ಕೋಲಾರ: ಸರ್ಕಾರಿ ಕನ್ನಡ ಶಾಲೆಗೆ ಮಲ ಬಳಿದ ದುರುಳರು

By Kannadaprabha NewsFirst Published Dec 17, 2023, 1:00 AM IST
Highlights

ಕಳೆದ ರಾತ್ರಿ ಬಾಗಿಲು, ಕಿಟಕಿ, ಗೋಡೆ ಮತ್ತು ಅನ್ನದಾಸೋಹದ ಬಿಲ್ಡಿಂಗ್‌ಗೆ ಮಲವನ್ನು ಬಳಿಯುವ ಮೂಲಕ ವಿಕೃತಿ ಮೆರೆಯಲಾಗಿದ್ದು, ಗಬ್ಬುವಾಸನೆಗೆ ಹೆದರಿದ ಶಿಕ್ಷಕಿಯರು ಮಕ್ಕಳನ್ನು ಮುಖ್ಯೋಪಾಧ್ಯಾಯರ ಕಚೇರಿಯಲ್ಲಿ ಕುಳ್ಳರಿಸಿಕೊಂಡು ಪಾಠ ಮಾಡುತ್ತಿದ್ದಾರೆ.

ಕೋಲಾರ(ಡಿ.17):  ನಗರದ ಬಿಇಒ ಕಚೇರಿ ಆವರಣದಲ್ಲಿರುವ ಸರ್ಕಾರಿ ಕನ್ನಡ ಹಳೆಯ ಮಾಧ್ಯಮಿಕ ಪಾಠಶಾಲೆ ಮತ್ತು ಪಿಪಿಎಸ್ ಡಯಟ್ ಸರ್ಕಾರಿ ಶಾಲೆಗೆ ದುಷ್ಕರ್ಮಿಗಳು ಗಲೀಜು ಬಳಿದು ವಿರೋಪಗೊಳಿಸುವ ಮೂಲಕ ವಿಕೃತಿ ಮೆರೆದಿದ್ದಾರೆ. ಕಳೆದ ರಾತ್ರಿ ಬಾಗಿಲು, ಕಿಟಕಿ, ಗೋಡೆ ಮತ್ತು ಅನ್ನದಾಸೋಹದ ಬಿಲ್ಡಿಂಗ್‌ಗೆ ಮಲವನ್ನು ಬಳಿಯುವ ಮೂಲಕ ವಿಕೃತಿ ಮೆರೆಯಲಾಗಿದ್ದು, ಗಬ್ಬುವಾಸನೆಗೆ ಹೆದರಿದ ಶಿಕ್ಷಕಿಯರು ಮಕ್ಕಳನ್ನು ಮುಖ್ಯೋಪಾಧ್ಯಾಯರ ಕಚೇರಿಯಲ್ಲಿ ಕುಳ್ಳರಿಸಿಕೊಂಡು ಪಾಠ ಮಾಡುತ್ತಿದ್ದಾರೆ.

ಬಿಇಒ ಕಚೇರಿ ಕಾಂಪೌಂಡ್‌ನಲ್ಲಿ ಸೇವಾದಳ ಕಚೇರಿ, ಉರ್ದುಶಾಲೆ, ಗಣಪತಿ ದೇವಸ್ಥಾನ ಇದ್ದರೂ ಕಾಕದೃಷ್ಠಿ ಮಾತ್ರ ಕನ್ನಡ ಶಾಲೆಗಳತ್ತಲೇ ಬೀಳುತ್ತಿದ್ದು, ೪ನೇ ಬಾರಿಗೆ ಕೃತ್ಯ ಮರುಕಳಿಸಿರುವುದು ಮಕ್ಕಳು ಮತ್ತು ಶಿಕ್ಷಕರಲ್ಲಿ ಆತಂಕ ಉಂಟು ಮಾಡಿದೆ.

ಸಿಎಂ ಸಿದ್ದರಾಮಯ್ಯ ಏನು ಪ್ರಧಾನಿಮಂತ್ರಿನಾ?: ಸಂಸದ ಮುನಿಸ್ವಾಮಿ

ಕಾಳಮ್ಮ ಗುಡಿಬೀದಿ ರಸ್ತೆಯಲ್ಲಿರುವ ಬಿಇಒ ಕಚೇರಿ ಕಾಂಪೌಂಡ್‌ಗೆ ಇಬ್ಬರು ತೂರುವಷ್ಟು ಕಿಂಡಿ ಕೊರೆದಿರುವ ಪುಂಡುಪೋಕರಿಗಳು ರಾತ್ರಿ ವೇಳೆ ಸರ್ಕಾರಿ ಶಾಲೆ ಕಾರಿಡಾರ್‌ನಲ್ಲಿ ಕುಳಿತುಕೊಂಡು ಮದ್ಯಪಾನ ಮಾಡುವುದು, ಧೂಮಪಾನ ಮಾಡುವುದನ್ನು ಸಾಮಾನ್ಯವಾಗಿಸಿಕೊಂಡಿದ್ದು, ಕತ್ತಲಾದೊಡನೆ ಅವ್ಯವಹಾರಗಳ ತಾಣವಾಗಿ ಮಾರ್ಪಾಟಾಗುತ್ತಿದೆ ಎಂಬುದಕ್ಕೆ ಶಾಲೆ ಹಿಂದೆ ಬಿದ್ದಿರುವ ಬಳಸಿದ ನಿರೋಧ್‌ಗಳು, ಮದ್ಯಪಾನದ ಟೆಟ್ರಾಪ್ಯಾಕ್‌ಗಳು, ಪ್ಲಾಸ್ಟಿಕ್ ಕಪ್ಪುಗಳು, ನೀರಿನ ಪ್ಯಾಕೆಟ್‌ಗಳು ಸಾಕ್ಷಿಯಾಗಿವೆ.

