ಬೆಳಗ್ಗೆ ಪಾಸಾಗಿದ್ದ ವಿದ್ಯಾರ್ಥಿಗಳು ಸಂಜೆ ಫೇಲಾದ್ರು!

By Kannadaprabha NewsFirst Published Nov 23, 2020, 7:19 AM IST
Highlights

ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶದಲ್ಲಿ ಭಾರೀ ಗೋಲ್ಮಾನ್ ಆಗಿದೆ. ಬೆಳಗ್ಗೆ ಪಾಸಾಗಿದ್ದ  ವಿದ್ಯಾರ್ಥಿಗಳು ಸಂಜೆ ಫೇಲಾಗಿದ್ದಾರೆ

ವರದಿ :  ಸಂದೀಪ್‌ ವಾಗ್ಲೆ

 ಮಂಗಳೂರು (ನ.23):  ಮಂಗಳೂರು ವಿಶ್ವ ವಿದ್ಯಾನಿಲಯದ ಅಂತಿಮ ಪದವಿಯ ಬಹುತೇಕ ಕೋರ್ಸ್‌ಗಳ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಅನೇಕ ವಿದ್ಯಾರ್ಥಿಗಳು ಫಲಿತಾಂಶ ನೋಡಿ ಬೆಚ್ಚಿಬಿದ್ದಿದ್ದಾರೆ. ಬೆಳಗ್ಗೆ ಹೊತ್ತಿಗೆ ಫಲಿತಾಂಶದಲ್ಲಿ ಪಾಸ್‌ ಅಂಕ ತೆಗೆದುಕೊಂಡ ಕೆಲವರು ಮಧ್ಯಾಹ್ನ ಮತ್ತೆ ಫಲಿತಾಂಶ ನೋಡುವಾಗ ಫೇಲಾಗಿರುವುದು ಬೆಳಕಿಗೆ ಬಂದಿದೆ. ಹಲವು ವಿದ್ಯಾರ್ಥಿಗಳ ಅಂಕಗಳಲ್ಲೂ ಭಾರೀ ವ್ಯತ್ಯಾಸ ಆಗಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳನೇಕರು ಭ್ರಮನಿರಸಗೊಂಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಮಂಗಳೂರು ವಿವಿ ಫಲಿತಾಂಶದಲ್ಲಿ ಒಂದಲ್ಲ ಒಂದು ಗೊಂದಲ- ಅಪಸ್ವರ ಕೇಳಿಬರುತ್ತಲೇ ಇತ್ತು. ಈ ಬಾರಿ ಇದನ್ನೆಲ್ಲ ಸರಿಪಡಿಸುವ ಭರವಸೆಯ ಮಾತುಗಳನ್ನು ವಿವಿ ಅಧಿಕಾರಿಗಳು ನೀಡಿದ್ದರು. ಆದರೆ ಇದೀಗ ಪ್ರಕಟವಾದ ಫಲಿತಾಂಶದಲ್ಲಿ ಮತ್ತದೇ ಸಮಸ್ಯೆಗಳು ಪುನರಾವರ್ತನೆಯಾಗಿರುವುದು ಕಂಡುಬಂದಿದೆ.

ನಾಳೆಯೇ ಶಾಲೆ ಪುನಾರಂಭಕ್ಕೆ ಮುಹೂರ್ತ ಫಿಕ್ಸ್‌..! ...

