
ಮೈಸೂರು(ಮಾ.20): ಮಾಜಿ ಸಚಿವರ ಸೀಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮನೆ ಹಾಳು ಮಾಡಿದ ಮಹಾನ್ ನಾಯಕ ಯಾರೆಂಬ ತಿಳಿದುಕೊಳ್ಳುವ ಕುತೂಹಲ ರಾಜ್ಯಕ್ಕೆ ಇದೆ. ಆದರೆ ಡಿ.ಕೆ.ಶಿವಕುಮಾರ್ ತಮ್ಮನ್ನೇ ಏಕೆ ಮುಟ್ಟಿಕೊಳ್ಳುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲಾ ಪಕ್ಷದಲ್ಲಿಯೂ ಮಹಾನ್ ನಾಯಕರಿದ್ದಾರೆ. 10 ಮತ ಹಾಕಿಸುವವನೂ ಈಗ ಮಹಾನ್ ನಾಯಕನೇ. ಅದರಲ್ಲಿ ಇವರು ನಾವು ಅಂತಾ ಏಕೆ ಅಂದುಕೊಳ್ಳಬೇಕು. ಎಸ್‌ಐಟಿ ಈ ಬಗ್ಗೆ ತನಿಖೆ ನಡೆಸುತ್ತಿದೆ, ಮಹಾನ್ ನಾಯಕ ಯಾರೆಂದು ಶೀಘ್ರ ತಿಳಿಯಲಿದೆ ಎಂದರು.
ಕೋವಿಡ್ ಜಾಸ್ತಿಯಾಗದಂತೆ ಎಚ್ಚರ ವಹಿಸೋಣ: ಸಚಿವ ಎಸ್.ಟಿ.ಸೋಮಶೇಖರ್
ಇಂತಹ ಸೀಡಿಗಳನ್ನು ಮಾಡಿ ಮನೆ, ಮನಗಳನ್ನು ಮುರಿದಿದ್ದಾರೆ. ಇಂತಹ ಮನೆ ಮುರುಕ ಪುಣ್ಯಾತ್ಮ ಯಾರು ಅನ್ನೋದು ಗೊತ್ತಾಗಬೇಕಿದೆ. ಮಹಾನ್ ನಾಯಕ ಯಾರೆಂದು ತಿಳಿಯುವ ಕುತೂಹಲ ಇರುವವರಲ್ಲಿ ನಾನೂ ಒಬ್ಬ ಎಂದರು.