ಹಲವು ವರ್ಷದಿಂದ ಇಲಾಖೆಯಲ್ಲಿದ್ದರೂ, ಜಿಲ್ಲಾಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರೂ ಸಭೆಗೆ ಅಂಕಿ-ಅಂಶದೊಂದಿಗೆ ಮಾಹಿತಿ ನೀಡದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಬೆವರಿಳಿಸಿದರು.
ಧಾರವಾಡ (ಜೂ.26): ಹಲವು ವರ್ಷದಿಂದ ಇಲಾಖೆಯಲ್ಲಿದ್ದರೂ, ಜಿಲ್ಲಾಮಟ್ಟದ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದರೂ ಸಭೆಗೆ ಅಂಕಿ-ಅಂಶದೊಂದಿಗೆ ಮಾಹಿತಿ ನೀಡದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಬೆವರಿಳಿಸಿದರು. ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವರ ಸಾಮಾನ್ಯ ಪ್ರಶ್ನೆಗಳಿಗೆ ಹಲವು ಇಲಾಖೆಗಳ ಅಧಿಕಾರಿಗಳು ಸಮರ್ಪಕ ಉತ್ತರ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಸಭೆಗೆ ಬರುವ ಮುಂಚೆ ಅಂಕಿ-ಅಂಶಗಳೊಂದಿಗೆ ಬರಬೇಕೆಂದು ಹಲವು ಬಾರಿ ಸ್ಪಷ್ಟ ಸೂಚನೆ ನೀಡಿದರೂ ಕೇಳಿದ ಪ್ರಶ್ನೆಗೆ ಉತ್ತರಿಸುವುದಿಲ್ಲ. ನೀವು ನೀಡುವ ಅಂಕಿ-ಅಂಶ ಹಾಗೂ ಮಾಹಿತಿಯೊಂದಿಗೆ ಸರ್ಕಾರದ ಮಟ್ಟದಲ್ಲಿ ಯೋಜನೆ ರೂಪಿಸಬೇಕು. ನೀವು ತಪ್ಪು ಮಾಹಿತಿ ನೀಡುವುದು, ಮುಂದಕ್ಕೆ ಹಾಕುವಂತಹ ನಡುವಳಿಕೆಯಿಂದ ಆಡಳಿತ ಹೇಗೆ ನಡೆಯಬೇಕು? ಜನರಿಗೆ ಹೇಗೆ ಉತ್ತರಿ ನೀಡಬೇಕೆಂದು ಅಧಿಕಾರಿಗಳನ್ನು ಲಾಡ್ ಪ್ರಶ್ನಿಸಿದರು.
ಪಿಕನಿಕ್ ಬಂದಿರೇನ್ರಿ: ಒಂದು ಹೆಕ್ಟೇರ್ ಕೃಷಿ ಭೂಮಿಯಲ್ಲಿ ಹೆಸರು, ಉದ್ದು ಬೆಳೆಗಳಿಗೆ ರೈತರಿಗೆ ಎಷ್ಟು ವೆಚ್ಚ ಬರುತ್ತದೆ? ಉತ್ಪಾದನೆ ಎಷ್ಟು? ಲಾಭ ಎಷ್ಟು ತೆಗೆಯಬಹುದು? ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸಚಿವರು ಪ್ರಶ್ನಿಸಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ. ಪ್ರತಿ ಗ್ರಾಪಂಗೆ ಎಂಟು ರೈತರ ಹೊಲಗಳ ಬೆಳೆ ಮಾದರಿ ಮಾತ್ರ ಸಂಗ್ರಹಿಸುತ್ತಿದ್ದು, ಈ ಸಂಖ್ಯೆ ಹೆಚ್ಚಿಸಲು ಸಾಧ್ಯವೇ? ಹೆಚ್ಚು ಬೆಳೆ ಮಾದರಿ ಸಂಗ್ರಹಿಸಿದರೆ ಬೆಳೆವಿಮೆ ತುಂಬಿದ ಬಹುತೇಕ ರೈತರಿಗೆ ವಿಮೆ ದೊರೆಯಬಹುದೇ ಎಂಬ ಪ್ರಶ್ನೆಗೂ ಉತ್ತರ ಅಷ್ಟಕಷ್ಟೇ. ಅದೇ ರೀತಿ ತೋಟಗಾರಿಕೆ, ಮೀನುಗಾರಿಕೆ ಜಿಲ್ಲಾಮಟ್ಟದ ಅಧಿಕಾರಿಗಳು ಇಲಾಖೆಯ ಪ್ರಾಥಮಿಕ ಮಾಹಿತಿಯನ್ನು ಸಚಿವರಿಗೆ ಸ್ಪಷ್ಟವಾಗಿ ಹೇಳಲು ವಿಫಲರಾದರು. ಅದರಲ್ಲೂ ರೇಷ್ಮೆ ಇಲಾಖೆ ಅಧಿಕಾರಿಯೊಬ್ಬರು ರೇಷ್ಮೆ ಕೃಷಿ ಮಾಡಲು ತಗಲುವ ಖರ್ಚು-ವೆಚ್ಚ, ಲಾಭದ ಕುರಿತು ನಂತರ ಮಾಹಿತಿ ನೀಡುತ್ತೇನೆ ಎಂದಾಗ, ನೀವೆಲ್ಲ ಪಿಕನಿಕ್ ಬಂದಿರೇನ್ರಿ ಎಂದು ಲಾಡ್ ತರಾಟೆಗೆ ತೆಗೆದುಕೊಂಡರು.