ಪಾಸಾದವರು ಫೇಲಾದ್ರು!: ಪುತ್ತೂರಿನ ಖಾಸಗಿ ಕಾಲೇಜೊಂದರ ಬಿಎ ಪತ್ರಿಕೋದ್ಯಮ ವಿದ್ಯಾರ್ಥಿಯೊಬ್ಬರು ಗುರುವಾರ ಬೆಳಗ್ಗೆ ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಿದಾಗ ಪತ್ರಿಕೋದ್ಯಮ-8ನೇ ವಿಷಯದಲ್ಲಿ 69 ಅಂಕ ದೊರೆತು ಪಾಸಾಗಿದ್ದಾಗಿ ಪ್ರಕಟವಾಗಿತ್ತು. ಸ್ನಾತಕೋತ್ತರ ಪದವಿಗೆ ಅರ್ಜಿ ಸಲ್ಲಿಸಲು ಮುಂದಾದ ಅವರು, ಪದವಿ ಫಲಿತಾಂಶದ ಪ್ರತಿ ತೆಗೆದುಕೊಳ್ಳಲು ಮತ್ತೆ ವೆಬ್‌ಸೈಟ್‌ಗೆ ಭೇಟಿ ನೀಡಿದಾಗ 69 ಅಂಕ ಇದ್ದದ್ದು 29 ಆಗಿತ್ತು! ವ್ಯವಸ್ಥೆಯ ಲೋಪದಿಂದಾಗಿ ಕೆಲವೇ ಗಂಟೆಗಳ ಅವಧಿಯಲ್ಲಿ ಫೇಲಾಗಿಬಿಟ್ಟಿದ್ದರು. ಇನ್ನೊಬ್ಬ ವಿದ್ಯಾರ್ಥಿಗೂ ಅದೇ ವಿಷಯದಲ್ಲಿ ಬೆಳಗ್ಗೆ ನೋಡುವಾಗ 69 ಅಂಕ ಇದ್ದದ್ದು ಮಧ್ಯಾಹ್ನ ನೋಡುವಾಗ 44ಕ್ಕೆ ಇಳಿದು ಫೇಲ್‌ ಎಂದು ನಮೂದಿಸಲಾಗಿತ್ತು. ಮತ್ತೊಬ್ಬ ವಿದ್ಯಾರ್ಥಿಯದ್ದೂ ಇದೇ ಪರಿಸ್ಥಿತಿ. 68 ಅಂಕ ಇದ್ದದ್ದು 33 ಆಗಿ ಫೇಲಾಗಿಬಿಟ್ಟಿದ್ದರು.

ಭಾನುವಾರ ಈ ವಿದ್ಯಾರ್ಥಿಗಳು ವಿವಿಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಇಬ್ಬರು ವಿದ್ಯಾರ್ಥಿಗಳ ಅಂಕ ಮತ್ತೆ ಮೊದಲು ಇದ್ದಷ್ಟೇ ಮಾಡಿ ಮರು ಪ್ರಕಟ ಮಾಡಲಾಗಿದೆ. ಆದರೆ, ಪಾಸ್‌ ಅಂಕಗಳನ್ನು ನಮೂದಿಸಿದ್ದರೂ ಇಂಟರ್ನಲ್‌ ಮತ್ತು ಥಿಯರಿ ಅಂಕ ಸೇರಿಸಿ ಒಟ್ಟು ಅಂಕದಲ್ಲಿ ವ್ಯತ್ಯಾಸವಾಗಿದೆ, ಪಾಸಾಗಿದ್ದರೂ ಫೇಲ್‌ ಎಂದೇ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿತ್ತು. ಫೇಲಾಗಿದ್ದ ಇನ್ನೊಬ್ಬ ವಿದ್ಯಾರ್ಥಿ ಇನ್ನೂ ತನ್ನ ಫಲಿತಾಂಶಕ್ಕಾಗಿ ಕಾಯುತ್ತಲೇ ಇದ್ದಾರೆ.

