ಗ್ಯಾರಂಟಿ ಯೋಜನೆ ಬಂದ್ ಆಗಲ್ಲ, ಬಂದ್ ಮಾಡೋದಕ್ಕೆ ಯಾವುದೇ ಕಾರಣ ಇಲ್ಲ. ಜಿಎಸ್ ಟಿ ಹೊಂದಿದವರು, ಇನ್ ಕಮ್ ಟ್ಯಾಕ್ಸ್ ಕಟ್ಟುವವರಿಗೆ ಗ್ಯಾರಂಟಿ ಕೊಡಬಾರದು ಅಂತಾ ಮಾಡಿದ್ದೇವೆ. ತಪ್ಪಿಸಿ, ನುಸುಳಿ ಬಂದವರನ್ನು ತೆಗೆಯುವ ವ್ಯವಸ್ಥೆ ಸದ್ಯದ ನಿಯಮಗಳಲ್ಲಿ ಇದೆ. ಆದರೆ ಗ್ಯಾರಂಟಿ ಕಡಿಮೆಗೊಳಿಸುವುದು, ಸ್ಥಗಿತಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ. ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ: ಸಚಿವ ಎಚ್.ಕೆ. ಪಾಟೀಲ
ಗದಗ(ಆ.16): ರಾಜ್ಯದಲ್ಲಿ ಶೀಘ್ರ ಜಿಲ್ಲಾ ಮತ್ತು ತಾಪಂ ಚುನಾವಣೆ ಸರ್ಕಾರ ನಡೆಸಲಿದೆ ಎಂದು ಕಾನೂನು ಸಂಸದೀಯ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಅವರು ಗುರುವಾರ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಜಿಪಂ, ತಾಪಂ ಮೀಸಲಾತಿ ಕುರಿತು ಈಗಾಗಲೇ ಸಾಕಷ್ಟು ಚರ್ಚೆಗಳಾಗಿವೆ ಎಂದರು.
ಜಿಪಂ, ತಾಪಂ ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮೀಸಲಾತಿ ಪ್ರಕಟಿಸಲು ಸರ್ಕಾರ ವಿಫಲವಾಗಿದೆ ಎಂದು ಸರ್ಕಾರದ ಕ್ರಮ ಆಕ್ಷೇಪಿಸಿ ರಾಜ್ಯ ಚುನಾವಣಾ ಆಯೋಗ ಹಾಗೂ ಮತ್ತಿತರರು 3 ಪ್ರತ್ಯೇಕ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು. ರಾಜ್ಯದ ಎಲ್ಲ 31 ಜಿಪಂ ಹಾಗೂ ತಾಪಂ ಕ್ಷೇತ್ರ ಪುನರ್ ವಿಂಗಡಣೆ ಪೂರ್ಣಗೊಂಡಿದೆ, ಆದರೆ ಮೀಸಲು ನಿಗದಿಗೆ ಅಲ್ಪ ಕಾಲಾವಕಾಶ ಬೇಕಾಗುತ್ತದೆ. ಈ ಬಗ್ಗೆ ನಮ್ಮ ಅಡ್ವೋಕೇಟ್ ಜನರಲ್ ಈಗಾಗಲೇ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜಿಲ್ಲಾ ಮತ್ತು ತಾಪಂಗೆ ಕಾನೂನಾತ್ಮಕವಾಗಿ ಚುನಾವಣೆ ನಡಸಬೇಕಾಗಿದೆ. ಜಿಪಂ, ತಾಪಂ ಚುನಾವಣೆ ಮಾಡೋದಕ್ಕೆ ಹೆಜ್ಜೆ ಇಡುತ್ತದೆ, ಆದಷ್ಟು ಬೇಗ ಘೋಷಣೆ ಮಾಡುತ್ತೇವೆ. ಜಿಪಂ ತಾಪಂ ಚುನಾವಣೆಯ ವಿಷಯ ನ್ಯಾಯಾಲಯದಲ್ಲಿದೆ ಎಂದರು.
