ಆರಂಭದಲ್ಲಿ ಮುಂಗಾರು ಕೈಕೊಟ್ಟರೂ ಕಡೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಡ್ಯಾಂ ಭರ್ತಿ: ಸಚಿವ ದರ್ಶನಾಪೂರ್, 71.50 ಟಿಎಂಸಿ ನೀರು ಕೃಷ್ಣಾ ನದಿಗೆ ಬಿಡುಗಡೆ
ಕೊಡೇಕಲ್(ಆ.12): ಈ ಬಾರಿಯೂ ಗಂಗೆ ನಮ್ಮೆಲ್ಲರ ಮೇಲೆ ದಯೆ ತೋರಿ ರೈತರಲ್ಲಿ ಮತ್ತು ಜನರಲ್ಲಿ ಆತಂಕವನ್ನು ದೂರ ಮಾಡಿದ್ದಾಳೆ ಎಂದು ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಖಾತೆ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ್ ಅವರು ಹೇಳಿದರು. ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾದ ಹಿನ್ನೆಲೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿ ಅವರು ಮಾತನಾಡಿದರು.
ಮುಂಗಾರು ಆರಂಭದಲ್ಲಿ ವರುಣ ದೇವ ನಿರಾಸೆ ಮೂಡಿಸಿದ್ದರಿಂದ ರೈತರು ಆತಂಕದಲ್ಲಿದ್ದರು. ಈ ಬಾರಿ ಡ್ಯಾಂ ಭರ್ತಿ ಆಗದಿದ್ದರೆ ಬೆಳೆ ಬೆಳೆಯಲಾಗದ ಮತ್ತು ಕುಡಿಯಲು ನೀರು ಇಲ್ಲದೆ ಇರುವ ಆತಂಕವಿತ್ತು. ಆರಂಭದಲ್ಲಿ ಮುಂಗಾರು ಕೈಕೊಟ್ಟರೂ ಕಡೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಡ್ಯಾಂ ಭರ್ತಿಯತ್ತ ಸಾಗಿದೆ ಎಂದರು.
undefined
ಯಾದಗಿರಿ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 3000 ಶಿಕ್ಷಕರ ‘ಬರ’!
ಜಲಾಶಯ ಭರ್ತಿಯಾಗುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಾಗಿತ್ತು. ಆದರೆ, ಈಗ ಸತತ ಒಳಹರಿವು ಹೆಚ್ಚಳವಾಗಿದ್ದರಿಂದ ಜಲಾಶಯ ಭರ್ತಿಯ ಬಗ್ಗೆ ಇದ್ದ ಆತಂಕ ಈಗ ಸರಿದಿದೆ. ಕುಡಿಯುವ ನೀರಿಗಾಗಿ, ರೈತರ ಜಮೀನುಗಳಿಗೆ ನೀರಾವರಿಗಾಗಿ ನೀರನ್ನು ಕಾಲುವೆಗಳ ಮೂಲಕ ಹರಿಸುವುದನ್ನು ಆರಂಭಿಸಲಾಗಿದೆ ಎಂದರು.
ಜಲಾಶಯದಿಂದ ಜು.22ರಿಂದ ಒಳ ಹರಿವು ಪ್ರಾರಂಭವಾಗಿದ್ದು, ಇದುವರೆಗೆ 71.50 ಟಿಎಂಸಿ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ ಎಂದು ಸಚಿವರು ತಿಳಿಸಿದರು.
ಸ್ವಯಂ ಉದ್ಯೋಗದಲ್ಲಿ ಸಕ್ಸಸ್ ಆದ ಮಹಿಳೆ: ವರದಾನವಾದ ಕೇಂದ್ರ ಸರ್ಕಾರದ PMEGP ಸ್ಟಾರ್ಟ್ ಅಪ್ !
ಸಚಿವರು ನಂತರ ಜಿಲ್ಲೆಗೆ ಕುಡಿಯುವ ನೀರು ಸರಬರಾಜು ಮಾಡಲು ಜಲಜೀವನ್ ಮಿಷನ್ ಯೋಜನೆಯಡಿ ನಡೆಯುತ್ತಿರುವ ಜಾಕ್ವೆಲ್ ಕಾಮಗಾರಿ ಪರಿಶೀಲಿಸಿ, ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಈ ಸಂದರ್ಭದಲ್ಲಿ ಬೂದಿಹಾಳ ಪೀರಾಪುರ ಯೋಜನೆ ವಿಸ್ತರಣಾ ಕಾಮಗಾರಿ ಪರಿಶೀಲಿಸಿ ಬರುವ ಮಾಚ್‌ರ್ ಅಂತ್ಯದೊಳಗೆ ಪೂರ್ಣಗೊಳಿಸಲು ತಿಳಿಸಿದರು.
ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ, ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು, ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ಹುಣಸಗಿ ಕೆಬಿಜೆಎನ್‌ಎಲ್‌ನ ಮುಖ್ಯ ಅಭಿಯಂತರ ಆರ್.ಮಂಜುನಾಥ, ಕಾರ್ಯನಿರ್ವಾಹಕ ಅಭಿಯಂತರ ಪ್ರಕಾಶ ಮುದಗಲ್, ತಹಸೀಲ್ದಾರ ಬಸವಲಿಂಗಪ್ಪ ನಾಯ್ಕೋಡಿ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.