿಪ್ರಾಯಗಳನ್ನು ಅಲ್ಲಗಳೆಯುವಂತಿಲ್ಲ.