ಪಕ್ಷದಲ್ಲಿ ಅನ್ಯಾಯವಾಗಿಲ್ಲ, ಸಿಗಬೇಕಾದ ಪ್ರಾಮುಖ್ಯತೆ ಸಿಕ್ಕಿದೆ: ಸಚಿವ ಸತೀಶ್ ಜಾರಕಿಹೊಳಿ

Published : Jun 09, 2026, 09:02 PM IST
Satish Jarkiholi

ಸಾರಾಂಶ

ಪಕ್ಷದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ಎಲ್ಲರಿಗೂ ಒಂದೇ ವೇಳೆ ಎಲ್ಲವೂ ಸಿಗಲು ಸಾಧ್ಯವಿಲ್ಲ. ಹೈಕಮಾಂಡ್ ನೀಡಿರುವ ಜವಾಬ್ದಾರಿಯನ್ನು ಸ್ವೀಕರಿಸಿ ಕೆಲಸ ಮಾಡುವುದು ಮುಖ್ಯ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಬೆಳಗಾವಿ (ಜೂ.09): ಪಕ್ಷದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ಎಲ್ಲರಿಗೂ ಒಂದೇ ವೇಳೆ ಎಲ್ಲವೂ ಸಿಗಲು ಸಾಧ್ಯವಿಲ್ಲ. ಹೈಕಮಾಂಡ್ ನೀಡಿರುವ ಜವಾಬ್ದಾರಿಯನ್ನು ಸ್ವೀಕರಿಸಿ ಕೆಲಸ ಮಾಡುವುದು ಮುಖ್ಯ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೈತಪ್ಪಿದ ಕುರಿತು ಪ್ರತಿಕ್ರಿಯಿಸಿ, ಒಬ್ಬರಿಗೆ ಒಂದೇ ಹುದ್ದೆ ಎಂಬ ಪಕ್ಷದ ನೀತಿಯ ಕಾರಣದಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಗಲಿಲ್ಲ. ಪಕ್ಷದ ಆದೇಶವನ್ನು ಎಲ್ಲರೂ ಪಾಲಿಸಬೇಕಾಗಿದೆ ಎಂದರು.

ಡಾ.ಜಿ.ಪರಮೇಶ್ವರ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ದೊರೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪ್ರಯತ್ನ ಮತ್ತು ಬೆಂಬಲ ಪ್ರಮುಖ ಕಾರಣ. ಪಕ್ಷದ ಹಿರಿಯ ನಾಯಕರಿಗೆ ಸೂಕ್ತ ಸ್ಥಾನಮಾನ ದೊರಕಿಸಲು ಸಿದ್ದರಾಮಯ್ಯ ಸದಾ ಶ್ರಮಿಸಿದ್ದಾರೆ. ಶೋಷಿತ ಸಮುದಾಯಗಳನ್ನು ಗುರಿಯಾಗಿಸುವುದು ಹೊಸದೇನಲ್ಲ. ವಿರೋಧಿಗಳು ಅವಕಾಶ ಸಿಕ್ಕಾಗಲೆಲ್ಲಾ ಅಪಪ್ರಚಾರ ನಡೆಸುತ್ತಾರೆ. ಆದರೂ ಪಕ್ಷದಲ್ಲಿ ಯಾರಿಗೂ ಅನ್ಯಾಯವಾಗಿಲ್ಲ. ನಮಗೆ ಸಿಗಬೇಕಾದ ಪ್ರಾಮುಖ್ಯತೆ ಸಿಕ್ಕಿದೆ. ನಿರೀಕ್ಷೆಗೂ ಮೀರಿ ಪಕ್ಷ ನಮ್ಮನ್ನು ಪರಿಗಣಿಸಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬದಲಾಯಿಸಿದರೆ ಕಾಂಗ್ರೆಸ್ 40 ಸ್ಥಾನಗಳನ್ನೂ ಗೆಲ್ಲುವುದಿಲ್ಲ ಎಂಬ ಎಂಎಲ್‌ಸಿ ಲಖನ್ ಜಾರಕಿಹೊಳಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಅದು ಲಖನ್ ಜಾರಕಿಹೊಳಿ ಅವರ ವೈಯಕ್ತಿಕ ಅಭಿಪ್ರಾಯ. ಇದೇ ರೀತಿಯ ಅಭಿಪ್ರಾಯವನ್ನು ಬಿಜೆಪಿಯ ಕೆಲ ನಾಯಕರೂ ವ್ಯಕ್ತಪಡಿಸಿದ್ದಾರೆ ಎಂದರು. ಕಾರ್ಯಕರ್ತರು ನಿರಾಶರಾಗಬೇಕಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ತಾಳ್ಮೆಯಿಂದ ಕಾಯ್ದವರಿಗೆ ಸೂಕ್ತ ಅವಕಾಶ ಸಿಕ್ಕಿರುವ ಇತಿಹಾಸವಿದೆ. ಸಮಯ ಬಂದಾಗ ಹೈಕಮಾಂಡ್ ಸೂಕ್ತ ಮನ್ನಣೆ ನೀಡಲಿದೆ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.

