Driving License : ವರ್ಷದಲ್ಲಿ ಎರಡು ದಿನ ಉಚಿತವಾಗಿ ಹಂಚಿಕೆ

By Kannadaprabha News  |  First Published Jan 2, 2022, 3:59 PM IST
  • ಬಾಗಲಕೋಟೆ ಭಾಗದಲ್ಲಿ ಕಬ್ಬಿನ ಟ್ರ್ಯಾಕ್ಟರ್‌ ಚಾಲಕರಿಗೆ ಪರವಾನಗಿ ಇಲ್ಲದೇ ಚಾಲನೆ 
  • ವರ್ಷದಲ್ಲಿ ಎರಡು ದಿನ ಉಚಿತವಾಗಿ ಚಾಲನಾ ಪರವಾನಗಿ ನೀಡಲು ಚಿಂತನೆ

ಬಾಗಲಕೋಟೆ (ಜ.02): ಬಾಗಲಕೋಟೆ (Bagalkote)  ಭಾಗದಲ್ಲಿ ಕಬ್ಬಿನ ಟ್ರ್ಯಾಕ್ಟರ್‌ (Tractor) ಚಾಲಕರಿಗೆ ಪರವಾನಗಿ ಇಲ್ಲದೇ ಚಾಲನೆ ಮಾಡುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿರುವುದನ್ನು ಗಮನಿಸಲಾಗಿದೆ. ಅಂತವರಿಗೆ ವರ್ಷದಲ್ಲಿ ಎರಡು ದಿನ ಉಚಿತವಾಗಿ ಚಾಲನಾ  ಪರವಾನಗಿ ( Driving License) ನೀಡಲು ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದರು.

ಬಾದಾಮಿ (Badami)  ರಸ್ತೆಯಲ್ಲಿರುವ ತಾಲೂಕಿನ ಶಿಗಿಕೇರಿಯಲ್ಲಿ ಜಿಲ್ಲಾಡಳಿತ ಹಾಗೂ ಸಾರಿಗೆ ಇಲಾಖೆ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ ನೂತನ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥದ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಮುಂಬರುವ ದಿನಗಳಲ್ಲಿ ಚಾಲನಾ ಪರವಾನಗಿ ಇಲ್ಲದೇ ಚಾಲನೆ ಮಾಡುತ್ತಿರುವವರಿಗೆ ವರ್ಷದಲ್ಲಿ ಎರಡು ದಿನ ಉಚಿತವಾಗಿ (Free)  ಚಾಲನಾ ಪರವಾನಗಿ ನೀಡಲು ಚಿಂತನೆ ನಡೆಸಲಾಗುತ್ತಿದೆ ಎಂದರು ರಾಮುಲು.

Tap to resize

Latest Videos

ನೂತನ ಪರೀಕ್ಷಾ ಪಥ:  ಅಥಣಿಯಲ್ಲಿ ರು .7.5 ಕೋಟಿ, ಚಿಕ್ಕೋಡಿಯಲ್ಲಿ .9 ಕೋಟಿ, ಜಮಖಂಡಿಯಲ್ಲಿ ರು. 7 ಕೋಟಿ ಹಾಗೂ ಬಾಗಲಕೋಟೆಯಲ್ಲಿ ರು. 9 ಕೋಟಿ ವೆಚ್ಚದಲ್ಲಿ ನೂತನ ಚಾಲನಾ ಪರೀಕ್ಷಾ ಪಥವನ್ನು ನಿರ್ಮಿಸಲಾಗುತ್ತಿದೆ. ಹಾವೇರಿಯಲ್ಲಿ ಈಗಾಗಲೇ ಈ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆ ರಾಜ್ಯದ 30 ಜಿಲ್ಲೆಗಳಲ್ಲಿ ಆಗಬೇಕಿದೆ. ಇದರ ಜೊತೆಗೆ ಸಾರ್ವಜನಿಕರು ಪ್ರಾದೇಶಿಕ ಕಚೇರಿಗೆ ಅಲೆದಾಡದೇ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ರಾಜ್ಯದ (Karnataka) 5 ಜಿಲ್ಲೆಗಳಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥವನ್ನು ಮಾಡಲಾಗುತ್ತಿದೆ. ಪರವಾನಗಿ ಪಡೆಯಬೇಕಾದರೆ ಪರೀಕ್ಷೆಯಲ್ಲಿ ಶೇ.69ರಷ್ಟುಫಲಿತಾಂಶ ಬರಲೇಬೇಕು. ಇದರಿಂದ ಉತ್ತಮ ಚಾಲಕರಾಗಿ ಹೊರಹೊಮ್ಮಲು ಸಾಧ್ಯ. ಇದರಿಂದ ಅಪಘಾತದ ಪ್ರಮಾಣ ಕಡಿಮೆಗೊಳಿಸಲು ಸಾಧ್ಯವಾಗುತ್ತದೆ. ಈ ಮೊದಲು ಮ್ಯಾನುವಲ್‌ ಆಗಿ ಚಾಲನಾ ಪ್ರಮಾಣ ಪತ್ರ ನೀಡಲಾಗುತ್ತಿತ್ತು. ಈ ನೂತನ ತಂತ್ರಜ್ಞಾನ ಅಳವಡಿಸುವ ಮೂಲಕ ಡಿಎಲ್‌ ನೀಡುವ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಹೇಳಿದರು.

