ಮುಳುಗುವ ಕಾಂಗ್ರೆಸ್ ಹಡಗಿಗೆ ಡಿಕೆಶಿ ಚಾಲಕ| ಖರ್ಗೆ, ರಮೇಶ್ ಕುಮಾರ್, ಪರಮೇಶ್ವರ ಹೀಗೆ ಅನೇಕರಿಂದ ಇನ್ನೊಂದು ಕಡೆಯಿಂದ ರಂಧ್ರ| ಎಲ್ಲರೂ ಪೈಪೋಟಿಯಲ್ಲಿ ಎರಡೆರಡು ರಂಧ್ರ ಕೊರೆಯುತ್ತಿದ್ದಾರೆ| ಹಡಗು ಪೂರ್ತಿ ಮುಳುಗಿದ ಮೇಲೆ ಖುಷಿ ಪಡುವ ವ್ಯಕ್ತಿ ಎಂದರೆ ಸಿದ್ದರಾಮಯ್ಯ: ಎಸ್.ಟಿ. ಸೋಮಶೇಖರ್|
ಕಲಬುರಗಿ(ಏ.12): ಕಾಂಗ್ರೆಸ್ ಮುಳುಗುವ ಹಡಗು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆ ಮುಳುಗುವ ಹಡಗಿನ ಕ್ಯಾಪ್ಟನ್. ಮೊದಲೇ ಹಡಗು ಮುಳುಗುತ್ತಿದೆ, ಆದಾಗ್ಯೂ ಬೇಗ ಮುಳುಗಲೆಂದು ಅದೇ ಹಡಗಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ರಂಧ್ರ ಕೊರೆಯುತ್ತಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಲೇವಡಿ ಮಾಡಿದ್ದಾರೆ.
ಭಾನುವಾರ ಬಸವ ಕಲ್ಯಾಣಕ್ಕೆ ಹೋಗುವ ಮಾರ್ಗದಲ್ಲಿ ಕಲಬುರಗಿಯಲ್ಲಿ ತಂಗಿದ್ದ ಅವರು ಸುದ್ದಿಗಾರರ ಜತೆ ಮಾತನಾಡಿ, ಮುಳುಗುವ ಹಡಗಿಗೆ ಡಿಕೆಶಿ ಚಾಲಕ. ಒಂದು ಕಡೆಯಿಂದ ಸಿದ್ದರಾಮಯ್ಯ ರಂಧ್ರ ಕೊರೆಯುತ್ತಿದ್ದರೆ, ಖರ್ಗೆ, ರಮೇಶ್ ಕುಮಾರ್, ಪರಮೇಶ್ವರ ಹೀಗೆ ಅನೇಕರು ಇನ್ನೊಂದು ಕಡೆಯಿಂದ ರಂಧ್ರ ಹಾಕುತ್ತಿದ್ದಾರೆ. ಎಲ್ಲರೂ ಪೈಪೋಟಿಯಲ್ಲಿ ಎರಡೆರಡು ರಂಧ್ರ ಕೊರೆಯುತ್ತಿದ್ದಾರೆ. ಹಡಗು ಪೂರ್ತಿ ಮುಳುಗಿದ ಮೇಲೆ ಖುಷಿ ಪಡುವ ವ್ಯಕ್ತಿ ಎಂದರೆ ಸಿದ್ದರಾಮಯ್ಯ ಎಂದು ಕುಟುಕಿದ್ದಾರೆ. ರಾಷ್ಟ್ರೀಯ ಪಕ್ಷವಾದರೂ ಕಾಂಗ್ರೆಸ್ ಇಂದು ಹೀನಾಯ ಸ್ಥಿತಿ ತಲುಪಿದೆ. ಆ ಪಕ್ಷದ ಜನ ವಿರೋಧಿ ನೀತಿಗಳೇ ಕಾಂಗ್ರೆಸ್ ಈ ಹಂತಕ್ಕೆ ಕುಸಿಯಲು ಕಾರಣವೆಂದರು.
ಕಲಬುರಗಿ: ಮುಷ್ಕರದ ಮಧ್ಯೆ ಕರ್ತವ್ಯಕ್ಕೆ ಹಾಜರಾದ ಸಿಬ್ಬಂದಿಗೆ ಅಭಿನಂದಿಸಿದ ಸವದಿ
ಬಸನಗೌಡ ಪಾಟೀಲ್ ಯಾತ್ನಾಳ್ ಅವರ ವಿರುದ್ಧದ ಶಿಸ್ತು ಕ್ರಮಕ್ಕೆ ತಯಾರಿ ನಡೆದಿದೆಯೆ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸೋಮಶೇಖರ್ ಪಕ್ಷವಾಗಲಿ, ಸರಕಾರದಲ್ಲಾಗಲಿ, ನಮ್ಮ ಸಹೋದ್ಯೋಗಿಯಾದವರು ಅವರವರ ಚೌಕಟ್ಟಿನಲ್ಲಿಯೇ ಮಾತನ್ನಾಡಬೇಕೇ ವಿನಹಃ ಚೌಕಟ್ಟು, ಶಿಸ್ತು ಮೀರಿ ಯಾರೂ ಹೋಗಬಾರದು. ಚೌಕಟ್ಟು ಮೀರಿದವರು ಯಾರು? ಅವರೇನು ಮಾಡಿದ್ದಾರೆಂದು ವಿಚಾರಿಸಿ ಕ್ರಮ ಕೈಗೊಳ್ಳುವುದು ಪಕ್ಷದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳಿಗೆ ಬಿಟ್ಟವಿಚಾರ. ಇದನ್ನೆಲ್ಲ ನೋಡಿಕೊಲ್ಳಲು ಪಕ್ಷದಲ್ಲಿ ಪ್ರತ್ಯೇಕ ವ್ಯವಸ್ಥೆಯೇ ಇದೆ. ಇದಕ್ಕೆ ನಾನು ಇಲ್ಲಿ ಏನನ್ನೂ ಹೇಳೋದಿಲ್ಲವೆಂದರು.