
ಉಡುಪಿ: ಇಲ್ಲಿನ ಬಜಗೋಳಿಯ ತೆಂಕಬೆಟ್ಟು ರಾಜ್ಯ ಹೆದ್ದಾರಿ ರಸ್ತೆಯಲ್ಲಿ 5 ಕೋಟಿ ರು. ವೆಚ್ಚದಲ್ಲಿ ಪೆರ್ಡೂರು - ಬೈರಂಪಳ್ಳಿ - ಅಣ್ಣಾಲು ಸಂಪರ್ಕ ಸೇತುವೆಗೆ ಮಂಗಳವಾರ ಜಿಲ್ಲಾ ಉಸ್ತುವಾರಿ ಸಚಿವರಾದ ರಿಜ್ವಾನ್ ಅರ್ಷದ್ ಶಿಲಾನ್ಯಾಸ ನೆರವೇರಿಸಿದರು.
ಉಡುಪಿ ಜಿಲ್ಲೆಯಲ್ಲಿ 9 ಸೇತುವೆಗಳಿಗೆ ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಅನ್ನು ಕರೆಯಲಾಗಿದ್ದು, ಅದರಲ್ಲಿ ಈ ಪೆರ್ಡೂರು- ಬೈರಂಪಳ್ಳಿ- ಅಣ್ಣಾಲು ಸಂಪರ್ಕ ಸೇತುವೆಯು ಒಂದಾಗಿದೆ. ಇಂದಿನಿಂದಲೇ ಸೇತುವೆ ನಿರ್ಮಾಣ ಕಾಮಗಾರಿಗಳನ್ನು ಪ್ರಾರಂಭಿಸಿ, ತ್ವರಿತವಾಗಿ ಗುಣಮಟ್ಟದೊಂದಿಗೆ ಕೈಗೊಂಡು ಪೂರ್ಣಗೊಳಿಸಲು ಮುಂದಾಗಬೇಕು ಎಂದವರು ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶಗಳ ರಸ್ತೆ ಮತ್ತಿತರ ಸೌಲಭ್ಯಗಳನ್ನು ಒದಗಿಸಲು ಮುಖ್ಯಮಂತ್ರಿಗಳು ಈಗಾಗಲೇ ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ ತಲಾ 25 ಕೋಟಿ ರು. ವಿಶೇಷ ಅನುದಾನ ನೀಡಿದ್ದು, ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದ ಅವರು, ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಪ್ರಗತಿಯ ವೇಗವನ್ನು ಹೆಚ್ಚಿಸಲಾಗುವುದು ಎಂದರು.
ಸರ್ಕಾರ ನಡೆಸುವಾಗ ನಾವು ಎಲ್ಲಿಂದ ಹಣ ತಂದು ಖರ್ಚು ಮಾಡುತ್ತೇವೆ ಎಂಬುದನ್ನು ಬಿಜೆಪಿಯವರನ್ನು ಕೇಳಿಕೊಂಡು ಮಾಡುವುದಕ್ಕಾಗುತ್ತದೆಯೇ ? ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಪ್ರಶ್ನಿಸಿದ್ದಾರೆ.
ಮಂಗಳವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟೆಲ್ಲಾ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ, ಬಿಜೆಪಿಯವರು ಹೇಳಿದಂತೆ ಸರ್ಕಾರದಲ್ಲಿ ಫಂಡ್ ಇಲ್ಲದಿದ್ದರೆ ಈ ಕಾರ್ಯಕ್ರಮಗಳು ಹೇಗಾಗುತ್ತದೆ? ಬಿಜೆಪಿಯವರು ಮಾಡಿ ಹೋಗಿರುವ ಆರ್ಥಿಕ ಅದ್ವಾನಗಳನ್ನು ನಾವು ಈಗ ಸುಧಾರಿಸುತ್ತಿದ್ದೇವೆ ಎಂದರು.
ಈ ರಾಜ್ಯದ ಬಡವರಿಗೆ ಗ್ಯಾರಂಟಿ ಯೋಜನೆಗಳಿಂದ ಎಷ್ಟು ಅನುಕೂಲ ಆಗಿದೆ ಎಂದು ಬಿಜೆಪಿ ಜನರನ್ನು ಕೇಳಲಿ, ಆಗ ಬಿಜೆಪಿಯವರಿಗೆ ಸ್ವಲ್ಪ ಹೊಟ್ಟೆ ನೋವು ಆಗಿಯೇ ಆಗುತ್ತದೆ, ಅದು ಸಹಜ, ಅದಕ್ಕೆ ಗ್ಯಾರಂಟಿ ಫಲಾನುಭವಿಗಳ ಸಮಾವೇಶವನ್ನು ಅವರು ಟೀಕಿಸುತ್ತಿದ್ದಾರೆ ಎಂದರು.
