SSLC ಪ್ರಶ್ನೆ ಪತ್ರಿಕೆ ಲೀಕ್: ವಿದ್ಯಾರ್ಥಿಗಳು ಭಯ ಪಡೋದು ಬೇಡ, ಸುರೇಶ್‌ಕುಮಾರ್‌

By Kannadaprabha NewsFirst Published Feb 27, 2020, 8:48 AM IST
Highlights

ಎಸ್ಸೆಸ್ಸೆಲ್ಸಿ ಮುಖ್ಯ ಪರೀಕ್ಷೆ ಲೀಕ್‌ ಪ್ರೂಫ್‌: ಸುರೇಶ್‌ಕುಮಾರ್| ಪ್ರಿಪರೇಟರಿಗೂ ಮುಖ್ಯ ಪರೀಕ್ಷೆಗೂ ಹೋಲಿಸಬೇಡಿ| ಮುಖ್ಯ ಪರೀಕ್ಷೆ ಎಂದಿನಂತೆ ನಿರಾತಂಕ: ಶಿಕ್ಷಣ ಸಚಿವ| ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗುವುದು| 

ಬೆಂಗಳೂರು(ಫೆ.27): ಎಸ್ಸೆಸ್ಸೆಲ್ಸಿ ಪೂರ್ವಸಿದ್ಧತಾ ಪರೀಕ್ಷೆಗೂ ಮುಖ್ಯಪರೀಕ್ಷೆಗೂ ತಳಕು ಹಾಕುವುದು ಬೇಡ. ಪ್ರತಿ ವರ್ಷದಂತೆ ಈ ವರ್ಷವೂ ಮುಖ್ಯ ಪರೀಕ್ಷೆ ‘ಲೀಕ್‌ ಪ್ರೂಫ್‌’ ಆಗಿ ನಡೆಯಲಿದೆ. ಯಾವುದೇ ಆತಂಕ ಬೇಡ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ತಿಳಿಸಿದ್ದಾರೆ.

SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ವಾಟ್ಸಪ್‌ನಲ್ಲಿ ಸೋರಿಕೆ

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೂರ್ವ ಸಿದ್ಧತಾ ಪರೀಕ್ಷೆ ನಡೆಸುವ ಉದ್ದೇಶ ಮುಖ್ಯಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ಮಾದರಿ ಹೇಗಿರುತ್ತದೆ ಎಂದು ವಿದ್ಯಾರ್ಥಿಗಳಿಗೆ ತಿಳಿಸುವುದಾಗಿರುತ್ತದೆ. ಈ ಪ್ರಶ್ನೆ ಪತ್ರಿಕೆಯನ್ನು ಮೂರು ದಿನ ಮೊದಲು ಶಾಲೆಗಳಿಗೆ ಕಳುಹಿಸಲಾಗಿರುತ್ತದೆ. ಮುಖ್ಯಪರೀಕ್ಷೆ ಮಾದರಿಯಲ್ಲಿ ಯಾವುದೇ ಶಿಷ್ಟಾಚಾರಗಳು ಈ ಪರೀಕ್ಷೆಗೆ ಇರುವುದಿಲ್ಲ. ಹಾಗಾಗಿ ಪೂರ್ವ ಸಿದ್ಧತಾ ಪರೀಕ್ಷೆಗೂ, ಮುಖ್ಯ ಪರೀಕ್ಷೆಗೂ ತಳುಕು ಹಾಕುವುದು ಬೇಡ. ಹಲವು ವರ್ಷಗಳಿಂದ ಮುಖ್ಯಪರೀಕ್ಷೆ ವ್ಯವಸ್ಥಿತವಾಗಿ ನಡೆದುಕೊಂಡು ಬಂದಿದೆ. ಈ ಬಾರಿಯೂ ಅದೇ ರೀತಿ ಯಾವುದೇ ಲೋಪಗಳಿಲ್ಲದಂತೆ ನಡೆಯಲಿದೆ ಎಂದರು.

ದ್ವಿತೀಯ ಪಿಯುಸಿ ಪರೀಕ್ಷೆ:

ಏ.4ರಿಂದ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆಯನ್ನೂ ಯಾವುದೇ ಲೋಪಗಳಿಲ್ಲದಂತೆ ಕಟ್ಟುನಿಟ್ಟಾಗಿ ನಡೆಸುವ ಸಂಬಂಧ ಎಲ್ಲ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಖಜಾನೆ ಅಧಿಕಾರಿಗಳು, ರಾಜ್ಯದ ಸಿಐಡಿ ಮತ್ತು ಪೊಲೀಸ್‌ ಇಲಾಖೆಯೊಂದಿಗೂ ಚರ್ಚಿಸಿದ್ದು, ಪರೀಕ್ಷೆ ವೇಳೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

SSLC ಪೂರ್ವಸಿದ್ಧತಾ ಪರೀಕ್ಷೆ: ಮತ್ತೊಂದು ಪ್ರಶ್ನೆಪತ್ರಿಕೆಯೂ ಲೀಕ್!

ಪ್ರತಿಬಾರಿ ಪರೀಕ್ಷಾ ಕೇಂದ್ರಗಳಲ್ಲಿನ ಸಿಸಿಟಿವಿಗಳನ್ನು ಇಲಾಖೆಯ ಕೇಂದ್ರ ಕಚೇರಿಯಿಂದ ನಿರ್ವಹಣೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಕಚೇರಿಗಳಿಂದಲೇ ನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಹಾಗಾಗಿ, ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಈ ಬಾರಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲಾಗುವುದು ಎಂದು ಭರವಸೆ ನೀಡಿದರು.
 

click me!