ಮುಂದಿನ ಡಿಸೆಂಬರ್‌ಗೆ ರಾಮಕುಂಜದಲ್ಲಿ ಸರ್ಕಾರಿ ಗೋಶಾಲೆ ಲೋಕಾರ್ಪಣೆ: ಪ್ರಭು ಚವ್ಹಾಣ್‌

By Kannadaprabha NewsFirst Published Jun 30, 2022, 2:00 AM IST
Highlights

*   ಜಿಲ್ಲಾ ಗೋಶಾಲೆಗೆ ಪಶುಸಂಗೋಪನಾ ಸಚಿವ ಶಂಕುಸ್ಥಾಪನೆ, 50 ಲಕ್ಷ ರು. ವೆಚ್ಚದಲ್ಲಿ ನಿರ್ಮಾಣ
*  ಸುಮಾರು 50 ಲಕ್ಷ ರು. ವೆಚ್ಚದಲ್ಲಿ ಗೋಶಾಲೆ ನಿರ್ಮಾಣ
*  ನರೇಗಾ ಯೋಜನೆಯಡಿಯಲ್ಲಿ ಹಟ್ಟಿಗಳ ರಚನೆ ನಡೆಯಲಿದೆ

ಉಪ್ಪಿನಂಗಡಿ(ಜೂ.30): ಮುಂದಿನ ಡಿಸೆಂಬರ್‌ ಅಂತ್ಯಕ್ಕೆ ರಾಮಕುಂಜದಲ್ಲಿ ದ.ಕ. ಜಿಲ್ಲೆಯ ಸರ್ಕಾರಿ ಗೋಶಾಲೆ ಲೋಕಾರ್ಪಣೆಗೊಳ್ಳಲಿದೆ. ಗೋವಿನ ರಕ್ಷಣೆ ಸರ್ಕಾರದ ಆದ್ಯತೆಯಾಗಿದ್ದು, ಗೋಪಾಲಕರು ತಮ್ಮಲ್ಲಿರುವ ಆಶಕ್ತ ಗೋವುಗಳನ್ನು ಈ ಗೋಶಾಲೆಗೆ ನೀಡಿ ಗೋವುಗಳ ರಕ್ಷಣೆ ಮಾಡಬೇಕು ಎಂದು ಪಶು ಸಂಗೋಪನ ಸಚಿವ ಪ್ರಭು ಚವ್ಹಾಣ್‌ ಹೇಳಿದರು.

ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ವೈದ್ಯಕೀಯ ಇಲಾಖೆ ಮಂಗಳೂರು, ದ.ಕ. ಜಿಲ್ಲಾ ಪ್ರಾಣಿದಯಾ ಸಂಘ ಹಾಗೂ ರಾಮಕುಂಜ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ರಾಮಕುಂಜದಲ್ಲಿ ಬುಧವಾರ ನಡೆದ ಜಿಲ್ಲೆಯ ಗೋಶಾಲೆಗೆ ಶಂಕುಸ್ಥಾಪನೆ ನೆರವೇರಿಸಿ, ಗೋವುಗಳಿಗೆ ಪೂಜೆ ನೆರವೇರಿಸಿ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸುಮಾರು 50 ಲಕ್ಷ ರು. ವೆಚ್ಚದಲ್ಲಿ ಗೋಶಾಲೆ ನಿರ್ಮಾಣವಾಗಲಿದೆ. ಯೋಜನೆ ಅನುಷ್ಠಾನಕ್ಕಾಗಿ ನೀಲ ನಕಾಶೆ ತಯಾರಾಗಿದೆ. ನರೇಗಾ ಯೋಜನೆಯಡಿಯಲ್ಲಿ ಹಟ್ಟಿಗಳ ರಚನೆ ನಡೆಯಲಿದೆ. ಮುಂದಿನ ಡಿಸೆಂಬರ್‌ ವೇಳೆಗೆ ಗೋಶಾಲೆ ಲೋಕಾರ್ಪಣೆಗೊಳಿಸುವ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಹೇಳಿದರು.

ಗೋರಕ್ಷಣೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯ: ಸಚಿವ ಚವ್ಹಾಣ್‌

ಆತ್ಮನಿರ್ಭರ ಗೋಶಾಲೆ: 