undefined
ಅರ್ಬನ್ ಹೀಟ್ ಐಲ್ಯಾಂಡ್: ನಗರಗಳ ಕಾಂಕ್ರೀಟ್ ಗೂಡುಗಳು ಮತ್ತು ಸುಡುಸೆಖೆಯ ರಾತ್ರಿಗಳು
ಸಂಬಳದ ಹಣ: 2023-24ನೇ ಅವಧಿಯಲ್ಲಿ ಅರಣ್ಯ ಇಲಾಖೆಗೆ ಬಂದ ₹ 93 ಲಕ್ಷ ದ ಪೈಕಿ ಶೇ. 50ರಷ್ಟು ಖರ್ಚು ಮಾಡದ ಹಿನ್ನೆಲೆಯಲ್ಲಿ ಮರಳಿ ಸರ್ಕಾರಕ್ಕೆ ಹೋಗಿರುವ ಕಾರಣ ಅರಣ್ಯ ಇಲಾಖೆ ಉಪ ಸಂರಕ್ಷಣಾಧಿಕಾರಿ ವಿವೇಕ ಕವರಿ ವಿರುದ್ಧ ಸಚಿವರು ಹರಿಹಾಯ್ದರು. ಅನುದಾನ ಬಳಕೆಯಾಗದೇ ₹ 40 ಲಕ್ಷ ಮರಳಿ ಸರ್ಕಾರಕ್ಕೆ ಹೋದ ಬಗ್ಗೆ ಸಚಿವರು ಪ್ರಶ್ನಿಸಿದಾಗ, ಕವರಿ ಅವರು ಹೈಟೆಕ್ ನರ್ಸರಿ ಮಾಡಲು ಹೋಗಿ ವಿಳಂಬವಾಯಿತು. ಹೀಗಾಗಿ ಹಣ ಮರಳಿ ಹೋಯಿತು ಎಂದರು. ಇಡೀ ದೇಶದಲ್ಲಿ ಮಾಡದಂತಹ ಹೈಟೆಕ್ ನರ್ಸರಿ ನೀವು ಮಾಡುತ್ತಿರಾ? ಅದೆಷ್ಟು ಬಾರಿ ಹೈಟೆಕ್ ನರ್ಸರಿ ಎಂದು ಹೇಳುತ್ತೀರಿ ಕಿಡಿಕಾರಿದರು. ಸರ್ಕಾರಕ್ಕೆ ಮರಳಿದ ಹಣವನ್ನು ಅಧಿಕಾರಿಯ ಸಂಬಂಳದಿಂದ ಮರಳಿಸುವಂತೆ ಅರಣ್ಯ ಇಲಾಖೆ ಸಚಿವರಿಗೆ ಪತ್ರ ಬರೆಯಲು ಜಿಲ್ಲಾಧಿಕಾರಿಗೆ ಲಾಡ್ ಸೂಚಿಸಿದರು. ಅದೇ ರೀತಿ ಸರ್ಕಾರದಿಂದ ಬಂದಿರುವ ಅನುದಾನ ಸರಿಯಾಗಿ ಬಳಕೆ ಮಾಡದೇ ಇದ್ದರೆ ಅಂತಹ ಅಧಿಕಾರಿಗಳೇ ಹೊಣೆ ಎಂದು ಸೂಚ್ಯವಾಗಿ ಹೇಳಿದರು.
