ರಾಜ್ಯಪಾಲರು ಐವರನ್ನು ವಿಧಾನ ಪರಿಷತ್‌ಗೆ ಜುಲೈನಲ್ಲಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ| ಸಿ.ಪಿ. ಯೋಗೇಶ್ವರ್ ನಾಮನಿರ್ದೇಶನ ಕಾನೂನುಬಾಹಿರ| ಚುನಾವಣಾ ಸ್ಪರ್ಧೆ ಊಹಾಪೋಹ|
ಮಡಿಕೇರಿ(ಸೆ.19): ವಿಧಾನ ಪರಿಷತ್ ಸದಸ್ಯರನ್ನಾಗಿ ಸಿ.ಪಿ. ಯೋಗೇಶ್ವರ್ ಅವರನ್ನು ನಾಮನಿರ್ದೇಶನ ಮಾಡಿರುವುದು ಸಂವಿಧಾನಬಾಹಿರ ಹಾಗೂ ಕಾನೂನಿಗೆ ವಿರೋಧವಾಗಿದೆ ಎಂದು ಆರೋಪಿಸಿರುವ ಕೆಪಿಸಿಸಿ ಕಾನೂನು, ಮಾನವ ಹಕ್ಕು ಮತ್ತು ಆರ್‌ಟಿಐ ವಿಭಾಗದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ಕೂಡಲೇ ಯೋಗೇಶ್ವರ್ ನಾಮನಿರ್ದೇಶನವನ್ನು ಹಿಂಪಡೆಯದಿದ್ದಲ್ಲಿ ಕಾನೂನು ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊನ್ನಣ್ಣ, ರಾಜ್ಯಪಾಲರು ಐವರನ್ನು ವಿಧಾನ ಪರಿಷತ್‌ಗೆ ಜುಲೈನಲ್ಲಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಸಿ.ಪಿ. ಯೋಗೇಶ್ವರ್ ಅವರ ನಾಮನಿರ್ದೇಶನ ಕಾನೂನುಬಾಹಿರವಾಗಿದೆ. ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವವರಿಗೆ ಕೆಲವು ವಿಶೇಷ ಜ್ಞಾನ ಇರಬೇಕಾಗುತ್ತದೆ. ಆದರೆ, ಸಾಕಷ್ಟುಆರೋಪಗಳನ್ನು ಹೊಂದಿರುವ ಸಿ.ಪಿ. ಯೋಗೇಶ್ವರ್ ಅವರನ್ನು ಯಾವ ಮಾನದಂಡದಲ್ಲಿ ವಿಧಾನ ಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿದ್ದಾರೆಂಬುದನ್ನು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಈ ಸಂಬಂಧ ಆಗಸ್ವ್ 25ರಲ್ಲಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದೆವು. ರಾಜ್ಯಪಾಲರಿಂದ ಯಾವುದೇ ಉತ್ತರ ಬಾರದ ಹಿನ್ನೆಲೆ 31ರಂದು ಮತ್ತೆ ಇಮೇಲ್ ಮೂಲಕ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಕಳುಹಿಸಿದರೂ ಉತ್ತರ ಬಂದಿಲ್ಲ ಎಂದರು.
ಸರ್ಕಾರಿ ಶಾಲೆಗೆ ಹೊಸ ಟಚ್ : ಕೊರೋನಾ ಕಾಲದಲ್ಲೊಂದು ಒಳ್ಳೆ ಕೆಲಸ
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಕುಮಾರ್ ಮಾತನಾಡಿ, ಕೊರೋನಾ, ಪ್ರಕೃತಿ ವಿಕೋಪಗಳಿಂದ ಕೊಡಗು ಜಿಲ್ಲೆಯ ಜನರು ಸಂಕಷ್ಟದಲ್ಲಿದ್ದಾರೆ. ಆದರೆ, ರಾಜ್ಯ ಸರ್ಕಾರ ಕೊಡಗನ್ನು ಕರ್ನಾಟಕದಿಂದ ಹೊರಗಿಟ್ಟಿದೆಯೇ ಎಂಬ ಅನುಮಾನ ಕಾಡಲಾರಂಭಿಸಿದ್ದು, ಸೂಕ್ತ ಪರಿಹಾರ ಒದಗಿಸುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ. ಉಸ್ತುವಾರಿ ಸಚಿವರು, ಶಾಸಕರು ಉದ್ಘಾಟನೆ, ಗುದ್ದಲಿ ಪೂಜೆ ಕಾರ್ಯಕ್ರಮದ ಮೂಲಕ ಕಾಲಹರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಮಾಫಿಯಾ ಹಿಂದೆ ಪ್ರಭಾವಿಗಳ ಕೈವಾಡ..!
