
ಬೆಂಗಳೂರು: ಕಾನೂನಿನ ದೃಷ್ಟಿಯಲ್ಲಿ ಅಪ್ರಾಪ್ತ ಬಾಲಕಿ ಜೊತೆಗಿನ ಸಮ್ಮತಿ ಲೈಂ*ಗಿಕ ಕ್ರಿಯೆ ಮಾನ್ಯವಲ್ಲ ಹಾಗೂ ಲೈಂ*ಗಿಕ ಕ್ರಿಯೆಗೆ ಸಂತ್ರಸ್ತೆಯ ಸಮ್ಮತಿಯಿತ್ತು ಎಂಬ ಕಾರಣಕ್ಕೆ ಆರೋಪವನ್ನು ಕೈಬಿಡಲಾಗದು ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅಪ್ರಾಪ್ತೆಯನ್ನು ಅಪಹರಿಸಿ ಲೈಂ*ಗಿಕ ದೌರ್ಜನ್ಯ ಎಸಗಿದ ಅಪರಾಧ ಸಂಬಂಧ ಯುವಕನಿಗೆ 20 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದೆ.
ಪ್ರಕರಣದಿಂದ ಆರೋಪಿಯನ್ನು ಖುಲಾಸೆಗೊಳಿಸಿದ್ದ ಮಂಡ್ಯ ಸೆಷನ್ಸ್ ನ್ಯಾಯಾಲಯ ಆದೇಶ ಪ್ರಶ್ನಿಸಿ ಸಂತ್ರಸ್ತೆಯ ಪೋಷಕರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ಆರೋಪಿ ಈ ಆದೇಶ ಪ್ರತಿ ದೊರೆತ ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗಬೇಕು. ತಪ್ಪಿದರೆ ಪೊಲೀಸರು ತಕ್ಷಣವೇ ಆತನನ್ನು ಬಂಧಿಸಿ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕು. ನ್ಯಾಯಾಲಯ ಅಪರಾಧಿಯನ್ನು ಜೈಲಿಗೆ ಕಳುಹಿಸಬೇಕು ಎಂದು ಸೂಚಿಸಿದೆ.
ಆರೋಪಿ ಮತ್ತು ಸಂತ್ರಸ್ತೆಯ ಮಧ್ಯೆ ಸಮ್ಮತಿ ಮೇರೆಗೆ ಲೈಂ*ಗಿಕ ಕ್ರಿಯೆ ನಡೆದಿದೆ. ಹಾಗಾಗಿ, ವಿಚಾರಣಾ ನ್ಯಾಯಾಲಯದ ಆದೇಶ ಸರಿಯಾಗಿದೆ ಎಂಬ ಆರೋಪಿಯ ಪರ ವಕೀಲ ವಾದವನ್ನು ಹೈಕೋರ್ಟ್ ತಿರಸ್ಕರಿಸಿದೆ.
ಸಂತ್ರಸ್ತೆಯ ಜನನ ಪ್ರಮಾಣ ಪತ್ರ ಹಾಗೂ ಎಸ್ಎಸ್ಎಲ್‌ಸಿ ಅಂಕಪಟ್ಟಿ ಪ್ರಕಾರ ಘಟನೆ ನಡೆದಾಗ ಆಕೆಗೆ 16 ವರ್ಷ. ಇದರಿಂದ ಪೋಕ್ಸೋ ಕಾಯ್ದೆಯಡಿ ಆಕೆ ಅಪ್ರಾಪ್ತೆ ಆಗಲಿದ್ದಾರೆ. ಸಂತ್ರಸ್ತೆಯ ವಯಸ್ಸು 18 ವರ್ಷಕ್ಕಿಂತ ಕಡಿಮೆ ಇದ್ದಾಗ ಲೈಂ*ಗಿಕ ಕ್ರಿಯೆಗೆ ಆಕೆಯ ಸಮ್ಮತಿ ಇದೆಯೋ ಇಲ್ಲವೋ ಎಂಬುದು ಕಾನೂನಿನಲ್ಲಿ ಮುಖ್ಯವಾಗುವುದಿಲ್ಲ. ಅಪ್ರಾಪ್ತೆಯ ಸಮ್ಮತಿಯನ್ನು ರಕ್ಷಣೆಯಾಗಿ ಪಡೆಯಲು ಆರೋಪಿಗೆ ಯಾವುದೇ ಹಕ್ಕಿರುವುದಿಲ್ಲ ಎಂದು ಪೀಠ ಹೇಳಿದೆ.
ಆರೋಪಿಯು ಸಂತ್ರಸ್ತೆಗೆ ಗರ್ಭಪಾತ ಮಾಡಿಸಿದ್ದ. ಭ್ರೂಣಕ್ಕೆ ಆರೋಪಿ ಮತ್ತು ಸಂತ್ರಸ್ತೆಯೇ ಜೈವಿಕ ತಂದೆ-ತಾಯಿ ಎಂದು ಡಿಎನ್ಎ ವರದಿ ದೃಢಪಡಿಸಿದೆ. ಸಂತ್ರಸ್ತೆಯ ವಯಸ್ಸು ಮತ್ತು ಡಿಎನ್ಎ ಸಾಕ್ಷ್ಯಗಳನ್ನು ಪರಿಗಣಿಸದೆ ಆರೋಪಿಯನ್ನು ಖುಲಾಸೆಗೊಳಿಸಿದ ವಿಚಾರಣಾ ನ್ಯಾಯಾಲಯದ ಕ್ರಮ ಕಾನೂನು ಬಾಹಿರ. ಆ ನ್ಯಾಯಾಲಯ ಪೋಕ್ಸೋ ಕಾಯ್ದೆಯ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು ಪೀಠ ಕಿಡಿ ಕಾರಿದೆ.
2021ರಲ್ಲಿ ಫೇಸ್‌ಬುಕ್ ಮೂಲಕ ಪರಿಚಯಾಗಿದ್ದ 16 ವರ್ಷದ ಸಂತ್ರಸ್ತೆಯನ್ನು ಕಾರಿನಲ್ಲಿ ಅಪಹರಿಸಿ ವಿವಿಧ ಸ್ಥಳಗಳಿಗೆ ಕರೆದೊಯ್ದು ಹಲವು ಬಾರಿ ಲೈಂ*ಗಿಕ ಕ್ರಿಯೆ ನಡೆಸಿದ್ದ. ಪರಿಣಾಮ ಸಂತ್ರಸ್ತೆ ಗರ್ಭಿಣಿ ಆಗಿದ್ದಳು ಎಂಬ ಆರೋಪ ಮಂಡ್ಯ ಜಿಲ್ಲೆ ಸಚಿನ್ ಅಲಿಯಾಸ್ ಚೋರ (26) ಎಂಬಾತನ ಮೇಲಿತ್ತು. ಮದ್ದೂರು ಠಾಣಾ ಪೊಲೀಸರು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು. ಆರೋಪಿಯನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು. ಅದನ್ನು ಪ್ರಶ್ನಿಸಿ ಸಂತ್ರಸ್ತೆ ಪೋಷಕರು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.