ಗ್ಯಾರಂಟಿ ಯೋಜನೆ ಪರಿಷ್ಕರಣೆ ಸಂಬಂಧ ಚರ್ಚೆ ನಡೆದಿಲ್ಲ: ಸಚಿವ ಮಹದೇವಪ್ಪ
ಈ ಬಾರಿಯ ಮೈಸೂರು ದಸರಾ ಅತ್ಯಂತ ವಿಜೃಂಭಣೆಯಿಂದ ವಿಶೇಷವಾಗಿ ಆಚರಿಸಲಾಗುವುದು. ಈಗಾಗಲೇ ಮುಖ್ಯಮಂತ್ರಿ ನೇತೃತ್ವದಲ್ಲಿ ಮೈಸೂರು ದಸರಾ ಬಗ್ಗೆ ಸಭೆ ನಡೆಸಲಾಗಿದೆ. ದಸರಾ ಉದ್ಘಾಟನೆಯ ಗಣ್ಯರ ಹೆಸರು ಅಂತಿಮಗೊಳಿಸುವ ನಿರ್ಧಾರ ಮುಖ್ಯಮಂತ್ರಿಗೆ ಬಿಡಲಾಗಿದೆ ಎಂದರು.
ಪ್ರಸಕ್ತ ಸಾಲಿನಲ್ಲಿ ರಾಜ್ಯಾದ್ಯಂತ ಮಳೆ, ಬೆಳೆ ಸೇರಿದಂತೆ ಎಲ್ಲವೂ ಸೌಖ್ಯವಾಗಿದೆ, ಹೀಗಾಗಿ ಈ ಬಾರಿಯ ದಸರಾ ಅತ್ಯಂತ ವಿಶೇಷ ಅರ್ಥಪೂರ್ಣ ಮತ್ತು ವಿಜೃಂಭಣೆಯಿಂದ ಕೂಡಿರಲಿದೆ. ಉದ್ಘಾಟಕರಾಗಿ ಯಾರನ್ನ ಕರೆಯಬೇಕು ಎಂಬುದರ ಬಗ್ಗೆ ಎರಡು ಮೂರು ಹೆಸರು ಪ್ರಸ್ತಾಪ ಇದೆ. ಮುಖ್ಯಮಂತ್ರಿಗಳಿಗೆ ಅಧಿಕಾರ ಕೊಟ್ಟಿದ್ದೇವೆ, ಅವರು ಉದ್ಘಾಟಕರ ಹೆಸರು ತಿಳಿಸುತ್ತಾರೆ. ದೇಶದ ಒಬ್ಬ ಪ್ರಮುಖ ವ್ಯಕ್ತಿ ದಸರಾ ಮುಖ್ಯ ಅತಿಥಿಯಾಗಿ ಬರುತ್ತಾರೆ ಎಂದರು.
ಗ್ಯಾರಂಟಿ ಸ್ಥಗಿತದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಗ್ಯಾರಂಟಿ ಯೋಜನೆ ಬಂದ್ ಆಗಲ್ಲ, ಬಂದ್ ಮಾಡೋದಕ್ಕೆ ಯಾವುದೇ ಕಾರಣ ಇಲ್ಲ. ಜಿಎಸ್ ಟಿ ಹೊಂದಿದವರು, ಇನ್ ಕಮ್ ಟ್ಯಾಕ್ಸ್ ಕಟ್ಟುವವರಿಗೆ ಗ್ಯಾರಂಟಿ ಕೊಡಬಾರದು ಅಂತಾ ಮಾಡಿದ್ದೇವೆ. ತಪ್ಪಿಸಿ, ನುಸುಳಿ ಬಂದವರನ್ನು ತೆಗೆಯುವ ವ್ಯವಸ್ಥೆ ಸದ್ಯದ ನಿಯಮಗಳಲ್ಲಿ ಇದೆ. ಆದರೆ ಗ್ಯಾರಂಟಿ ಕಡಿಮೆಗೊಳಿಸುವುದು, ಸ್ಥಗಿತಗೊಳಿಸುವ ಯಾವುದೇ ಪ್ರಸ್ತಾಪವಿಲ್ಲ. ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.