ತಲಕಾವೇರಿ ಅರ್ಚಕ ನಾರಾಯಣಾಚಾರ್ ನಿಧನರಾಗಿದ್ದು, ಅವರ ಇಬ್ಬರು ಪುತ್ರಿಯರು ಮತಾಂತರವಾಗಿದ್ದರು. ಅವರಿಗೆ ಪರಿಹಾರ ನೀಡುವ ವಿಚಾರವಾಗಿ ಗೊಂದಲ ಬಗೆಹರಿದಿದೆ.
ಮಡಿಕೇರಿ (ಅ.04) : ತಲಕಾವೇರಿಯ ಪ್ರಧಾನ ಅರ್ಚಕರಾಗಿದ್ದ ನಾರಾಯಾಣಾಚಾರ್ ಅವರ ಪುತ್ರಿಯರಿಗೆ ಪರಿಹಾರ ಚೆಕ್ ನೀಡಲು ಅಲೆದಾಡಿಸಬೇಡಿ. ಹೆಸರು ಬದಲಾವಣೆ ಮಾಡಿ ಕೂಡಲೇ ಚೆಕ್ ನೀಡಿ ಎಂದು ಅಧಿಕಾರಿಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಸೂಚನೆ ನೀಡಿದರು.
ನಗರದ ನೂತನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಾರಾಯಣಾಚಾರ್ ಅವರ ಪುತ್ರಿಯರು ಉಸ್ತುವಾರಿ ಸಚಿವರನ್ನು ಭೇಟಿ ಮಾಡಿದರು. ಪರಿಹಾರ ಹಣ ಪಡೆಯಲು ಈಗಿನ ಹೆಸರಿಗೆ ಚೆಕ್ ನಿಡುವಂತೆ ಮನವಿ ಮಾಡಿದರು.
ತಲಕಾವೇರಿ ಅರ್ಚಕ ನಾರಾಯಾಣಾಚಾರ್ ವಿರುದ್ಧ ಗಂಭೀರ ಆರೋಪ : ತನಿಖೆಗೆ ಆಗ್ರಹ ..
ಈ ಸಂದರ್ಭ ಸಚಿವರು ಮಾತನಾಡಿ, ಇವರು ನಾರಾಯಣಚಾರ್ ಮಕ್ಕಳು ಎನ್ನುವುದು 100ರಷ್ಟುಸತ್ಯ. ಅವರ ವೈಯಕ್ತಿಕ ವಿಚಾರ ನಮಗೆ ಸಂಬಂಧ ಇಲ್ಲ. ಆದ್ದರಿಂದ ತಡ ಮಾಡದೆ ಆದಷ್ಟುಬೇಗ ಚೆಕ್ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಸೂಚಿಸಿದರು.
ಆ.5ರಂದು ತಲಕಾವೇರಿಯಲ್ಲಿ ಸಂಭವಿಸಿದ್ದ ಭೂಕುಸಿತದಲ್ಲಿ ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣಾಚಾರ್ ಮೃತಪಟ್ಟಿದ್ದರು. ನಾರಾಯಣಾಚಾರ್ ಅವರ ಪುತ್ರಿಯರಾದ ಶೆನೋಜ್ ಫರ್ನಾಂಡಿಸ್ (ಶಾರದಾ ಆಚಾರ್), ನಮಿತಾ ನಜೇರತ್ ಅವರಿಗೆ ಮೂಲ ಹೆಸರಿನಲ್ಲಿ ಚೆಕ್ ನೀಡಲಾಗಿತ್ತು. ಉಸ್ತುವಾರಿ ಸಚಿವರೇ ಚೆಕ್ ವಿತರಿಸಿದ್ದರು. ಆದರೆ ಇಬ್ಬರು ವಿದೇಶದಲ್ಲಿ ನೆಲೆಸಿದ್ದು ಅನ್ಯಧರ್ಮಕ್ಕೆ ವಿವಾಹವಾಗಿದ್ದು, ಹೆಸರು ಬದಲಾಯಿಸಿಕೊಂಡಿದ್ದರು. ಇದರಿಂದ ಪರಿಹಾರ ಚೆಕ್‌ನ ಹಣ ಡ್ರಾ ಮಾಡಿಕೊಳ್ಳಲು ಸಮಸ್ಯೆಯಾಗಿತ್ತು. ಆದ್ದರಿಂದ ಈಗಿನ ಹೆಸರಿಗೆ ಚೆಕ್ ನೀಡುವಂತೆ ಸಚಿವರಲ್ಲಿ ಮನವೆ ಮಾಡಿದರು.