ಇನ್ನೊಬ್ಬರು ವಿದ್ಯಾರ್ಥಿನಿ ಮೇಜರ್‌ ಇಂಗ್ಲಿಷ್‌ನಲ್ಲಿ ಟಾಪರ್‌ ಆಗಿಯೇ ಪಾಸಾಗುತ್ತಿದ್ದವರ ರಿಸಲ್ಟ್‌ ಈ ಬಾರಿ ಬುಡಮೇಲಾಗಿದೆ. 120 ಅಂಕಗಳುಳ್ಳ ಥಿಯರಿ ಪೇಪರ್‌ನಲ್ಲಿ ಕೇವಲ 79 ಅಂಕ ಬಂದಿದ್ದರಿಂದ ಅವರು ತೀವ್ರ ಆಘಾತಗೊಂಡಿದ್ದಾರೆ. ವ್ಯತಿರಿಕ್ತ ಫಲಿತಾಂಶ ಪಡೆದುಕೊಂಡ ಅನೇಕ ವಿದ್ಯಾರ್ಥಿಗಳ ಪೋಷಕರು ಕಾಲೇಜಿನ ಪ್ರಾಂಶುಪಾಲರುಗಳನ್ನು ಸಂಪರ್ಕಿಸಿದ್ದು, ವಿವಿಯನ್ನು ಸಂಪರ್ಕಿಸುವಂತೆ ಕಳುಹಿಸಿಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ. ವಿಶ್ವವಿದ್ಯಾನಿಲಯಕ್ಕೆ ಕರೆ ಮಾಡಿದರೆ ಸಮಸ್ಯೆ ಕೇಳದೆ ಫೋನ್‌ ಕಟ್‌ ಮಾಡುತ್ತಿರುವ ಬಗ್ಗೆಯೂ ವಿದ್ಯಾರ್ಥಿಗಳು ದೂರಿದ್ದಾರೆ.

ಅನೇಕ ಕಾಲೇಜುಗಳಲ್ಲೂ ಸಮಸ್ಯೆ: ಅನೇಕ ಕಾಲೇಜುಗಳ ಫಲಿತಾಂಶದಲ್ಲೂ ಇಂಥ ಅನೇಕ ಸಮಸ್ಯೆಗಳು ಎದುರಾಗಿವೆ ಎಂದು ಹೆಸರು ಹೇಳಲಿಚ್ಛಿಸದ ಉಪನ್ಯಾಸಕರಿಬ್ಬರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ. ಈ ಹಿಂದೆ ಮೌಲ್ಯಮಾಪನ ಬಳಿಕ ಅದನ್ನು ಮತ್ತೆ ಮರು ಪರಿಶೀಲಿಸಿ ಸರ್ವರ್‌ಗೆ ಅಪ್‌ಲೋಡ್‌ ಮಾಡಲಾಗುತ್ತಿತ್ತು. ಈ ಬಾರಿ ಮರುಪರಿಶೀಲನೆ ಮಾಡದೆ ಹೀಗಾಗಿರುವ ಸಾಧ್ಯತೆಯ ಬಗ್ಗೆಯೂ ಅವರು ಹೇಳಿಕೊಂಡಿದ್ದಾರೆ.

ಇನ್ನು ಕೆಲವು ವಿದ್ಯಾರ್ಥಿಗಳ ಫಲಿತಾಂಶ ತಡೆ ಹಿಡಿಯಲಾಗಿದೆ. ಈ ವಿದ್ಯಾರ್ಥಿಗಳು ತಮ್ಮ ಸಬ್ಜೆಕ್ಟ್ ಕೋಡ್‌ ಬರೆಯುವಾಗ ತಪ್ಪಾಗಿ ನಮೂದಿಸಿದ್ದರಿಂದ ಅವರು ನಿಜವಾಗಿಯೂ ಯಾವ ವಿಷಯದಲ್ಲಿ ಪರೀಕ್ಷೆ ಬರೆದಿದ್ದಾರೆ ಎನ್ನುವುದನ್ನು ಪರಿಶೀಲಿಸಬೇಕಾಗುತ್ತದೆ. ಹಾಗಾಗಿ ವಿಳಂಬವಾಗಿದೆ ಎಂದು ವಿವಿ ಅಧಿಕಾರಿಗಳು ತಿಳಿಸಿದ್ದಾರೆ. ಫ್ಯಾಶನ್‌ ಡಿಸೈನ್‌ ಮತ್ತು ಇಂಟೀರಿಯರ್‌ ಡಿಸೈನ್‌ ಕೋರ್ಸ್‌ಗಳೆರಡರ ಫಲಿತಾಂಶ ಬಾಕಿಯಿದ್ದು, ಶೀಘ್ರ ಪ್ರಕಟವಾಗುವ ನಿರೀಕ್ಷೆಯಿದೆ.

click me!