ಗೋವು ನಮ್ಮ ದೇಶದ ಸಂಸ್ಕೃತಿಯ ಭಾಗವಾಗಿದ್ದು, ಇವುಗಳ ರಕ್ಷಣೆಗಾಗಿ ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಗೊಳಿಸಲಾಗಿದೆ. ಅಶಕ್ತ ಗೋವುಗಳು ಕಟುಕರ ಕೈ ಸೇರುವುದನ್ನು ತಪ್ಪಿಸಲು ರಾಜ್ಯದಲ್ಲಿ ಪ್ರತಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ತೆರೆಯಲಾಗತ್ತದೆ. ಗೋವುಗಳ ಸೆಗಣಿ, ಗಂಜಲ ಮುಂತಾದವುಗಳಿಂದ ವಿವಿಧ ಆರೋಗ್ಯಕರ ಉತ್ಪನ್ನಗಳನ್ನು ತಯಾರಿಸಿ ಅದರಿಂದಲೇ ಗೋಶಾಲೆಗಳ ನಿರ್ವಹಣೆ ಮಾಡುವ ಮೂಲಕ ಆತ್ಮನಿರ್ಭರ ಗೋಶಾಲೆಯನ್ನಾಗಿಸಲಾಗುವುದು. ಬಿಜೆಪಿ ಸರ್ಕಾರದ ಆಡಳಿತದಲ್ಲಿ ಪಶುಸಂಗೋಪಾನ ಇಲಾಖೆಯಲ್ಲಿ ಪರಿವರ್ತನೆಗಳಗಿವೆ. ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೊಳಿಸುವ ಮೂಲಕ 15 ಸಾವಿರ ಹಸುಗಳ ರಕ್ಷಣೆ ಮಾಡಲಾಗಿದೆ. ಮನೆಬಾಗಿಲಲ್ಲಿ ಗೋವುಗಳ ಚಿಕಿತ್ಸೆ ನೀಡಲು ನುರಿತ ತಜ್ಞರೊಂದಿಗಿನ ಗೋವುಗಳ ಆಂಬುಲೆನ್ಸ್‌ ತಾಲೂಕಿಗೆ ಒಂದರಂತೆ ನೀಡಲಾಗಿದೆ. ಅನುಗ್ರಹ ಯೋಜನೆ ಮೂಲಕ ಗೋವುಗಳ ಆಕಸ್ಮಿಕ ಮರಣಕ್ಕೆ ಪರಿಹಾರ ನೀಡಲಾಗುವುದು. ಮುಂದಿನ ಬಕ್ರಿದ್‌ ಹಬ್ಬಗಳ ಸಂದರ್ಭ ಗೋವುಗಳ ಅಕ್ರಮ ಸಾಗಾಟವನ್ನು ತಡೆಯಲು ಪೊಲೀಸ್‌ ಇಲಾಖೆ ಎಚ್ಚೆತ್ತೆಕೊಳ್ಳಬೇಕು. ಎಲ್ಲ ಚೆಕ್‌ಪೋಸ್ಟ್‌ಗಳಲ್ಲಿ ತೀವ್ರ ಪರೀಶಿಲನೆ ನಡೆಸಬೇಕು ಪಶುವೈದ್ಯರು ಸ್ಥಳದಲ್ಲಿರಬೇಕು ಎಂದು ಸಂಬಂಧಪಟ್ಟವರಿಗೆ ಈಗಾಗಲೇ ಸೂಚಿಸಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ದ.ಕ. ಸಂಸದ ನಳಿನ್‌ ಕುಮಾರ್‌ ಕಟೀಲ್‌ ಮಾತನಾಡಿ, ಕೃಷಿ ಸಂಸ್ಕೃತಿಯ ಭಾಗವಾಗಿರುವ ಗೋವುಗಳನ್ನು ಕಟುಕರ ಕೈಗೆ ಸಿಗದಂತೆ ಮಾಡಲು ಸರ್ಕಾರ ಗೋಶಾಲೆಗಳನ್ನು ತೆರಯುತ್ತಿದೆ. ಗೋಪಾಲಕರು ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಶಾಸಕ ಸಂಜೀವ ಮಠಂದೂರು, ರಾಮಕುಂಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಎನ್‌.ಕೆ, ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಮೈಸೂರು ಜಂಟಿ ನಿರ್ದೇಶಕ ಡಾ.ಸಿ. ವೀರಭದ್ರಯ್ಯ, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸ್‌, ಪುತ್ತೂರು ಸಹಾಯಕ ಆಯುಕ್ತ ಗಿರೀಶ್‌ ನಂದನ್‌ ಎಂ., ಕಡಬ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ನವೀನ್‌ ಭಂಡಾರಿ ಉಪಸ್ಥಿತರಿದ್ದರು. ಪಶುಪಾಲನಾ ಇಲಾಖೆಯ ಮಂಗಳೂರು ಉಪನಿರ್ದೇಶಕ ಡಾ. ಪ್ರಸನ್ನ ಕುಮಾರ್‌ ಪ್ರಸ್ತಾವಿಸಿ ಸ್ವಾಗತಿಸಿದರು. ಡಾ. ನಿತಿನ್‌ ಪ್ರಭು ವಂದಿಸಿದರು. ಡಾ. ಪ್ರಸನ್ನ ಹೆಬ್ಬಾರ್‌ ನಿರೂಪಿಸಿದರು.
 

click me!