
ನರಸಿಂಹರಾಜಪುರ: ಭದ್ರಾ ಮೇಲ್ದಂಡೆ ಯೋಜನೆಯವರು ತಾಲೂಕಿನ ಮುತ್ತಿನಕೊಪ್ಪ ಗ್ರಾಮದ ಭದ್ರಾ ಕಾಲೋನಿ- ತಾವರೆ ಘಟ್ಟದ ಸಂಪರ್ಕಿ ಸುವ 1.50 ಕಿ.ಮೀ. ದೂರದ ರಸ್ತೆಗೆ ₹1.50 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ್ದ ಟಾರು ರಸ್ತೆ ಕಳಪೆ ಕಾಮಗಾರಿಯಿಂದ 3 ತಿಂಗಳಲ್ಲೇ ರಸ್ತೆ ಮೇಲ್ಬಾಗದ ಸಣ್ಣ, ಸಣ್ಣ ಜಲ್ಲಿಯೆಲ್ಲಾ ಎದ್ದಿರುವುದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭದ್ರಾ ಕಾಲೋನಿ- ತಾವರೆಘಟ್ಟ ರಸ್ತೆ ಅಭಿವೃದ್ಧಿಗೆ ₹2 ಕೋಟಿ ಮೀಸಲಿಟ್ಟಿದ್ದು ₹1.50 ಕೋಟಿ ಟಾರು ಹಾಕಲು ಹಾಗೂ ಉಳಿದ ₹50 ಲಕ್ಷ ಮೋರಿಗೆ ಮೀಸಲಿಡಲಾಗಿತ್ತು. ಪ್ರಥಮ ಹಂತವಾಗಿ ಈ ರಸ್ತೆಗೆ ₹1.50 ಕೋಟಿ ವೆಚ್ಚದಲ್ಲಿ ಮೇ ತಿಂಗಳ ಅಂತ್ಯದಲ್ಲಿ ಟಾರು ಹಾಕಲಾಗಿತ್ತು. ಒಂದೇ ದಿನದಲ್ಲಿ ಒಂದು ಲೇಯರ್ ಟಾರು ಮಾತ್ರ ಹಾಕಿ ಹೋಗಿದ್ದಾರೆ. ಟಾರು ಹಾಕಿದ 3 ದಿನದಲ್ಲೇ ಅಲ್ಲಲ್ಲಿ ಟಾರು ಕಿತ್ತು ಹೋಗಿದೆ. ವಾಹನಗಳ ಓಡಾಟ ಶುರುವಾದ ಮೇಲೆ ರಸ್ತೆ ಮೇಲ್ಬಾಗದ ಸಣ್ಣ ಜಲ್ಲಿಗಳು ಕಿತ್ತು ಹೋಗುತ್ತಾ ಬಂದಿವೆ. 3 ತಿಂಗಳಲ್ಲಿ ರಸ್ತೆ ಸಂಪೂರ್ಣ ಹಾಳಾಗಿದೆ. ಕೆಲವು ಭಾಗದಲ್ಲಿ ಗುಂಡಿ ಸಹ ಬಿದ್ದಿದೆ.
ರಸ್ತೆಯಲ್ಲಿ ಬೈಕ್, ಸ್ಕೂಟಿ ಹೋಗುವಾಗ ಚಕ್ರಕ್ಕೆ ಜಲ್ಲಿ ಸಿಕ್ಕಿ ಬೈಕ್ ಪಲ್ಟಿಯಾದ ಘಟನೆ ನಡೆದಿದೆ. ಗ್ರಾಮಸ್ಥರ ಪ್ರಕಾರ ಒಬ್ಬ ಬೈಕ್ ಸವಾರ ಅಪಘಾತದಿಂದ ಆಸ್ಪತ್ರೆಗೆ ಸೇರಿದ್ದು ಆತನಿಗೆ 16 ಹೊಲಿಗೆ ಹಾಕಲಾಗಿತ್ತು. ಇದರಿಂದ ಗಾಬರಿಯಾದ ಜನರು ರಸ್ತೆಯಲ್ಲಿ ಎದ್ದ ಸಣ್ಣ, ಸಣ್ಣ ಜಲ್ಲಿಯನ್ನು ಪೊರಕೆಯಿಂದ, ಹಾರೆಯಿಂದ ತೆಗೆದು ಬದಿಗೆ ಸರಿಸಿ ವಾಹನ ಓಡಿಸುತ್ತಿದ್ದಾರೆ.