ನಾಯಕತ್ವ ಸಾಬೀತಾಗುವುದಿಲ್ಲ

ಅಹಿಂದ ನಾಯಕತ್ವದ ಕುರಿತು ಮಾತನಾಡಿದ ಸಚಿವರು, ಕೇವಲ ಅಧಿಕಾರ ಅಥವಾ ಹುದ್ದೆ ಹೊಂದಿರುವುದರಿಂದ ನಾಯಕತ್ವ ಸಾಬೀತಾಗುವುದಿಲ್ಲ. ಸಿದ್ಧಾಂತ ಮತ್ತು ಬದ್ಧತೆಯೊಂದಿಗೆ ಜನರ ಪರ ಕೆಲಸ ಮಾಡಿದಾಗ ಮಾತ್ರ ನಿಜವಾದ ಜನನಾಯಕರಾಗಿ ಬೆಳೆಯಲು ಸಾಧ್ಯ ಎಂದ ಅವರು, ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ನೀಡುವ ಕುರಿತು ಪಕ್ಷದ ವರಿಷ್ಠರೊಂದಿಗೆ ಈಗಾಗಲೇ ಚರ್ಚೆ ನಡೆಸಿದ್ದೇನೆ. ಬೆಳಗಾವಿ ರಾಜ್ಯದ ಅತಿದೊಡ್ಡ ಜಿಲ್ಲೆಗಳಲ್ಲಿ ಒಂದಾಗಿದ್ದು, ಅದರ ರಾಜಕೀಯ ಪ್ರಾತಿನಿಧ್ಯವನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಬೆಳಗಾವಿಗೆ ಮತ್ತೊಂದು ಸಚಿವ ಸ್ಥಾನ ದೊರೆಯುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದರು.

ಬೆಳಗಾವಿ ಫ್ಲೈಓವರ್ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳು ಅಂತಿಮ ಹಂತದಲ್ಲಿದ್ದು, ಮುಂದಿನ ತಿಂಗಳಿನಿಂದ ಕಾಮಗಾರಿ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದರು. ಜೈ ಕಿಸಾನ್ ಖಾಸಗಿ ತರಕಾರಿ ಮಾರುಕಟ್ಟೆಯ ಪರವಾನಗಿ ರದ್ದಾದ ಹಿನ್ನೆಲೆಯಲ್ಲಿ ವರ್ತಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಡೇ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ಮೂರು ತಿಂಗಳು ಕಾಲಾವಕಾಶ ನೀಡಲಾಗಿದೆ. ಶಾಶ್ವತ ಪರಿಹಾರಕ್ಕಾಗಿ ಉನ್ನತ ಮಟ್ಟದ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

PREV
Read more Articles on
click me!

Recommended Stories

ವಿದ್ಯೆ ಕಲಿಸಿದ ಗುರುವಿನ ಕನಸು ಈಡೇರಿಸಿದ ವಿದ್ಯಾರ್ಥಿ; ನೆಚ್ಚಿನ ಮೇಸ್ಟ್ರಿಗೆ 'ಹೊಸ ಕಾರು' ಗಿಫ್ಟ್ ಕೊಟ್ಟ ಶಿಷ್ಯ!
ಧಾರವಾಡ ಯೂಥ್ ಕಾಂಗ್ರೆಸ್ ನಾಯಕನ ಕೊಲೆ ಆರೋಪಿಗೆ ಕಿಮ್ಸ್‌ನಲ್ಲಿ ರಾಜಾತಿಥ್ಯ! ಮೊಬೈಲ್ ಚಾಟಿಂಗ್, ಮದ್ಯದ ಬಾಟಲಿ ಪತ್ತೆ?