ಕಸದ ತೊಟ್ಟಿ

ಶಾಲೆ ಸಮೀಪದ ಯಾರ ಮನೆಯಲ್ಲಾದರೂ ಸಾವಾದರೆ ಹಾಸಿಗೆ, ದಿಂಬು, ಹಳೆ ಬಟ್ಟೆಗಳು, ದೇವರ ಒಡೆದ ಫೋಟೋಗಳನ್ನು ಶಾಲೆಯ ಶೌಚಾಲಯದ ಮುಂದೆ ಬಿಸಾಡಿ ಹೋಗುತ್ತಿದ್ದು, ಜತೆಗೆ ಭಾನುವಾರದಂದು ಮಕ್ಕಳ ಟಾಯ್ಲೆಟ್ ಸಾರ್ವಜನಿಕರ ಪಾಯಖಾನೆಯಾಗಿ ಬಳಕೆ ಆಗುವುದರಿಂದಾಗಿ ಸೋಮವಾರದಂದು ಶಿಕ್ಷಕಿಯರು ತಿಕ್ಕಿ ತೊಳೆದು ಶುಭ್ರಗೊಳಿಸಬೇಕಾದ ಸ್ಥಿತಿ ಉಂಟಾಗಿದೆ.

ಲೋಕಸಭೆಯಲ್ಲಿ ಬಣ್ಣದ ಗ್ಯಾಸ್ ಬಾಂಬ್ ಸ್ಫೋಟ: ಸಂಸದ ಮುನಿಸ್ವಾಮಿ ಖಂಡನೆ

ವೆಂಟಿಲೇಟರ್ ಮೂಲಕ ಗಲೀಜನ್ನು ಶಾಲಾ ಕೊಠಡಿಗಳಿಗೆ ದುಷ್ಕರ್ಮಿಗಳು ಹಾಕುತ್ತಿದ್ದು, ಹೀಗಾಗಿ ಬೆಳಕಿನ ಕಿಂಡಿಯನ್ನು ಮುಚ್ಚಿಸಿದ್ದ ಪ್ರತೀಕಾರಕ್ಕಾಗಿ ಮಲವನ್ನು ಶಾಲಾ ಕೊಠಡಿ ಮತ್ತು ಬಾಗಿಲುಗಳಿಗೆ ಬಳಿಯುವ ಮೂಲಕ ಅಸಹ್ಯ ವಾತಾವರಣವನ್ನು ಉಂಟು ಮಾಡಿದ್ದಾರೆ. ನಗರಠಾಣೆ ಪೊಲೀಸರು ರಾತ್ರಿ ವೇಳೆ ಬೀಟ್ ಮಾಡಬೇಕೆಂದು ಓಲ್ಡ್ ಮಿಡ್ಲಸ್ಕೂಲ್ ಮುಖ್ಯೋಧ್ಯಾಯಿನಿ ಸರಸ್ವತಿ ಆಗ್ರಹಿಸಿದ್ದಾರೆ.

ಶಿಕ್ಷಣ ಇಲಾಖೆ ಮತ್ತು ನಗರಸಭೆ ಅಧಿಕಾರಿಗಳು ಶಾಲೆಯತ್ತ ಗಮನಹರಿಸಿ ರಾತ್ರಿ ವೇಳೆ ವಾಚ್‌ಮೆನ್ ನೇಮಕ ಮಾಡುವ ಮೂಲಕ ವಿಕೃತಿಗೆ ಕಡಿವಾಣ ಹಾಕಬೇಕಾಗಿದೆ. ತಕ್ಷಣ ಕಾಂಪೌಂಡ್ ಕಿಂಡಿ ಮುಚ್ಚುವ ಜತೆಗೆ ಪೊಲೀಸ್ ಬೀಟ್ ವ್ಯವಸ್ಥೆ ಆಗಬೇಕಿದೆ ಎಂದು ಕರವೇ ಜಿಲ್ಲಾಧ್ಯಕ್ಷ ಮೇಡಿಹಾಳ ಎಂ.ಕೆ.ರಾಘವೇಂದ್ರ ಆಗ್ರಹಿಸಿದ್ದಾರೆ.

click me!