ಕಪ್ಪು ಪಟ್ಟಿಗೆ ಸೇರಿಸಿ: ರಾಷ್ಟ್ರೀಯ ಹೆದ್ದಾರಿ ಇಲಾಖೆ ಪ್ರಗತಿ ಪರಿಶೀಲನೆ ವೇಳೆ, ಟೆಂಡರ್ ಪಡೆದು ಅರ್ಧಕ್ಕೆ ಕಾಮಗಾರಿ ಬಿಟ್ಟು ಹೋಗುವ ಗುತ್ತಿಗೆದಾರರ ಬಗ್ಗೆ ಸಭೆಯಲ್ಲಿ ತೀವ್ರವಾಗಿ ಚರ್ಚೆಗೆ ಬಂತು. ಟೆಂಡರ್ ಪಡೆದ ಗುತ್ತಿಗೆದಾರರೇ ಸರಿಯಾದ ಸಮಯಕ್ಕೆ ಕೆಲಸ ಮಾಡಬೇಕು. ಮತ್ತೊಬ್ಬರಿಗೆ ಗುತ್ತಿಗೆ ನೀಡುವುದು, ಸರ್ಕಾರದ ಅಧಿಕಾರಿಗಳಿಗೆ ಸ್ಪಂದಿಸದೆ ಇರುವುದು, ದೂರವಾಣಿ ಕರೆ ಸ್ವೀಕರಿಸದೆ ಸತಾಯಿಸುವುದರಿಂದ ಕಾಮಗಾರಿ ವಿಳಂಬವಾಗಲಿದೆ. ಇದು ಸರ್ಕಾರಕ್ಕೆ ಮಾಡಿದ ಅವಮಾನವೂ ಹೌದು. ಅಂತಹ ಗುತ್ತಿಗೆದಾರರ ವಿರುದ್ಧ ತಾವು ಮಾಹಿತಿ ನೀಡಿದರೆ ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಲಾಡ್ ಅಧಿಕಾರಿಗಳಿಗೆ ತಿಳಿಸಿದರು. ಬಳಿಕ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲಿಸಿದರು.
ಶಾಸಕ ಎನ್.ಎಚ್. ಕೋನರಡ್ಡಿ ಧಾರವಾಡ ಹಾಲು ಒಕ್ಕೂಟದ ಕುರಿತು ಪ್ರಸ್ತಾಪಿಸಿ, ಒಕ್ಕೂಟವನ್ನು ಅಧಿಕಾರಿಗಳು ಮನೆಯನ್ನಾಗಿಸಿಕೊಂಡಿದ್ದಾರೆ. ತಮಗೆ ಬೇಕಾದವರನ್ನು ಮಾತ್ರ ಸದಸ್ಯರನ್ನಾಗಿ ಮಾಡಿಕೊಂಡು ತಮ್ಮಲ್ಲಿಯೇ ಚುನಾವಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಸಚಿವರು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಸಭೆ ನಡೆಸಬೇಕೆಂದು ಆಗ್ರಹಿಸಿದರು. ಶಾಸಕ ಎಂ.ಆರ್. ಪಾಟೀಲ ಬೆಳೆ ವಿಮೆಯಲ್ಲಿ ಗೋಲ್‌ಮಾಲ್ ನಡೆಯುತ್ತಿದೆ. ಸರಿಯಾಗಿ ಬೆಳೆ ಸಮೀಕ್ಷೆ ಮಾಡುತ್ತಿಲ್ಲ. ಇದರಿಂದ ರೈತರಿಗೆ ವಿಮೆ ಹಣ ಬರುತ್ತಿಲ್ಲ. ಈ ಬಗ್ಗೆ ತನಿಖೆಯಾಗಬೇಕೆಂದು ಸಚಿವರಿಗೆ ಮನವಿ ಮಾಡಿದರು. ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿದರು. ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಪಂ ಸಿಇಒ ಸ್ವರೂಪ ಟಿ.ಕೆ., ಎಸ್ಪಿ ಗೋಪಾಲ ಬ್ಯಾಕೋಡ, ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹಾಗೂ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಇದ್ದರು.
ಮೀನು ತಿಂತೀರಾ?: ಮೀನುಗಾರಿಕೆ ಇಲಾಖೆ ಪ್ರಗತಿ ಪರಿಶೀಲನೆ ವೇಳೆ ಕೆರೆ ಹಾಗೂ ಕೊಳಗಳಲ್ಲಿ ಬಿಟ್ಟಿರುವ ಮೀನು ಎಷ್ಟರ ಮಟ್ಟಿಗೆ ಜೀವಂತ ಉಳಿಯುತ್ತವೆ ಎಂಬ ಪ್ರಶ್ನೆ ಬಂತು. ಏನೆಲ್ಲಾ ಪ್ರಯತ್ನ ಮಾಡಿದರೂ ಶೇ.50ರಷ್ಟು ಉಳಿಯುತ್ತವೆ ಎಂದು ಅಧಿಕಾರಿ ಉತ್ತರಿಸಿದರು. ಈ ಬಗ್ಗೆ ಚರ್ಚಿಸುವಾಗ ಸಚಿವರು, ನೀವು ಮೀನು ಸೇವಿಸುತ್ತೀರಾ ಎಂದು ಪ್ರಶ್ನಿಸಿದರು. ಹೌದು ಸೇವಿಸುತ್ತೇನೆ ಆದರೆ, ನಾನು ವೆಜ್ ಎಂದು ಅಧಿಕಾರಿ ಹೇಳಿದ್ದು ಇಡೀ ಸಭೆ ನಗೆಗಡಲಲ್ಲಿ ತೇಲಿತು.