ಪೊಲೀಸ್ ಕಮಿಷನರ್ ಅವರ ಸಹಕಾರವಿಲ್ಲದೆ ಡ್ರಗ್ಸ್ ಮಾಫಿಯಾ ನಡೆಯಲು ಸಾಧ್ಯವೇ ಇಲ್ಲ. ಈಗ ನಡೆಯುತ್ತಿರುವುದು ಸಾರ್ವಜನಿಕ ಹಿತದೃಷ್ಟಿಯ ತನಿಖೆಯಲ್ಲ. ಪ್ರಕರಣದಲ್ಲಿ ನೂರಕ್ಕೆ ನೂರು ಪ್ರಭಾವಿಗಳ ಕೈವಾಡವಿದೆ. ಆದರೆ, ಸಣ್ಣ-ಪುಟ್ಟನಟ ನಟಿಯರನ್ನು ವಿಚಾರಣೆಗೊಳಪಡಿಸಿ ಪ್ರಚಾರ ಪಡೆಯಲಾಗುತ್ತಿದೆ ಎಂದು ಹಿರಿಯ ವಕೀಲ ಎ.ಎಸ್. ಪೊನ್ನಣ್ಣ ಗಂಭೀರವಾಗಿ ಆರೋಪಿಸಿದರು.
ರಾಜ್ಯ ಸರ್ಕಾರದ ಖಜಾನೆ ಖಾಲಿ..!
ಹಿಂದೆ ರಾಜ್ಯ ಸರ್ಕಾರ 60 ರಷ್ಟು ತೆರಿಗೆಯನ್ನು ಕೇಂದ್ರಕ್ಕೆ ಪಾವತಿಸಬೇಕಿತ್ತು. ಆದರೆ ಈಗ 100 ರಷ್ಟು ತೆರಿಗೆ ಪಾವತಿಸಬೇಕಾಗಿದೆ. ಆದರೆ, ರಾಜ್ಯದ ಖಜಾನೆ ಖಾಲಿಯಾಗಿರುವುದರಿಂದ ಸಾಲ ಪಡೆದು ತೆರಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದರು.
ಚುನಾವಣಾ ಸ್ಪರ್ಧೆ ಊಹಾಪೋಹ..!
ವಿರಾಜಪೇಟೆ ಕ್ಷೇತ್ರದಿಂದ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಪ್ರತಿಕ್ರಿಯಿಸಿದ ಎ.ಎಸ್. ಪೊನ್ನಣ್ಣ, ನಾನು ಚುನಾವಣೆಗೆ ಸ್ಪರ್ಧಿಸುವುದು ಊಹಾಪೋಹ. ವಿಧಾನಸಭೆ ಚುನಾವಣೆ ಇರುವುದು 2023ರಲ್ಲಿ. ಈಗಲೇ ಅದರ ಬಗ್ಗೆ ಮಾತನಾಡುವುದು ಅಪ್ರಸ್ತುತ. ನಾನು 2018ರ ಪ್ರಕೃತಿ ವಿಕೋಪ ಸಂದರ್ಭದಲ್ಲೂ ಕೊಡಗಿನ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ. ಈಗ ಸ್ಪಂದಿಸುತ್ತಿರುವುದುಕ್ಕೆ ಚುನಾವಣೆ ಸ್ಪರ್ಧೆ ಕಾರಣವಲ್ಲ ಎಂದು ಸ್ಪಷ್ಟಪಡಿಸಿದರು.