ಸಿಎಂ ವಿಶೇಷ ಅಧಿಕಾರಿ ಹೆಸರಲ್ಲಿ ಹುದ್ದೆಗೆ ಶಿಫಾರಸು!

By Web DeskFirst Published May 25, 2019, 8:16 AM IST
Highlights

ಮುಖ್ಯಮಂತ್ರಿ ವಿಶೇಷ ಅಧಿಕಾರಿ ಹೆಸರಿನಲ್ಲಿ  ವಂಚನೆ ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. 

ಬೆಂಗಳೂರು :  ಮುಖ್ಯಮಂತ್ರಿ ವಿಶೇಷ ಅಧಿಕಾರಿ ಹೆಸರಿನಲ್ಲಿ ದ್ವಿತೀಯ ದರ್ಜೆ ಸಹಾಯರೊಬ್ಬರಿಗೆ ಪ್ರಭಾರ ಹುದ್ದೆ ನೀಡುವಂತೆ ನಕಲಿ ಸಹಿ ಸೃಷ್ಟಿಸಿ ಶಿಫಾರಸ್ಸು ಪತ್ರ ನೀಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಬಂಧ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ವಿಶೇಷ ಅಧಿಕಾರಿ ಆಗಿರುವ ನಿವೃತ್ತ ಐಎಎಸ್‌ ಅಧಿಕಾರಿ ಬಿ.ಎನ್‌.ಕೃಷ್ಣಯ್ಯ ಅವರು ಹೈಗ್ರೌಂಡ್ಸ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಕೃಷ್ಣಯ್ಯ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.

ಮೈಸೂರು ನಗರ ಯೋಜನಾ ಪ್ರಾಧಿಕಾರದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿರುವ ಮರಿಯಪ್ಪ ಎಂಬುವವರಿಗೆ ಜೂನಿಯರ್‌ ಅಸಿಸ್ಟೆಂಟ್‌ ಹುದ್ದೆಗೆ ಪ್ರಭಾರ ನೀಡುವಂತೆ ಕೋರಿ ಸ್ಟಾಫ್‌ ಸೆಲೆಕ್ಷನ್‌ ಕಮಿಟಿ (ಎಸ್‌ಎಸ್‌ಸಿ) ಇಲಾಖೆ ಆಯುಕ್ತರಿಗೆ ಶಿಫಾರಸು ಪತ್ರವನ್ನು ಏ.13ರಂದು ತಲುಪಿಸಲಾಗಿದೆ. ಮುಖ್ಯಮಂತ್ರಿ ಅವರ ವಿಶೇಷ ಅಧಿಕಾರಿ ಅವರ ಬಿ.ಎನ್‌.ಕೃಷ್ಣಯ್ಯ ಅವರ ಹೆಸರಿನಲ್ಲಿ ಈ ಶಿಫಾರಸು ಪತ್ರ ಕೋರಮಂಗಲದಲ್ಲಿರುವ ಕೇಂದ್ರೀಯ ಸದನದ ಆಯುಕ್ತರ ಕಚೇರಿಗೆ ಬಂದಿತ್ತು. ಈ ಪತ್ರವನ್ನು ಆಯುಕ್ತರ ಕಚೇರಿ ಮೈಸೂರು ನಗರ ಯೋಜನಾ ಪ್ರಾಧಿಕಾರಕ್ಕೆ ಕಳುಹಿಸಿತ್ತು. ನಂತರ ಪ್ರಾಧಿಕಾರದ ಅಧಿಕಾರಿಗಳು ಮುಖ್ಯಮಂತ್ರಿ ಕಚೇರಿಯನ್ನು ಸಂಪರ್ಕ ಮಾಡಿದ್ದರು. ಈ ವೇಳೆ ನಕಲಿ ಪತ್ರದಲ್ಲಿ ಮುಖ್ಯಮಂತ್ರಿಗಳ ಕಚೇರಿ ಹೆಸರನ್ನು ದುರ್ಬಳಕೆ ಮಾಡಿ ನಕಲಿ ಸಹಿ ಸೃಷ್ಟಿಸಿ, ಕೃಷ್ಣಯ್ಯ ಅವರ ಹೆಸರಿನಲ್ಲಿ ಶಿಫಾರಸು ಮಾಡಿರುವುದು ಬೆಳಕಿಗೆ ಬಂದಿದೆ.

ಮುಖ್ಯಮಂತ್ರಿಗಳ ಕಚೇರಿ ಹೆಸರನ್ನು ದುರ್ಬಳಕೆ ಮಾಡಿಕೊಂಡು ನಕಲಿ ಪತ್ರ ಸೃಷ್ಟಿಸಿದ ಆರೋಪಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದರು.

click me!