ಕಾರ್ಯದರ್ಶಿಯೊಂದಿಗೆ ಸಭೆ: ಜಲಜೀವನ ಮಿಷನ್ ಅಡಿ ಜಿಲ್ಲೆಯಲ್ಲಿ 24 ಗಂಟೆ ಕುಡಿಯುವ ನೀರಿನ ಯೋಜನೆ ಶುರು ಮಾಡಲಾಗಿದೆ. ಆದರೆ, ಯೋಜನೆಯಡಿ ಹಾಕಿರುವ ನಳ ಹಾಗೂ ಮೀಟರ್ ಕಳಪೆ ಗುಣಮಟ್ಟ ಹಿನ್ನೆಲೆಯಲ್ಲಿ ಕಿತ್ತು ಬೀಳುತ್ತಿವೆ. ಯೋಜನೆಗಾಗಿ ರಸ್ತೆಗಳು ಹಾಳಾಗಿದ್ದು ಅವುಗಳನ್ನು ಸರಿಯಾಗಿ ಮುಚ್ಚದೇ ಇರುವುದು ಸೇರಿದಂತೆ ಯೋಜನೆ ಬಗ್ಗೆ ಸ್ಥಳೀಯ ಶಾಸಕರು ಮುಖ್ಯ ಕಾರ್ಯದರ್ಶಿಗಳೊಂದಿಗೆ ಪ್ರತ್ಯೇಕ ಸಭೆ ಮಾಡುವುದಾಗಿಯೂ ಸಭೆಯಲ್ಲಿ ತೀರ್ಮಾನವಾಯಿತು. ಬಿಆರ್‌ಟಿಎಸ್ ಯೋಜನೆಯಿಂದ ಜನರಿಗೆ ಆಗುತ್ತಿರುವ ತೊಂದರೆ, ಕೊಳಚೆ ನಿರ್ಮೂಲನಾ ಮಂಡಳಿಯಿಂದ ನಡೆಯುತ್ತಿರುವ ಯೋಜನೆ ಕುರಿತು ಸಭೆಯಲ್ಲಿ ಪರಿಶೀಲನೆ ನಡೆಯಿತು.
ಸಿದ್ದರಾಮಯ್ಯ ಸರ್ಕಾರ ಬೆಲೆ ಏರಿಕೆ ಸಮರ್ಥಿಸಿಕೊಳ್ಳುವುದು ನಾಚಿಕೆಗೇಡು: ಮಾಜಿ ಸಚಿವ ಎನ್.ಮಹೇಶ್
ಅರಣ್ಯ ಸಮಸ್ಯೆಗೆ ಪರಿಹಾರ: ಕಲಘಟಗಿ ತಾಲೂಕಿನ ಅರಣ್ಯ ಭಾಗದಲ್ಲಿರುವ ಬೈಚವಾಡ ಅರಣ್ಯ ವಾಸಿಗಳಿಗೆ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂಬ ದೂರು ಸಭೆಯಲ್ಲಿ ಚರ್ಚೆಗೆ ಬಂತು. ಬೈಚವಾಡ ಅರಣ್ಯ ನಿವಾಸಿಗಳು ಹೊಸದಾಗಿ ಅರಣ್ಯ ಒತ್ತುವರಿ ಮಾಡುತ್ತಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ದೂರಿದರು. ಅರಣ್ಯ ನಿವಾಸಿಗಳು ಮೊದಲಿನ ಸ್ಥಳದಲ್ಲೇ ಇದ್ದು ಒತ್ತುವರಿ ಮಾಡಿಲ್ಲ ಎಂದರು. ಹೊಸದಾಗಿ ಒತ್ತುವರಿ ಮಾಡದೇ ಮೊದಲಿನ ಸ್ಥಳದಲ್ಲೇ ಇರಲು ತಿಳಿಸಿ ಸಚಿವ ಲಾಡ್ ಸಮಸ್ಯೆಗೆ ಪರಿಹಾರ ಒದಗಿಸಿದರು.