ಮೊದಲ ಬಾರಿ ಉಡುಪಿ ಜಿಲ್ಲೆಯಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಗ್ಯಾರಂಟಿ ಕೊಟ್ಟಿರುವುದು ನಮ್ಮದೇ ಸರ್ಕಾರ, ಈಗ ಜನರನ್ನು ಸೇರಿಸಿ ಅದರ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿ, ಬಿಜೆಪಿಯವರಿಗೆ ಬೇಜಾರು ಎನಿಸಿದರೆ ನಾವೇನು ಮಾಡುವುದಕ್ಕಾಗುತ್ತದೆ ? ಎಂದವರು ಹೇಳಿದರು
ಆಶಾ ಕಾರ್ಯಕರ್ತರ ಸಮಸ್ಯೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಬಗೆಹರಿಸಬೇಕಾಗಿದೆ. ಕರ್ನಾಟಕದಿಂದ 18 ಜನ ಬಿಜೆಪಿ ಸಂಸದರಿದ್ದಾರೆ, ಆಶಾ ಕಾರ್ಯಕರ್ತೆಯರ ಬೇಡಿಕೆ ಬಗ್ಗೆ ಅವರು ಕೇಂದ್ರದ ಮೇಲೆ ಒತ್ತಡ ಹೇರುತ್ತಾರಾ ಅಥವಾ ಕೇವಲ ರಾಜ್ಯ ಸರ್ಕಾರದ ಮೇಲೆ ಆರೋಪ ಮಾಡಿಕೊಂಡು ಕುಳಿತುಕೊಳ್ಳುತ್ತಾರಾ ಎಂಬುದನ್ನು ನೋಡೋಣ ಎಂದವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಬಿಜೆಪಿಗೆ ನೈತಿಕತೆಯಿಲ್ಲ: ಕಾರ್ಕಳದ ಪರಶುರಾಮ ಥೀಮ್ ಪಾರ್ಕ್ ವಿನ್ಯಾಸ, ಟೆಂಡರ್ ಮಾಡಿದ್ದು ಬಿಜೆಪಿ. ಉಡುಪಿ ಜಿಲ್ಲೆಯ ಜನ ಪ್ರಜ್ಞಾವಂತರು. ಇದನ್ನು ಬಿಜೆಪಿಯವರು ಮರೆಯಬಾರದು. ಅವರಿಗೆ ಈಗ ಥೀಮ್ ಪಾರ್ಕ್ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಸಚಿವರು ಹೇಳಿದರು.
ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಅತ್ಯಂತ ಪವಿತ್ರವಾದ ಕಾರ್ಯಕ್ರಮವಾಗಿದೆ. ಇದು ನನ್ನ ಪಾಲಿಗೆ ಪುಣ್ಯದ ಕಾರ್ಯವಾಗಿದ್ದು, ಮಹೋತ್ಸವವನ್ನು ರಾಜ್ಯದ ಕಾರ್ಯಕ್ರಮವಾಗಿ ಪರಿಗಣಿಸಿ, ಸರ್ಕಾರದ ವತಿಯಿಂದ ಅಗತ್ಯವಿರುವ ಎಲ್ಲ ಸಹಕಾರ ನೀಡಲಾಗುವುದು ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಹೇಳಿದರು.
ಕಾರ್ಕಳ ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಸಮಿತಿ ವತಿಯಿಂದ ಕಾರ್ಕಳದ ದಾನಶಾಲೆ ಬಳಿಯ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಬಹುತ್ವ, ಸಹಿಷ್ಣುತೆ ಮತ್ತು ಸಾಮರಸ್ಯವನ್ನು ಸಾರುವ ಐತಿಹಾಸಿಕ ಮಹೋತ್ಸವ ಇದಾಗಿದೆ. ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಸಮಾನತೆಯಿಂದ ಬದುಕಬೇಕು ಎಂಬುದು ನಮ್ಮ ಪಕ್ಷದ ಸಿದ್ಧಾಂತ. ಜೈನ ಸಮಾಜದ ಏಳಿಗೆಗೆ ಹಾಗೂ ಸಮಾಜದ ಅಭಿವೃದ್ಧಿಗೆ ಸಹಕಾರ ನೀಡಿದ ಮಹನೀಯರನ್ನು ಸ್ಮರಿಸುವ ಕಾರ್ಯವೂ ಈ ಮಹೋತ್ಸವದ ವಿಶೇಷತೆಯಾಗಿದೆ ಎಂದರು.
