ಒಂದು ವೇಳೆ ಈಗಾಗಲೇ ತೆಗೆದುಕೊಂಡಿದ್ದರೆ ವಾಪಸ್ ಕೊಡಬೇಕು. ಅರ್ಹರಿಗೆ ಪರಿಣಾಮಕಾರಿಯಾಗಿ ಈ ಯೋಜನೆಗಳನ್ನು ತಲುಪಿಸಲು ಕ್ರಮಕೈಗೊಳ್ಳಲಾಗುವುದು. ಗ್ಯಾಸ್ ಸಬ್ಸಿಡಿ ವಾಪಸ್ ಕೊಟ್ಟರಲ್ಲ ಹಾಗೆ. ಬಡವರು ತೆಗೆದುಕೊಳ್ಳಲಿ. ಈ ಬಗ್ಗೆ ಪರಿಶೀಲಿಸಲಾಗವುದು ಎಂದ ಸಚಿವ ಶಿವಾನಂದ ಪಾಟೀಲ
ಹಾವೇರಿ(ಆ.16): ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆ ಪರಿಷ್ಕರಿಸಲು ಸಜ್ಜಾಗಿದೆ ಎಂಬ ವಿಚಾರ ಕುರಿತು ಪರ ವಿರೋಧ ಚರ್ಚೆ ಜೋರಾಗಿರುವ ನಡುವೆಯೇ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ, ನಮ್ಮ ಸರ್ಕಾರದ ಮಹಾತ್ವಕಾಂಕ್ಷಿ ಗ್ಯಾರಂಟಿ ಯೋಜನೆಗಳನ್ನು ಬಡವರಿಗೆ ತಲುಪಿಸುವ ಉದ್ದೇಶ ಹೊಂದಲಾಗಿದೆ. ಯಾರು ಶಕ್ತರಿದ್ದಾರೋ ಅವರು ಈ ಯೋಜನೆಗಳನ್ನು ತೆಗೆದುಕೊಳ್ಳಬಾರದು ಎಂದು ಹೇಳಿಕೆ ನೀಡಿದ್ದಾರೆ.
ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದು ವೇಳೆ ಈಗಾಗಲೇ ತೆಗೆದುಕೊಂಡಿದ್ದರೆ ವಾಪಸ್ ಕೊಡಬೇಕು. ಅರ್ಹರಿಗೆ ಪರಿಣಾಮಕಾರಿಯಾಗಿ ಈ ಯೋಜನೆಗಳನ್ನು ತಲುಪಿಸಲು ಕ್ರಮಕೈಗೊಳ್ಳಲಾಗುವುದು. ಗ್ಯಾಸ್ ಸಬ್ಸಿಡಿ ವಾಪಸ್ ಕೊಟ್ಟರಲ್ಲ ಹಾಗೆ. ಬಡವರು ತೆಗೆದುಕೊಳ್ಳಲಿ. ಈ ಬಗ್ಗೆ ಪರಿಶೀಲಿಸಲಾಗವುದು ಎಂದು ಪ್ರತಿಕ್ರಿಯಿಸಿದರು.
ಗ್ಯಾರಂಟಿ ಯೋಜನೆ: ಸಿದ್ದರಾಮಯ್ಯ ಸರ್ಕಾರವನ್ನ ಹಾಡಿ ಹೊಗಳಿದ ರಾಜ್ಯಪಾಲ ಗೆಹಲೋತ್..!
ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗಿದೆ. ಬರುವ ದಿನಗಳಲ್ಲಿ ಆಣೂರು, ತಡಸ, ಹಂಸಭಾವಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಿ ಗ್ರಾಮೀಣ ೪೫೧ ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಲಾಗುವುದು. ಹಾವೇರಿ ನಗರದ ಕುಡಿಯುವ ನೀರಿನ ಯೋಜನೆಗೆ ವೆಚ್ಚ ಮಾಡದ ₹೩೧ ಕೋಟಿ ಸದುಪಯೋಗದ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ಸಂಪೂರ್ಣ ವರದಿ ಬಂದ ನಂತರ ಮಾಹಿತಿ ನೀಡಲಾಗುವುದು. ಮಳೆಯಿಂದ ಜಿಲ್ಲೆಯಲ್ಲಿ ಶೇ. ೬೦ರಿಂದ ೬೫ರಷ್ಟು ಕೆರೆಗಳು ಭರ್ತಿಯಾಗಿವೆ ಎಂದು ಹೇಳಿದರು.