ಕೇಂದ್ರದ ಸಾರಿಗೆ ಮಂತ್ರಿಗಳಾದ ನಿತಿನ್‌ ಗಡ್ಕರಿಯವರು ರಸ್ತೆಗಳನ್ನು (Road) ಅಭಿವೃದ್ಧಿಪಡಿಸುತ್ತಿದ್ದಾರೆ. ಈ ಮೊದಲು ಒಂದು ದಿನಕ್ಕೆ 15 ಕಿಮೀ ರಸ್ತೆ ಮಾಡಲಾಗುತ್ತಿತ್ತು. ಈಗ 38-45 ಕಿಮೀವರೆಗೆ ಮಾಡಲಾಗುತ್ತಿದೆ. ರಸ್ತೆಗಳು ಉತ್ತಮವಾಗಿದ್ದರೆ ಮಾತ್ರ ಸುಗಮ ಕಾರ್ಯಕೈಗೊಳ್ಳಲು ಸಾಧ್ಯವಾಗುತ್ತದೆ. ಸಾರಿಗೆ ಇಲಾಖೆಯಲ್ಲಿ ಬದಲಾವಣೆ ತರುವ ಮೂಲಕ ಎಲ್ಲ ರೀತಿಯ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ. ಪರಿಶಿಷ್ಟಜಾತಿ ಮತ್ತು ಪಂಗಡದ ವರ್ಗದ ಮಕ್ಕಳಿಗೆ ಉಚಿತ ಬಸ್‌ಪಾಸ್‌, ಗಾರ್ಮೆಂಟ್‌ ಕಾರ್ಮಿಕರಿಗೆ, ಹಿರಿಯ ನಾಗರಿಕರಿಗೆ ಉಚಿತ ಬಸ್‌ಪಾಸ್‌ ನೀಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.

ಶಾಸಕರ ವೀರಣ್ಣ ಚರಂತಿಮಠ ಮಾತನಾಡಿದರು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ.ಗದ್ದಿಗೌಡರ, ವಿಧಾನ ಪರಿಷತ್‌ ಸದಸ್ಯ ಪಿ.ಎಚ್‌.ಪೂಜಾರ, ಬಾಗಲಕೋಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಶಿಗಿಕೇರಿ ಗ್ರಾ.ಪಂ ಅಧ್ಯಕ್ಷೆ ಮಲ್ಲವ್ವ ದ್ಯಾವನ್ನವರ, ನೀರಲಕೇರಿ ಗ್ರಾ.ಪಂ ಅಧ್ಯಕ್ಷ ಬಸವರಾಜ ಮಲ್ಲಾಪೂರ, ಬುಡಾದ ಬಿಟಿಡಿಎ ಸದಸ್ಯ ಶಿವಾನಂದ ಟವಳಿ, ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ಕೆ.ರಾಜೇಂದ್ರ, ಜಂಟಿ ಸಾರಿಗೆ ಆಯುಕ್ತೆ ಎಂ.ಶೋಭಾ, ಪ್ರಾದೇಶಿಕ ಸಾರಿಗೆ ಅಧಿಕಾರಿ ಯಲ್ಲಪ್ಪ ಪಡಸಾಲಿ, ವಾ.ಕ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಅಮ್ಮನವರ ಸೇರಿದಂತೆ ಇತರರು ಇದ್ದರು.

click me!