ಈ ರಸ್ತೆಗೆ ಟಾರು ಹಾಕಲು ಮೈಸೂರು ಭಾಗದ ಗುತ್ತಿಗೆದಾರರು ಟೆಂಡರ್ ಹಿಡಿದು ತರೀಕೆರೆ ಭಾಗದ ಒಳ ಗುತ್ತಿಗೆ ದಾರರಿಗೆ ವಹಿಸಿಕೊಟ್ಟಿದ್ದರು ಎನ್ನಲಾಗಿದೆ. ಮಳೆಗಾಲ ಸಮೀಸುತ್ತಿದೆ ಎಂಬ ಗಡಿಬಿಡಿಯಿಂದ ಗುತ್ತಿಗೆದಾರರು ಮೇ ಅಂತ್ಯದಲ್ಲಿ ಒಂದೇ ದಿನದಲ್ಲಿ ಕಳಪೆ ಗುಣಮಟ್ಟದಲ್ಲಿ ಒಂದೇ ಲೇಯರ್ ಟಾರು ಹಾಕಿರುವುದು 3 ತಿಂಗಳಲ್ಲೇ ರಸ್ತೆ ಹಾಳಾಗಲು ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮಲೆನಾಡು ಭಾಗದಲ್ಲಿ ಅತಿಯಾಗಿ ಮಳೆ ಸುರಿಯುತ್ತಿರುವುದರಿಂದ ಉತ್ತಮ ಗುಣಮಟ್ಟದ ರಸ್ತೆಗಳು ಸಹ ಹಾಳಾಗುತ್ತಿದೆ. ರಸ್ತೆ ಎರಡು ಬದಿಯ ಮರಗಳ ಹನಿಗಳು ನಿರಂತರವಾಗಿ ಬೀಳುತ್ತಿರುವುದರಿಂದಲೂ ರಸ್ತೆಗಳು ಗುಂಡಿ ಬೀಳುತ್ತಿದೆ. ₹1.50 ಕೋಟಿ ಖರ್ಚು ಮಾಡಿದ ರಸ್ತೆ ಕೇವಲ 3 ತಿಂಗಳಲ್ಲೇ ಹಾಳಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ₹1.50 ಕೋಟಿಯಲ್ಲಿ 1.50 ಕಿ.ಮೀಟರ್ ರಸ್ತೆಯನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಬೇಕಾಗಿತ್ತು. ಕಳಪೆ ಕಾಮಗಾರಿ ಮಾಡಿದವರ ವಿರುದ್ಧಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ರಸ್ತೆಯಲ್ಲಿ ಎದ್ದ ಸಣ್ಣ ಜಲ್ಲಿಗಳಿಂದ ಬೈಕ್, ಸ್ಕೂಟಿಯಂತಹ ದ್ವಿಚಕ್ರ ವಾಹನ ಓಡಾಡುವುದು ಕಷ್ಟವಾದ್ದರಿಂದ ಗ್ರಾಮಸ್ಥರು ಹಾಗೂ ಒಬ್ಬ ಅಜ್ಜಿ ಪೊರಕೆಯಿಂದ ರಸ್ತೆಯ ಮೇಲೆ ಎದ್ದ ಸಣ್ಣ,ಸಣ್ಣ ಜಲ್ಲಿಗಳನ್ನು ಗುಡಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕರಿಂದ ಬಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಭದ್ರಾ ಕಾಲೋನಿ- ತಾವರೆಘಟ್ಟ ರಸ್ತೆಯನ್ನು ಒಂದೇ ದಿನದಲ್ಲಿ ಕೆಲಸಗಾರರು ಬಂದು ಕೇವಲ ಒಂದೇ ಲೇಯರ್ ಟಾರು ಹಾಕಿ ಹೋಗಿದ್ದಾರೆ. 3 ದಿನದಲ್ಲೇ ಕಿತ್ತುಹೋಗಿದೆ.ಈ ವರ್ಷ ಮಳೆಗಾಲ ಕಡಿಮೆಯಾಗಿದ್ದರೂ ರಸ್ತೆ ಕಿತ್ತು ಹೋಗಿದೆ. ಈಗಾಗಲೇ ಗ್ರಾಮಸ್ಥರು ಮುತ್ತಿನಕೊಪ್ಪ ನೀರಾವರಿ ಇಲಾಖೆ ಎಂಜಿನಿಯರ್ ಹಾಗೂ ಬಿ.ಆರ್.ಪಿಯ ಎಂಜಿನಿಯರ್ ಗೆ ಮನವಿ ಸಲ್ಲಿಸಿ ಮತ್ತೆ ಟಾರು ರಸ್ತೆ ಮಾಡಿಸುವಂತೆ ಮನವಿ ಸಲ್ಲಿಸಿದ್ದಾರೆ.
ಪ್ರಕಾಶ್, ತಾವರೆ ಘಟ್ಟ, ಸ್ಥಳೀಯರು, ಮುತ್ತಿನಕೊಪ್ಪ ಗ್ರಾಮ