ಗ್ಯಾರಂಟಿ ಮೂಲಕ ಬ್ಲಾಕ್‌ಮೇಲ್: ನಿಖಿಲ್ ಕುಮಾರಸ್ವಾಮಿ ಕಿಡಿ
ಜಿಲ್ಲಾಸ್ಪತ್ರೆಗೆ ಎಂಆರ್‌ಐ ಮಷಿನ್
ಜಿಲ್ಲಾಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಕೆಲಸ ವೇಗ ಪಡೆದುಕೊಂಡಿದೆ. ಜಿಲ್ಲಾಸ್ಪತ್ರೆಗೆ ಶೀಘ್ರದಲ್ಲೇ ಎಂಆರ್‌ಐ ಯಂತ್ರ ಬರಲಿದೆ. ಜಿಲ್ಲಾಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಹಂತ ಹಂತವಾಗಿ ಪೂರ್ಣಗೊಳಿಸಿ, ಪಾರ್ಕಿಂಗ್ ಸೇರಿ ಇತರ ಅಗತ್ಯ ಸೌಕರ್ಯ ಒದಗಿಸಲಾಗುತ್ತಿದೆ . ಮೆಡಿಕಲ್ ಕಾಲೇಜ್ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಎಂಬಿಬಿಎಸ್ ತರಗತಿಗಳು, ವಸತಿ ವ್ಯವಸ್ಥೆ ಅಲ್ಲೇ ಮಾಡಲಾಗಿದೆ. ಮೆಡಿಕಲ್ ಕಾಲೇಜ್ ವಿಚಾರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಮನ್ವಯ ಇದೆ. ಕಟ್ಟಡದ ಹಗರಣದ ಕುರಿತ ಎಸ್‌ಐಟಿ ತನಿಖೆ ನಡೆದಿದೆ ಎಂದು ಹೇಳಿದರು. ಜಿಲ್ಲಾಧಿಕಾರಿ ಡಾ .ವಿಜಯಮಹಾಂತೇಶ ದಾನಮ್ಮನವರ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ, ಎಸ್.ಆರ್.ಪಾಟೀಲ, ಸಂಜೀವಕುಮಾರ ನೀರಲಗಿ ಇದ್ದರು.
ಏಜೆಂಟರ ಹಾವಳಿಗೆ ಬ್ರೇಕ್
ತಹಸೀಲ್ದಾರ್, ಎಸಿ ಕಚೇರಿಗಳಲ್ಲಿ ಏಜೆಂಟರ ಹಾವಳಿ ವಿಪರೀತವಾಗಿದೆ. ಭೂ ಸರ್ವೆಗೆ ₹10, ₹20 ಸಾವಿರ. ಕೇಳುತ್ತಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ತಹಸೀಲ್ದಾರ್ ಕಚೇರಿ ಸೇರಿ ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಏಜೆಂಟರ ಹಾವಳಿ ತಡೆಗಟ್ಟಲು ಡಿಸಿ ಅವರಿಗೆ ಆದೇಶಿಸಿದ್ದೇನೆ. ಒಂದು ತಿಂಗಳು ಕಾಲಾವಕಾಶ ಕೊಡಿ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.
ಬಡ್ಡಿ ದಂಧೆಗೆ ತಡಸ ಗ್ರಾಮದಲ್ಲಿ ಕಾರ್ಮಿಕ ಬಲಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ. ಬಡ್ಡಿ ದಂಧೆ ಕುರಿತು ಪೊಲೀಸರಿಗೆ ಮಾಹಿತಿ ನೀಡಿ. ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.