ಮಹೋತ್ಸವದ ಕುರಿತು ಯಾವುದೇ ಅಪಪ್ರಚಾರಕ್ಕೆ ಅವಕಾಶವಾಗದಂತೆ ಎಚ್ಚರ ವಹಿಸಿ, ಕಾರ್ಯಕ್ರಮ ಸುಗಮವಾಗಿ ನಡೆಯಲು ಸಮಿತಿ ಹಾಗೂ ಜಿಲ್ಲಾಡಳಿತ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಸರ್ಕಾರದ ವತಿಯಿಂದ ಅಗತ್ಯ ಪೂರ್ವಸಿದ್ಧತೆ ಹಾಗೂ ಮೂಲಸೌಕರ್ಯಗಳ ವ್ಯವಸ್ಥೆಗೆ ಆದ್ಯತೆ ನೀಡಲಾಗುವುದು. ಅನುದಾನ ಬಿಡುಗಡೆ ಕುರಿತು ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸರ್ಕಾರ ನಿಮ್ಮೊಂದಿಗಿದ್ದು, ಬದ್ಧತೆಯಿಂದ ಮಹೋತ್ಸವವನ್ನು ಯಶಸ್ವಿಗೊಳಿಸೋಣ ಎಂದು ಹೇಳಿದರು.
ಮಾಜಿ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಮಹಾಮಸ್ತಕಾಭಿಷೇಕ ಬಹುವೈಭವದಿಂದ ನಡೆಯುವ ಕಾರ್ಯಕ್ರಮವಾಗಿದ್ದು, ಅದೇ ವೈಭವದೊಂದಿಗೆ ಮುಂದುವರಿಯಬೇಕು. ಮಹೋತ್ಸವಕ್ಕೆ ಅಗತ್ಯವಿರುವ ಮೂಲಸೌಕರ್ಯಗಳ ಅಭಿವೃದ್ಧಿಗೆ ಸರ್ಕಾರದ ಅನುದಾನ ಮುಖ್ಯವಾಗಿದೆ. ರಸ್ತೆಗಳ ಅಭಿವೃದ್ಧಿ ಸೇರಿದಂತೆ ಕಾರ್ಕಳದ ಸಮಗ್ರ ಅಭಿವೃದ್ಧಿಗೆ ಈ ಮಹೋತ್ಸವ ಅವಕಾಶವಾಗಬೇಕು. ಸರ್ಕಾರದ ಮೇಲೆ ವಿಶ್ವಾಸವಿದೆ ಎಂದರು.
ಕಾಂಗ್ರೆಸ್ ಮುಖಂಡ ಮುನಿಯಾಲು ಉದಯಕುಮಾರ್ ಶೆಟ್ಟಿ ಮಾತನಾಡಿ, ಊರಿನ ಉತ್ಸವಕ್ಕೆ ಈ ಹಿಂದೆ 10 ಕೋಟಿ ರು. ಅನುದಾನ ನೀಡಲಾಗಿತ್ತು. ಮಹಾಮಸ್ತಕಾಭಿಷೇಕದ ಹಿನ್ನೆಲೆಯಲ್ಲಿ ಕಾರ್ಕಳಕ್ಕೆ ತುರ್ತಾಗಿ ಅನುದಾನ ಬಿಡುಗಡೆ ಮಾಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಮಹೋತ್ಸವದ ಸಿದ್ಧತೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ಸಮಿತಿಯ ಕಾರ್ಯನಿರ್ವಹಣಾಧಿಕಾರಿ ಮುನಿರಾಜ ರೆಂಜಾಳ, ಅಟ್ಟಳಿಗೆ ನಿರ್ಮಾಣಕ್ಕೆ ಸರ್ಕಾರದಿಂದ 1.59 ಕೋಟಿ ರು. ಅನುದಾನ ಬಿಡುಗಡೆಯಾಗಿದೆ. ಸುಮಾರು 70 ಕೋಟಿ ರು. ಅನುದಾನದ ಬೇಡಿಕೆಯನ್ನು ಸರ್ಕಾರದ ಮುಂದಿಡಲಾಗಿದೆ. ಮಹೋತ್ಸವವನ್ನು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿ ಸೀಮಿತಗೊಳಿಸದೆ, ಕಾರ್ಕಳದ ಅಭಿವೃದ್ಧಿಯ ಸಂಭ್ರಮವಾಗಿಯೂ ರೂಪಿಸಬೇಕಿದೆ. ಕಾರ್ಕಳದ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕಕ್ಕೆ 595 ವರ್ಷಗಳ ಐತಿಹಾಸಿಕ ಹಿನ್ನೆಲೆಯಿದೆ ಎಂದರು.